Site icon Vistara News

ಪ್ರಧಾನಿ ಮೋದಿಯವರಿಗೆ ಮೈಸೂರ್‌ ಪಾಕ್‌ ಮಾಡಿ ಬಡಿಸಿದ್ದು ಯಾರು?

ಮೈಸೂರು: ವಿಶ್ವ ಯೋಗ ದಿನ ಹಾಗೂ ರಾಜ್ಯ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಂದಾಪುರ ಮೂಲದ ಬಾಣಸಿಗರೊಬ್ಬರು ಮೈಸೂರು ಪಾಕ್ ಉಣಬಡಿಸಿದ್ದಾರೆ. ಪ್ರಧಾನಿ ಮೋದಿಯವರು ಇಷ್ಟಪಟ್ಟು ಸೇವಿಸಿದ ಮೈಸೂರ್‌ ಪಾಕ್‌ ತಯಾರಿಸಿದ್ದು ಯಾರು ಎಂಬ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿಯವರಿಗೆ ಮೈಸೂರ್‌ ಪಾಕ್‌ ನೀಡುವ ಮೂಲಕ ಸಿಹಿ ಹಂಚಿದ್ದು ನರಸಿಂಹ ಪೂಜಾರಿ ಎಂಬ ಬಾಣಸಿಗ. ಕುಂದಾಪುರ ಬಳಿಯ ನೆಂಪು ನಿವಾಸಿಯಾಗಿರುವ ನರಸಿಂಹ ಪೂಜಾರಿ ಬೆಂಗಳೂರಿನ ಗಾಂಧಿ ಬಜಾರಿನ ಎ.ವಿ.ಎಸ್‌. ನಾಗರಾಜ್‌ ತೀರ್ಥಹಳ್ಳಿ ಅವರಿಗೆ ಸೇರಿದ ಕ್ಯಾಟರಿಂಗ್‌ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಬಾಣಸಿಗರಾಗಿದ್ದಾರೆ.

ನರಸಿಂಹ ಪೂಜಾರಿ

ಮೋದಿ ಅವರು ಮೈಸೂರು ಅರಮನೆಗೆ ಭೇಟಿ ನೀಡಿದಾಗ ಅಲ್ಲಿನ ಔತಣ ಕೂಟಕ್ಕೆ ಅಡುಗೆ ಮಾಡುವ ಜವಾಬ್ದಾರಿ ನರಸಿಂಹ ಅವರ ತಂಡಕ್ಕಿತ್ತು. ನರಸಿಂಹ ಪೂಜಾರಿ ಅವರ ತಂಡ 20 ಬಗೆಯ ಖಾದ್ಯಗಳನ್ನು ತಯಾರಿಸುವಂತೆ ಆಯೋಜಕರು ಆದೇಶಿಸಿದ್ದರು. ಈ ವೇಳೆ ಮೈಸೂರು ಪಾಕ್‌ ತಯಾರಿಸುವ ಜವಾಬ್ದಾರಿ ನರಸಿಂಹ ಅವರಿಗೆ ದೊರೆತಿತ್ತು. ಪ್ರಧಾನಿ ಮೋದಿಯವರು ಇಷ್ಟಪಟ್ಟು ಸೇವಿಸುವಂತೆ ರುಚಿರುಚಿಯಾದ ಮೈಸೂರ್‌ ಪಾಕ್‌ ತಯಾರಿಸಿ ಬಡಿಸಿದ್ದರು. ಇದನ್ನು ಸೇವಿಸಿದ ಮೋದಿಯವರು ಆನಂದಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದರ ಜತೆಗೆ ಇನ್ನೂ ಹಲವು ಬಗೆಯ ಸಿಹಿಯನ್ನು ತಯಾರಿಸಿ ಬಡಿಸಲಾಗಿತ್ತು. ಭೋಜನದ ಬಳಿಕ ನರಸಿಂಹ ಪೂಜಾರಿ ಅವರ ತಂಡ ಪ್ರಧಾನಿ ಮೋದಿ ಅವರೊಂದಿಗೆ ಪೋಟೊ ತೆಗೆಸಿಕೊಂಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಸಿಹಿ ಬಡಿಸಿ, ಅವರ ಮೆಚ್ಚುಗೆಗೆ ಪಾತ್ರರಾದ ನರಸಿಂಹ ಪೂಜಾರಿ ಅವರ ತಂಡ ಸಂತಸದಲ್ಲಿದೆ.

ಇದನ್ನೂ ಓದಿ: Modi in Karnataka | ಮೈಸೂರಿನಲ್ಲಿ ಪ್ರಧಾನಿ ಇಷ್ಟಪಟ್ಟ ʼಮೈಸೂರ್‌ ಪಾಕ್‌ʼ ಇತಿಹಾಸ ಗೊತ್ತೆ?

Exit mobile version