ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಅತ್ಯುತ್ತಮವಾಗಿದೆ ಎಂದು ಹೇಳಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರು ಚಲಿಸುವಾಗ ಆಲದ ಮರ ಉರುಳಿಬಿದ್ದು ಸಾವನ್ನಪ್ಪಿದ್ದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವವನ ಹೇಳಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಉತ್ತಮವಾದ ಕೆಲಸ ಏನಾಗಿದೆ ಎಂಬುದನ್ನು ಪ್ರತಾಪಸಿಂಹ ಬಂದು ನೋಡಲಿ. ಅವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರು. ಅವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೊ ತೆಗೆಸಿಕೊಂಡಿದ್ದರು. ಬಿಡದಿ ಬಳಿ ಬಂದು ಅಧಿಕಾರಿಗಳ ಸಭೆ ಮಾಡಿದ್ದರು. ಇಲ್ಲಿಯೇ ಬಂದು ಮಧ್ಯಸ್ಥಿಕೆ ವಹಿಸಿದ್ದರಲ್ಲ, ಈಗ ಬಂದು ನೋಡಲಿ. ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದು ಎಂದು ಹರಿಹಾಯ್ದರು.
ಸೋಮವಾರ ಅವರೇ ಸಂಗಬಸಪ್ಪನದೊಡ್ಡಿ ಹೈವೆಗೆ ಬಂದಿದ್ದರೆ ಸ್ವತಃ ಸ್ವಿಮ್ ಮಾಡಬಹುದಿತ್ತು. ಚೆನ್ನಾಗಿ ನೀರು ನಿಂತಿತ್ತು. ವಾಹನಗಳು ಸಂಚಾರ ಮಾಡಲಿಕ್ಕೆ ರಸ್ತೆ ಮಾಡಿ ಅಂದರೆ ಹೆದ್ದಾರಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಕಣ್ಣಿದ್ದರೆ ಬಂದು ನೋಡಲಿ ಎಂದು ಕಿಡಿಕಾರಿದರು.
ಕೆರೆ ಒಡೆದಿದ್ದರಿಂದ ಈ ರೀತಿ ಪ್ರವಾಹ ಆಗಿದೆ ಎಂದು ಅವರು ಹೇಳಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೀಗೆ ಮಾತನಾಡುವುದಲ್ಲ. ಶಾಶ್ವತವಾದ ಕೆಲಸ ಆಗಬೇಕು. ಸರ್ಟಿಫಿಕೇಟ್ ಕೊಡೋದಕ್ಕಲ್ಲ ಇವರು ಇರುವುದು. ಕಾಮಗಾರಿ ತಪ್ಪಾಗಿದ್ದರೆ ಸರಿಪಡಿಸಬೇಕು. ಪ್ರತಾಪ್ ಸಿಂಹ ಬರೀ ಪ್ರಚಾರ ತೆಗೆದುಕೊಳ್ಳೋದು ನಿಲ್ಲಿಸಲಿ. ಮೊದಲು ಜನರ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ | ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ