Site icon Vistara News

ಎಲೆಕ್ಷನ್‌ ಹವಾ | ಮಳವಳ್ಳಿ | ಇರೋ ಮೂವರಲ್ಲಿ ಗೆಲ್ಲೋರು ಯಾರೆಂಬ ಕುತೂಹಲ

malavalli1

ಮತ್ತೀಕೆರೆ ಜಯರಾಮ್‌, ಮಂಡ್ಯ
ಕಿರುಗಾವಲು ವಿಧಾನಸಭಾ ಕ್ಷೇತ್ರವು ಮರು ವಿಂಗಡಣೆಯಲ್ಲಿ ಅಳಿದು ಹೋದ ನಂತರ ಅದರ ಬಹುಭಾಗ ಸೇರ್ಪಡೆಯೊಂದಿಗೆ ಅಖಂಡ ಮಳವಳ್ಳಿ ತಾಲೂಕು ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಲ್ಲಿದ್ದ ಮಳವಳ್ಳಿಯು ಮರು ವಿಂಗಡಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೂ ಬಂದಿದೆ. ಷಡಕ್ಷರ ದೇವನ ಗದ್ದುಗೆ, ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಕೇಂದ್ರವೆನ್ನುವ ಹಗ್ಗಳಿಕೆಗೆ ಪಾತ್ರವಾಗಿರುವ ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ, ಗಗನ ಚುಕ್ಕಿ ಜಲಪಾತ, ಮುತ್ತತ್ತಿ ಈ ಕ್ಷೇತ್ರದಲ್ಲಿವೆ. ಕಾವೇರಿ ನದಿಯಂಚಿನ ಈ ತಾಲೂಕಿನಲ್ಲಿ ರಾಜಕೀಯ ಜಿದ್ದಾಜಿದ್ದಿಯೂ ಬಲು ಜೋರು.

ಚುನಾವಣಾ ಹಿನ್ನೋಟ
2004ರ ಚುನಾವಣೆಯಲ್ಲಿ ಹಿಂದಿನ ಜೆಡಿಯು ಶಾಸಕರಾಗಿದ್ದ ಬಿ. ಸೋಮಶೇಖರ್ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಬಣಗಳ ಬಡಿದಾಟ, ಹಿಂದಿನ ಬಾರಿಯ ಸೋಲಿನ ಅನುಕಂಪ ಡಾ. ಅನ್ನದಾನಿ ಗೆಲುವಿಗೆ ರಹದಾರಿ ಮಾಡಿಕೊಟ್ಟಿತು. ಈ ಚುನಾವಣೆಯಲ್ಲಿ ಸೋತರೂ ನರೇಂದ್ರಸ್ವಾಮಿ ಅವರು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಅವಕಾಶ ನೀಡಿತು. ಮಂಡ್ಯ ಜಿಲ್ಲೆಯ ವೈಟ್ ಕಾಲರ್ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ ಮಾಜಿ ಸಚಿವ ಸೋಮಶೇಖರ್ ತೀವ್ರ ಹಿನ್ನಡೆ ಕಂಡು, ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು.

2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅನ್ನದಾನಿ ಅಭ್ಯರ್ಥಿಯಾದರು. ಆದರೆ, ಕಾಂಗ್ರೆಸ್ ಭಿನ್ನಮತ ಭುಗಿಲೆದ್ದಿತು. ಮಾಜಿ ಶಾಸಕಿ ಮಲ್ಲಾಜಮ್ಮ ಅವರು ಹೈಕಮಾಂಡ್ ಮಟ್ಟದಲ್ಲಿ ತಮಗಿದ್ದ ಪ್ರಭಾವ ಬಳಸಿಕೊಂಡು, ನರೇಂದ್ರಸ್ವಾಮಿ ಅವರಿಗೆ ಕೈ ಟಿಕೆಟ್ ತಪ್ಪಿಸಿದರು. ಯಮದೂರು ಸಿದ್ದರಾಜು ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ನರೇಂದ್ರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾದರು. ಹಿಂದಿನ ಚುನಾವಣೆ ಸೋಲು, ಕಾಂಗ್ರೆಸ್ ಟಿಕೆಟ್ ಕೈ ತಪ್ಪಿಸಿದ ಹಿನ್ನೆಲೆಯಲ್ಲಿ ಅನುಕಂಪದ ಅಲೆ ನರೇಂದ್ರಸ್ವಾಮಿ ಪರ ಎದ್ದಿತು. ಪಕ್ಷೇತರರಾಗಿ ಆಯ್ಕೆಯಾದ ನರೇಂದ್ರಸ್ವಾಮಿ ಅವರು ಆಗ ಬಿಜೆಪಿ ನೆರವಿಗೆ ನಿಂತು, ಸಚಿವ ಕೂಡ ಆದರೆನ್ನುವುದು ವಿಶೇಷ.

2013ರಲ್ಲಿ ಮತ್ತೆ ನರೇಂದ್ರಸ್ವಾಮಿ ಮತ್ತು ಅನ್ನದಾನಿ ಮುಖಾಮುಖಿಯಾದರು. ಅನ್ನದಾನಿ ಗೆದ್ದೇ ಬಿಟ್ಟರೆಂದು ಜೆಡಿಎಸ್ ಪಡೆ ಮತ ಎಣಿಕೆ ಕೇಂದ್ರದ ಹೊರಗೆ ವಿಜಯೋತ್ಸವ ಆಚರಿಸುತ್ತಿತ್ತು. ಆದರೆ, ಆಗಿನ್ನೂ ಅಂಚೆ ಮತಗಳ ಎಣಿಕೆ ಮತ್ತು ಒಂದು ಇವಿಎಂ ಮತಗಳ ಎಣಿಕೆ ಮುಗಿದಿರಲಿಲ್ಲ. ಅನ್ನದಾನಿ 184 ಅಂಚೆ ಮತ ಪಡೆದರೆ ನರೇಂದ್ರಸ್ವಾಮಿ 346 ಅಂಚೆ ಮತ ಪಡೆದರು.ಒಟ್ಟಾರೆಯಾಗಿ ಅನ್ನದಾನಿ 61,331 ಮತ ಪಡೆದರೆ ನರೇಂದ್ರಸ್ವಾಮಿ 61,869 ಮತಗಳೊಂದಿಗೆ ಅಂದರೆ ಕೇವಲ 538 ಮತಗಳ ಅಂತರದಲ್ಲಿ ನರೇಂದ್ರಸ್ವಾಮಿಗೆ ವಿಜಯಲಕ್ಷ್ಮಿ ಒಲಿದಳು. ಈ ಚುನಾವಣೆಯ ಮತಗಳ ಎಣಿಕೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಪ್ರಯೋಜನವಾಗಲಿಲ್ಲ. ಅಂತೂ ಇಂತು ನರೇಂದ್ರಸ್ವಾಮಿ ಆ ಅವಧಿ ಮುಗಿಸಿಯೇ ಬಿಟ್ಟರು.

2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಜೆಡಿಎಸ್ ಗಾಳಿ ಬೀಸಿತು. ಅದರ ನೆರವಿನೊಂದಿಗೆ ಡಾ.ಕೆ.ಅನ್ನದಾನಿ ಭಾರಿ ಮತಗಳ ಅಂತರದಿಂದಲೇ ಗೆದ್ದು ಬೀಗಿದರು. ನರೇಂದ್ರ ಸ್ವಾಮಿ 76,278 ಮತ ಗಳಿಸಿದರೆ ಅನ್ನದಾನಿ 1,03,038 ಮತಗಳನ್ನು ಗಳಿಸಿ ಜಯಿಸಿದರು. ಸತತ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ನರೇಂದ್ರಸ್ವಾಮಿ ಈ ಬಾರಿ ನಿರಾಸೆ ಅನುಭವಿಸಿದರು. ಬಿಜೆಪಿ ಹುರಿಯಾಳಾಗಿದ್ದ ಮಾಜಿ ಸಚಿವ ಬಿ.ಸೋಮಶೇಖರ್ ಕೇವಲ 10,808 ಮತಗಳೊಂದಿಗೆ ಹೀನಾಯ ಸೋಲನುಭವಿಸಿ ಠೇವಣಿ ಕಳೆದುಕೊಂಡರು.

2023ರ ಮುಖಾಮುಖಿ

ಜೆಡಿಎಸ್‌ನಿಂದ ಹಾಲಿ ಶಾಸಕರಾಗಿರುವ ಡಾ.ಕೆ. ಅನ್ನದಾನಿ ಅವರು ದಳಪತಿಗಳ ಪ್ರೀತಿಪಾತ್ರ ದಲಿತ ನಾಯಕ. ಹೀಗಾಗಿ ಅನ್ನದಾನಿಗೆ ಟಿಕೆಟ್ ವಿಚಾರದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲ. ಇನ್ನು, ಕಾಂಗ್ರೆಸ್‌ನಿಂದ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹುರಿಯಾಳಾಗುವುದು ಖಚಿತ. ಜನತಾ ಪರಿವಾರ ತ್ಯಜಿಸಿದ ನಂತರ ಕಮಲ ಪಾಳೆಯದಲ್ಲಿ ನೆಲೆ ನಿಂತಿರುವ ಮತ್ತೋರ್ವ ಮಾಜಿ ಸಚಿವ ಬಿ. ಸೋಮಶೇಖರ್ ಬಿಜೆಪಿಯಿಂದ ಕಣಕ್ಕೆ ಇಳಿಯಲು ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲೂ ಈ ಮೂವರೇ ಅಭ್ಯರ್ಥಿಗಳಾಗಿದ್ದರು. ಮತ್ತೆ ಅದೇ ಕಲಿಗಳು ಸೆಣೆಸಾಡುವ ಸಾಧ್ಯತೆ ನಿಚ್ಚಳವಾಗಿದೆ.

2023ಕ್ಕೆ ಸಂಭಾವ್ಯ ಅಭ್ಯರ್ಥಿಗಳು
1. ಡಾ. ಕೆ. ಅನ್ನದಾನಿ
2. ಪಿ.ಎಂ. ನರೇಂದ್ರ ಸ್ವಾಮಿ
3. ಬಿ. ಸೋಮಶೇಖರ್‌

ಜಾತಿವಾರು ಮತದಾರರ ವಿವರ

Exit mobile version