ಮೈಸೂರು: ಎನ್‌ಐಎ ಅಧಿಕಾರಿಗಳು ಮನೆಗೆ ಬಂದಿದ್ದರು. ಎಲ್ಲಾ ಕಡೆ ಹುಡುಕಿದರು. ಏನೂ ಸಿಗಲಿಲ್ಲ. ಹಾಗಿದ್ದರೂ ಕೊನೆಗೆ ನಮ್ಮ ಸಂಬಂಧಿಕರಾದ ಖಲೀಂ ಉಲ್ಲಾ ಅವರನ್ನು ಕರೆದುಕೊಂಡು ಹೋದರು. ಅವರು ಪಿಎಫ್‌ಐ ಸಂಘಟನೆ ಸೇರಿದ್ದೇ ತಪ್ಪಾ?- ಹೀಗೆಂದು ಪ್ರಶ್ನಿಸಿದ್ದಾರೆ ಪಿಎಫ್ಐ ಮೈಸೂರು ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಖಲಿಂ ಉಲ್ಲಾ ಅವರ ಸಂಬಂಧಿ ಮಹಿಳೆಯಾಗಿರುವ ಆಯಿಷಾ ಝಬಿ.
ಖಲೀಂ ಉಲ್ಲಾ ಅವರ ಮೈಸೂರಿನ ಶಾಂತಿ ನಗರದಲ್ಲಿರುವ ನಿವಾಸಕ್ಕೆ ರಾತ್ರಿ ೩.೩೦ಕ್ಕೆ ಎಂಟ್ರಿ ಪಡೆದ ೮ ಮಂದಿ ಎನ್‌ಐಎ ಅಧಿಕಾರಿಗಳು ಬೆಳಗ್ಗೆ ಆರು ಗಂಟೆಯವರೆಗೆ ಮನೆಯಲ್ಲಿ ತಪಾಸಣೆ ಮತ್ತು ವಿಚಾರಣೆ ನಡೆಸಿದರು. ಬಳಿಕ ಖಲೀಂ ಉಲ್ಲಾ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಎಲ್ಲ ಕಡೆ ಹುಡುಕಿದರು
ಮುಂಜಾನೆ 3.30ರ ವೇಳೆಗೆ ಅಧಿಕಾರಿಗಳು ಮನೆಗೆ ಬಂದರು. ಲ್ಯಾಪ್ ಟಾಪ್, ಮೊಬೈಲ್ ಮತ್ತು ಮದ್ರಸಾಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪರಿಶೀಲನೆ ಮಾಡಿದ್ದಾರೆ. ಮಕ್ಕಳ ಆಟಿಕೆಗಳನ್ನು ಕೂಡಾ ಪರಿಶೀಲನೆ ಮಾಡಿದರು ಎಂದು ಖಲೀಂ ಉಲ್ಲಾ ಅವರ ಸಂಬಂಧಿ ಝಬಿ ಹೇಳಿದ್ದಾರೆ.
ʻʻಖಲೀಂ ಉಲ್ಲಾ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಈ ದಾಳಿಯ ಮೂಲಕ ಮುಸಲ್ಮಾರ ಪರವಾಗಿ ಧ್ವನಿ ಎತ್ತಿದವರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಭಯಪಡುವ ಅಗತ್ಯ ಇಲ್ಲʼʼ ಎಂದು ಹೇಳಿದರು ಝಬಿ.
ಮಾಜಿ ಅಧ್ಯಕ್ಷ ಅಮೀನ್ ಸೇಠ್ ಹೇಳೋದೇನು?
ʻʻಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ ಹಳ್ಳಿ ಗಲಾಟೆ ವಿಚಾರವಾಗಿ ವಿಚಾರಣೆಗೆ ಬಂದಿದ್ದಾಗಿ ಅಧಿಕಾರಿಗಳು ಹೇಳಿದರು. ರಾತ್ರಿ 3.30ರ ಸುಮಾರಿಗೆ ಮನೆಗೆ ಬಂದು ನೋಟಿಸ್ ತೋರಿಸಿದರು. ನೋಟಿಸ್ ನಲ್ಲಿ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಾಟೆ ವಿಚಾರವಾಗಿ ವಿಚಾರಣೆ ಅಂಥ ಇತ್ತು. ಮೈಸೂರಿನ ಸಿಸಿಬಿ ಹಾಗೂ ಎನ್ಐಎ ಅಧಿಕಾರಿಗಳು ಬಂದು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಏನೂ ಸಿಕ್ಕಿಲ್ಲʼʼ ಎಂದು ಹೇಳಿರುವ ಪಿಎಫ್ಐ ಮಾಜಿ ಅಧ್ಯಕ್ಷ ಅಮೀನ್ ಸೇಠ್, ʻʻಪಿಎಫ್ಐ ಸಂಘಟನೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುತ್ತೇವೆʼʼ ಎಂದರು.
ಇನ್ನೊಂದು ಮನೆಯ ಮೇಲೂ ದಾಳಿ
ಮೈಸೂರಿನ ಮತ್ತೊಂದು ಮನೆ ಮೇಲೂ ಎನ್‌ಐಎ ದಾಳಿ ನಡೆದಿದೆ. ಫಾರೂಕಿಯಾ ರೆಹಮಾನ್ ಎಂಬವರ ಸಾತಗಳ್ಳಿಯ ಡಿ ವಲಯದಲ್ಲಿರುವ ನಿವಾಸಕ್ಕೆ ನಡುರಾತ್ರಿ ಭೇಟಿ ನೀಡಿದರು. ಆದರೆ, ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಕೆಲ ಹೊತ್ತು ಓಡಾಡಿ ನಿರ್ಗಮಿಸಿದರು.
ಇದನ್ನೂ ಓದಿ | NIA Raid| ರಾಜ್ಯದಲ್ಲಿ 20 ಪಿಎಫ್‌ಐ ಮುಖಂಡರು ಎನ್‌ಐಎ ವಶದಲ್ಲಿ: ಇನ್ನಷ್ಟು ಮಂದಿಗೆ ಬಲೆ? ವಶದಲ್ಲಿರುವ ನಾಯಕರು ಯಾರು?