Site icon Vistara News

Santosh Suicide: ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದ ಈಶ್ವರಪ್ಪ: ಸಂಪುಟ ವಿಸ್ತರಣೆ ವೇಳೆ ಕೊಕ್‌?

ಈಶ್ವರಪ್ಪ

ಶಿವಮೊಗ್ಗ/ಬೆಂಗಳೂರು/ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ(Santosh Suicide) ಪ್ರಕರಣದಲ್ಲಿ ರಾಜೀನಾಮೆ ನೀಡಬೇಕೆಂದು ಬಿಜೆಪಿ(BJP) ವರಿಷ್ಠರು ತಮಗೆ ಸೂಚನೆ ನೀಡಿಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ (Eshwarappa) ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಂತೋಷ್‌ ಪಾಟೀಲ್‌ ನಮ್ಮ ಪಕ್ಷದ ಕಾರ್ಯಕರ್ತನಾಗಿದ್ದ. ಆತ ಯಾವ ಕಾರಣಕ್ಕೆ ಸಾವಿಗೀಡಾದ ಎಂಬ ಕುರಿತು ಸಮಗ್ರ ತನಿಖೆ ನಡೆಯಬೇಕು. ಜನರು ಎಲ್ಲವನ್ನೂ ಗಮನಿಸುತಿರುತ್ತಾರೆ. ಈ ವಿಚಾರದಲ್ಲಿ ಪಕ್ಷದ ವರಿಷ್ಠರೊಂದಿಗೆ ಯಾವುದೇ ಮಾತುಕತೆ ಆಗಿಲ್ಲ, ಯಾವುದೇ ಸೂಚನೆಯೂ ಲಭಿಸಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಪ್ರತಿಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿವೆ ಎಂಬ ಕುರಿತು ಪ್ರತಿಕ್ರಿಯಿಸಿ, ಇಲ್ಲಿಯವರೆಗೆ ಪ್ರತಿಪಕ್ಷಗಳು ಇಲ್ಲ ಎನ್ನುವ ವಾತಾವರಣವಿತ್ತು. ಈಗ ಪ್ರತಿಭಟನೆಗಳ ಮೂಲಕ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರೆ. ಪ್ರತಿಪಕ್ಷಗಳಾಗಿ ಇದು ಅವರ ಕೆಲಸ, ಅವರಿಗೆ ಅಭಿನಂದನೆಗಳು. ಸಂತೋಷ್‌ ಮನೆಗೆ ಪ್ರತಿಪಕ್ಷದವರಷ್ಟೆ ಅಲ್ಲ, ಸಚಿವ ಮುರುಗೇಶ ನಿರಾಣಿ ಸೇರಿ ಬಿಜೆಪಿ ಕಾರ್ಯಕರ್ತರೂ ತೆರಳಿ ಸಾಂತ್ವನ ಹೇಳಿ ಬಂದಿದ್ದಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ವೇಳೆ ಕೊಕ್‌?

ಬಿಜೆಪಿ ವರಿಷ್ಠರಿಗೆ ಈಗಾಗಲೆ ಸಂತೋಷ್‌ ನೀಡಿದ್ದ ಮಾಹಿತಿ ಲಭ್ಯವಾಗಿದೆ. ಇದೀಗ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ವಿಚಾರ ಗಂಭೀರವಾಗಿದೆ. ವ್ಯಕ್ತಿ ಸುಖಾಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಚುನಾವಣಾ ವರ್ಷದಲ್ಲಿ ಇಂತಹ ಸೂಕ್ಷ್ಮ ವಿಚಾರಗಳು ಗಂಭೀರವಾಗುತ್ತವೆ. ಪ್ರತಿಪಕ್ಷಗಳಿಗೆ ನಾವೆ ಕೋಲು ಕೊಟ್ಟು ಹೊಡೆಸಿಕೊಳ್ಳುವಂತಾಗುತ್ತದೆ. ಈ ಬಾರಿ 150 ಸ್ಥಾನ ಗೆದ್ದು ಅಧಿಕಾರ ಹಿಡಿಯುವುದು ಕಷ್ಟವಾಗಬಹುದು. ರಾಜೀನಾಮೆ ಪಡೆಯುವುದು ಸೂಕ್ತ ಎಂಬ ಅಭಿಪ್ರಾಯದಲ್ಲಿ ವರಿಷ್ಠರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈಶ್ವರಪ್ಪ ಅವರು ರಾಜೀನಾಮೆ ನೀಡಲು ಒಪ್ಪುತ್ತಿಲ್ಲ. ಪಕ್ಷದ ಹಿರಿಯ ಕಾರ್ಯಕರ್ತರಾದ್ಧರಿಂದ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ, ಮುಂದಿನ ಸಂಪುಟ ವಿಸ್ತರಣೆ ವೇಳೆ ಕೈಬಿಡಬಹುದು ಎಂದು ಮೂಲಗಳು ತಿಳಿಸಿವೆ.

ವಿರೋಧ ಪಕ್ಷದವರು ಹತಾಶರಾಗಿದ್ದಾರೆ. ಎಲ್ಲಾ ವಿಚಾರಗಳನ್ನು ತಿರುಚಿ ಹೇಳುತ್ತಿದ್ದಾರೆ. ನಾನು ಮಾತನಾಡುವುದಿಲ್ಲ ಎನ್ನುತ್ತಾರೆ. ಎಲ್ಲಾ ವಿಚಾರಗಳಿಗೂ ಸ್ಪಂದಿಸಿ ಪರಿಹಾರ ನೀಡುತ್ತಿರುವುದ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಪರಿಹಾರ ಬೇಕಾಗಿಲ್ಲ. ಸಮಸ್ಯೆಯ ಚರ್ಚೆ ಬೇಕಿಲ್ಲ. ಅದಕ್ಕೆ ಏನೋ ಹೇಳಿಕೆ ಕೊಡುವುದು ಮತ್ತೊಂದು ಹೇಳಿಕೆ ನೀಡುವುದು ಮಾಡುತ್ತಿದ್ದಾರೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಎಂದ ಡಿಕೆಶಿ

ಸಚಿವ ಈಶ್ವರಪ್ಪ ಅವರ ಮೂಲಕ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai) ಅವರೇ ಲಂಚ ಪಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ. ಸಚಿವರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿರುವ ಕಾರಣಕ್ಕೇ ರಾಜೀನಾಮೆ ಪಡೆಯದೆ ರಕ್ಷಣೆ ಮಾಡುತ್ತಿದ್ದಾರೆ ಎಂದರು.

ಭ್ರಷ್ಟಾಚಾರದ ಆರೋಪ ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂಬ ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಹಾಗೊಂದು ವೇಳೆ ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದರೆ ಪ್ರಕರಣ ದಾಖಲಿಸಲಿ. ನಮ್ಮ ಮೇಲೆ ಇಡಿ, ಸಿಬಿಐ ದಾಳಿ ಮಾಡಿಸಿರಲಿಲ್ಲವೇ? ಕರ್ನಾಟಕದ ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಅಲ್ಲಿನ ಗೋಡೆಗಳೂ ಕಾಸು ಕಾಸು ಎಂದು ಕೇಳುವ ಸ್ಥಿತಿ ಇದೆ. ಈ ವಿಚಾರ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹಾಗೂ ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ಅವರಿಗೂ ಗೊತ್ತು. ಅದೇ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಕೆಲಸ ಮಾಡುತ್ತಿದ್ದಾರೆ. ಈ ಪ್ರರಕಣವನ್ನು ನಾವು ತಾರಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ, ಜನರೇ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಸಂತೋಷ್‌ ಸಾವಿನ ಕುರಿತು ಅನುಮಾನ: ಸಿ.ಟಿ. ರವಿ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲಿಕೆ ಮಾಡಲು ಬರುವುದಿಲ್ಲ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ತಿಳಿಸಿದ್ದಾರೆ. ಸತ್ತವರ ಪರ ಸಮಾಜದಲ್ಲಿ ಸ್ವಾಭಾವಿಕವಾಗಿ ಸಿಂಪಥಿ ಇರುತ್ತದೆ. ನಾನು ಶಾಸಕನಾಗಿ ರಿಸ್ಕ್ ತೆಗೆದುಕೊಂಡು ₹5-10 ಲಕ್ಷದ ಕೆಲಸವನ್ನ ಮಾಡಿಸಿದ್ದೇನೆ. ಅಂಥದ್ದರಲ್ಲಿ ಮಂಜೂರಿ ಆಗದೇ ಕೋಟ್ಯಂತರ ರೂಪಾಯಿ ಕೆಲಸ ಮಾಡೋಕೆ ಬರುತ್ತಾ.? ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತ ಇರೋದು ಸ್ಪಷ್ಟ. ಸಂತೋಷನನ್ನ ನಮ್ಮ ಪಕ್ಷದ ಕಾರ್ಯಕರ್ತ ಅಂತಾನೂ ಹೇಳುತ್ತಾರೆ. ಆತ ರಾಹುಲ್ ಗಾಂಧಿ ಹೆಸರು ನಕಲು ಮಾಡಿ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದ ಅಂತಾ ಕೂಡ ಹೇಳುತ್ತಾರೆ.

ಸಾಮಾನ್ಯ ವ್ಯಕ್ತಿಗಳು ದೆಹಲಿಗೆ ಹೋಗಿ ಸುದ್ದಿಗೋಷ್ಠಿ ಮಾಡಲು ಆಗುತ್ತಾ.? ಅಷ್ಟೆಲ್ಲಾ ರಾಜಕಾರಣ ಗೊತ್ತಿರುವವನು ಆತ್ಮಹತ್ಯೆಗೆ ಯಾಕೆ ಶರಣಾದ.? ನಿಜವಾಗಲೂ ಆತ್ಮಹತ್ಯೆ ನಡೆದಿದ್ಯಾ? ಇಲ್ಲಾ ಇದರ ಹಿಂದೆ ಬೇರೆ ಏನಾದರೂ ಇದ್ಯಾ?ಈ ಎಲ್ಲದರ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು. ರಾಜೀನಾಮೆ ಕುರಿತು ಸ್ವತಃ ಈಶ್ವರಪ್ಪ, ರಾಜ್ಯ ಅಧ್ಯಕ್ಷರು, ಮುಖ್ಯಮಂತ್ರಿಯವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ವಿವಿಧೆಡೆ ಕಾಂಗ್ರೆಸ್‌ ಪ್ರತಿಭಟನೆ

ಗುತ್ತಿಗೆದಾರ ಸಂತೋಷ್‌ ಆರೋಪ ಮಾಡಿರುವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಕಾಂಗ್ರೆಸ್‌ ವತಿಯಿಂದ ಶಿವಮೊಗ್ಗ, ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದಲ್ಲಿ ಈಶ್ವರಪ್ಪ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಸೇರಿ ಅನೇಕರು ವಿಧಾನಸೌದದ ಎದುರು ಪ್ರತಿಭಟನೆ ನಡೆಸಿದರು. ಈಶ್ವರಪ್ಪ ಅವರನ್ನು ವಜಾಗೊಳಿಸುವುದರ ಜತೆಗೆ ಬಂಧಿಸುವಂತೆ ಒತ್ತಾಯಿಸಿ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬೇರೆಡೆಗೆ ಕೊಂಡೊಯ್ದರು.

ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ಸೇರಿದ್ದೇವೆ. ಆದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಸಂವಿಧಾನದ ಮೂಲಭೂತ ಉದ್ದೇಶಗಳನ್ನು ನಾಶ ಮಾಡಲಾಗುತ್ತಿದೆ. ಹಿರಿಯ ಸಚಿವ ಈಶ್ವರಪ್ಪ ಕೊಲೆಯ ಆರೋಪ ಹೊತ್ತಿದ್ದು, ಎಫ್ಐಆರ್ ದಾಖಲಾಗಿದೆ. ಇಂಥವರು ಅಧಿಕಾರದಲ್ಲಿ ಮುಂದುವರಿಯಲು ಹೇಗೆ ಸಾಧ್ಯ? ಸಂವಿಧಾನದಲ್ಲಿ ಇದಕ್ಕೆ ಎಲ್ಲಿ ಅವಕಾಶ ಇದೆ?ಅವರನ್ನು ಬಂಧಿಸಿ, ಜೈಲಿಗೆ ಹಾಕದಿರಲು ಹೇಗೆ ಸಾಧ್ಯ?

-ರಣದೀಪ್‌ಸಿಂಗ್‌ ಸುರ್ಜೇವಾಲ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ
Exit mobile version