ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಸಿಕ್ಕಿಬಿದ್ದ ಉಗ್ರರ ಸಂಖ್ಯೆಯನ್ನು ನೋಡಿದರೆ ಕರ್ನಾಟಕವು ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆಯೇ ಎಂಬ ಆತಂಕ ಕಾಡುತ್ತದೆ. ಕಳೆದ ಒಂದು ವರ್ಷದಲ್ಲಿ ಕರ್ನಾಟಕದಿಂದ 8 ಉಗ್ರರನ್ನು ಸೆರೆಹಿಡಿಯಲಾಗಿದೆ. ಉಗ್ರರು ಕರ್ನಾಟಕದಲ್ಲಿ ಅಡಗಿಕೊಂಡು ಸದ್ದಿಲ್ಲದೇ ಉಗ್ರ ಚಟುವಟಿಕೆಯನ್ನು ನಡೆಸುತ್ತಿದ್ದಾರೆಯೇ ಎಂಬುವುದಕ್ಕೆ ಇದು ಪುಷ್ಠಿ ನೀಡುತ್ತಿದೆ.
ಈ ಹಿಂದೆ ಬಹುತೇಕ ಉಗ್ರರು ಮುಂಬೈ ನಗರವನ್ನು ತಮ್ಮ ಅಡಗುತಾಣವನ್ನಾಗಿಸಿಕೊಂಡಿದ್ದರು. ಅಲ್ಲಿಂದಲೇ ಅನೇಕ ಉಗ್ರ ಚಟುವಟಿಕೆಯನ್ನು ನಡೆಸುತ್ತಿದ್ದರು. ಆದರೆ, ಈಗ ಕರ್ನಾಟಕ ರಾಜ್ಯ ಅವರಿಗೆ ಹೊಸ ಕೇಂದ್ರವಾಗಿದೆಯೇ? ಎಂಬ ಅನುಮಾನ ಹುಟ್ಟುತ್ತದೆ.
ಇದಕ್ಕೆ ಕಾರಣವೇನಿರಬಹುದು?
ಕರ್ನಾಟಕದ ರಾಜಧಾನಿ ಬೆಂಗಳೂರು ಅತ್ಯಂತ ಜನಪ್ರಿಯವಾದ ಸ್ಥಳ. ಇಲ್ಲಿನ ವಾತಾವರಣ, ಉದ್ಯೋಗಾವಕಾಶ, ವೈವಿಧ್ಯಮಯ ಆಹಾರ ತಾಣಗಳು, ಎಲ್ಲವೂ ಅನೇಕ ಜನರನ್ನು ಆಕರ್ಷಿಸುತ್ತವೆ. ಹಾಗಾಗಿ ಇಲ್ಲಿ ಹೊರ ರಾಜ್ಯಗಳಿಂದ ಆಗಮಿಸಿ ತಂಗಿರುವವರ ಸಂಖ್ಯೆಯೂ ಅಧಿಕವಾಗಿದೆ. ಈ ಜನಜಂಗುಳಿಯ ಮಧ್ಯೆ ಸೇರಿ ನೆಲೆಸುವುದು ಉಗ್ರರಿಗೆ ಸುಲಭವಾಗಿರಬಹುದು.
ಬೆಂಗಳೂರನ್ನು ಹೊರತುಪಡಿಸಿದರೆ ಉಗ್ರರು ಪತ್ತೆಯಾಗಿದ್ದು ಮಂಗಳೂರಿನಲ್ಲಿ. ಇಲ್ಲಿ ಉಗ್ರರ ಸಂಖ್ಯೆ ಹೆಚ್ಚಲು ಇಲ್ಲಿರುವ ಕಡಲು ಕೂಡ ಒಂದು ಕಾರಣ ಎನ್ನಬಹುದು. ಸಮುದ್ರ ಮಾರ್ಗದಲ್ಲಿ ಅಕ್ರಮ ಸಾಗಾಣಿಕೆ ಮಾಡಲು ಉಗ್ರರು ಮಂಗಳೂರು ಬಂದರು ಬಳಸಿಕೊಳ್ಳುತ್ತಾರೆ. ಉಗ್ರರು ಇತರೆ ರಾಜ್ಯ ಹಾಗೂ ದೇಶಗಳಿಗೆ ಸಂಪರ್ಕ ನಡೆಸಲು ಈ ಮಾರ್ಗವನ್ನು ಬಳಸುತ್ತಾರೆ.
ಈವರೆಗೆ ಸಿಕ್ಕಿಬಿದ್ದ ಉಗ್ರರು?
ಕೇರಳ ಐಸಿಸ್ ನೇಮಕಾತಿ ಪ್ರಕರಣದಲ್ಲಿ ಸಿಕ್ಕಿಬಿದ್ದವರು:
- ಅಮರ್ ಅಬ್ದುಲ್ ರೆಹಮಾನ್
- ಶಂಕರ್ ವೆಂಕಟೇಶ್ ಪೆರುಮಾಳ್
ಬೆಂಗಳೂರು ಐಸಿಸ್ ನೇಮಕಾತಿ ಪ್ರಕರಣದ ಬಂಧಿತರು:
- ಜೋಯೆಬ್ ಮನ್ನಾ
- ಇರ್ಫಾನ್ ನಾಸೀರ್
- ಮಹಮ್ಮದ್ ತಕ್ವೀರ್
- ಆಹಮ್ಮದ್ ಖಾದರ್
ಲವ್ ಜಿಹಾದ್ ಪ್ರಕರಣ:
- ದೀಪ್ತಿ ಮಾರ್ಲಾ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬಂಧನ
- ತಾಲೀಬ್ ಹುಸೇನ್
ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ವರ್ಷದಲ್ಲಿ ಈ ಪ್ರಮಾಣದಲ್ಲಿ ಉಗ್ರರು ಸಿಕ್ಕಿಬಿದ್ದಿದ್ದು ಎಂದು ಹೇಳಲಾಗಿದೆ.
ಇಲಾಖೆಯವರು ಕೈಗೊಂಡ ಕ್ರಮ?
ಇತ್ತೀಚೆಗೆ ಕಾಶ್ಮೀರ ಪೋಲಿಸರು ಬಂಧಿಸಿದ ತಾಲೀಬ್ ಹುಸೇನ್ ಎಂಬ ಉಗ್ರ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡಗಿಕೊಂಡಿದ್ದ. ಬೆಂಗಳೂರಿನಿಂದ ಕಾಶ್ಮೀರದಲ್ಲಿನ ಉಗ್ರರಿಗೆ ಡೈರೆಕ್ಷನ್ ನೀಡಿ ಉಗ್ರ ಚಟುವಟಿಕೆ ನಡೆಸುತ್ತಿದ್ದ. ಇಲ್ಲಿಯೂ ಹಲವರನ್ನು ಉಗ್ರ ಸಂಘಟನೆಗೆ ಸೇರಿಸುವ ಕಾರ್ಯ ನಡೆಸುತ್ತಿದ್ದ. ಬೆಂಗಳೂರು ಪೊಲೀಸರ ಕಣ್ತಪ್ಪಿಸಿ ಕಾಶ್ಮೀರ ಪೊಲೀಸರು ಈ ಉಗ್ರನನ್ನು ಬಂಧಿಸಿದ್ದಾರೆ. ಇದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.
ಉಗ್ರರು ಈ ಪ್ರಮಾಣದಲ್ಲಿ ಸಿಕ್ಕಿಬೀಳುತ್ತಿದ್ದರೂ ಗೃಹ ಇಲಾಖೆ ಗಂಭಿರವಾಗಿ ಪರಿಗಣಿಸಿದೆಯೇ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಪೊಲೀಸರು ಹೇಳುತ್ತಿದ್ದರೂ ಉಗ್ರರನ್ನು ಮಟ್ಟ ಹಾಕುವಲ್ಲಿ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಎಲ್ಲೆಡೆ ಅಭಿಪ್ರಾಯ ವ್ಯಕ್ತವಾಗಿದೆ.
ಸಿಟಿ ಎಸ್‌ಬಿ ಹಾಗೂ ಗುಪ್ತಚರ ಇಲಾಖೆ ಇನ್ನೂ ಶಿಕ್ಷೆ ಇಲಾಖೆಯಾಗಿ ಉಳಿದುಕೊಂಡಿವೆ. ಪೊಲೀಸ್ ಇಲಾಖೆಯಲ್ಲಿ ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸದೇ ಬದಲಾಗಿ ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಅತೃಪ್ತ ಅಧಿಕಾರಿಗಳಿಂದ ಹೆಚ್ಚಿನ ಕ್ರಮವನ್ನು ನಿರೀಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿದೆ. ಅತ್ಯಂತ ಪ್ರಬಲವಾದ ಈ ಇಲಾಖೆಯ ಬಗ್ಗೆ ಅಲಕ್ಷ್ಯ ಮಾಡದೇ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಇಲಾಖೆ ಪ್ರಯೋಜನಕ್ಕೆ ಬಾರದ್ದು ಎಂಬ ಅಭಿಪ್ರಾಯವನ್ನು ಸುಳ್ಳಾಗಿಸುವಂತೆ ಕಾರ್ಯ ನಿರ್ವಹಿಸಬೇಕಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಡಗಿದ್ದ ಹಿಜ್ಬುಲ್ ಉಗ್ರ ಕಾಶ್ಮೀರ ಪೊಲೀಸರ ಬಲೆಗೆ