ಮಂಡ್ಯ: ಕಾರು ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿಯಾಗಿದ್ದು, ಟಾಟಾ ಏಸ್ ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅಪಘಾತದಲ್ಲಿ (Road Accident) ಯಾವುದೇ ಪ್ರಾಣಾಪಾಯವಾಗಿಲ್ಲ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದಲ್ಲಿ ನಡೆದಿದೆ. ತೋರೆಬೊಮ್ಮನಹಳ್ಳಿ ಗ್ರಾಮದ 22 ಮಂದಿಗೆ ಗಾಯವಾಗಿದೆ. ಗೂಡ್ಸ್ ಆಟೋ ಮಳವಳ್ಳಿ ಕಡೆಗೆ, ಕಾರು ಬೆಂಗಳೂರು ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಡಿಕ್ಕಿ ರಭಸಕ್ಕೆ ಟಾಟಾ ಏಸ್ ಟೆಂಪೋ ಉರುಳಿ ಬಿದ್ದಿದೆ. ಟೆಂಪೋದಲ್ಲಿದ್ದ 22 ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಮಿಮ್ಸ್‌ಗೆ ದಾಖಲು ಮಾಡಲಾಗಿದೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಡಿಸಿ, ಎಸ್ಪಿ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳ ಆರೋಗ್ಯವನ್ನು ಡಿಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ವಿಚಾರಿಸಿದರು.
ಮಣಿಗೆರೆ ಬಳಿ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮಿಮ್ಸ್‌ಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಅವರು, ಕಾರು-ಗೂಡ್ಸ್ ಗಾಡಿ ನಡುವೆ ಡಿಕ್ಕಿಯಾಗಿ 28 ಜನರಿಗೆ ಗಂಭೀರ ಗಾಯವಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ, ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಗ್ರಾಮೀಣ ಭಾಗದ ಜನರು ಟೆಂಪೋ ಹಾಗೂ ಗೂಡ್ಸ್ ಗಾಡಿಗಳಲ್ಲಿ ಹೋಗುವುದನ್ನ ನಿಲ್ಲಿಸಬೇಕು. ಹೆಚ್ಚು ಜನರು ಗೂಡ್ಸ್ ಗಾಡಿಗಳಲ್ಲಿ ಪ್ರಯಾಣಿಬಾರದು ಎಂದು ನಿಷೇಧ ಇದೆ. ಜನರು ಎಚ್ಚರಿಕೆ ವಹಿಸಬೇಕು. ಇದರ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾವಾಹನ
ಅತೀ ವೇಗದ ವಾಹನ ಚಾಲನೆ ಮಾಡಿದ ಶಾಲಾವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾಹನದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯಗೊಂಡಿದ್ದಾರೆ. ಕುಂದಾಪುರ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ಶಾಲಾವಾಹನ ಇದಾಗಿದೆ. ಹೆದ್ದಾರಿಯಲ್ಲಿ ಅಡ್ಡ ಬಂದ ಬೈಕ್‌ವೊಂದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಶಾಲಾ ವಾಹನವು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ವಾಹನ ಬ್ರಹ್ಮಾವರದಿಂದ ಹೆಮ್ಮಾಡಿ ಕಡೆಗೆ ಬರುತ್ತಿದ್ದಾಗ ನಡೆದಿದೆ. ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ನಿರ್ಲಕ್ಷಿಸಿ ಅತೀ ವೇಗದ ವಾಹನ ಚಾಲನೆಯಿಂದ ಅಪಘಾತ ನಡೆದಿದೆ.
ದೇವನಹಳ್ಳಿಯಲ್ಲಿ ಹೊತ್ತಿ ಉರಿದ ಕ್ಯಾಂಟರ್
ಅಂಗಡಿಗಳಿಗೆ ಬಟ್ಟೆ ಹಾಗೂ ದಿನಸಿ ಪದಾರ್ಥಗಳು ಡಂಪ್ ಮಾಡಲು ಬಂದಿದ್ದ ಕ್ಯಾಂಟರ್‌ಗೆ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದ ಹಳೇಯ ಬಸ್ ನಿಲ್ದಾಣ ಇಂದಿರಾ ಕ್ಯಾಂಟಿನ್ ಬಳಿ ಘಟನೆ ನಡೆದಿದೆ. ಬೆಳಗಿನ ಜಾವ 3 ಗಂಟೆಗೆ ಪಟ್ಟಣದ ಅಂಗಡಿಗಳಿಗೆ ಸಾಮಾಗ್ರಿಗಳು ಹಾಗೂ ಬಟ್ಟೆಗಳು ಡಂಪ್ ಮಾಡಲು ಬಂದಿದ್ದ ಕ್ಯಾಂಟರ್ ಬಜಾರ್ ರಸ್ತೆಗೆ ತೆರಳಲು ಹೋಗುತ್ತಿದ್ದಾಗ, ವಿದ್ಯುತ್ ತಂತಿ ತಗುಲಿರುವ ಶಂಕೆ ಇದೆ.
ಅಗ್ನಿಶಾಮದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಿಲ್ಲ. ಬೆಂಕಿ ಬಿದ್ದ ಪರಿಣಾಮ ಕ್ಯಾಂಟರ್ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಕ್ಯಾಂಟರ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆ ಹಾಗೂ ದಿನಸಿ ಅಂಗಡಿಯ ಪದಾರ್ಥಗಳು ಸುಟ್ಟು ಕರಕಲಾಗಿದೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ಸಂತೆಮಾಳದ ಬಳಿ ಟಿ.ವಿ.ಎಸ್. ಮೊಪೆಡ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಕರುಹಟ್ಟಿಯ ಮಹದೇವಪ್ಪ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಪಘಾತದ ನಂತರ ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಮಹದೇವಪ್ಪಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ