ಬೆಳಗಾವಿ: ಅಪಾಯಕಾರಿ ಗಾಳಿಪಟ ಮಾಂಜಾ ದಾರಗಳ ಮಾರಾಟ ಅಥವಾ ಬಳಕೆ ಕಂಡು ಬಂದರೆ ಮಾಹಿತಿ ನೀಡಿ, ಸೂಕ್ತ ಬಹುಮಾನ ಗಳಿಸಿ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕವಾಗಿ ಕೋರಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎಸ್‌ಪಿ ಡಾ. ಸಂಜೀವ ಪಾಟೀಲ್, ಅಪಾಯಕಾರಿ ಗಾಳಿಪಟ ಎಳೆಗಳ ಮಾರಾಟ ಅಥವಾ ಬಳಕೆ ಬಗ್ಗೆ ಮಾಹಿತಿ ನೀಡಲು ಮನವಿ ನೀಡಿದ್ದಾರೆ.
ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿ ಇರಿಸಲಾಗುತ್ತದೆ. ಜತೆಗೆ ಮಾಂಜಾ ಮಾರಾಟದ ಕುರಿತು ತಿಳಿಸಿದರೆ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. 9480804000 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.
ಮಗುವಿನ ಜೀವ ತೆಗೆದ ಮಾಂಜಾ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ವರ್ಧನ್ ಬ್ಯಾಳಿ (5) ಎಂಬ ಬಾಲಕ ತಂದೆಯೊಂದಿಗೆ ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗೆಣದು ಬೆಳಗಾವಿಗೆ ಬಂದು ವಾಪಸ್ ಹೋಗುವಾಗ ಕೊರಳಿಗೆ ಗಾಳಿಪಟದ ಮಾಂಜಾದಾರ ಬಿಗಿದುಕೊಂಡು ಮೃತಪಟ್ಟಿದ್ದ. ದಾರ ತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಅದು ಬಿಡಿಸಿಕೊಳ್ಳದೆ ಕೊರಳಿಗೆ ಇನ್ನಷ್ಟು ಬಿಗಿಯಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೈಲಾನ್‌ನಿಂದ ಮಾಡಲಾದ ಮಾಂಜಾ ದಾರಗಳು ಪಕ್ಷಿಗಳ ಕೊರಳಿಗೆ ಉರುಳಾಗುತ್ತಿರುವ ತುಂಬಾ ಪ್ರಕರಣಗಳು ನಡೆದಿತ್ತು. ಆದರೆ, ಈಗ ದಾರ ಮಗುವಿನ ಪ್ರಾಣ ತೆಗೆದಿದೆ. ಯಾರದ್ದೋ ಮೋಜಿಗೆ ಬಾಳಿ ಬದುಕಬೇಕಾದ ಮಗುವೊಂದು ಜೀವ ಕಳೆದುಕೊಂಡಿದ್ದು, ದುರದೃಷ್ಟಕರ.
ಇದನ್ನೂ ಓದಿ | ವಿಸ್ತಾರ Explainer | ಗಾಳಿಪಟದ ಚೈನೀಸ್ ಮಾಂಜಾ ದಾರ, ದೇಶದಲ್ಲಿ ಏಕಿಷ್ಟು ವಿವಾದದ ಆಗರ?