ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿ ಪಿಕ್ಕಿ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರನ ತಲೆಯೇ ತುಂಡಾಗಿ ಬಿದ್ದಿದೆ. ಆಂಧ್ರಪ್ರದೇಶದ ಚೀಕಲಬೈಲು ಗ್ರಾಮದ ಗುಣಶೇಖರ್ (28) ದಾರುಣ ಅಂತ್ಯ ಕಂಡ ಸವಾರನಾಗಿದ್ದಾನೆ.
ಬೈಕ್ ಮೂಲಕ ಗುಣಶೇಖರ್ ರಾಯಲ್ಪಾಡುನಿಂದ ಆಂಧ್ರಪ್ರದೇಶದಕ್ಕೆ ತೆರಳುತ್ತಿದ್ದ. ಈ ವೇಳೆ ಬೈಕ್‌ಗೆ ಅಪರಿಚಿತ ವಾಹನ ಗುದ್ದಿದೆ. ಅಪಘಾತದ ರಭಸಕ್ಕೆ ಗುಣಶೇಖರ್ ತಲೆಯೇ ತುಂಡಾಗಿ ರಸ್ತೆಗೆ ಬಿದ್ದಿತ್ತು. ಭೀಕರ ದೃಶ್ಯ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಕೂಡಲೇ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ತುಮಕೂರಿನಲ್ಲಿ ಕಾರು ಅಪಘಾತ; ಇಬ್ಬರು ಸಾವು
ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟರೆ, ಮತ್ತೋರ್ವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಜೀವ ಬಿಟ್ಟಿದ್ದಾನೆ. ತುಮಕೂರು ತಾಲೂಕಿನ ಕೋರಾ ಬ್ರಿಡ್ಜ್ ಬಳಿ ಕಾರು ಅಪಘಾತವಾಗಿ ದಾವಣಗೆರೆ ಮೂಲದ ಇಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ತೂರಿನಲ್ಲಿ ಟೆಂಪೋ ಟ್ರಾವೆಲರ್-ಗೂಡ್ಸ್ ವಾಹನದ ನಡುವೆ ಅಪಘಾತ
ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂ ಮಂಡಲಂ ಮೊಗಿಲಿ ಘಾಟ್ ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಹಾಗೂ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಗೋಲ್ಡ್ ಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನಾಟಕದ ಉಡುಪಿಯಿಂದ ಟೆಂಪೋ ಟ್ರಾವೆಲರ್ ತಿರುಮಲಕ್ಕೆ ಹೋಗುವಾಗ ಘಟನೆ ನಡೆದಿದೆ.
ಘಾಟ್‌ನಲ್ಲಿದ್ದ ಸ್ಪೀಡ್ ಬ್ರೇಕರ್‌ಗಳಿಗೆ ಟೊಮೆಟೊ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಕಳೆದ 13ರಂದು ನಡೆದ ರಸ್ತೆ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದರು. ಇತ್ತೀಚೆಗೆ ಮೊಗಿಲಿ ಘಾಟ್ ರಸ್ತೆಯಲ್ಲಿ ಹೆದ್ದಾರಿ ಅಪಘಾತ ತಡೆಯಲು ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಲಾಗಿದೆ. ಆದರೂ ಅತಿವೇಗವಾಗಿ ಓಡಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಂಗಾರುಪಾಳ್ಯಂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ