ವಿವೇಕ ಮಹಾಲೆ, ಶಿವಮೊಗ್ಗ
ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ವಿಶೇಷವೆಂದರೆ, ಭದ್ರಾವತಿಯಲ್ಲಿ ಬಿಜೆಪಿ ಈವರೆಗೆ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಭದ್ರಾವತಿ ರಾಜಕಾರಣ ಇತರೆ ವಿಧಾನಸಭಾ ಕ್ಷೇತ್ರಕ್ಕಿಂತ ತುಂಬಾ ಭಿನ್ನ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೇ ಹೆಚ್ಚು ಮಹತ್ವ.
ಭದ್ರಾವತಿ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ ಆಗಿತ್ತು. ನಂತರದ ದಿನಗಳಲ್ಲಿ ಕಾರ್ಮಿಕ ಹೋರಾಟದ ಮೂಲಕ ಅಪ್ಟಾಜಿಗೌಡ ಜನಪ್ರಿಯತೆ ಗಳಿಸಿ, ಕ್ಷೇತ್ರದ ರಾಜಕಾರಣಕ್ಕೆ ಎಂಟ್ರಿ ಕೊಟ್ಟರು. 1994ರಿಂದ ಕಳೆದ ಚುನಾವಣೆವರೆಗೂ ಕಾಂಗ್ರೆಸ್‌ನ ಬಿ.ಕೆ. ಸಂಗಮೇಶ್ವರ ಮತ್ತು ಜೆಡಿಎಸ್‌ನ ಅಪ್ಟಾಜಿಗೌಡ ನಡುವೆ ನೇರ ಪೈಪೋಟಿಯಿತ್ತು. ಕ್ಷೇತ್ರದಲ್ಲಿ ಸಂಗಮೇಶ್ವರ ಮತ್ತು ಅಪ್ಪಾಜಿಗೌಡ ಅವರಿಗೆ ಮತದಾರರು ಸಮಾನ ಅವಕಾಶ ನೀಡುತ್ತಾ ಬಂದಿದ್ದಾರೆ. ಇವರಿಬ್ಬರೂ ತಲಾ ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿ.ಕೆ. ಸಂಗಮೇಶ್ವರ್ ಹಾಲಿ ಶಾಸಕರಾಗಿದ್ದಾರೆ.
ಅಧಿಕಾರಕ್ಕಾಗಿ ಬಿಜೆಪಿ ತವಕ
ಈವರೆಗೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಆಗದ ಬಿಜೆಪಿ ಈ ಬಾರಿ ಶತಾಯಗತಾಯ ಗೆಲಲ್ಲೇ ಬೇಕೆಂಬ ಪಣ ತೊಟ್ಟಿದೆ. ಮುಂದಿನ ಚುನಾವಣೆಯಲ್ಲಿ ಭದ್ರಾವತಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದೊಂದು ದಶಕದಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಯಶ ಮಾತ್ರ ಇನ್ನೂ ಸಿಕ್ಕಿಲ್ಲ. ಹಾಗಂತ, ಪ್ರಯತ್ನ ನಡೆದೇ ಇಲ್ಲ ಎಂದೇನಿಲ್ಲ. ಸ್ವತಃ ಯಡಿಯೂರಪ್ಪ ಕಾರ್ಯತಂತ್ರ ರೂಪಿಸಿದ್ದರೂ ಗೆಲುವು ಸಿಕ್ಕಿಲ್ಲ. ಕಳೆದ 30 ವರ್ಷಗಳಿಂದ ಸಂಗಮೇಶ್ ಮತ್ತು ಅಪ್ಪಾಜಿ ಅವರ ನೇರ ಸ್ಪರ್ಧೆಗೆ ಯಾರಿಗೂ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. 1994ರ ಚುನಾವಣೆಯಲ್ಲಿ ನವನೀತ್ 16,830 ಮತಗಳನ್ನು ಪಡೆದುಕೊಂಡಿದ್ದೆ ಇದುವರೆಗಿನ ಬಿಜೆಪಿಯ ದೊಡ್ಡ ಸಾಧನೆಯಾಗಿದೆ. ಇನ್ನು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಸ್ತಿತ್ವ ತೋರಿಸುವುದೇ ದೊಡ್ಡ ಸವಾಲು.
ಅಪ್ಪಾಜಿ ಗೌಡರ ಆಪ್ತ ಬಿಜೆಪಿ ಅಭ್ಯರ್ಥಿ
2020ರಲ್ಲಿ ಮಾಜಿ ಶಾಸಕ ಜೆಡಿಎಸ್‌ನ ಅಪ್ಟಾಜಿಗೌಡ ಕೊರೊನಾದಿಂದಾಗಿ ನಿಧನರಾಗಿದ್ದು, ಜೆಡಿಎಸ್ ಓರ್ವ ಜನಪ್ರಿಯ ನಾಯಕನನ್ನು ಕ್ಷೇತ್ರದಲ್ಲಿ ಕಳೆದುಕೊಂಡಿದೆ. ಅಪ್ಟಾಜಿಗೌಡರ ಅನುಪಸ್ಥಿತಿಯನ್ನು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಲಾಭವಾಗಿಸಲು ಹವಣಿಸುತ್ತಿದೆ. ಕಳೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ತೀವ್ರ ಕಸರತ್ತು ನಡೆಸಿತ್ತು. ಕಬಡ್ಡಿ ಗಲಾಟೆ ಮುಂದಿಟ್ಟುಕೊಂಡು ಬಿಜೆಪಿ ಹಿಂದುತ್ವ ಅಸ್ತ್ರಕ್ಕೆ ಮುಂದಾಗಿತ್ತು. ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ನಗರಸಭೆ ಚುನಾವಣೆ ಸಂದರ್ಭ ಭದ್ರಾವತಿಯಲ್ಲೇ ಠಿಕಾಣಿ ಹೂಡಿದ್ದರು. ಆದರೆ ಅದು ಎಂದಿನಂತೆ ಫಲ ಕೊಡಲಿಲ್ಲ. ನಗರಸಭೆಯಲ್ಲಿ ಕೇವಲ ಎರಡು ಸ್ಥಾನಕ್ಕೆ ಬಿಜೆಪಿ ಸೀಮಿತವಾಯಿತು. ಇದೀಗ ಅಪ್ಪಾಜಿಗೌಡರ ಆಪ್ತರಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಅವರನ್ನು ಸಂಸದ ರಾಘವೇಂದ್ರ ಅವರು ಬಿಜೆಪಿಯತ್ತ ಸೆಳೆದುಕೊಂಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಭರವಸೆ ಕೂಡ ನೀಡಲಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಶಾರದಾ ಅಪ್ಪಾಜಿ ಜೆಡಿಎಸ್ ಅಭ್ಯರ್ಥಿ
2023ರ ವಿಧಾನಸಭೆ ಚುನಾವಣೆಗೆ ಭದ್ರಾವತಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ. ಕಳೆದ ವರ್ಷ ಭದ್ರಾವತಿಯ ಗೋಣೀಬೀಡುನಲ್ಲಿ ಅಪ್ಪಾಜಿ ಗೌಡರು ಅಗಲಿ ಒಂದು ವರ್ಷದ ಹಿನ್ನೆಲೆ ಹಮ್ಮಿಕೊಂಡ ಅಪ್ಪಾಜಿಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದರು. ಅದರಂತೆ ಶಾರದಾ ಗೌಡ ಕ್ಷೇತ್ರಾದ್ಯಂತ ಪ್ರವಾಸ ನಡೆಸುತ್ತಿದ್ದು, ಚುನಾವಣೆ ತಯಾರಿ ಮಾಡಿಕೊಂಡಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಅಪ್ಪಾಜಿಗೌಡರ ಆಪ್ತ ಎಸ್. ಕುಮಾರ್ ಇದರಿಂದ ಮುನಿಸುಕೊಂಡು ಕಮಲ ಪಾಳೆಯಕ್ಕೆ ಜಿಗಿದಿದ್ದಾರೆ.
ಬಿಜೆಪಿ ಸಿದ್ಧತೆ ಇಲ್ಲವೇ ಇಲ್ಲ
ಕಳೆದ ವರ್ಷ ನಗರಸಭೆ ಚುನಾವಣೆಯಲ್ಲಿ ಸಕ್ರಿಯವಾಗಿದ್ದ ಕಮಲ ಪಡೆ ಮತ್ತೆ ಮುದುಡಿಕೊಂಡಿದೆ. ಮುಂದಿನ ಅಭ್ಯರ್ಥಿ ಯಾರು ಎಂಬುದೇ ಅನಿಶ್ಚಿತತೆ ಇರುವುದರಿಂದ ಪ್ರಚಾರದ ನೇತೃತ್ವ ವಹಿಸುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಆಯಾ ಶಾಸಕರು ಕ್ಷೇತ್ರ ಸುತ್ತಾಟ ಆರಂಭಿಸಿದ್ದರೂ ಭದ್ರಾವತಿಯಲ್ಲಿ ಮಾತ್ರ ಮೌನ ಆವರಿಸಿದೆ. ನಗರಸಭೆ ಚುನಾವಣೆ ನಂತರ ಯಾವೊಬ್ಬ ಮುಖಂಡ ಸಂಘಟನೆ ದೃಷ್ಟಿಯಿಂದ ಅತ್ತ ತಿರುಗಿ ನೋಡಿದ್ದಿಲ್ಲ. ಟಿಕೆಟ್ ಆಕಾಂಕ್ಷಿತರು ಕೂಡ ಕಾದು ನೋಡುವ ತಂತ್ರದಲ್ಲಿದ್ದಾರೆ. ಟಿಕೆಟ್ ಬಯಸಿ ಕೇಸರಿ ಪಡೆಗೆ ಸೇರಿರುವ ಕುಮಾರ್ ಅವರಿಗೂ ಇದೀಗ ಟಿಕೆಟ್ ಸಿಗುತ್ತದೆ ಎಂಬ ಖಾತ್ರಿ ಇದ್ದಂತಿಲ್ಲ. ಪಕ್ಷಕ್ಕೆ ಸೇರ್ಪಡೆಗೊಂಡ ಅವರನ್ನು ಮೂಲ ಬಿಜೆಪಿಗರು ಪಕ್ಷದ ಅಭ್ಯರ್ಥಿ ಎಂದು ಬಿಂಬಿಸುವುದಿರಲಿ, ವೇದಿಕೆಗೂ ಕರೆಯುತ್ತಿಲ್ಲ.
ಈ ಬಾರಿ ಹೊಸಬರಿಗೆ ಅವಕಾಶ
ಮುಂದಿನ ವರ್ಷದ ಚುನಾವಣೆಯಲ್ಲಿ ಹೊಸ ಮುಖ ಗೆದ್ದು ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್‌ನ ಅಪ್ಪಾಜಿ ಗೌಡ ನಿಧನರಾಗಿದ್ದಾರೆ. ಅವರ ಬದಲಿಗೆ ಶಾರದಾ ಅಪ್ಪಾಜಿ ಸ್ಪರ್ಧಿಸಲಿದ್ದು, ಗೆದ್ದರೆ ಮೊದಲ ಬಾರಿ ಶಾಸಕರಾಗುತ್ತಾರೆ. ಇನ್ನು, ಹಾಲಿ ಶಾಸಕ ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್ವರ ಅನಾರೋಗ್ಯದಿಂದ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಹಾಗೇನಾದರೂ ಆದಲ್ಲಿ, ಅವರ ಪುತ್ರ ಅಥವಾ ಸಹೋದರ ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇನ್ನು ಬಿಜೆಪಿಯಿಂದ ಹಲವರು ಟಿಕೆಟ್ ಆಕಾಂಕ್ಷಿತರಿದ್ದರು ಎಲ್ಲವೂ ಹೊಸಮುಖಗಳೇ.
ಶಾರದಾ ಅಪ್ಪಾಜಿ ಸೆಳೆಯಲು ಪ್ರಯತ್ನ
ಮಿಷನ್ 150ರ ಗುರಿ ತಲುಪಲು ಬಿಜೆಪಿ ಶತಾಯಗತಾಯ ಪ್ರಯತ್ನದಲ್ಲಿದೆ. ಅದರ ಭಾಗವಾಗಿ ಭದ್ರಾವತಿ ಕ್ಷೇತ್ರವನ್ನೂ ದಕ್ಕಿಸಿಕೊಳ್ಳಲು ಬಿಜೆಪಿ ದೃಷ್ಟಿ ನೆಟ್ಟಿದೆ. ಅದರ ಭಾಗವಾಗಿ ಮಾಜಿ ಶಾಸಕ ದಿ.ಅಪ್ಪಾಜಿ ಗೌಡರ ಪತ್ನಿ ಶಾರದಾ ಅಪ್ಪಾಜಿಯನ್ನು ಸೆಳೆಯಲು ಬಿಜೆಪಿ ಮುಂದಾಗಿತ್ತು. ಅಪಾರ ಜನಪ್ರಿಯತೆ ಗಳಿಸಿದ್ದ ಅಪ್ಪಾಜಿ ಗೌಡರ ನಿಧನದ ಅನುಕಂಪದ ಲಾಭದೊಂದಿಗೆ ಶಾರದಾ ಅಪ್ಪಾಜಿ ಅವರನ್ನು ನಿಲ್ಲಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಆದರೆ ಶಾರದಾ ಅಪ್ಪಾಜಿ ಈಗಾಗಲೇ ಜೆಡಿಎಸ್ನಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ವರ್ಷವೇ ಜೆಡಿಎಸ್ ಅಭ್ಯರ್ಥಿಯಾಗಿ ಬಿಂಬಿತಗೊಂಡು, ಪಕ್ಷ ಸಂಘಟನೆಯತ್ತ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಸಂಘಟಿಸಿ, ಗಮನಸೆಳೆದಿದ್ದಾರೆ. ಇದೀಗ ಬಿಜೆಪಿ ಅನಿವಾರ್ಯವಾಗಿ, ಅಪ್ಪಾಜಿ ಗೌಡರ ಆಪ್ತ ಎಸ್. ಕುಮಾರ್ ಅವರನ್ನು ಸೆಳೆದಿದೆ. ಆದರೆ ಮುಂದಿನ ಅಭ್ಯರ್ಥಿಯೆಂದು ಬಹಿರಂಗವಾಗಿ ಮಾತ್ರ ಹೇಳಿಲ್ಲ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಬಿ.ಕೆ.ಸಂಗಮೇಶ್ವರ(ಕಾಂಗ್ರೆಸ್)
2. ಶಾರದಾ ಅಪ್ಪಾಜಿ (ಜೆಡಿಎಸ್)
3. ಕೂಡ್ಲಗೆರೆ ಹಾಲೇಶ್, ಎಸ್. ಕುಮಾರ್ (ಬಿಜೆಪಿ)
ಇದನ್ನೂ ಓದಿ | ಎಲೆಕ್ಷನ್ ಹವಾ | ಹಾಸನ | ಪ್ರೀತಂ ಗೌಡ ವಿರುದ್ಧ ರೇವಣ್ಣ ಯಾವ ಕಾರ್ಡ್ ಬಳಸುತ್ತಾರೆ ಎನ್ನುವುದೇ ಪ್ರಶ್ನೆ