Site icon Vistara News

ಮೈತ್ರಿ ಮುಟ್ಟಿನ ಕಪ್‌ ಯೋಜನೆಗೆ ಚಾಲನೆ ನೀಡಿದ ಸಚಿವ ಡಾ.ಕೆ.ಸುಧಾಕರ್‌

sudhakar

ಚಾಮರಾಜನಗರ: ಇಲ್ಲಿನ ಬಿಳಿಗಿರಿರಂಗನ ಬೆಟ್ಟದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಶುಚಿ ಯೋಜನೆಯಡಿ ಜಾರಿಗೆ ತಂದ ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಆರೋಗ್ಯ ಸಚಿವ ಸುಧಾಕರ್‌, ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹಾಗೂ ಚಲನಚಿತ್ರ ನಟಿ ಅಮೃತ ಅಯ್ಯಂಗಾರ್ ಭಾಗಿಯಾದರು.

ಚಾಲನೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್‌, ರಾಜ್ಯದ ಪ್ರತಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಮುಟ್ಟಿನ ಕಪ್‌ಗಳನ್ನು ನೀಡುವ ಚಿಂತನೆ ಸರ್ಕಾರಕ್ಕಿದೆ. ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ಬಳಿಕ ಈ ಕ್ರಮ ವಹಿಸಲಾಗುವುದು. ಮುಟ್ಟು ಎನ್ನುವುದು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಸಹಜವಾಗಿ ಆಗುವ ಪ್ರಕ್ರಿಯೆ. ಶೇ.70ರಷ್ಟು ಹೆಣ್ಣುಮಕ್ಕಳು ಹಾಗೂ ತಾಯಂದಿರು ಇದನ್ನು ಹೇಳಿಕೊಳ್ಳಲು ಈಗಲೂ ಮುಜುಗರಪಡುತ್ತಾರೆ. ಇದು ಒಂದು ರೀತಿ ಸಾಮಾಜಿಕ ಪಿಡುಗಾಗಿದೆ. ಹದಿಹರಯದ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಆತಂಕಕ್ಕೊಳಗಾಗಬಾರದು, ನಾಚಿಕೆ ಪಟ್ಟುಕೊಳ್ಳಬಾರದು. ಮುಟ್ಟಿನ ಬಗ್ಗೆ ಧೈರ್ಯವಾಗಿ ಮನೆಯವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದರು.

ಪ್ಯಾಡ್‌ನಿಂದ ಪರಿಸರಕ್ಕೆ ಹಾನಿ

ಇಂದಿನ ಆಧುನಿಕ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ, ಅದು ಮಣ್ಣಿನಲ್ಲಿ ಕರಗಲು 600-800 ವರ್ಷಗಳು ಬೇಕಾಗುತ್ತವೆ. ಆದರೆ, ಈ ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿವೆ. ರಾಜ್ಯ ಸರ್ಕಾರ ಪ್ರತಿ ಹೆಣ್ಣುಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲು ಚಿಂತಿಸಿದೆ. ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಋತುಚಕ್ರದ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಈ ಹಿಂದೆ ಹೆಣ್ಣುಮಕ್ಕಳು ಮುಟ್ಟಿನ ವೇಳೆ ಬಟ್ಟೆ ಬಳಸುತ್ತಿದ್ದು, ಅದು ಸುರಕ್ಷಿತವಾಗಿರಲಿಲ್ಲ. ಇದರಿಂದ ಅನೇಕ ರೀತಿಯ ರೋಗಗಳು ಬರತ್ತಿತ್ತು. ಹೆಣ್ಣುಮಕ್ಕಳು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ. ಆದರೆ, ಸ್ಯಾನಿಟರಿ ಪ್ಯಾಡ್‌ನಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ, ಇವು ಪರಿಸರಕ್ಕೆ ಹಾನಿ ಮಾಡುತ್ತವೆ. ಹೆಣ್ಣುಮಕ್ಕಳು ಅನೇಕ ಬಾರಿ ಪ್ಯಾಡ್‌ ಬದಲಿಸಬೇಕಾಗುತ್ತದೆ. ಸರ್ಕಾರ ನೀಡುತ್ತಿರುವ ಮುಟ್ಟಿನ ಕಪ್‌ಗಳು ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದರು.

ಏಕೆ ಈ ೨ ಜಿಲ್ಲೆಗಳ ಆಯ್ಕೆ?

ಬುಡಕಟ್ಟು ಜನಾಂಗವಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಗಡಿಭಾಗ‌ದಲ್ಲಿರುವ ಒಂದು ಜಿಲ್ಲೆ ಹಾಗೂ ಹೆಚ್ಚು ಶಿಕ್ಷಿತರಿರುವ ಒಂದು ಜಿಲ್ಲೆಯನ್ನು ಈ ಯೋಜನೆಗೆ ಆರಿಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ನರ್ಸ್‌ ನೇಮಕಾತಿ

ಆದಿವಾಸಿ ಸೋಲಿಗ ಸಮುದಾಯದವರಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡಿದವರಿಗೆ, ವಿಶೇಷ ನೇಮಕಾತಿ ಅಥವಾ ಮೀಸಲಾತಿ ಮೂಲಕ ನರ್ಸ್‌ಗಳನ್ನಾಗಿ ನೇಮಿಸಲು ಕ್ರಮ ವಹಿಸಲಾಗುವುದು. ಹಾಗೆಯೇ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡುವಾಗಲೂ ಈ ಸಮುದಾಯವನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದರು. ಹಾಗೇ ಯಳಂದೂರು ತಾಲೂಕಿಗೆ ಹೊಸ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಜಿಲ್ಲೆಯ ಎರಡು ಕ್ಷೇತ್ರಗಳ ಆಸ್ಪತ್ರೆಗಳಿಗೆ ಡಯಾಲಿಸಿಸ್‌ ಯಂತ್ರಗಳನ್ನು ಕೂಡ ನೀಡಲಾಗುವುದು ಎಂದರು.

ಕೋವಿಡ್‌ನಿಂದ ಹೃದಯ ಸಮಸ್ಯೆ!

ಸಾಂಕ್ರಾಮಿಕ ಕೋವಿಡ್‌ ಸೋಂಕು ಬಂದವರಲ್ಲಿ ಹೃದಯದ ಸಮಸ್ಯೆ ಹೆಚ್ಚುತ್ತಿದ್ಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಕಡೆ ಹೃದಯ ಸಮಸ್ಯೆ ಕಂಡು ಬಂದಿದೆ. ಅದು ಕೋವಿಡ್‌ನಿಂದಲೇ ಎಂದು ಹೇಳಲು ಆಗವುದಿಲ್ಲ. ಕೋವಿಡ್ ಬಂದು ಎರಡು ವರ್ಷವಾಗಿದ್ದು, ಇದರ ಬಗ್ಗೆ ಅಧ್ಯಯನಕ್ಕೆ ಬಹಳ ವರ್ಷಬೇಕು. ಆಯಾಸ, ಮರೆವು, ಹೃದಯ ಸಮಸ್ಯೆ, ರಕ್ತನಾಳದ ಸಮಸ್ಯೆ ಈ ರೀತಿಯ ಸಮಸ್ಯೆ ಕಂಡು ಬಂದಿದೆ. ನೇರವಾಗಿ ಕೋವಿಡ್ ನಂತರ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಅಧ್ಯಯನದ ಅಂತಿಮ ವರದಿ ಬಂದ ನಂತರವೇ ತಿಳಿಯಲಿದೆ ಎಂದರು.

ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ

ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ಮಾತನಾಡಿದ ಸುಧಾಕರ್‌, ರಾಜ್ಯದ 224 ಕ್ಷೇತ್ರದಲ್ಲೂ ಅವರನ್ನು ಕರೆಯೋದು ಸರ್ವೇ ಸಾಮಾನ್ಯ. ಅವರು ಸಿಎಂ ಆಗಿದ್ದವರು. ಅವರ ಜಿಲ್ಲೆಯ ಜನ ಕೈಬಿಟ್ಟರೂ ಬಾದಮಿ ಜನತೆ ಕೈ ಹಿಡಿದರು. ಈಗ ಬಾದಾಮಿಯಿಂದಲೂ ಬೇರೆ ಕಡೆ ಹೋದರೆ ಆ ಜನರಿಗೆ ಏನು ಸಂದೇಶ ಹೋಗುತ್ತೆ? ದೊಡ್ಡ ನಾಯಕರು, ಅಪಾರ ರಾಜಕೀಯ ಅನುಭವವುಳ್ಳವರು ಹೀಗೆ ಚುನಾವಣೆಯಿಂದ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಎಲ್ಲ ತನಿಖೆ ಅಪಾದನೆ ಮುಚ್ಚಿ ಹಾಕ್ಕಿದ್ದು ಕಾಂಗ್ರೆಸ್ ಸರ್ಕಾರ

ಪಿ.ಎಸ್.ಐ ನೇಮಕಾತಿ ಹಗರಣದ ವಿಚಾರದಲ್ಲಿ ಗೃಹ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ ಮಾಡಿದರು. ಆದರೆ, ಈ ವಿಚಾರವಾಗಿ ಮಾತನಾಡಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ. ಎಲ್ಲ ತನಿಖೆ ಆಪಾದನೆ ಮುಚ್ಚಿ ಹಾಕ್ಕಿದ್ದು ಕಾಂಗ್ರೆಸ್ ಸರ್ಕಾರ. ಅನೇಕ ವರ್ಷಗಳಿಂದ ನೋಡುತ್ತಾ ಬಂದಿದ್ದು, ಈ ರೀತಿಯಾಗಿ ಗಂಭೀರವಾದ ತನಿಖೆಯಾಗಿಲ್ಲ. ಹಿರಿಯ ಅಧಿಕಾರಿಗಳನ್ನು ಅರೆಸ್ಟ್ ಮಾಡಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಪಾರದರ್ಶಕವಾಗಿ ತನಿಖೆ ನಡೆಸಿ ಅಧಿಕಾರಿಗಳನ್ನು ಅರೆಸ್ಟ್ ಮಾಡಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.

ಇದನ್ನೂ ಓದಿ | ಆ್ಯಸಿಡ್‌ ದಾಳಿ | ಕ್ರೌರ್ಯಕ್ಕೆ ತಕ್ಕಂತೆ ಶಿಕ್ಷೆ ಎಂದ ಸಚಿವ ಸುಧಾಕರ್

Exit mobile version