ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆ ಸಂಬಂಧ ಸಾಕಷ್ಟು ರಾಜಕೀಯ ಜಿದ್ದಾಜಿದ್ದಿ ನಡೆದಿತ್ತು. ಈ ನಡುವೆ ಕೆಲವು ಕಡೆ ಭವಿಷ್ಯವಾಣಿಗಳು ನಿಜವಾಗಿವೆ. ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ (Mylaralingeshwara) ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕಾರ್ಣಿಕ (Goravayya Karnika) ಹಾಗೂ ಮಂಡ್ಯದ ಚೊಕ್ಕನಹಳ್ಳಿಯ ಚಿಕ್ಕಮ್ಮ ದೇವಿ (Chikkamma Devi) ನುಡಿದಿದ್ದ ಭವಿಷ್ಯವಾಣಿ ನಿಜವಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಈಗ ಅಧಿಕಾರವನ್ನು ಪಡೆದಿದ್ದಾರೆ.
ಗೊರವಯ್ಯ ಕಾರ್ಣಿಕ ನುಡಿದಿದ್ದೇನು?
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು 2023ರ ಫೆಬ್ರವರಿ 7ರಂದು ನಡೆದಿತ್ತು. ಈ ವೇಳೆ ಗೊರವಯ್ಯ ನುಡಿದಿದ್ದ ಕಾರ್ಣಿಕ ಭವಿಷ್ಯವು ನಿಜವಾಗಿದೆ. 14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ʼ ಎಂದು ಕಾರ್ಣಿಕ ಭವಿಷ್ಯ ವಾಣಿ ನುಡಿದಿದ್ದರು.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪದಗ್ರಹಣಕ್ಕೆ ಶ್ರೀರಾಮ ಪಟ್ಟಾಭಿಷೇಕದ ಟಚ್; ಕಂಠೀರವದಲ್ಲಿ ರಾಮನ ಮೂರ್ತಿ
ಭಕ್ತಾದಿಗಳು ಹೆಗಲ ಮೇಲೆ ಬಿಲ್ಲನ್ನು ಹೊತ್ತು ತಂದು ಡೆಂಕನಮರಡಿಯಲ್ಲಿ ಏರಿಸಿದ್ದರು. ಕಾರ್ಣಿಕ ಭವಿಷ್ಯ ನುಡಿಯುವ ಗೊರವಪ್ಪ ರಾಮಣ್ಣ ಅವರು ಬಿಲ್ಲನ್ನು ಏರಿ ಆಕಾಶದೆಡೆಗೆ ಮೌನವಾಗಿ ದಿಟ್ಟಿಸಿ ಸದ್ದಲೇ ಎಂದು ಕೂಗಿ “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದರು. ಅಲ್ಲದೆ, ಬಿಲ್ಲನ್ನು ಕೈಬಿಟ್ಟಿದ್ದರು.
ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ್ದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು, ರಾಜಕೀಯಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂಬುದಾಗಿ ಭಗವಂತ ದೈವವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದ್ದರು.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಸಿಗುತ್ತದೆ. ಪರೋಕ್ಷವಾಗಿ ಕುರುಬ ಸಮುದಾಯದ ವ್ಯಕ್ತಿಯೇ ರಾಜ್ಯವನ್ನಾಳುತ್ತಾರೆ ಎಂದು ಹೇಳಿದ್ದು, ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಮುನ್ಸೂಚನೆಯನ್ನು ಈ ಕಾರ್ಣಿಕ ಕೊಟ್ಟಿತ್ತು. ಈಗ ಅದರಂತೆ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ.
ಇನ್ನುಳಿದಂತೆ ರೈತಾಪಿ ವರ್ಗಕ್ಕೆ ಸಂಬಂಧಿಸಿದಂತೆ ಈ ವರ್ಷ ಮಳೆ ಬೆಳೆ ಸಮೃದ್ಧಿಯಾಗಿ ಕೃಷಿ ಚಟುವಟಿಕೆಗೆ ಯಾವುದೇ ಲೋಪದೋಷ ಉಂಟಾಗುವುದಿಲ್ಲ ಎಂಬುದು ಸಹ ವಾರ್ಷಿಕ ಕಾರ್ಣಿಕದ ತಾತ್ಪರ್ಯವಾಗಿತ್ತು.
ಚಿಕ್ಕಮ್ಮ ದೇವಿ ಸಹ ಆಶೀರ್ವಾದ ನೀಡಿದ್ದಳು
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿನ ಚಿಕ್ಕಮ್ಮದೇವಿವು ಸಿದ್ದರಾಮಯ್ಯ ಅವರ ಮನೆ ದೇವರು. ಇಲ್ಲಿ ತಾಯಿ ಆಶೀರ್ವಾದ ಪಡೆಯಲು ಅವರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. 2023ರ ಮೇ 11ರಂದು ಚಿಕ್ಕಮ್ಮದೇವಿ ಬಳಿಗೆ ಭವಿಷ್ಯವನ್ನು ಕೇಳಿದ್ದಾಗ, ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಿಲ್ಲಬೇಕು, ಒಂದೇ ಕ್ಷೇತ್ರದಲ್ಲಿ ನಿಂತರೂ ಗೆದ್ದು ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯವನ್ನು ನುಡಿಯಲಾಗಿತ್ತು. ಇದು ಸಹ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಆಗುವ ಬಗ್ಗೆ ಮುನ್ಸೂಚನೆಯನ್ನು ನೀಡಿತ್ತು.
ಇದನ್ನೂ ಓದಿ: Karnataka CM: ಸಿದ್ದು ಸಿಎಂ ಆಗೋ ಖುಷಿಗೆ ಮೈಸೂರು ಸಹಿತ ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ
ಹರಕೆ ತೀರಿಸಿದ ಗ್ರಾಮಸ್ಥರು
ಶನಿವಾರ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ಗ್ರಾಮಸ್ಥರು 101 ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆ. ಅಲ್ಲದೆ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಒಳ್ಳೆಯ ಆಡಳಿತ ನೀಡಲಿ, ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.