Site icon Vistara News

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

International Yoga Day 2024

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day 2024) ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಪ್ರತಿ ವರ್ಷ ಜೂನ್ 21ರಂದು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಹತ್ತು ವರ್ಷಗಳಿಂದ ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಇದು ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ವೇಗದ ಜಗತ್ತಿನಲ್ಲಿ ಆಂತರಿಕ ಶಾಂತಿ ಮತ್ತು ಸಮತೋಲನಕ್ಕೆ ದಾರಿಯನ್ನು ತೋರುತ್ತದೆ. ಹಾಗಾದರೆ ಕರ್ನಾಟಕದಲ್ಲಿ ಹೇಗಿತ್ತು ಯೋಗಾಭ್ಯಾಸ ಇಲ್ಲಿದೆ ಅದರ ಸಣ್ಣ ಝಲಕ್‌..

International Yoga Day 2024

ವಿಜಯನಗರದ ಹೊಸಪೇಟೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಯೋಗದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಯೋಗ ಗುರು ಭವರಲಾಲ್ ಆರ್ಯ ಸೇರಿದಂತೆ ನೂರಾರು ಯೋಗಪಟುಗಳು ಭಾಗಿಯಾದರು.

International Yoga Day 2024

ಇತ್ತ ಬಳ್ಳಾರಿಯ ಜಿಂದಾಲ್‌ನಲ್ಲಿ ನೂರಾರು ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡಿದರು. ಸಿಎಂ ಸಿದ್ದರಾಮಯ್ಯ, ವಚನಾನಂದ ಶ್ರೀ, ಅವಧೂತ ವಿನಯ್ ಗುರೂಜಿ ಸಾಥ್‌ ನೀಡಿದ್ದರು.

ವಿಜಯಪುರದ ಅಂಬೇಡ್ಕರ್ ಮೈದಾನದಲ್ಲಿ ಯೋಗ ದಿನಾಚರಣೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭಾಗಿಯಾದರು. ಜಿಲ್ಲಾಧಿಕಾರಿಗಳು ಟಿ ಬೂಬಾಲನ್, ಸಿಇಓ ರಿಷಿ ಆನಂದ, ಎಸ್ಪಿ ಋಷಿಕೇಶ ಸೋನಾವಣೆ ಸೇರಿ ಸಾವಿರಾರು ವಿದ್ಯಾರ್ಥಿಗಳು ಯೋಗದ ಮಹತ್ವ ಸಾರಿದ್ದರು.

International Yoga Day 2024

ಇತ್ತ ಧಾರವಾಡದ ಆರ್ ಎನ್ ಶೆಟ್ಟಿ ಒಳಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ನಡೆಸಲಾಯಿತು. ಮೊದಲು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ನಿನ್ನೆ ಸಂಜೆ ಸುರಿದ ಮಳೆಯಿಂದಾಗಿ ಒಳಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಡಿಸಿ ದಿವ್ಯಾ ಪ್ರಭು ಹಾಗೂ ಜಿಪಂ ಸಿ ಈ ಓ ಡಿಕೆ ಸ್ವರೂಪ ಭಾಗಿಯಾದರು.

International Yoga Day 2024

ಧಾರವಾಡದ ಎಪಿಎಂಸಿಯಲ್ಲಿ ಸೋಬಾನ ಪದ ಹಾಡಿ ವಿಭಿನ್ನವಾಗಿ ಯೋಗ ದಿನವನ್ನು ಆಚರಿಸಲಾಯಿತು. ಯೋಗವನ್ನು ಬೀಸುವ ಕಲ್ಲಿನ ಬಗೆಯಲ್ಲಿ ಆಚರಿಸಿದರು. ಒಬ್ಬರಿಗೊಬ್ಬರು ಕೈಹಿಡಿದು ಜಾನಪದ ಹಾಡನ್ನು ಹಾಡಿ ಆಚರಿಸಲಾಯಿತು.

ಬೆಳಗಾವಿಯಲ್ಲಿ 10ನೇ ಅಂತರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಕೆಪಿಟಿಸಿಎಲ್ ಭವನದಲ್ಲಿ ನಡೆಸಲಾಯಿತು. ಮಳೆಯಿಂದ ಕೆಪಿಟಿಸಿಎಲ್ ಭವನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಸಾಥ್‌ ನೀಡಿದ್ದರು.

ಕೊಡಗಿನಲ್ಲೂ ಯೋಗ ಗುರು ಮಹೇಶ್ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಕೊಡಗು ಡಿಸಿ, ಎಸ್‌ಪಿ, ಸಿಇಓ ಸೇರಿ ಯೋಗಾಭ್ಯಾಸ ಮಾಡಿದರು.

International Yoga Day 2024

ಬಾಗಲಕೋಟೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಯೋಗ ದಿನಾಚರಣೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್ ಭಾಗಿಯಾದರು. ವಿವಿಧ ಯೋಗ ಭಂಗಿಗಳ ಮೂಲಕ‌ ಯೋಗ ಪಟುಗಳು ಗಮನ ಸೆಳೆದರು. ಯೋಗದಲ್ಲಿ ಎಲ್ಲ ವಯೋಮಾನದವರು ಭಾಗಿಯಾಗಿದ್ದರು. ಡಿಸಿ ಜಾನಕಿ ಕೆ.ಎಮ್, ಸಿಇಒ ಶಶಿಧರ್ ಕುರೇರ, ಎಸ್ಪಿ ಅಮರನಾಥ್ ರೆಡ್ಡಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

International Yoga Day 2024

ಕೊಪ್ಪಳ ಜಿಲ್ಲಾಡಳಿತ, ಪತಂಜಲಿ ಯೋಗ ಸಮಿತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಯೋಗ ದಿನನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ ನಲಿನ್ ಅತುಲ್, ಜಿ.ಪಂ. ಸಿಇಓ ರಾಹುಲ್ ರತ್ನಂ ಪಾಂಡೆಯ ಸೇರಿದಂತೆ ಹಲವರು ಭಾಗಿಯಾಗಿದ್ದರು. ಯೋಗಪಟುಗಳು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಯೋಗ ಪ್ರದರ್ಶಿಸಿದರು.

ತುಮಕೂರಿನಲ್ಲಿ ಯೋಗ ದಿನಾಚರಣೆಗೆ ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ ನೀಡಿದರು. ತುಮಕೂರಿನ ಡಿಎಆರ್ ಪೊಲೀಸ್ ಮೈದಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ‌ ಸಿಇಓ ಜಿ.ಪ್ರಭು, ಎಸ್ ಪಿ ಅಶೋಕ್ ಸೇರಿದಂತೆ ಹಲವರು ಸಾಥ್ ನೀಡಿದ್ದರು.

International Yoga Day 2024

ಯಾದಗಿರಿಯ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಮೈದಾನದಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಗಿಡಕ್ಕೆ ನೀರುಣಿಸುವ ಮೂಲಕ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು. ಡಿಸಿ ಡಾ.ಸುಶೀಲಾ, ಎಸ್ಪಿ ಸಂಗೀತಾ ಭಾಗಿಯಾಗಿದ್ದರು. ಯೋಗದಲ್ಲಿ ನೂರಾರು ವಿದ್ಯಾರ್ಥಿಗಳು ಮಗ್ನರಾಗಿದ್ದರು. ಕೊಡಗು, ಚಿಕ್ಕಮಗಳೂರು, ಗದಗದಲ್ಲೂ ಯೋಗಾಭ್ಯಾಸ ನಡೆದಿದೆ.

International Yoga Day 2024

ಕಲಬುರಗಿಯ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಯೋಗಾ ದಿನಾಚರಣೆಯಲ್ಲಿ ಸಾವಿರಾರು ಜನರು ಭಾಗಿಯಾಗಿದರು. ಇತ್ತ ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮದಲ್ಲಿ ಎಸ್ಪಿ ಬಿ ಎಸ್ ನೇಮಗೌಡ, ಎಡಿಸಿ ಅನ್ನಪೂರ್ಣಾ, ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಭಾಗಿಯಾಗಿದ್ದರು.

ತನಗಾಗಿ, ಸಮಾಜದ ಸ್ವಾಸ್ತ್ಯಕ್ಕಾಗಿ, ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಮಂಡ್ಯ ನಗರದ ಪಿಇಟಿ ಕ್ರೀಡಾಂಗಣದಲ್ಲಿ ಯೋಗಾ ಪಂತಜಲಿ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬೇಬಿ ಮಠದ ಪೀಠಾಧ್ಯಕ್ಷರಾದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಡಿಸಿ ಡಾ. ಕುಮಾರ,ಎಸ್ಪಿ ಎನ್.ಯತೀಶ್, ಸಿಇಓ ವೇದಿಕೆ ಮೇಲೆ ವಿವಿಧ ಬಗೆಯ ಯೋಗ ಪ್ರದರ್ಶಿಸಿದರು.

ಮೈಸೂರು ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆ ವತಿಯಿಂದ ಅರಮನೆ ಮುಂಭಾಗದಲ್ಲಿ ಯೋಗಾ ದಿನಾಚರಣೆ ಆಚರಿಸಲಾಯಿತು. ಅರಮನೆ ಆವರಣದಲ್ಲಿ ಯೋಗಪಟುಗಳು ಮತ್ತು ಸಾರ್ವಜನಿಕರು ಯೋಗ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಶಾಸಕ ಶ್ರೀವತ್ಸ, ಸಂಸದ ಯದುವೀರ್ ಒಡೆಯರ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಪಂ ಸಿಇಒ ಗಾಯಿತ್ರಿ ಮತ್ತಿತರರು ಭಾಗಿಯಾಗಿದ್ದರು.

ಚಿಕ್ಕಮಗಳೂರಿನ ನಗರದ ಜಿಲ್ಲಾ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಶಾಲಾ ಮಕ್ಕಳು, ಯೋಗಪಟುಗಳು,ಅಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಗಿತ್ತು. ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಸಿರಿಗೆರೆ ಪೀಠದ ಡಾ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಜಿಲ್ಲಾಧಿಕಾರಿ ವೆಂಕಟೇಶ್, ಎಸ್ ಪಿ ಉಮಾ ಪ್ರಶಾಂತ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿದರು.

ಕೋಲಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ‌ ನಡೆಯುತ್ತಿರುವ ಯೋಗ ದಿನಾಚರಣೆಯಲ್ಲಿ ನೂತನ ಸಂಸದ ಮಲ್ಲೇಶ್ ಬಾಬು ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಭಾಗಿಯಾದರು. ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಶಾಸಕ‌ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ‌ಯೋಗ ದಿನವನ್ನು ಆಚರಿಸಲಾಯಿತು. ನೃಪತುಂಗ ಬೆಟ್ಟದ ತಪ್ಪಲಿನಲ್ಲಿ‌ ಯೋಗಾಸನ‌ ಮಾಡಲಾಯಿತು.

ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗಿಯಾದರು. ಹಾವೇರಿಯಲ್ಲಿ ಇನ್ನರ್ ವೀಲ್ ಕ್ಲಬ್ ನಿಂದ ಯೋಗ ದಿನಾಚರಣೆಯಲ್ಲಿ ನೂರಾರು ಮಹಿಳಾ ಯೋಗಪಟುಗಳು ಭಾಗಿಯಾದರು. ಹಾಸನದಲ್ಲಿಯೂ ಯೋಗ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಎಂಪಿ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ ಸಾಥ್‌ ನೀಡಿದರು. ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ‌ ವಿವಿಧ ಯೋಗ ಭಂಗಿಗಳ ಮೂಲಕ ಯೋಗಪಟುಗಳು ಕಣ್ಮನ ಸೆಳೆದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version