ರಾಮನಗರ: ಜಿಲ್ಲೆಯಲ್ಲಿ ನಡೆಯುತ್ತಿರುವ ಗುದ್ದಲಿ ಪೂಜೆಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಸಚಿವ ಅಶ್ವತ್ಥ ನಾರಾಯಣ ಅವರಿಗೆ ಅಡ್ಡಿಪಡಿಸಿದೆ. ಅಲ್ಲದೆ, ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಮೊಟ್ಟೆ ಎಸೆಯಲಾಗಿದೆ. ಉದ್ರಿಕ್ತ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮುಂದೂಡಿದೆ.
ರಾಮನಗರ ಜಿಲ್ಲೆಯ 5 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಚನ್ನಪಟ್ಟಣದ ಹೊಂಗನೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುದ್ರಿಸಲಾಗಿರುವ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೆಸರನ್ನೂ ಪ್ರಕಟಿಸಲಾಗಿತ್ತು. ಆದರೆ, ಅವರನ್ನು ಆಹ್ವಾನ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಕಾರಣದಿಂದ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಪರಿಸ್ಥಿತಿ ಉದ್ವಿಗ್ನ, ಲಾಠಿ ಚಾರ್ಜ್
ಚನ್ನಪಟ್ಟಣ ರಾಂಪುರದಲ್ಲಿ ಗುದ್ದಲಿ ಪೂಜೆಗೆ ಬಿಜೆಪಿ ನಾಯಕರು ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಪರ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಭೂಮಿ ಪೂಜೆ ನೆರವೇರಿಸಬಾರದು ಎಂದು ಆಗ್ರಹಿಸಿದರು. ಅಲ್ಲದೆ, ಈ ವೇಳೆ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಮಧ್ಯೆ ವಾಗ್ವಾದವಾಗಿದೆ. ಅಲ್ಲದೆ, ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಲಾಗಿದ್ದು, ಮೊಟ್ಟೆಯನ್ನೂ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ರಿಕ್ತರ ಗುಂಪನ್ನು ಚದುರಿಸುವ ಸಂಬಂಧ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.
ಇದನ್ನೂ ಓದಿ | ಮೋದಿ ಅಂಗಳಕ್ಕೆ BMS ಟ್ರಸ್ಟ್ ವಿವಾದ: ʼಸಚಿವ ಅಶ್ವತ್ಥನಾರಾಯಣ + ಒಂದು ಕಾಣದ ಕೈʼ ಎಂದ ಕುಮಾರಸ್ವಾಮಿ
ಜೆಡಿಎಸ್ ಕಾರ್ಯಕರ್ತರ ಬಂಧನ
ಗುದ್ದಲಿ ಪೂಜೆ ಗಲಾಟೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರತೊಡಗಿದರು. ಸಿ.ಪಿ. ಯೋಗೇಶ್ವರ್ ಹೋದ ಕಡೆಯಲ್ಲೆಲ್ಲ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರೊಂದಿಗೆ ಜೆಡಿಎಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಬಳಿಕ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದರಿಂದ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಗುದ್ದಲಿ ಪೂಜೆಗೆ ವಿರೋಧ ಮಾಡಿದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಕಾರ್ಯಕ್ರಮ ಮುಂದೂಡಿದ ಜಿಲ್ಲಾಡಳಿತ
ಮಾಜಿ ಮುಖ್ಯಮಂತ್ರಿ ಅನುಪಸ್ಥಿತಿ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಎಚ್ಚೆತ್ತ ಜಿಲ್ಲಾಡಳಿತ ಶನಿವಾರ ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಿ ಆದೇಶ ಹೊರಡಿಸಿದೆ. 50 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಬೇಕಾಗಿತ್ತು.
ಪೋಸ್ಟರ್‌ಗಳ ಮೂಲಕ ಆಕ್ರೋಶ
ರಾಮನಗರದಲ್ಲಿ ಗುದ್ದಲಿಪೂಜೆ ಕಾರ್ಯಕ್ರಮ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಸಚಿವ ಅಶ್ವತ್ಥ ನಾರಾಯಣ ನಡುವೆ ಕೆಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಅಲ್ಲದೆ, ತಮಗೆ ಆಮಂತ್ರಣ ಬಂದಿಲ್ಲ ಎಂದು ಎಚ್‌ಡಿಕೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಸಂಬಂಧ ಜೆಡಿಎಸ್ ಕಾರ್ಯಕರ್ತರು ಸಹ ಭೂಮಿ ಪೂಜೆ ಕಾರ್ಯಕ್ರಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಗುದ್ದಲಿ ಪೂಜೆ ಮಾಡಬಾರದು ಎಂದು ಪಟ್ಟುಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧವೂ ವಿವಿಧ ಪೋಸ್ಟರ್‌ಗಳನ್ನು ಸಿದ್ಧಪಡಿಸಿ, ಹರಿಬಿಡಲಾಗಿದೆ. ಅಲ್ಲದೆ, ಈ ಪೋಸ್ಟರ್‌ಗಳನ್ನು ಪ್ರತಿಭಟನಾ ಸ್ಥಳದಲ್ಲಿ ಹಿಡಿದು ಮೆರವಣಿಗೆ ನಡೆಸಲಾಗಿದೆ.
ಪೋಸ್ಟರ್‌ನಲ್ಲೇನಿದೆ?
೧. ಶಿಕ್ಷಣ ಸಂಸ್ಥೆಯನ್ನೇ ಮಾರಿದ ಅಸ್ವಸ್ಥ, ಸರ್ಕಾರಕ್ಕೆ ಸೇರಿದ ವಿದ್ಯಾಸಂಸ್ಥೆಯನ್ನು ಖಾಸಗಿಯವರಿಗೆ ಮಾರಿದ ಶಿಕ್ಷಣ ಸಚಿವ ಅಸ್ವಸ್ಥ ನಾರಾಯಣ.
೨. ೪೦% ಸರ್ಕಾರದ ೧೦೦% ಸಚಿವ ಅಶ್ವತ್ಥನಾರಾಯಣನಿಗೆ ಚನ್ನಪಟ್ಟಣದ ಜನತೆಯಿಂದ ಧಿಕ್ಕಾರ! – ಎಂದು ಬರೆದುಕೊಂಡಿರುವ ಪೋಸ್ಟರ್‌ಗಳನ್ನು ಜೆಡಿಎಸ್ ಕಾರ್ಯಕರ್ತರು ಪ್ರದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿ | JDS ಪಕ್ಷದ ಕೆಲಸವನ್ನು ನಿರ್ಲಕ್ಷ್ಯ ಮಾಡುವ ಪದಾಧಿಕಾರಿಗಳಿಗೆ ಕುಮಾರಸ್ವಾಮಿ ಎಚ್ಚರಿಕೆ