ಮಂಡ್ಯ: ಮಳವಳ್ಳಿಯಲ್ಲಿ ಬಾಲಕಿಯೊಬ್ಬಳು ಟ್ಯೂಶನ್‌ನಿಂದ ಮನೆಗೆ ಬರದೆ ಶವವಾಗಿ ಪತ್ತೆಯಾದ ಪ್ರಕರಣದ ಸತ್ಯ ಸ್ಫೋಟಗೊಂಡಿದ್ದು, ಟ್ಯೂಶನ್ ಶಿಕ್ಷಕನೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಪೊಲೀಸ್ ವಿಚಾರಣೆಯ ವೇಳೆ ಬಯಲಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಈ ಸ್ಫೋಟಕ ಸತ್ಯ ಬಯಲಾಗಿದ್ದು, ಶಿಕ್ಷಕ ಕಾಂತರಾಜ್‌ನೇ ಅತ್ಯಾಚಾರವೆಸಗಿ ಕೊಲೆಗೈದಿರುವುದು ಸಾಬೀತಾಗಿದೆ. ಬಾಲಕಿಯನ್ನು ಟ್ಯೂಶನ್‌ಗೆಂದು ಈತನೇ ಫೋನ್ ಮಾಡಿ ಕರೆಸಿಕೊಂಡಿದ್ದ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಬಾಲಕಿಯ ಪೋಷಕರಿಗೆ ವಿಷಯ ಗೊತ್ತಾದರೆ ಅಪಾಯವೆಂದು ಆಕೆಯನ್ನು ಕೊಲೆ ಮಾಡಿದ್ದ. ಈ ವಿಚಾರವನ್ನು ಮಂಡ್ಯ ಎಸ್ಪಿ ಯತೀಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕಾಮಪಿಪಾಸು ಕೊಲೆ ಮಾಡುವಾಗಲೂ ಬರ್ಬರತೆ ಮೆರೆದಿದ್ದಾನೆ. ಮೊದಲು ಆಕೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಪ್ರಜ್ಞೆ ತಪ್ಪಿದ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಮನೆಯ ಪಕ್ಕದಲ್ಲಿದ್ದ ನೀರಿನ ಸಂಪ್‌ನೊಳಕ್ಕೆ ಆಕೆಯ ಶವವನ್ನು ಎಳೆದೊಯ್ದು ಹಾಕಿದ್ದಾನೆ.
ಈ ಹಿಂದೆ ಪ್ರಕರಣದಲ್ಲಿ ಐಪಿಸಿ 302 ಹಾಗೂ 201 ಅಡಿ ಮಳವಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆರೋಪಿಯನ್ನು ವಿಚಾರಣೆಗೆಗಾಗಿ ವಶಕ್ಕೆ ಪಡೆಯಲಾಗಿತ್ತು. ಸದ್ಯ ಐಪಿಸಿ 302 ಹಾಗೂ ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ಪೋಕ್ಸೊ ಕಾಯ್ದೆ ದಾಖಲಿಸಲಾಗಿದೆ.
ಗುರುವಾರ ಮಳವಳ್ಳಿಯಲ್ಲಿ ಮೃತ ಬಾಲಕಿಗೆ ನ್ಯಾಯ ಒದಗಿಸುವಂತೆ, ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸಾರ್ವಜನಿಕರಿಂದ ಕ್ಯಾಂಡಲ್ ಮೆರವಣಿಗೆ ನಡೆದಿತ್ತು. ಸಾರ್ವಜನಿಕ ಜಾಲತಾಣಗಳಲ್ಲಿಯೂ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಇದನ್ನೂ ಓದಿ | ಬಾಲಕಿ ಮೇಲೆ 2 ವರ್ಷ ನಿರಂತರ ರೇಪ್; ಆರೋಪಿಗೆ 142 ವರ್ಷ ಕಠಿಣ ಜೈಲು ಶಿಕ್ಷೆ, 5 ಲಕ್ಷ ರೂ. ದಂಡ