ಕಲಬುರಗಿ: ಕರ್ನಾಟಕದಿಂದ ಪರಾರಿಯಾಗಿ ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿದ್ದ ಪಿಎಸ್‌ಐ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದ ರಚನಾ ಸಿಐಡಿ ಅಧಿಕಾರಿಗಳಿಗೆ ಸೆರೆಯಾಗಿದ್ದಾಳೆ. ಪಿಎಸ್‌ಐ ಅಕ್ರಮ (PSI scam) ನೇಮಕಾತಿ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಈಗಾಗಲೇ 25ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.
ಪಿಎಸ್‌ಐ ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ, ಪರೀಕ್ಷಾ ಅಕ್ರಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಳು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದವಳಾದ ರಚನಾ, ಪಿಎಸ್‌ಐ ಹಗರಣ ಸುದ್ದಿ ಹೊರ ಬಂದಾಗಿನಿಂದ ನಾಪತ್ತೆ ಆಗಿದ್ದಳು. ಬೆಂಗಳೂರು ಸಿಐಡಿ ಅಧಿಕಾರಿಗಳು ಎಷ್ಟೇ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.
ಮಹಾರಾಷ್ಟ್ರ ಗಡಿಯಲ್ಲಿ ತಲೆಮರೆಸಿಕೊಂಡು ಓಡಾಟ ನಡೆಸುತ್ತಿದ್ದ ರಚನಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಳು. ಕೊನೆಗೆ ಮಹಾರಾಷ್ಟ್ರ-ಕರ್ನಾಟಕ ಗಡಿ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಸಿಐಡಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾಳೆ. ಒಂದೂವರೆ ತಿಂಗಳಿಂದ ರಚನಾ ಬೆನ್ನುಬಿದ್ದಿದ್ದ ಕಲಬುರಗಿ ಸಿಐಡಿ ಅಧಿಕಾರಿಗಳಿಗೆ ಶುಕ್ರವಾರ ಆಕೆಯ ಇರುವಿಕೆಯ ಖಚಿತ ಮಾಹಿತಿ ಸಿಕ್ಕಿದೆ. ಹೀಗಾಗಿ ಆಕೆಯನ್ನು ಬಂಧಿಸಿ ಶುಕ್ರವಾರ ಸಂಜೆ ಕಲಬುರಗಿಗೆ ಕರೆತಂದಿದ್ದಾರೆ.
ನ್ಯಾಯಾಲಯಕ್ಕೆ ಹಾಜರು
ಶನಿವಾರವೇ ಕಲಬುರಗಿಯ 5ನೇ ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ವಿಷಯ ತಿಳಿದಿರುವ ಬೆಂಗಳೂರು ಸಿಐಡಿ ಪೊಲೀಸರು ಕಲಬುರುಗಿಗೆ ಆಗಮಿಸಿದ್ದು, ಹೆಚ್ಚಿನ ತನಿಖೆಗಾಗಿ ರಚನಾರನ್ನು ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ. ಶನಿವಾರ ರಾತ್ರಿ ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆಂಬ ಮಾಹಿತಿ ಇದೆ.
ಇದನ್ನೂ ಓದಿ | PSI Scam | ರಾಜಕಾರಣಿಗಳ ಬೆಂಬಲವಿಲ್ಲದೆ ಪಿಎಸ್‌ಐ ಅಕ್ರಮ ಸಾಧ್ಯವೇ?; ಪ್ರಿಯಾಂಕ್ ಖರ್ಗೆ ಪ್ರಶ್ನೆ