ಮಂಡ್ಯ: ಗನ್ ತೋರಿಸಿ ದರೋಡೆ ಮಾಡಲು ಯತ್ನಿಸಿದವರಿಗೆ ಮಂಡ್ಯ ಜನರು ಹೆಡೆಮುರಿ ಕಟ್ಟಿದ್ದ ಘಟನೆ ಗುರುವಾರ ಬೆಳಗಿನ ಜಾವ ಇಲ್ಲಿನ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ (Mandya Robbery) ನಡೆದಿದೆ.
ಜೇವರ್ಗಿ ಹಾಗೂ ಶ್ರೀರಂಗಪಟ್ಟಣ ಹೆದ್ದಾರಿ ನಡುವೆ ಈ ಪ್ರಕರಣ ನಡೆದಿದೆ. ಬೆಳಗಾವಿಯಿಂದ ಮೈಸೂರಿಗೆ ಹಣದ ಬ್ಯಾಗ್ ಜತೆಗೆ ಕಾರಿನಲ್ಲಿ ಇಬ್ಬರು ಚಿನ್ನದ ವ್ಯಾಪಾರಿಗಳು ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಚೇಸಿಂಗ್ ಮಾಡಿ ಬಂದ ದರೋಡೆಕಾರರು ಮಾಲೀಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಮುಂದಾದರು. ಈ ವೇಳೆ ಕಾರಿನಲ್ಲಿದ್ದವರು ಸಹ ಭಯಗೊಂಡಿದ್ದಾರೆ. ಸ್ವಲ್ಪ ಪ್ರತಿರೋಧ ಒಡ್ಡಲು ಮುಂದಾಗಿದ್ದಾರೆ. ಆದರೆ, ಕೈಯಲ್ಲಿ ಗನ್ ಇದ್ದಿದ್ದರಿಂದ ಹೆಚ್ಚಿನ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.
ಈ ಎಲ್ಲ ಬೆಳವಣಿಗೆಯನ್ನು ದೂರದಿಂದಲ್ಲೇ ಗಮನಿಸುತ್ತಿದ್ದ ಗ್ರಾಮಸ್ಥರು ಧೈರ್ಯ ಮಾಡಿ ಸಹಾಯಕ್ಕೆ ಧಾವಿಸಿದ್ದಾರೆ. ಏಕಾಏಕಿ ದಾಳಿ ನಡೆಸಿದ ಗ್ರಾಮಸ್ಥರು ಇಬ್ಬರು ದರೋಡೆಕೋರರನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಬಳಿಕ ಪಾಂಡವಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗನ್ ತೋರಿಸಿ ದರೋಡೆ
ಪ್ರಾಥಮಿಕ ತನಿಖೆಯಲ್ಲಿ ಬೆಳಗಾವಿ ಮೂಲದ ಬಾಲಾಜಿ, ಸಿರಾಜ್ ಎಂಬುವವರ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಎರಡು ಕಾರಿನಲ್ಲಿ ಬಂದ ದರೋಡೆಕೋರರು ಮೊದಲು ಗನ್ ತೋರಿಸಿದ್ದಾರೆ. ಬಳಿಕ ಮಚ್ಚನ್ನೂ ಹೊರಗೆ ತೆಗೆದು ಬೆದರಿಸಿದ್ದಾರೆ. ಆದರೆ, ಇದಕ್ಕೆ ಹೆದರದೇ ಇದ್ದಾಗ ದಾಳಿ ನಡೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸುತ್ತಮುತ್ತಲು ಇದ್ದ ಗ್ರಾಮಸ್ಥರು ಏಕಾಏಕಿ ದಾಳಿ ನಡೆಸಿದ್ದು, ದುಷ್ಕರ್ಮಿಗಳನ್ನು ಹಿಡಿದಿದ್ದಾರೆ. ಈ ಮೂಲಕ ಚಿನ್ನದ ವ್ಯಾಪಾರಿಗಳನ್ನು ರಕ್ಷಿಸಿದ್ದಾರೆ.
ಗ್ರಾಮಸ್ಥರ ದಾಳಿ ವೇಳೆ ಇಬ್ಬರು ಮಾತ್ರ ಸಿಕ್ಕಿಬಿದ್ದಿದ್ದು, ಉಳಿದವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ದಾಳಿ ನಡೆಸಲೆಂದೇ ಎರಡು ಕಾರಿನಲ್ಲಿ ಬಂದಿದ್ದರು ಎಂದು ಹೇಳಲಾಗಿದೆ. ಇಬ್ಬರನ್ನು ಹಿಡಿದು ಥಳಿಸಿದ ಗ್ರಾಮಸ್ಥರು ಬಳಿಕ ಅವರನ್ನು ಪಾಂಡವಪುರ ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಪಾಂಡವಪುರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ಕಲಬುರಗಿಯಲ್ಲಿ ಮಹಾರಾಷ್ಟ್ರದ ದರೋಡೆಕೋರರ ಕಾಲಿಗೆ ಗುಂಡೇಟು, ಬಂಧನ