ಮತ್ತೀಕರೆ ಜಯರಾಂ, ಮಂಡ್ಯ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಏಳು ಕ್ಷೇತ್ರಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡು ಬೀಗಿದ್ದ ಜೆಡಿಎಸ್ ದಿನ ದಿನಕ್ಕೂ ತನ್ನ ಬಲ ಕಳೆದುಕೊಳ್ಳುತ್ತಿದೆ. ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತಿದ್ದು, ಅದರ ಬೇರುಗಳು ಅಲುಗಾಡುತ್ತಿವೆ ಎನ್ನುವುದಕ್ಕೆ ಒಂದರ ಹಿಂದೊಂದು ಸೋಲು ಸಾಕ್ಷಿಯಾಗಿದೆ. ಇದೀಗ ತನ್ನ ತೆಕ್ಕೆಯಲ್ಲೇ ಇದ್ದ ದಕ್ಷಿಣ ಪದವೀಧರರ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲೂ ದಯನೀಯ ಸೋಲುಂಡು, ಮಕಾಡೆ ಮಲಗಿರುವುದು ದಳಪತಿಗಳಿಗೆ ಅಕ್ಷರಶಃ ದಂಗುಬಡಿಸಿದೆ.
ಜೆಡಿಎಸ್ ತನ್ನ ಹಿಡಿತದಲ್ಲಿದ್ದ ಮಂಡ್ಯ ಲೋಕಸಭಾ ಕ್ಷೇತ್ರ, ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನ, ಈಗ ದಕ್ಷಿಣ ಪದವೀಧರರ ಕ್ಷೇತ್ರದಿಂದ ಮೇಲ್ಮನೆ ಚುನಾವಣೆ, ಹೀಗೆ ಸತತ ನಾಲ್ಕು ಸೋಲು ಜೆಡಿಎಸ್ ಪಾಳೆಯವನ್ನು ಕಂಗೆಡಿಸಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಜೆಡಿಎಸ್ ದಯನೀಯ ಸೋಲು ಕಂಡಿರುವುದು ಮಿಷನ್ 123 ಗುರಿಯೊಂದಿಗೆ ಮತ್ತೆ ಅಧಿಕಾರ ಹಿಡಿಯಬೇಕೆನ್ನುವ ತವಕದಲ್ಲಿರುವ ದಳಪತಿಗಳನ್ನು ವಿಚಲಿತರನ್ನಾಗಿಸದೆ ಇರದು.
ಎಚ್.ಡಿ.ಕುಮಾರಸ್ವಾಮಿ ಅವರು ಸ್ವತಃ ಮುಖ್ಯಮಂತ್ರಿ ಆಗಿದ್ದುಕೊಂಡೇ ಲೋಕಸಭೆ ಚುನಾವಣೆಯಲ್ಲಿ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ದಳಪತಿಗಳ ಹರಕು ಬಾಯಿಯಿಂದ ಉದುರಿದ ಉಡಾಫೆ ಮಾತುಗಳು, ಅಂಬರೀಶ್ ಸೋಲಿನ ಸಿಂಪಥಿ, ಕಾಂಗ್ರೆಸ್ ಮುಖಂಡರ ಒಳಸಂಚಿನಿಂದ ನಿಖಿಲ್ ನಿಜಕ್ಕೂ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವೇ ಆದರು.
ತಮ್ಮ ಪಕ್ಷದ ವಿರುದ್ಧ ಬಂಡೆದ್ದು ಹೋದವರನ್ನೆಲ್ಲಾ ಬೆಂಬಿಡದೆ ಕಾಡಿ, ಸದೆಬಡಿಯುತ್ತಲೇ ಬಂದ ದಳಪತಿಗಳಿಗೆ ಕೆ.ಆರ್. ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡರನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದದ ರಾಜಕಾರಣದಲ್ಲಿ ಜೆಡಿಎಸ್ ಪರಾಜಯ ಕಂಡಿತು. ಅದೇ ಚಿತ್ರಣ ಮಂಡ್ಯದ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲೂ ಮರುಕಳಿಸಿತು. ಬಿಜೆಪಿ ಪರೋಕ್ಷ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಗೆದ್ದು ಬೀಗಿದರು.
ದಕ್ಷಿಣ ಪದವೀಧರರ ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟಿತ ಹೋರಾಟ ಫಲ ನೀಡಿದೆ. ಅಭ್ಯರ್ಥಿ ಆಯ್ಕೆಯಲ್ಲಿ ದಳಪತಿಗಳ ಯಡವಟ್ಟಿನ ಲಾಭ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ. ಮೇಲ್ಮನೆ ಸದಸ್ಯ ಮರಿತಿಬ್ಬೇಗೌಡ ಸಾರಿದ ಬಂಡಾಯ, ಕೀಲಾರ ಜಯರಾಮ್ ಮತ್ತಿತರರ ಪಕ್ಷಾಂತರ, ಸ್ವಪಕ್ಷೀಯ ಮುಖಂಡರು ಮತ್ತು ಕಾರ್ಯಕರ್ತರ ನಿರುತ್ಸಾಹ ಜೆಡಿಎಸ್ ಗೆ ಮುಳುವಾಗಿದೆ.
ಇದನ್ನೂ ಓದಿ: ಜೆಡಿಎಸ್ ತೊರೆದ ಹೆಚ್.ಆರ್. ಶ್ರೀನಾಥ್, ಮತ್ತೆ ಕಾಂಗ್ರೆಸ್ ಸೇರಲು ಸಿದ್ಧತೆ
ಜೆಡಿಎಸ್ ದುರ್ಬಲವಾಗುತ್ತಿದೆಯೇ?
ಜೆಡಿಎಸ್ ಪಾಲಿಗೆ ಹಾಸನಕ್ಕಿಂತಲೂ ಒಂದು ಕೈ ಮೇಲು ಎನ್ನುವಷ್ಟರ ಮಟ್ಟಿಗೆ ಶಕ್ತಿಕೇಂದ್ರವಾಗಿರುವುದು ಮಂಡ್ಯ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿಂದಲೇ ತನ್ನ ವಿಜಯಯಾತ್ರೆ ಪ್ರಾರಂಭಿಸಬೇಕೆನ್ನುವ ಉಮೇದಿಯಲ್ಲಿ ದಳಪತಿಗಳಿದ್ದಾರೆ. ದಿನ ದಿನಕ್ಕೂ ಕುಸಿಯುತ್ತಿರುವ ಪಕ್ಷದ ಶಕ್ತಿ, ಸರಣಿ ಸೋಲುಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗತಿ ಏನಾಗಬಹುದು ಎನ್ನುವ ಚಿಂತೆಗೆ ಜೆಡಿಎಸ್ ಮುಖಂಡರನ್ನು ದೂಡಿದೆ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಬಿಜೆಪಿ ಕಟ್ಟಿ, ಕನಿಷ್ಠ 4-5 ಸ್ಥಾನ ಗೆಲ್ಲುತ್ತೇವೆನ್ನುವುದು ಕಮಲ ಪಾಳೆಯದ ನಾಯಕರ ಹಗಲುಗನಸೇ ಸರಿ ಎಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ. ಈ ಜಿಲ್ಲೆಯಲ್ಲೇನಿದ್ದರೂ ಜೆಡಿಎಸ್ ಅಶ್ವಮೇಧವನ್ನು ಕಟ್ಟಿ ಹಾಕುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇದು, ಹಿಂದೆ ನಡೆದ ಪೌರ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಸಾಬೀತಾಗಿದೆ. ಜಿಲ್ಲೆಯ ಕೇಂದ್ರ ಸ್ಥಾನ ಮಂಡ್ಯ ಮತ್ತು ಕೆ.ಆರ್.ಪೇಟೆ ಹೊರತುಪಡಿಸಿ ಉಳಿದ 5 ವಿಧಾನಸಭಾ ಕ್ಷೇತ್ರಗಳಿಗೂ 2023ರ ಕದನದ ಜೆಡಿಎಸ್ ಟಿಕೇಟ್ ಅಖೈರುಗೊಂಡಿವೆ. ಗೆಲ್ಲುವ ತವಕದಲ್ಲೇನೋ ದಳಪತಿಗಳು ಹೋರಾಟ ಶುರುವಿಟ್ಟುಕೊಂಡಿದ್ದಾರೆ.
ಆದರೆ, ಮೇಲಿಂದ ಮೇಲೆ ಕಾಣುತ್ತಿರುವ ಸೋಲುಗಳು ಧೃತಿಗೆಡಿಸದೆ ಇಲ್ಲ. ಇದನ್ನು ಎಚ್ಚರಿಕೆಯ ಗಂಟೆ ಎಂದೇ ಭಾವಿಸಬೇಕಿದೆ. ಮದ್ದೂರು, ಮೇಲುಕೋಟೆ ಹೊರತಾದ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಕ್ತಿ ಕುಂದುತ್ತಿರುವುದು ಜಗಜ್ಜಾಹೀರವಾಗಿದೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಮದ್ದೂರಿನಲ್ಲಿ ಹೊಡೆತ ಬೀಳದೆ ಇರದು. ಏಳಕ್ಕೆ ಏಳರಲ್ಲೂ ಕ್ಲೀನ್ ಸ್ವೀಪ್ ಮಾಡಿದ್ದ ಜೆಡಿಎಸ್ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ತಿಣುಕಾಡುವ ಸ್ಥಿತಿಗೆ ಬಂದು ತಲುಪಿದೆ. ಮಂಡ್ಯದಲ್ಲಿ ಮರಳಿ ತನ್ನ ಪ್ರಭುತ್ವ ಸಾಧಿಸಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ರಹದಾರಿ ಸಿಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಕೈಗೆ ಶಕ್ತಿ ತುಂಬಿದ ಚಲುವರಾಯಸ್ವಾಮಿ:
ಆರು ವರ್ಷದ ಹಿಂದೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಕಾಂಗ್ರೆಸ್‌ಗೆ ಪಕ್ಷಾಂತರವಾದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರೀಗ ಮಂಡ್ಯ ಕಾಂಗ್ರೆಸ್ ಸಾರಥಿ. ಸದಾ ಒಳಜಗಳದಿಂದ ದುರ್ಬಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಳನ್ನೆಲ್ಲಾ ಒಗ್ಗೂಡಿಸಿ, ನಿಭಾಯಿಸುವಲ್ಲಿ ಚಲುವರಾಯಸ್ವಾಮಿ ಯಶಸ್ವಿಯಾಗಿದ್ದಾರೆ.
ಅಂತೆಯೇ ಜೆಡಿಎಸ್ ಪಾಳೆಯದ ಪಟ್ಟು, ವರಸೆಗಳನ್ನೆಲ್ಲಾ ಕರಗತ ಮಾಡಿಕೊಂಡ ಚಲುವರಾಯಸ್ವಾಮಿ ಪ್ರತಿ ತಂತ್ರ ಹೂಡುವಲ್ಲಿ ನಿಸ್ಸೀಮರು. ಅವರ ನಾಯಕತ್ವದಿಂದಲೇ ಕಾಂಗ್ರೆಸ್ ಗೆ ಸಾಕಷ್ಟು ಶಕ್ತಿ ಬಂದಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ತೆರೆಮರೆಯಲ್ಲೇ ನಿಂತು ಸುಮಲತಾ ಅಂಬರೀಶ್ ಅವರ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಿದ್ದೇ ಚಲುವರಾಯಸ್ವಾಮಿ. ಹೈಕಮಾಂಡ್ ಕಟ್ಟಾಜ್ಞೆಗೂ ಜಗ್ಗಲಿಲ್ಲ. ಅಭ್ಯರ್ಥಿ ಬೆನ್ನ ಮರೆಯಲ್ಲೇ ನಿಂತು ದಳ ಪಾಳೆಯದ ವಿರುದ್ಧ ಪ್ರತೀಕಾರಾಸ್ತ್ರ ಹೂಡಿ ನಿಖಿಲ್ ಗೆ ಸೋಲುಣಿಸಿದರು. ಆ ವೇಳೆ ಡೆಡ್ ಹಾರ್ಸ್(ಸತ್ತ ಕುದುರೆ) ಎಂದು ತಮ್ಮನ್ನು ಲೇವಡಿ ಮಾಡಿದ ಜೆಡಿಎಸ್ ನಾಯಕರಿಗೆ ತಾನು ರೇಸ್ ಗೆಲ್ಲುವ ಕುದುರೆ ಎನ್ನುವುದನ್ನು ಸಾಬೀತುಪಡಿಸಿ, ತಿರುಗೇಟು ನೀಡುತ್ತಾ ಬಂದಿದ್ದಾರೆ.
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಷ್ಟಸಾಧ್ಯವೆಂದಾದಾಗ ಜೆಡಿಎಸ್ ಗೆಲ್ಲದಂತೆ ಇದೇ ಚಲುವರಾಯಸ್ವಾಮಿ ವ್ಯೂಹ ರಚಿಸಿದರು. ಆ ಚುನಾವಣೆಯಲ್ಲಿ ಬಿಜೆಪಿಗೆ ಮಾಡಿಕೊಟ್ಟ ಲಾಭವನ್ನು ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಎರವಲು ಪಡೆದರು. ಈಗ ಮಧು ಮಾದೇಗೌಡ ಅವರನ್ನು ರಣರಂಗಕ್ಕೆ ಇಳಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಮಂಡ್ಯ ಒಳಗೊಂಡ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿದ್ದಾರೆ.
ಇದನ್ನೂ ಓದಿ: ಅಡ್ಡಮತದಾನದ ಮೂಲಕ ನಿಷ್ಠೆಯ ಪರೀಕ್ಷೆ: ಜೆಡಿಎಸ್ ಶಾಸಕರೇ ಟಾರ್ಗೆಟ್ ಏಕೆ?
ಬಲವಾದ ಏಟು ನೀಡಿದ ಮರಿತಿಬ್ಬೇಗೌಡ :
ದಕ್ಷಿಣ ಪದವೀಧರರ ಕ್ಷೇತ್ರದ ಮೇಲ್ಮನೆ ಚುನಾವಣೆಯ ಟಿಕೆಟ್ ನೀಡಿಕೆಯಲ್ಲಿ ಜೆಡಿಎಸ್ ಸೂಟ್ ಕೇಸ್ ವ್ಯವಹಾರ ನಡೆಸಿದೆ. ಹಣ ಬಲವಿಲ್ಲವೆಂದು ಕೀಲಾರ ಜಯರಾಮ್ ಅವರನ್ನು ಕಡೆಗಣಿಸಿದೆ ಎನ್ನುವುದೂ ಸೇರಿದಂತೆ ದಳಪತಿಗಳ ವೈಫಲ್ಯವನ್ನು ಬಹಿರಂಗವಾಗಿ ಟೀಕಿಸಿಕೊಂಡೇ ಬಂಡಾಯ ಸಾರಿದ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೇಲ್ಮನೆ ಸದಸ್ಯ ಮರಿತಿಬ್ಬೇಗೌಡ ಅವರು ಚುನಾವಣೆಯಲ್ಲಿ ಸ್ವಪಕ್ಷಕ್ಕೆ ಬಲವಾದ ಏಟು ನೀಡಿದ್ದಾರೆ. ಕಾಂಗ್ರೆಸ್ ಹುರಿಯಾಳು ಮಧು ಜಿ.ಮಾದೇಗೌಡ ಅವರಿಗೆ ಬಹಿರಂಗ ಬೆಂಬಲ ನೀಡಿ, ಅವರ ಗೆಲುವಿಗೆ ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಒಟ್ಟಾರೆ, ಒಕ್ಕಲಿಗರ ಶಕ್ತಿಕೇಂದ್ರದಲ್ಲಿ ತಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವೇ ಇಲ್ಲವೆಂದು ಬೀಗುತ್ತಿದ್ದ ದಳಪತಿಗಳು ಈಗ ಬಾಗುವಂತಾಗಿದೆ. ಮುಂದಿನ ವಿಧಾಸಭೆ ಚುನಾವಣೆಯಲ್ಲಿ ತಮ್ಮ ಸ್ಥಿತಿ ಏನೆಂಬ ಚಿಂತೆ ಹಾಲಿ ಶಾಸಕರನ್ನು ಕಾಡುತ್ತಿದೆ.
ಆರು ಸೋಲಿನ ನಂತರ ಗೆಲುವು:
ಜಿ.ಮಾದೇಗೌಡ ಅವರು 6 ಬಾರಿ ಶಾಸಕ ಮತ್ತು 2 ಬಾರಿ ಸಂಸದರಾಗಿದ್ದರು. 1996 ಮತ್ತು 1998ರಲ್ಲಿ ಮಾದೇಗೌಡ ಸತತ ಸೋಲುಂಡಿದ್ದರು. ಅವರ ಪುತ್ರ ಮಧು ಮಾದೇಗೌಡಗೂ ಇದುವರೆಗೆ ಗೆಲುವು ಒಲಿದಿರಲೇ ಇಲ್ಲ. 2004ರಲ್ಲಿ ಕಿರುಗಾವಲು, ತದನಂತರ 2008, 2013 ಮತ್ತು 2018 ಹೀಗೆ ಸತತ ನಾಲ್ಕು ಬಾರಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನಂಚಿಗೂ ಬಾರದೆ ಸೋಲಿನ ಕಹಿ ಅನುಭವಿಸುತ್ತಲೇ ಬಂದಿದ್ದರು.
ಎಂ.ಎಸ್.ಸಿದ್ದರಾಜು ಅಕಾಲಿಕ ಮರಣದಿಂದ 2008ರಲ್ಲಿ ನಡೆದ ಮದ್ದೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಉಪಯೋಗವಾಗಲಿ ಎಂದು ಆಗಿನ ಆಡಳಿತಾರೂಢ ಬಿಜೆಪಿ 11 ತಿಂಗಳ ಅಲ್ಪಾವಧಿ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಮಧು ಅವರಿಗೆ ಕರುಣಿಸಿತ್ತು. ಅಷ್ಟಾಗಿಯೂ ಮಧು ನಿಷ್ಠೆ ಉಳಿಸಿಕೊಂಡಿರಲಿಲ್ಲ.
ಬಿಜೆಪಿ ಸೋಲಿಗೆ ಮಧು ಕಾರಣವೆನ್ನುವ ಕಾರಣಕ್ಕೆ ಆಗಿನ ಪರಾಜಿತ ಅಭ್ಯರ್ಥಿ ತಮ್ಮಣ್ಣ ಅವರ ಬೆಂಬಲಿಗರು ಮಂಡ್ಯದ ಗಾಂಧಿ ಭವನದಲ್ಲಿ ದಾಂಧಲೆ ನಡೆಸಿದ್ದರು. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯ ಬಂತು ಎನ್ನುವಂತೆ ಅಪ್ಪನ ಎರಡು ಸೋಲು, ತನ್ನ ಸತತ ನಾಲ್ಕು ಸೋಲುಗಳ ತರುವಾಯ ಮಧು ಜಿ.ಮಾದೇಗೌಡ ಅವರು ಗೆಲುವಿನ ನಗೆ ಬೀರಿದ್ದಾರೆ. 1992ರಲ್ಲಿ ಅಸ್ತಿತ್ವಕ್ಕೆ ಬಂದ ದಕ್ಷಿಣ ಪದವೀಧರರ ಕ್ಷೇತ್ರವನ್ನು ಚೊಚ್ಚಲ ಬಾರಿಗೆ ಕಾಂಗ್ರೆಸ್ ತೆಕ್ಕೆಗೂ ತಂದುಕೊಟ್ಟಿದ್ದಾರೆ. ಕ್ಷೇತ್ರದ ಪ್ರಾತಿನಿಧ್ಯ ಮತ್ತೊಮ್ಮೆ ಮಂಡ್ಯದವರ ಕೈಯಲ್ಲೇ ಉಳಿಯುವಂತೆಯೂ ಮಾಡಿದ್ದಾರೆ. ಇದರೊಂದಿಗೆ ಮುಳುಗುವ ಭೀತಿಯಲ್ಲಿರುವ ಜೆಡಿಎಸ್ ಮುಖಂಡರ ಕಂಪನವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ 0-2, ಬಿಜೆಪಿ 2-2, ಜೆಡಿಎಸ್ 1-0