Site icon Vistara News

Road Accident : ಬೈಕ್‌ಗೆ ಕಾರು ಡಿಕ್ಕಿ; ಪೋಷಕರ ಕಣ್ಣೆದುರೆ ಹಾರಿ ಬಿದ್ದ 5 ವರ್ಷದ ಮಗು ದಾರುಣ ಸಾವು

Road Accident

ಮೈಸೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ (Road Accident) ಸಂಭವಿಸಿದ್ದು, ಬಾಲಕ ಲಿಖಿತ್ (5) ಎಂಬಾತ ದಾರುಣವಾಗಿ ಮೃತಪಟ್ಟಿದ್ದಾನೆ. ಮೈಸೂರಿನ ಇಲವಾಲದ ಪೆಟ್ರೋಲ್ ಬಂಕ್ ಸಮೀಪದಲ್ಲಿ ಅಪಘಾತ ನಡೆದಿದೆ. ಬೈಕ್‌ಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.

ಮೃತ ದುರ್ದೈವಿ

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

Road Accident

ಬೆಂಗಳೂರಲ್ಲಿ ಬಾಲಕನ ಪ್ರಾಣ ತೆಗೆದ ಮೈದಾನದ ಗೇಟ್

ನಿನ್ನೆ ಭಾನುವಾರ (ಸೆ.22) ಬೆಂಗಳೂರಿನ ಮಲ್ಲೇಶ್ವರದ ಬಿಬಿಎಂಪಿ ಗ್ರೌಂಡ್‌ನಲ್ಲಿ 10 ವರ್ಷದ ಬಾಲಕನ ಮೇಲೆ ಗೇಟ್‌ ಬಿದ್ದು, ಮೃತಪಟ್ಟಿದ್ದಾನೆ. ನಿರಂಜನ್ (10) ಮೃತ ದುರ್ದೈವಿ. ವಿಜಯಕುಮಾರ್, ಪ್ರಿಯಾ ದಂಪತಿಯ ಪುತ್ರ ನಿರಂಜನ್‌ 5ನೇ ತರಗತಿಯಲ್ಲಿ ಓದುತ್ತಿದ್ದು, ಮಲ್ಲೇಶ್ವರಂನ ಪೈಪ್ ಲೈನ್‌ನಲ್ಲಿ ವಾಸವಿದ್ದ. ಆಟವಾಡಲೆಂದು ಗ್ರೌಂಡ್‌ ಬಳಿ ಬಂದಿದ್ದಾಗ, ನಿರಂಜನ್‌ ತಲೆ ಮೇಲೆ ಗೇಟ್‌ ಕಳಚಿ ಬಿದ್ದಿತ್ತು. ಬಿದ್ದ ರಭಸಕ್ಕೆ ಎಳೆಜೀವದ ಉಸಿರು ನಿಂತಿತ್ತು. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಲೇಶ್ವರದ ಪೊಲೀಸರು ಹಾಗೂ ಸಚಿವ ದಿನೇಶ್‌ ಗುಂಡೂರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಬಾಲಕನ ತಾಯಿ ಪ್ರಿಯಾ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ‌ ಮಗನ ನೆನೆದು ಕಣ್ಣೀರು ಹಾಕಿದರು. ಆಟವಾಡಲು ಸೈಕಲ್‌ ತೆಗೆದುಕೊಂಡು ಹೋಗಿದ್ದ. ಈಗ ನೋಡಿದರೆ ಹೆಣವಾಗಿ ವಾಪಸ್‌ ಬಂದಿದ್ದಾನೆ ಎಂದು ಅಳಲು ತೋಡಿಕೊಂಡರು.

ಇನ್ನು ನಿನ್ನೆ ಮೈದಾನದ ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯಾವೊಬ್ಬ ಮಕ್ಕಳು ಮೈದಾನದತ್ತ ಬಂದಿಲ್ಲ. ಮಲ್ಲೇಶ್ವರಂ ಚಿತ್ರನಟ ದಿ.ರಾಜಾಶಂಕರ್ ಆಟದ ಮೈದಾನದಲ್ಲಿ ಬಿಬಿಎಂಪಿ ಅಧಿಕಾರಿಗಳ‌ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದ.

ಇದನ್ನೂ ಓದಿ: Karnataka weather: ತಿಂಗಳಾಂತ್ಯದವರೆಗೆ ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ; ಈ ಜಿಲ್ಲೆಗಳಿಗೆ ಅಲರ್ಟ್

ಮಂಗಳೂರಿನಲ್ಲಿ ಭೀಕರ ಅಪಘಾತ ಕ್ಯಾಮೆರಾದಲ್ಲಿ ಸೆರೆ

ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಗಳೂರು ನಗರದ ಕೆ.ಪಿ.ಟಿ ಜಂಕ್ಷನ್‌ನ ಪೆಟ್ರೋಲ್ ಪಂಪ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಅಶೋಕ್‌ ಎಂಬುವವರಿಗೆ ಗಂಭೀರ ಗಾಯವಾಗಿದೆ.

ಅಶೋಕ್‌ ಅವರು ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್ ನ ಸಪ್ತಗಿರಿ ಪೆಟ್ರೋಲ್ ಪಂಪ್ ಕಡೆ ಬರುತ್ತಿದ್ದರು. ಇದೇ ವೇಳೆ ಗೂಡ್ಸ್ ಲಾರಿಯೊಂದು ಪೆಟ್ರೋಲ್ ಪಂಪ್ ಕಡೆಗೆ ಬರುತ್ತಿತ್ತು. ಏಕಾಏಕಿ ಲಾರಿ ಚಾಲಕ ಎಡಬದಿಗೆ ತಿರುಗಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸವಾರನ ಸೊಂಟ ಹಾಗೂ ಬಲ ಕೈ ಮೇಲೆ ಲಾರಿಯ ಎದುರಿನ ಚಕ್ರ ಹರಿದಿದೆ. ಗಂಭೀರ ಸ್ವರೂಪದ ಗಾಯಗೊಂಡಿದ್ದ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ‌ ಚಾಲಕನ‌ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ಮತ್ತೋರ್ವ ಗಂಭೀರ

ರಾಮನಗರದ ಕನಕಪುರ ತಾಲೂಕಿನ ದೊಡ್ಡಮುದವಾಡಿ ಬಳಿ ಮರಕ್ಕೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟರೆ, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡು, ಇನ್ನುಳಿದ ಯುವಕರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿನಯ್ (24) ಮೃತ‌ ದುರ್ದೈವಿ. ಅನಿಕೇತ್ ಗಂಭೀರ ಗಾಯಗೊಂಡವನು.

ಕಾರಿನಲ್ಲಿದ್ದವರು ಬೆಂಗಳೂರಿನ ಇಟ್ಟಮಡು ನಿವಾಸಿಗಳೆಂದು ತಿಳಿದು ಬಂದಿದೆ. ವಿಕೆಂಡ್‌ ಹಿನ್ನೆಲೆಯಲ್ಲಿ ಯುವಕರು ರೆಸಾರ್ಟ್‌ಗೆ ಬಂದಿದ್ದರು. ವಾಪಸ್‌ ಬರುವಾಗ ನಿದ್ರೆ ಮಂಪರಿನಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿದೆ. ಗಾಯಾಳುಗಳಿಗೆ ಹಾರೋಹಳ್ಳಿಯ ದಯಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version