ಬೆಂಗಳೂರು: ಬೆಂಗಳೂರಿನ ವಿವಿಧ ಕಾರ್ಯಕ್ರಮ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಮೋದಿಯವರಿಗೆ ಬಿಗಿಭದ್ರತೆ ಒದಗಿಸಿರುವ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಸಾಗುವ ರಸ್ತೆಯಲ್ಲಿ ಎಲ್ಲೂ ಕಪ್ಪು ಬಾವುಟ ತೋರಿಸದಂತೆ ಸೂಕ್ತ ಎಚ್ಚರಿಕೆ ವಹಿಸಲಾಗಿದೆ.
ಇದನ್ನೂ ಓದಿ | Modi in Karnataka | ಜ್ಞಾನಭಾರತಿಯಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ ಮೋದಿ
ಪ್ರಧಾನಿ ನೋಡಲೆಂದು ನೂರಾರು ಕಾರ್ಯಕರ್ತರು, ಜನರು ರಸ್ತೆಯಲ್ಲಿ ನಿಲ್ಲುವ ಕಾರಣ ಭದ್ರತಾ ದೃಷ್ಟಿಯಿಂದ ಕಪ್ಪು ಬಟ್ಟೆ ಇದ್ದರೆ ಅದನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಬಾವುಟ, ಕರಪತ್ರ, ಭಿತ್ತಿಪತ್ರ ಸೇರಿದಂತೆ ಯಾವುದೇ ರೀತಿಯ ಬಾಟಲಿಗಳು ಇದ್ದರು ಎಲ್ಲವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಪ್ರತಿಭಟನೆ ಸೂಚಕವಾಗಿ ಗಣ್ಯರಿಗೆ ಕಪ್ಪು ಬಟ್ಟೆಗಳ ಪ್ರದರ್ಶನ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಎನ್ನಲಾಗಿದೆ.
ಹಿಂದಿನ ಘಟನೆಗಳಿಂದ ಎಚ್ಚೆತ್ತ ಪೊಲೀಸ್ ಸಿಬ್ಬಂದಿ
- ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಮೌನ ವಹಿಸಿದ್ದಕ್ಕೆ ಬಂಟ್ವಾಳದ ಬಂಟರ ಭವನದಲ್ಲಿ ಬಿಜೆಪಿ ಸಂಘಟನಾತ್ಮಕ ಕಾರ್ಯಕ್ರಮದ ವೇಳೆ ಹಲವು ಸಂಘಟನೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು.
- ಪಿಎಸ್ಐ ಸ್ಕ್ಯಾಮ್ ಸಂಬಂಧ ಕಲಬುರುಗಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರಿಗೂ ಈ ಹಿಂದೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ವಾಹನಕ್ಕೆ ಮುತ್ತಿಗೆ ಹಾಕಲಾಗಿತ್ತು.
ಈ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಸದ್ಯ ಅಗ್ನಿಪಥ್ ಯೋಜನೆ ವಿರುದ್ಧ ಹಲವು ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಕಾವು ಹೆಚ್ಚಿದೆ. ಜತೆಗೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ ನೋಟಿಸ್ ನೀಡಿರುವ ಕಾರಣದಿಂದಾಗಿ ವಿರೋಧ ಪಕ್ಷದವರಿಂದ ಅಥವಾ ವಿವಿಧ ಸಂಘಟನೆ ಕಾರ್ಯಕರ್ತರು ಯಾರಾದರು ಕಪ್ಪು ಬಟ್ಟೆ ಪ್ರದರ್ಶನ ಮಾಡಬಹುದು ಎಂಬ ಮುಂಜಾಗರೂಕತೆಯಿಂದ ಕಪ್ಪು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Modi In Karnataka | ಯಾಕಿಷ್ಟು ಸಣಕಲಾಗಿದ್ದೀರಾ?: ಎಂಟಿಬಿ ನಾಗರಾಜ್‌ಗೆ ಮೋದಿ ಪ್ರಶ್ನೆ!