ಮತ್ತೀಕೆರೆ ಜಯರಾಮ್, ಮಂಡ್ಯ
ಮಂಡ್ಯ ತಾಲೂಕು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ನಗರಸಭೆ ವ್ಯಾಪ್ತಿಯೂ ಸೇರಿದಂತೆ ಬೂದನೂರು, ಕೆರಗೋಡು, ಬಸರಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು, ದುದ್ದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಒಂದೂವರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಷ್ಟೇ ಮಂಡ್ಯ ಕ್ಷೇತ್ರದಲ್ಲಿದೆ. ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಿಂದಲೇ ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಕ್ಷೇತ್ರಗಳು ಕೂಡಿಕೊಂಡಿವೆ. ಮಂಡ್ಯ ತಾಲೂಕಿನ ಅರ್ಧದಷ್ಟು ತಾಲೂಕು ಅವೆರಡೂ ಕ್ಷೇತ್ರಗಳಿಗೆ ಒಳಪಟ್ಟಿವೆ. ಸ್ವತಃ ಕುವೆಂಪು ಅವರಿಂದಲೇ ನಿತ್ಯ ಸಚಿವ ಎಂದು ಕರೆಸಿಕೊಂಡ ದಿವಂಗತ ಕೆ.ವಿ. ಶಂಕರಗೌಡ ಒಮ್ಮೆ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಚುನಾವಣಾ ಹಿನ್ನೋಟ
2004ರ ಚುನಾವಣೆ ವೇಳೆಗೆ ಎಸ್.ಡಿ.ಜಯರಾಮ್ ನಿಧನರಾಗಿದ್ದರಿಂದ ಜೆಡಿಎಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಎದುರಾಗಿತ್ತು. ಲೋಕಜನಶಕ್ತಿ ಅದಾದ ಬಳಿಕ ಜೆಡಿಯು ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಕೀಲ, ರೈತ ಸಂಘದ ಹೋರಾಟದ ಹಿನ್ನೆಲೆಯಿಂದ ಬಂದಿದ್ದ ಎಂ. ಶ್ರೀನಿವಾಸ್ ಅವರು ಜೆಡಿಎಸ್ ಸೇರ್ಪಡೆಗೊಂಡರು. ಪಕ್ಷದ ಮೂಲ ನಾಯಕರು ಮತ್ತು ಕಾರ್ಯಕರ್ತರ ಸಾಕಷ್ಟು ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡರು. ಆಗ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ವಿರೋಧಿ ಅಲೆಯಲ್ಲಿ ಶ್ರೀನಿವಾಸ್ ಅವರಿಗೆ ಗೆಲುವಿನ ಅದೃಷ್ಟ ಖುಲಾಯಿಸಿತು.
2008ರಲ್ಲಿ ಎಂ. ಶ್ರೀನಿವಾಸ್ ಅವರಿಗೂ ವಿರೋಧಿ ಅಲೆ ಎದುರಾಯಿತು. ಆದರೆ, ಅಷ್ಟರಲ್ಲಿ ಕ್ಷೇತ್ರ ಮರುವಿಂಗಡಣೆ ಆಗಿತ್ತು. ಅಳಿದು ಹೋದ ಕೆರಗೋಡು ಕ್ಷೇತ್ರದ ಭಾಗಶಃ ಗ್ರಾಮೀಣ ಪ್ರದೇಶ ಮಂಡ್ಯಕ್ಕೆ ಸೇರ್ಪಡೆಗೊಂಡಿತು. ಮಂಡ್ಯದಿಂದ ಕಾಂಗ್ರೆಸ್ ಪ್ರಾಬಲ್ಯದ ತಗ್ಗಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ನೆರೆಯ ಶ್ರೀರಂಗಪಟ್ಟಣಕ್ಕೆ ಶಿಫ್ಟ್ ಆಯಿತು. ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿದ್ದ ಹನಕೆರೆ ಪುಟ್ಟಪ್ಪ ಅವರ ಸೊಸೆ ವಿದ್ಯಾ ನಾಗೇಂದ್ರ (ಭೂಗತ ಪಾತಕಿಗಳಿಂದ ಹತ್ಯೆಯಾಗಿದ್ದ ಎಚ್.ಪಿ. ನಾಗೇಂದ್ರ ಪತ್ನಿ) ಬಿಜೆಪಿಯಿಂದ ಸ್ಪರ್ಧಿಸಿದರು. ಕೆರಗೋಡು ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಚ್.ಬಿ. ರಾಮು ತಮ್ಮ ಗಾಡ್ ಫಾದರ್ ರೆಬೆಲ್ ಸ್ಟಾರ್ ಅಂಬರೀಶ್ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಮಂಡ್ಯದಲ್ಲಿ ಕಾಂಗ್ರೆಸ್ ಹುರಿಯಾಳುವಾದರು. ಕಾಂಗ್ರೆಸ್ ಮತಗಳ ವಿಭಜನೆಯಿಂದ ಎಂ. ಶ್ರೀನಿವಾಸ್ ಅವರಿಗೆ ಮತ್ತೊಮ್ಮೆ ಅದೃಷ್ಟ ಒಲಿದು, ಪುನರಾಯ್ಕೆಗೊಂಡರು.
2013ರ ಚುನಾವಣೆ ವೇಳೆಗೆ ಮಂಡ್ಯದಲ್ಲಿ ಎಂ. ಶ್ರೀನಿವಾಸ್ ವಿರೋಧಿ ಅಲೆ ಎದ್ದಿತ್ತು. 2008ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ತೆರಳಿ ಸೋಲನುಭವಿಸಿ, 2009ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಸೋಲಿನ ಕಹಿ ಉಂಡಿದ್ದ ತಾರಾ ವರ್ಚಸ್ಸಿನ ರಾಜಕಾರಣಿ ಅಂಬರೀಶ್ 2013ರಲ್ಲಿ ಮಂಡ್ಯದಿಂದ ಕಾಂಗ್ರೆಸ್ ಟಿಕೆಟ್ ತಮ್ಮದಾಗಿಸಿಕೊಂಡು, ಸ್ಪರ್ಧೆಗೆ ಇಳಿದರು. ಸತತ ಎರಡು ಸೋಲಿನ ಅನುಕಂಪವಿದ್ದ ಅಂಬರೀಶ್ ಅವರು ಸತತ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ಶ್ರೀನಿವಾಸ್ ಅವರನ್ನು ಭಾರೀ ಮತಗಳ ಅಂತರದಿಂದಲೇ ಪರಾಭವಗೊಳಿಸಿದರು. ಆಗ ರಾಜ್ಯದಲ್ಲಿ ಬಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಮೂರೂವರೆ ವರ್ಷ ಅಂಬರೀಶ್ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.
2018ರಲ್ಲಿ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟುಕೊಂಡೇ ಸ್ವಪಕ್ಷೀಯರನ್ನು ಗೊಂದಲಕ್ಕೆ ಸಿಲುಕಿಸಿದರು. ನಾಮಪತ್ರ ಸಲ್ಲಿಕೆಗೆ 48 ತಾಸು ಬಾಕಿ ಇದೆ ಎನ್ನುವಾಗಷ್ಟೇ ನಾನು ಸ್ಪರ್ಧಿಸುವುದಿಲ್ಲವೆಂದು ಅಂಬರೀಶ್ ಘೋಷಿಸಿದರು. ತರಾತುರಿಯಲ್ಲೇ ರವಿಕುಮಾರಗೌಡ ಗಣಿಗ ಕೈ ಟಿಕೆಟ್ ವಾರಸುದಾರರಾದರು. ಜೆಡಿಎಸ್‌ನಿಂದ ಟಿಕೆಟ್‌ಗಾಗಿ ಕಡೆ ಕ್ಷಣದವರೆಗೂ ಪೈಪೋಟಿ ನಡೆಸಿದ್ದ ಚಂದಗಾಲು ಶಿವಣ್ಣ (ಕೆರಗೋಡು ಮಾಜಿ ಶಾಸಕ ಎನ್. ತಮ್ಮಣ್ಣ ಸಹೋದರ) ಬಿಜೆಪಿ ಹುರಿಯಾಳಾದರು. ಆಗ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದ ಎಂ. ಶ್ರೀನಿವಾಸ್ ಮತ್ತೆ ಗೆಲುವಿನ ಲಯ ಕಂಡುಕೊಂಡರು. ಇಲ್ಲಿ ಎಚ್.ಡಿ. ಕುಮಾರಸ್ವಾಮಿ ಪರ ಎದ್ದ ಒಕ್ಕಲಿಗರ ಸುನಾಮಿ ಶ್ರೀನಿವಾಸ್ ಗೆಲುವಿನಲ್ಲಿ ಪಾತ್ರ ವಹಿಸಿತು. ಹೀಗೆ ಮೂರನೇ ಬಾರಿ ಅದೃಷ್ಟ ಬಲದಿಂದಲೇ ಶ್ರೀನಿವಾಸ್ ವಿಧಾನಸಭೆ ಮೆಟ್ಟಿಲೇರಿದ್ದಾರೆ.
2023ರ ಮುಖಾಮುಖಿ
ಜಿಲ್ಲಾ ಕೇಂದ್ರ ಮಂಡ್ಯ ಕ್ಷೇತ್ರವನ್ನು ಮೂರನೇ ಬಾರಿ ಪ್ರತಿನಿಧಿಸುತ್ತಿರುವ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಅವರನ್ನು ಅನಾರೋಗ್ಯ ಕಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಾ ಕಣದಿಂದ ಶ್ರೀನಿವಾಸ್ ಹಿಂದೆ ಸರಿಯುವುದು ಬಹುತೇಕ ಖಚಿತವಾದಂತಿದೆ. ಆದರೆ, ತಮ್ಮ ಉತ್ತರಾಧಿಕಾರಿಯನ್ನಾಗಿ ಖಾಸಾ ಅಳಿಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಅವರನ್ನು ಪ್ರತಿಷ್ಠಾಪಿಸಬೇಕೆನ್ನುವ ಮಹತ್ವಾಕಾಂಕ್ಷೆ ಕಟ್ಟಿಕೊಂಡಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠರು ಸೊಪ್ಪು ಹಾಕುವ ಸಾಧ್ಯತೆ ಕ್ಷೀಣ. ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಕೆ.ವಿ. ಶಂಕರಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ(ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್. ಸಚ್ಚಿದಾನಂದ ಪುತ್ರ), ಉದ್ಯಮಿ ಕೀಲಾರ ರಾಧಾಕೃಷ್ಣ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳು.
ಜನತಾ ಪರಿವಾರದಲ್ಲಿ ಪ್ರಬಲ ನಾಯಕರಾಗಿದ್ದ ದಿವಂಗತ ಎಸ್.ಡಿ. ಜಯರಾಮ್ ಪುತ್ರ, ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಜೆ. ಅಶೋಕ್ ಜಯರಾಮ್ ಬಿಜೆಪಿ ಸೇರ್ಪಡೆಗೊಂಡಿದ್ದು, ಅವರೇ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ. ಇನ್ನು, ಕಾಂಗ್ರೆಸ್‌ನಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರವಿಕುಮಾರಗೌಡ ಗಣಿಗ ಇತ್ತ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಮುಖಾಂತರ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಪಡೆದಿದ್ದರೆ, ಅತ್ತ ಡಿಕೆಶಿ ಜತೆಗೂ ನೇರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಹೀಗಾಗಿ ಟಿಕೆಟ್ ಖಚಿತಪಡಿಸಿಕೊಂಡು, ಕ್ಷೇತ್ರದಲ್ಲಿ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಈ ಮಧ್ಯೆ, ಕೆಲವು ಹೊಸ ಮುಖಗಳು ಮತ್ತು ಕ್ಷೇತ್ರದ ಹೊರಗಿನವರ ಚಿತ್ತ ಕೂಡ ಮಂಡ್ಯದತ್ತ ನೆಟ್ಟಿದೆ. ಅಮೆರಿಕದಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗ ತೊರೆದು ಬಂದು, ಮಂಡ್ಯದಲ್ಲಿ ಆರ್ಗ್ಯಾನಿಕ್ ಮಂಡ್ಯ ಎನ್ನುವ ಕಂಪೆನಿ ನಡೆಸುತ್ತಿರುವ ಮಧುಚಂದನ್ ಅವರು ರೈತ ಸಂಘದಿಂದ ಸ್ಪರ್ಧೆಗಿಳಿಯುವ ಉತ್ಸಾಹದಲ್ಲಿದ್ದಾರೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
೧. ಕೀಲಾರ ರಾಧಾಕೃಷ್ಣ/ ಎಚ್.ಎನ್.ಯೋಗೇಶ್/ ಕೆ.ಎಸ್.ವಿಜಯಾನಂದ (ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಗಳು)
2. ರವಿಕುಮಾರಗೌಡ (ಕಾಂಗ್ರೆಸ್)
3. ಎಸ್.ಜೆ.ಅಶೋಕ್ ಜಯರಾಮ್(ಬಿಜೆಪಿ)
4. ಮಧುಚಂದನ್ (ರೈತಸಂಘ)
ಜಾತಿವಾರು ಮತದಾರರ ವಿವರ