ಬೆಂಗಳೂರು/ವಿಜಯಪುರ: ರಾಜ್ಯದ ಹಲವೆಡೆ ಗುರುವಾರ ಮಳೆಯಾಗಿರುವ (Rain News) ವರದಿಯಾಗಿದೆ. ವಿಜಯಪುರ ಜಿಲ್ಲೆಯ ಅಲ್ಲಿ ಗುಡುಗು – ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಈ ನಡುವೆ ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಸಿಡಿಲು ಬಡಿದು ಜಮೀನಿನಲ್ಲಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮಸಳಿ ಗ್ರಾಮದಲ್ಲಿ ಜಮೀನು ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅಲ್ಲದೆ, ರಾಜ್ಯದ ಕೆಲವು ಕಡೆ ಇನ್ನು ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು (Karnataka Weather Forecast) ಹೇಳಿದ್ದಾರೆ. ಹೀಗಾಗಿ ಸಂಜೆ ವೇಳೆ ಮನೆಯಿಂದ ಹೊರಹೋಗಬೇಕಾದರೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿ ರಸ್ತೆ ಜಲದಪ್ಪನ ಕೆರೆಯ ಜಮೀನಿನಲ್ಲಿ ಈ ಘಟನೆ ನಡೆದಿದೆ. ಭೀರಪ್ಪ ನಿಂಗಪ್ಪ ಅವರಾದಿ (16) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಈ ವೇಳೆ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ಬಾಲಕನ ಕುಟುಂಬಸ್ಥರು 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿಡಿಲು ಬಡಿದು ಮತ್ತೊಬ್ಬ ಸಾವು
ಇಂಡಿ ತಾಲೂಕಿನ ಮಸಳಿ ಗ್ರಾಮದಲ್ಲಿ ಜಮೀನು ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸೋಮಶೇಖರ್ ಪಟ್ಟಣಶೆಟ್ಟಿ (45) ಸಿಡಿಲಿಗೆ ಬಲಿಯಾದ ರೈತ ಎಂದು ಗುರುತಿಸಲಾಗಿದೆ.
ವಿಜಯಪುರದಲ್ಲಿ ತಂಪೆರೆದ ಮಳೆರಾಯ
ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಗಾಳಿ ಸಹಿತ ಜಿಟಿ ಜಿಟಿ ಮಳೆಯಾಗಿದೆ. ಬಾಬಾನಗರ, ಬಿಜ್ಜರಗಿ, ದೇವರ ಹಿಪ್ಪರಗಿ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ. ಸುಮಾರು ಒಂದು ತಾಸು ಮಳೆ ಸುರಿದಿದೆ ಎನ್ನಲಾಗಿದೆ.
ಬಾಗಲಕೋಟೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ
ಬಾಗಲಕೋಟೆ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಬಾಗಲಕೋಟೆ ಪಟ್ಟಣದ ನವನಗರ, ವಿದ್ಯಾಗಿರಿ ಸೇರಿ ಹಳೇ ನಗರದಲ್ಲಿ ವರುಣನ ಸಿಂಚನವಾಗಿದೆ.
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ
ಗುರುವಾರ (ಏ.11) ಕಾಫಿನಾಡು ಚಿಕ್ಕಮಗಳೂರಲ್ಲಿ ಭಾರೀ ಮಳೆಯಾಗುತ್ತಿದ್ದರೆ, ಇತ್ತ ಕೊಡಗಿನ ಜನರು ಕೃಪೆ ತೋರು ವರುಣ ಎಂದು ದೇವರ ಮೊರೆ ಹೋಗಿದ್ದಾರೆ. ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸಂಜೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯು ತಂಪೆರೆದಿದೆ. ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿಯಲ್ಲಿ ಹಾಗೂ ಹಂಗರವಳ್ಳಿ, ಕೆರೆಮಕ್ಕಿ, ಬೈಗೂರು ಗ್ರಾಮದಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯಿಂದ ಕೃಷಿಕರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಏ.12ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲಿ ಮಳೆಯ ಸಿಂಚನವಾಗಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ವಿಜಯನಗರ, ಮೈಸೂರಿನಲ್ಲೂ ಮಳೆಯಾಗಲಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಉಳಿದೆಡೆ ಒಣ ಹವೆ ಇರಲಿದೆ.
ರಾಜಧಾನಿ ಬೆಂಗಳೂರಲ್ಲಿ ಬೆಳಗ್ಗೆ ಆಕಾಶವು ಸ್ಪಷ್ಟವಾಗಿ ಇರಲಿದ್ದು, ಸಂಜೆ/ರಾತ್ರಿ ಸಮಯ ಭಾಗಶಃ ಮೋಡ ಇರಲಿದೆ. ಗರಿಷ್ಠ ಉಷ್ಣಾಂಶ 36 ಹಾಗೂ ಕನಿಷ್ಠ ಉಷ್ಣಾಂಶ 23 ಡಿ.ಗಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Fraud Case : ಹೆಣ್ಮಕ್ಕಳಿಗೆ ಗಾಳ ಹಾಕಿ ಹಣ ಲೂಟಿ ಮಾಡುತ್ತಿದ್ದ ಮ್ಯಾಟ್ರಿಮೋನಿ ವಂಚಕ ಅರೆಸ್ಟ್
ಮಳೆಗಾಗಿ ದೇವರ ಮೊರೆ
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಕೊಡಗು ಮಾತ್ರವಲ್ಲದೆ ರಾಜ್ಯದ ಜನತೆ ಸುಡು ಬಿಸಿಲಿಗೆ ಹೈರಾಣಾಗಿ ಹೋಗಿದ್ದು, ಕೃಪೆ ತೋರು ವರುಣ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಸಮೀಪದ ಇತಿಹಾಸ ಪ್ರಸಿದ್ದ ಉಮಾಮಹೇಶ್ವರಿ ದೇವಾಲಯಲ್ಲಿ ಗುರುವಾರ ದೇವಾಲಯ ಆಡಳಿತ ಮಂಡಳಿ ವತಿಯಿಂದ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಜ್ಯದ ಬೇರೆ ಬೇರೆ ಭಾಗದಲ್ಲಿ ಹೆಚ್ಚು ಬಿಸಿಲಿನ ವಾತಾವರಣ ಇದ್ದರೂ, ಕೊಡಗು ಮಾತ್ರ ಕೂಲ್ ಆಗಿ ಇರುತಿತ್ತು. ಆದರೆ ಇದೀಗ ಕೊಡಗಿನಲ್ಲೂ ತಾಪಮಾನ 32 ಡಿ.ಸೆ ಹೆಚ್ಚಾಗಿದ್ದು ಸುಡು ಬಿಸಿಲಿನಿಂದ ಜನರು ಹೈರಾಣಾಗಿದ್ದಾರೆ. ಮಳೆಗಾಗಿ ಆಗಸದತ್ತ ಮುಖ ಮಾಡುತ್ತಿದ್ದಾರೆ. ಇನ್ನೂ ಈ ವರ್ಷ ನಿಗದಿಯಂತೆ ವಾಡಿಕೆಯ ಮಳೆಯಾಗದೆ ಬರದ ಛಾಯೆ ಜಿಲ್ಲೆಯಲ್ಲಿ ಆವರಿಸಿದೆ.
ನದಿ, ತೊರೆ, ಹಳ್ಳ-ಕೊಳ್ಳಗಳು ಸಂಪೂರ್ಣವಾಗಿ ಬರಿದಾಗುತ್ತಿದೆ. ಮಳೆ ಬಾರದೆ ಹೋದರೆ ನಾಡಿಗೆ ನೀರುಣಿಸುವ ಕಾವೇರಿಯ ತವರು ಕೊಡಗು ಜಿಲ್ಲೆಯಲ್ಲಿ ಹನಿ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಇನ್ನೂ ಮಳೆಯಾಗದೆ ಬಿಸಿಲು ಹೆಚ್ಚಾಗಿದ್ದು ಕೊಡಗಿನಲ್ಲಿ ಮಳೆ ಸುರಿಸು ದೇವಾ ಎಂದು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ