ಮಂಡ್ಯ: ನಾಗಮಂಗಲದಲ್ಲಿ (Nagamangala Case) ನಡೆದಿದ್ದ ಕೋಮು ದಳ್ಳುರಿ ಬಾರಿ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿರುವ ಈ ಗಲಭೆಯಿಂದಾಗಿ ಯಾರಿಗೆ ಅನುಕೂಲ ಆಗಿದೆಯೊ ಬಿಟ್ಟಿದೆಯೊ ಆದರೆ ಗಲಭೆ ಮಾತ್ರ ಕೆಲವರ ಬದುಕನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ಶಾಂತಿಯ ತೋಟವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಎನ್ನುವಂತೆ ಕೋಮು ದಳ್ಳುರಿ ಎಂಬುದು ದೊಡ್ಡದಾಗಿ ಸದ್ದು ಮಾಡಿದೆ. ರಾಜ್ಯದ ಘಟಾನುಗಟಿಗಳು, ರಾಜಕೀಯ ನಾಯಕರು ಇಲ್ಲಿಗೆ ಬಂದು ತಮಗೆ ಅನ್ನಿಸಿದ್ದನ್ನು ಹೇಳಿ ಹೊರಟಿದ್ದಾರೆ. ಆದರೆ ಕೆಲವು ಕುಟುಂಬಗಳು ಮಾತ್ರ ತಮ್ಮ ಬದುಕಿನ ಜೀವನೋಪಾಯಕ್ಕೆ ಆಧಾರವಾಗಿದ್ದ ಅಂಗಡಿಯನ್ನೇ ಕಳೆದುಕೊಂಡು ಬೀದಿಗೆ ಬಂದಿವೆ. ಇದ್ದದ್ದನ್ನು ಕಳೆದುಕೊಂಡಿರುವ ನಾವು ಮುಂದೇನು ಮಾಡಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ.
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಎದುರಿನಲ್ಲೇ ಪಾತ್ರೆ ವ್ಯಾಪಾರಿಯೊಬ್ಬರು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಗಲಭೆ ಆರಂಭವಾಗುತ್ತಿದ್ದಂತೆ ಗಲಭೆಕೋರರು ಸ್ಟವ್ ಮತ್ತು ಪಾತ್ರೆ ಅಂಗಡಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಅಂಗಡಿಯಲ್ಲಿನ ಒಂದೇ ಒಂದು ಪಾತ್ರೆಯೂ ಉಳಿಯದಂತೆ ಬೆಂಕಿಗೆ ಆಹುತಿ ಆಗಿರುವುದು ಗಲಭೆಯ ತೀವ್ರತೆಗೆ ಸಾಕ್ಷಿಯಾಗಿದೆ. ಇನ್ನು ಗೌರಿ-ಗಣೇಶ ಹಬ್ಬ ಇದೆ ವ್ಯಾಪಾರ ಚೆನ್ನಾಗಿ ನಡೆಯಲಿದೆ ಎಂಬ ಕಾರಣಕ್ಕೆ ಬಳೆ ಮತ್ತು ಮಹಿಳೆಯರ ಅಲಂಕಾರಿಕ ವಸ್ತುಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಕುಟುಂಬವು ಬೀದಿಗೆ ಬಂದಿದೆ. ಯಾಕಂದ್ರೆ ದುಷ್ಕರ್ಮಿಗಳು ಬಳೆ ಅಂಗಡಿಯನ್ನೂ ಸುಟ್ಟುಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅಂಗಡಿಯ ಮಾಲೀಕರು ತಮ್ಮ ಬದುಕಿಗೆ ಆಸೆಯಾಗಿದ್ದ ಅಂಗಡಿಯ ದುಸ್ಥಿತಿಯನ್ನ ಕಂಡು ಕಣ್ಣೀರು ಹಾಕಿದ್ದಾರೆ.
ಬಳೆ ಮತ್ತು ಪಾತ್ರೆ ಅಂಗಡಿಗಳು ಮಾತ್ರವಲ್ಲ ಟೈಲರ್ ಸೇರಿದಂತೆ ಹಲವು ರೀತಿಯಲ್ಲಿ ಸಣ್ಣ ಪುಟ್ಟ ಅಂಗಡಿಯನ್ನಿಟ್ಟುಕೊಂಡು ಬದುಕು ಸಾಗಿಸುತ್ತಿದ್ದ ಹಲವರು ಬದುಕಿನ ಬಂಡಿಯೇ ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋಗಿವೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿ ಟೈಯರ್ ಮಾರಾಟದ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ರಿಯಾಜ್ ಕುಟುಂಬವು ತತ್ತರಿಸಿ ಹೋಗಿದೆ. ಯಾಕಂದರೆ 20 ಲಕ್ಷ ರೂ. ಬಂಡವಾಳ ಹಾಕಿಕೊಂಡು ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದ ರಿಜ್ವಾನ್ ಈಗ ತಾನೇ ಇನ್ನೊಬ್ಬರ ಬಳಿ ಕೆಲಸಕ್ಕೆ ಹೋಗಬೇಕಾದ ಸಂದರ್ಭ ಎದುರಾಗಿದೆ. ಗಲಭೆ ನಡೆದಿರುವ ಜಾಗಕ್ಕೂ ತಮ್ಮ ಟಯರ್ ಅಂಗಡಿ ಇರುವ ಜಾಗಕ್ಕೂ ತುಂಬಾ ದೂರ ಇದೆ. ಆದರೂ ಗಲಭೆಯಲ್ಲಿ ಟಾರ್ಗೆಟ್ ಮಾಡಿರುವ ರೀತಿಯಲ್ಲಿ ತಮ್ಮ ಟೈಯರ್ ಅಂಗಡಿಗೆ ಬೆಂಕಿ ಬಿದ್ದು, ಎಲ್ಲವೂ ನಾಶವಾಗಿದೆ. ಬದರಿಕೊಪ್ಪಲಿನ ನಿವಾಸಿಗಳು ಈ ಮಾರ್ಗವಾಗಿ ಗಣೇಶ ಮೂರ್ತಿಯ ಮೆರವಣಿಗೆಯನ್ನು ತಾರದೆ ಇದ್ದರೂ ಗಲಭೆ ಆಗಿದೆ ಎಂದರು. ಇದು ರಿಜ್ವಾನ್ ಮತ್ತು ಶಾಹಿನ್ ತಾಜ್ ಅವರ ಕುಟುಂಬಕ್ಕೆ ಸೀಮಿತವಾಗಿಲ್ಲ, ಈ ಎರಡು ಕುಟುಂಬಗಳಂತೆ ಇನ್ನೂ ಹಲವು ಕುಟುಂಬಗಳು ಬದುಕಿನ ಆಸರೆಯನ್ನೇ ಕಳೆದುಕೊಂಡಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ