Site icon Vistara News

Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

president draupadi murmu

ಮೈಸೂರು: ನಾಡಹಬ್ಬ ಮೈಸೂರು ದಸರಾ ಕರ್ನಾಟಕವಷ್ಟೆ ಅಲ್ಲ, ಇಡೀ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ಮಹಿಳಾ ಸಬಲೀಕರಣ, ಸಾಕ್ಷರತೆಯ ಪ್ರೇರಣೆಯಾಗಿದೆ ಎಂಬ ಸಂದೇಶವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿದ್ದಾರೆ.

ಮೈಸೂರು ಮಹಾರಾಜ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಷ್ಟ್ರಪತಿಯಾದ ನಂತರ ಇದು ದ್ರೌಪದಿ ಮುರ್ಮು ಅವರು ನಡೆಸಿರುವ ಮೊದಲ ರಾಜ್ಯ ಪ್ರವಾಸ.

“ದೇವಿ ಚಾಮುಂಡೇಶ್ವರಿ ಉತ್ಸವದಂದು ಎಲ್ಲರಿಗೂ ನನ್ನ ಮನಃಪೂರ್ವಕ ನಮಸ್ಕಾರಗಳು. ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು” ಎನ್ನುತ್ತ ಕನ್ನಡದಲ್ಲೆ ಮಾತನ್ನು ಆರಂಭಿಸಿದರು.

ದೇಶದ ಎಲ್ಲರಿಗೂ ದಸರಾ ಶುಭಾಶಯಗಳು. ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಆರಂಭದಂದು ಎಲ್ಲರಿಗೂ ಶುಭಾಶಯ ಕೋರುತ್ತೇನೆ ಎಂದ ರಾಷ್ಟ್ರಪತಿ, ನಮ್ಮ ಆಧ್ಯಾತ್ಮಿಕ, ಸಾಂಸ್ಕೃತಿಕ, ಲೋಕಪರಂಪರೆಯಲ್ಲಿ ಚಾಮುಂಡೇಶ್ವರಿ ಪರಮಪೂಜ್ಯ ಎಂದರು.

ಮಹಾಶಕ್ತಿಯು ಮಹಿಷಾಸುರನನ್ನು ಇದೇ ಕ್ಷೇತ್ರದಲ್ಲಿ ವಧೆ ಮಾಡಿದ್ದಳು ಎಂಭ ಪ್ರತೀತಿ ಇದೆ. ಆ ತಾಯಿ ಜನಜನದ ಹೃದಯದಲ್ಲಿ ವಿದ್ಯಮಾನಳಾಗಿದ್ದಾಳೆ. ದೇಶದ ದೂರದೂರಗಳಿಂದ ಜನರು ದರ್ಶನಕ್ಕೆ ಆಗಮಿಸುತ್ತಾರೆ. ಋಷಿಮುನಿಗಳು, ಸಾಮಾನ್ಯ ಜನರು ಭಾರತವನ್ನು ಉತ್ಸವಗಳ ಮೂಲಕ ಜೋಡಿಸಿಟ್ಟಿದ್ದಾರೆ. ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸ ಹಾಗೂ ಲೋಕಕಥೆಗಳ ಆಧಾರದಲ್ಲಿ ನಡೆಯುವ ಉತ್ಸವಗಳು ದೇಶಾದ್ಯಂತ ನಡೆಯುತ್ತವೆ. ವಿವಿಧತೆಯಲ್ಲಿ ಏಕತೆ ಜತೆಗೆ ಏಕರೂಪತೆಯೂ ಇದೆ. ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಗೌರವ ಉತ್ಸವ.

ಇದನ್ನೂ ಓದಿ | Navaratri 2022 | ಶರನ್ನವರಾತ್ರಿ, ಶ್ರೀನಿವಾಸದೇವರ ನವರಾತ್ರಿ; ಏನಿದು ಆಚರಣೆ?

ಕರ್ನಾಟಕದಲ್ಲಿ ಜೈನ, ಬೌದ್ಧ ಪರಂಪರೆಯ ಸಂಬಂಧಿತ ಪ್ರಾಚೀನ ಸ್ಥಳಗಳು ಇಲ್ಲಿವೆ. ಆದಿ ಶಂಕರಾಚಾರ್ಯರು ಶೃಂಗೇರಿ ಮಠವನ್ನು ಇದೇ ರಾಜ್ಯದಲ್ಲಿ ಮಾಡಿದರು. ಸೂಫಿ ಪರಂಪರೆಯ ಗುಲ್ಬರ್ಗ ಇಲ್ಲೇ ಇದೆ. 12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭುಗಳು ಸಮತೆಯ ಸಂದೇಶ ನೀಡಿದ್ದಾರೆ. ಎಲ್ಲ ವರ್ಗಗಳನ್ನೂ ಒಂದೆಡೆ ತಂದು ಅನುಭವ ಮಂಟಪ ಸ್ಥಾಪನೆ ಮಾಡಿದರು. ಬಸವಣ್ಣನವರು ಲೋಕತಾಂತ್ರಿಕ ಪದ್ಧತಿಯನ್ನು ಸ್ಥಾಪಿಸಿದರು,. ಅನುಭವ ಮಂಟಪದಲ್ಲಿ ಸಾಮಾಜಿಕ ವಿಚಾರಗಳನ್ನು ಚರ್ಚೆ ಮಾಡಲಾಯಿತು. ಈ ಸಂತರ ರಚನೆಯನ್ನು ವಚನ ಎನ್ನಲಾಗುತ್ತದೆ, ಮಹಿಳಾ ವಚನಕಾರರೂ ತಮ್ಮ ಕೊಡುಗೆ ನೀಡಿದ್ದಾರೆ. ಇಂದಿಗೂ ವಚನ ಕರ್ನಾಟಕದ ದೈನಂದಿನ ಜೀವನದ ಭಾಗವಾಗಿದೆ. ಸಮಾನತೆ, ಮಹಿಳಾ ಸ್ವಾತಂತ್ರ್ಯದ ಪ್ರತೀಕವಾಗಿದೆ.

ಮಹಿಷಾಸುರ, ಶುಂಭ ನಿಶುಂಭ ಮುಂತಾದ ಅಸುರರನ್ನು ಸಂಹಾರ ಮಾಡುವಲ್ಲೂ ಮಹಿಳಾ ಶಕ್ತಿ ವ್ಯಕ್ತವಾಗುತ್ತದೆ. ಪಾಲನೆ ಪೋಷಣೆಯಲ್ಲಿ ಮಹಿಳೆ ದಯೆಯ ಪ್ರತೀಕವಾಗಿದ್ದರೆ, ಅಹಂಕಾರದ ವಿರುದ್ಧ ಸೆಣೆಸಲು ದುರ್ಗೆಯ ಅವತಾವರನ್ನೂ ತಾಳುತ್ತಾಳೆ. ಇದೇ ನವದುರ್ಗೆಯ ರೂಪದಲ್ಲಿ ವ್ಯಕ್ತವಾಗುತ್ತದೆ. ಇದೆಲ್ಲ ಆಚರಣೆ ವಿಜಯ ದಶಮಿಯಂದು ಸಮಾಪ್ತಿಯಾಗುತ್ತದೆ.

ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕರಂತಹ ವೀರಾಂಗನೆಯರು ವಿದೇಶಿ ಆಡಳಿತಗಾರರ ವಿರುದ್ಧ ವೀರತ್ವ ತೋರಿದ್ದರು. ಓಬವ್ವನ ವೀರಗಾಥೆಯು ಮಹಿಳಾ ಸಶಕ್ತೀಕರಣದ ಯಾತ್ರೆಯನ್ನು ಮುಂದುವರಿಸಿದೆ. ಇಂದು ಬಹು ಆಯಾಮದಲ್ಲಿ ಕಾಣುತ್ತಿದೆ. ಈ ಪ್ರಗತಿಗೆ ಮತ್ತಷ್ಟು ಶಕ್ತಿ ಪ್ರದಾನ ಮಾಡಬೇಕಿದೆ.

ಮೈಸೂರು ದಸರಾ ಪರಂಪರೆ ಈಗಲೂ ಜೀವಂತವಾಗಿ ಮುಂದೆ ನಡೆಯುತ್ತಿದೆ ಎನ್ನುವುದು ದೇಶದ ಜನತೆಗೆ ಹೆಮ್ಮೆಯ ವಿಚಾರ. ಈ ಕಾರ್ಯಕ್ಕಾಗಿ ರಾಜ್ಯ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ಈ ಪರಂಪರೆಯ ಜತೆಗೆ ಜೋಡಿಸಿಕೊಳ್ಳಲು ನನಗೆ ಆಮಂತ್ರಣ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ರಾಜ್ಯದ ಕೆಲವು ಭಾಗಗಳಲ್ಲಿ ಕಷ್ಟ ಎದುರಾಗಿದೆ. ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ಇದೇ ಮಾರ್ಗದಲ್ಲಿ ನಡೆಯುತ್ತದೆ ಎಂಬ ವಿಶ್ವಾಸವಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಸಾಧನೆ ಮಾಡುತ್ತಿದೆ. ಕಳೆದ ವರ್ಷ ದೇಶದ ಅರ್ಧಕ್ಕೂ ಹೆಚ್ಚು ಎಫ್‌ಡಿಐ ಕರ್ನಾಟಕಕ್ಕೆ ಲಭಿಸಿದೆ. ಇದು ಕರ್ನಾಟಕದ ವಿಶ್ವವಿಖ್ಯಾತಿಯ ಪ್ರತೀಕವಾಗಿದೆ. ಬೆಂಗಳೂರನ್ನು ಸ್ಟಾರ್ಟಪ್‌ ಹಬ್‌ ಎನ್ನಲಾಗುತ್ತದೆ. ಇನೋವೇಷನ್‌ ಸೂಚ್ಯಂಕದಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕರ್ನಾಟಕ 100% ಸೇರ್ಪಡೆ ಗುರಿ ಸಾಧಿಸಿದೆ, ಗ್ರಾಮ ಸಡಕ್‌ ಯೋಜನೆಯಲ್ಲಿ ಶೇಕಡಾ ನೂರು ಸಾಧನೆ ಮಾಡಲಾಗಿದೆ. ಈ ರೀತಿಯಲ್ಲಿ ದೇಶವನ್ನು ಸಂಪದ್ಭರಿತ ಮಾರ್ಗದಲ್ಲಿ ಕೊಂಡೊಯ್ಯಲು ಎಲ್ಲರಿಗೂ ಶ್ಲಾಘನೆ ಹಾಗೂ ಆಶಯ ವ್ಯಕ್ತಪಡಿಸುತ್ತೇನೆ ಎಂದರು.

ಜೈ ಹಿಂದ್‌, ಜೈ ಭಾರತ್‌, ಜೈ ಕರ್ನಾಟಕ ಎಂದು ರಾಷ್ಟ್ರಪತಿ ಭಾಷಣವನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ | Mysuru Dasara | ಮೈಸೂರು ದಸರಾ ಉತ್ಸವಕ್ಕೆ ರಾಷ್ಟ್ರಪತಿ ಮುರ್ಮು ಚಾಲನೆ

Exit mobile version