Site icon Vistara News

Modi in Mangalore | ಜನರ ಆಕಾಂಕ್ಷೆಯೇ ನಮಗೆ ಆದೇಶ: ಮಂಗಳೂರಿನಲ್ಲಿ ಮೋದಿ ಹವಾ

ಮಂಗಳೂರು: ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂದರೆ ಜನರ ಆಕಾಂಕ್ಷೆಗಳಿಗೆ ತಕ್ಕಂತೆ ನಡೆಯಬೇಕು ಎನ್ನುವುದನ್ನು ನಾವು ಅರಿತಿದ್ದೇವೆ. ಹಾಗಾಗಿ ಜನರ ಆಕಾಂಕ್ಷೆಗಳೇ ನಮಗೆ ಆದೇಶವಿದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ (Modi in Mangalore) ತಿಳಿಸಿದ್ದಾರೆ.

ಮಂಗಳೂರಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಆಯೋಜಿಸಿದ್ದ ಸುಮಾರು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ನೆರೆದಿದ್ದ ಬೃಹತ್‌ ಜನಸ್ತೋಮವನ್ನುದ್ದೇಶಿಸಿ ಮೋದಿ ಮಾತನಾಡಿದರು.

ಭಾರತದ ಸಮುದ್ರ ಶಕ್ತಿಗೆ ಇಂದು ಬಹುದೊಡ್ಡ ದಿನ. ಸೇನೆಯ ಮೂಲಕ ಸುರಕ್ಷತೆ ಇರಬಹುದು, ಆರ್ಥಿಕ ಸುರಕ್ಷತೆ ಇರಬಹುದು, ಅನೇಕ ಕ್ಷೇತ್ರಗಳಲ್ಲಿ ಹೊಸ ಕಾರ್ಯಗಳು ನಡೆಯುತ್ತಿವೆ. ಕೊಚ್ಚಿಯಲ್ಲಿ ಭಾರತದ ಮೊದಲ, ಸ್ವದೇಶಿ ಯುದ್ಧವಿಮಾನ ಹೊತ್ತೊಯ್ಯುವ ಹಡಗನ್ನು ಲೋಕಾರ್ಪಣೆ ಮಾಡಿದ್ದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಚಾರ. ಇಂದು ಮಂಗಳೂರಿನಲ್ಲಿ 3,800 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಯೋಜನೆಗಳ ಕಾರ್ಯಾರಂಭ, ಶಿಲಾನ್ಯಾಸ ಆಗಿದೆ. ನಮ್ಮ ಮೀನುಗಾರ ಸಹೋದರರ ಆದಾಯ ಹೆಚ್ಚಿಸಲು ಈ ಯೋಜನೆಗಳು ಸಹಕಾರಿ. ಈ ಯೋಜನೆಗಳಿಗಾಗಿ ಕರ್ನಾಟಕದ ಜನರಿಗೆಲ್ಲ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ವಿವರಿಸಿದ ಮೋದಿ, ಕರ್ನಾಟಕದಲ್ಲಿ ವ್ಯಾಪಾರ, ಉದ್ಯೋಗಕ್ಕೆ ಹೆಚ್ಚು ಶಕ್ತಿ ಲಭಿಸುತ್ತಿದೆ. ಈಸ್‌ ಆಫ್‌ ಡೂಯಿಂಗ್‌ಗೆ ಒತ್ತು ಸಿಗುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಲ್ಲಿ ಸ್ಥಳೀಯರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭಿಸುತ್ತಿದೆ ಎಂದರು.

ಇದನ್ನೂ ಓದಿ | Modi in Mangalore | ಮಂಗಳೂರಿನಲ್ಲಿ 3,800 ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲಿನಿಂದ ಘೋಷಿಸಿದ ಪಂಚಪ್ರಾಣಗಳಲ್ಲಿ, ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣವೇ ಮೊದಲನೆಯದು. ಇದಕ್ಕಾಗಿ ಉತ್ಪಾದಕ ಕ್ಷೇತ್ರದ ವಿಸ್ತಾರ ಆಗಲೇಬೇಕು. ಅಭಿವೃದ್ಧಿ ಹೊಂದಿದ ದೇಶಕ್ಕಾಗಿ ನಮ್ಮ ರಫ್ತು ಹೆಚ್ಚಾಗಬೇಕು, ಉತ್ಪನ್ನಗಳು ಕಡಿಮೆ ದರವನ್ನು ಹೊಂದಿರಬೇಕು, ಸುಗಮವಾಗಿ ಸಾಗಣೆಯಾಗಬೇಕು. ಇದೇ ಉದ್ದೇಶದಿಂದ ಎಂಟು ವರ್ಷದಿಂದ ದೇಶದ ಮೂಲಸೌಕರ್ಯದ ಮೇಲೆ ಅಭೂತಪೂರ್ವ ಕೆಲಸಗಳಾಗುತ್ತಿವೆ. ಮೂಲಭೂತ ಸೌಕರ್ಯ ಯೋಜನೆಗಳು ತಲುಪದೇ ಇರುವ, ದೇಶದ ಯಾವುದೇ ಪ್ರದೇಶ ಇಂದು ಇಲ್ಲ. ದೇಶಾದ್ಯಂತ ರಸ್ತೆ ಮೂಲಸೌಕರ್ಯ, ಕರಾವಳಿಯಲ್ಲಿ ಸಾಗರಮಾಲಾ ಶಕ್ತಿ ಲಭಿಸುತ್ತಿದೆ ಎಂದು ಹೇಳಿದರು.

ಕಳೆದ ಎಂಟು ವರ್ಷದಲ್ಲಿ ಭಾರತದ ಬಂದರುಗಳ ಸಾಮರ್ಥ್ಯ ದುಪ್ಪಟ್ಟಾಗಿದೆ. ಮಂಗಳೂರು ಬಂದರಿನಲ್ಲಿ ತಂತ್ರಜ್ಞಾನದ ಜತೆಗಿನ ಸೌಲಭ್ಯಗಳಿಂದಾಗಿ ಇದರ ಸಾಮರ್ಥ್ಯ ಹೆಚ್ಚಳವಾಗಿದೆ. ಗ್ಯಾಸ್‌ ಹಾಗೂ ತೈಲ ಸಾಗಣೆಗೆ ಇಂದು ನಡೆದಿರುವ ಯೋಜನೆಗಳ ಶಿಲಾನ್ಯಾಸವು ಕರ್ನಾಟಕ ಹಾಗೂ ದೇಶಕ್ಕೆ ಲಾಭದಾಯಕವಾಗುತ್ತದೆ. ಇದರಿಂದ ಖಾದ್ಯತೈಲ, ಎಲ್‌ಪಿಜಿ, ಬಿಟುಮಿನ್‌ ಆಮದು ವೆಚ್ಚ ತಗ್ಗುತ್ತದೆ. ಅಮೃತಕಾಲದಲ್ಲಿ ಭಾರತ ಹಸಿರು ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದೆ.

ಕೇಂದ್ರ ಸರ್ಕಾರದ ಯೋಜನೆಗಳ ಬಹಳಷ್ಟು ಉಪಯೋಗ ಕರ್ನಾಟಕಕ್ಕೆ ಲಭಿಸುತ್ತದೆ. ಸಾಗರಮಾಲಾ ಯೋಜನೆಯ ಬಹುದೊಡ್ಡ ಫಲಾನುಭವಿ ಕರ್ನಾಟಕ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಎಪ್ಪತ್ತು ಸಾವಿರ ಕೋಟಿ ರೂ. ಕೆಲಸವಾಗಿದೆ. ಒಂದು ಲಕ್ಷ ಕೋಟಿ ರೂ. ಯೋಜನೆ ಇನ್ನೂ ಆಗುತ್ತಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು, ಬೆಂಗಳೂರು ಸ್ಯಾಟಲೈಟ್‌ ರಿಂಗ್‌ ರಸ್ತೆ ಯೋಜನೆಗಳು ಸಾಕಾರವಾಗಲಿವೆ. ರೈಲ್ವೆಯಲ್ಲಿ 2014ಕ್ಕೆ ಹೋಲಿಸಿದರೆ ಕರ್ನಾಟಕದ ಬಜೆಟ್‌ನಲ್ಲಿ ನಾಲ್ಕು ಪಟ್ಟು ಹೆಚ್ಚು ವೆಚ್ಚ ಮಾಡಲಾಗುತ್ತಿದೆ.

ಇಂದಿನ ಭಾರತ, ಆಧುನಿಕ ಮೂಲಸೌಕರ್ಯದ ಮೇಲೆ ಹೆಚ್ಚು ಗಮನ ನೀಡುತ್ತಿದೆ. ಏಕೆಂದರೆ ಇದೊಂದೇ ಅಭಿವೃದ್ಧಿ ಹೊಂದಿದ ಭಾರತದ ಮಾರ್ಗ. ಸೌಲಭ್ಯಗಳನ್ನು ಹೆಚ್ಚಿಸುವುದರ ಜತೆಗೆ ಇದರಿಂದ ಉದ್ಯೋಗ ಸೃಜನೆಯಾಗುತ್ತದೆ. ಅಮೃತ ಕಾಲದಲ್ಲಿ ಸಂಕಲ್ಪದಿಂದ ಸಿದ್ಧಿಗೆ ಇದೂ ಒಂದು ಮಾರ್ಗ. ದೇಶದ ಜನರ ಶಕ್ತಿ ಸರಿಯಾದ ದಿಕ್ಕಿನಲ್ಲಿ ಬಳಕೆ ಆಗಬೇಕು ಎನ್ನುವ ಉದ್ದೇಶ ನಮ್ಮದು. ಡಬಲ್‌ ಇಂಜಿನ್‌ ಸರ್ಕಾರ ಅನೇಕ ಕೆಲಸಗಳನ್ನು ಮಾಡುತ್ತಿದೆ ಎಂದ ಮೋದಿ, ದೇಶದ ಜನರ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸುತ್ತಿದೆ.

ದೇಶದ ಜನರ ಆಕಾಂಕ್ಷೆಗಳೇ ನಮಗೆ ಆದೇಶಗಳಂತೆ. ಭಾರತದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಇರಬೇಕು ಎಂದು ಜನರು ಬಯಸಿದರು, ನಾವು ಬೃಹತ್‌ ಮೂಲಸೌಕರ್ಯ ಯೋಜನೆ ರೂಪಿಸಿದೆವು. ಎಲ್ಲ ನಗರಗಳಿಗೂ ಮೆಟ್ರೊ ಕನೆಕ್ಟಿವಿಟಿ ಬೇಕು ಎಂದು ಜನ ಬಯಸಿದರು, ಕಳೆದ ಎಂಟು ವರ್ಷದಲ್ಲಿ ನಾಲ್ಕು ಪಟ್ಟು ಮೆಟ್ರೊ ಸಂಪರ್ಕ ಹೆಚ್ಚಾಗಿದೆ. ಸಾಮಾನ್ಯ ಜನರು ವಿಮಾನದಲ್ಲಿ ಸಂಚರಿಸಬೇಕೆಂದರು, ಉಡಾನ್‌ ಯೋಜನೆ ಮೂಲಕ ಒಂದು ಕೋಟಿಗೂ ಹೆಚ್ಚು ಜನರು ಪ್ರಯಾಣ ಮಾಡಿದ್ದಾರೆ. ಸ್ವಚ್ಛ ಆರ್ಥಿಕತೆ ಬೇಕು ಎಂದು ಜನರು ಬಯಸಿದರು, ಇಂದು ವಿಶ್ವದಲ್ಲೇ ಅತಿ ದೊಡ್ಡ ಡಿಜಿಟಲ್‌ ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ವೇಗದ ಹಾಗೂ ಅಗ್ಗದ ಇಂಟರ್ನೆಟ್‌ ಬೇಕು ಎಂದು ಜನರು ಬಯಸಿದರು, ಇಂದು ಆರು ಲಕ್ಷ ಕಿಲೋಮೀಟರ್‌ ಆಪ್ಟಿಕಲ್‌ ಫೈಬರ್‌ ಮೂಲಕ ಗ್ರಾಮ ಪಂಚಾಯತಿಗಳನ್ನು ಜೋಡಿಸಲಾಗಿದೆ. 5ಜಿ ತಂತ್ರಜ್ಞಾನ ಈ ವೇಗಕ್ಕೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದರು.

ಇದನ್ನೂ ಓದಿ | Modi in Mangalore | ಕಿಸಾನ್‌ ಕಾರ್ಡ್‌, ಆಳ ಸಮುದ್ರ ಮೀನುಗಾರಿಕೆಗೆ ಸಹಾಯ: ಮೀನುಗಾರರ ಮನಸೂರೆಗೊಂಡ ಮೋದಿ

Exit mobile version