ಗೋವಾ: ಸೆನ್ಸೇಶನಲ್ ಪ್ರಕರಣವೊಂದರಲ್ಲಿ (Sensational case), ಬೆಂಗಳೂರಿನ ಭರವಸೆಯ ಎಐ ಸ್ಟಾರ್ಟಪ್ ಕಂಪನಿಯೊಂದರ ಸಿಇಒ (AI Startup CEO) ಒಬ್ಬಾಕೆ ತನ್ನ ಮಗನನ್ನೇ ಕೊಂದು (Murder Case) ಗೋವಾದಿಂದ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಬರುತ್ತಿದ್ದಾಗ (Killer CEO) ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾಳೆ.
39 ವರ್ಷದ ಈಕೆಯ ಹೆಸರು ಸುಚನಾ ಸೇಠ್ (Suchana Seth). ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ (Mindful AI Labs) ಸಹ-ಸ್ಥಾಪಕಿ ಹಾಗೂ ಸಿಇಒ. ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾಳೆ ಎಂಬುದು ಈಕೆಯ ಮೇಲಿರುವ ಆರೋಪ. ಮಗನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಕರ್ನಾಟಕಕ್ಕೆ ಪ್ರಯಾಣಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾಳೆ.
ಸುಚನಾ ಸೇಠ್ ಅವರನ್ನು ಸೋಮವಾರ ಕರ್ನಾಟಕದ ಚಿತ್ರದುರ್ಗದಲ್ಲಿ ಮಗನ ಶವವನ್ನು ಇಟ್ಟುಕೊಂಡಿದ್ದ ಚೀಲದೊಂದಿಗೆ ಬಂಧಿಸಲಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆಕೆ ತನ್ನ ಮಗನನ್ನು ಕೊಂದಿದ್ದಾಳೆ. ಕೊಲೆಯ ಉದ್ದೇಶ ಮತ್ತಿತರ ವಿವರಗಳು ಇನ್ನಷ್ಟೇ ಬಯಲಾಗಬೇಕಿವೆ.
ಸುಚನಾ ಸೇಠ್ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ ಆಕೆ ಕೊಠಡಿಯಿಂದ ಒಬ್ಬಂಟಿಯಾಗಿ ಚೆಕ್ ಔಟ್ ಮಾಡಿದ್ದಳು. ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದಳು. ವಿಮಾನದಲ್ಲಿ ತೆರಳಲು ಸಿಬ್ಬಂದಿ ಸಲಹೆ ನೀಡಿದರೂ ಅದಕ್ಕೆ ಒಪ್ಪದೆ, ಟ್ಯಾಕ್ಸಿ ಬುಕ್ ಮಾಡುವಂತೆ ಒತ್ತಾಯಿಸಿದ್ದಳು.
ಜೊತೆಗೆ ಬಂದ ಮಗ ಚೆಕ್ ಔಟ್ ಮಾಡುವಾಗ ಇಲ್ಲದಿರುವುದನ್ನು ಗಮನಿಸಿದ ಸಿಬ್ಬಂದಿ, ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು. ಆಕೆ ಹೋದ ಬಳಿಕ ಕ್ಲೀನಿಂಗ್ ಸಿಬ್ಬಂದಿ ಆಕೆಯ ಅಪಾರ್ಟ್ಮೆಂಟ್ನಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಸುಚನಾ ಸೇಠ್ ಅವರೊಂದಿಗೆ ಮಾತನಾಡಿದ್ದರು. ಆಕೆಯ ಮಗನ ಬಗ್ಗೆ ಕೇಳಿದಾಗ, ಅವನು ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳಿ ಒಂದು ವಿಳಾಸ ನೀಡಿದ್ದಳು. ಅದು ನಕಲಿ ಎಂದು ತಿಳಿದುಬಂದಿತ್ತು.
ನಂತರ ಪೊಲೀಸರು ಮತ್ತೆ ಚಾಲಕನಿಗೆ ಕರೆ ಮಾಡಿದ್ದರು. ಸುಚನಾಗೆ ಅರ್ಥವಾಗದಂತೆ ಕೊಂಕಣಿ ಭಾಷೆಯಲ್ಲಿ ಆತನೊಂದಿಗೆ ಮಾತನಾಡಿ, ಕ್ಯಾಬ್ ಅನ್ನು ಚಿತ್ರದುರ್ಗದ ಪೊಲೀಸ್ ಠಾಣೆ ಕಡೆಗೆ ತಿರುಗಿಸಲು ಆದೇಶಿಸಿದ್ದರು. ಕಾರು ಅಲ್ಲಿಗೆ ಬಂದ ಬಳಿಕ ಸುಚನಾಳನ್ನು ಬಂಧಿಸಿದ್ದರು. ಆಕೆಯ ಬ್ಯಾಗ್‌ನಲ್ಲಿ ಆಕೆಯ ಮಗನ ಶವ ಪತ್ತೆಯಾಗಿತ್ತು.
ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಲಿಂಕ್ಡ್‌ಇನ್ ಪುಟದ ಪ್ರಕಾರ, “2021ರ ಎಐ ಎಥಿಕ್ಸ್‌ನಲ್ಲಿ 100 ಅದ್ಭುತ ಮಹಿಳೆಯರ” ಪೈಕಿ ಸೇಥ್ ಅಗ್ರಸ್ಥಾನದಲ್ಲಿದ್ದಾಳೆ. ಆಕೆಯ ಸ್ವಂತ ಲಿಂಕ್ಡ್‌ಇನ್ ಖಾತೆಯ ಪ್ರಕಾರ ಆಕೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಬರ್ಕ್‌ಮನ್ ಕ್ಲೈನ್ ಸೆಂಟರ್‌ನ ಸಹವರ್ತಿ, ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷಗಳ ಅನುಭವ ಹೊಂದಿರುವ ಡೇಟಾ ವಿಜ್ಞಾನಿ. ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮ ಸಂಶೋಧನಾ ಪ್ರಯೋಗಾಲಯಗಳಲ್ಲಿ ಎಐ ಕಲಿಕೆಯ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವ ಕಂಪನಿ ಸ್ಥಾಪಿಸಿದ್ದಳು.