Site icon Vistara News

Seer Suicide | ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣ; ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ

ಕಣ್ಣೂರು ಮಠ

ರಾಮನಗರ: ಕಂಚುಗಲ್ ಬಂಡೇಮಠ ಬಸವಲಿಂಗ ಸ್ವಾಮೀಜಿ (Seer Suicide) ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿರುವ ಮೂವರು ಆರೋಪಿಗಳಲ್ಲಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ರಾಮನಗರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಆರೋಪಿ ಮೃತ್ಯುಂಜಯ ಸ್ವಾಮೀಜಿ ಕರೆದ ತಂದ ಪೊಲೀಸರು

ಬಂಡೇಮಠದ ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಇಬ್ಬರು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಾಗಿದ್ದು, ಮೊದಲಿನಿಂದಲೂ ಜಮೀನು ವಿಚಾರವಾಗಿ ಇಬ್ಬರ ನಡುವೆ ತಕರಾರು ನಡೆಯುತ್ತಿತ್ತು ಎನ್ನಲಾಗಿದೆ. ಜಾಗದ ವಿಚಾರವು ಕೋರ್ಟ್‌ನಲ್ಲಿತ್ತು, ಇದೇ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವೂ ಆಗಿತ್ತೆಂದು ತಿಳಿದು ಬಂದಿದೆ. ಮೊದಲಿನಿಂದಲೂ ಮನಸ್ತಾಪ ಇದ್ದ ಕಾರಣದಿಂದ ಹನಿಟ್ರ್ಯಾಪ್‌ ಮಾಡಿಸಿರುವ ಶಂಕೆ ವ್ಯಕ್ತವಾಗಿತ್ತು.

ಪಂಕಜಾ ಎಂಬ ಮತ್ತೊರ್ವ ಮಹಿಳೆ ಬಂಧನ?
ಬಂಡೇಮಠದ ಎಸ್‌ಎಂಎಸ್‌ ಶಾಲೆಯ ಆಡಳಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಕಜಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಹನಿಟ್ರ್ಯಾಪ್‌ ಪ್ರಕರಣದಲ್ಲಿ ಈಕೆಯ ಪಾತ್ರವೂ ಇರುವ ಶಂಕೆ ವ್ಯಕ್ತವಾಗಿದೆ. ಗುಪ್ತ ಸ್ಥಳದಲ್ಲಿ ಪಂಕಜಾ ವಿಚಾರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾನುವಾರ (ಅ.30) ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ (45) ಜತೆಗೆ ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಅಲಿಯಾಸ್‌ ಚಂದು (21), ತುಮಕೂರು ಮೂಲದ ನಿವೃತ್ತ ಶಿಕ್ಷಕನಾಗಿರುವ ಮಹದೇವಯ್ಯ (62)ಅವರನ್ನು ಮಾಗಡಿ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಬಂಧನವಾಗಿರುವ ಮೂವರಿಗೆ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ.

ರಾಮನಗರ ಪೊಲೀಸ್ ವರಿಷ್ಟಾಧಿಕಾರಿ ಕೆ. ಸಂತೋಷ್ ಬಾಬು

ಪ್ರಕರಣ ಸಂಬಂಧ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾಹಿತಿ ನೀಡಿದ್ದು, ಕಳೆದ ಸೋಮವಾರ 306 ಕೇಸ್‌ನಲ್ಲಿ ಪ್ರಕರಣ ದಾಖಲಾಗಿದ್ದ ಬಂಡೇಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಸ್ವಾಮೀಜಿಗಳ ನಡುವೆಯೇ ಮಠದ ವಿಚಾರದಲ್ಲಿ ಮನಸ್ತಾಪ ಇತ್ತು. ಹೀಗಾಗಿ ಈ ಮೂವರು ಪೂರ್ವನಿಯೋಜನೆ ಮಾಡಿಕೊಂಡು ವಿಡಿಯೊ ಮಾಡಿ, ಬಳಿಕ ಸಿಡಿ ಮಾಡಿ ಸುಮಾರು ಜನರಿಗೆ ಕಳುಹಿಸಿರುವುದು ಗಮನಕ್ಕೆ ಬಂದಿದೆ. ಶ್ರೀಗಳು ಇದೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ 306 ಕೇಸ್‌ನಡಿ ಅರೆಸ್ಟ್‌ ಮಾಡಲಾಗಿದೆ ಎಂದರು.

ನೀಲಾಂಬಿಕೆ ದೊಡ್ಡಬಳ್ಳಾಪುರದ ಮೂಲದವಳಾಗಿದ್ದು, ಇಲ್ಲಿನ ಪ್ರತಿಷ್ಠಿತ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಇನ್ನೊಬ್ಬ ಆರೋಪಿ ಮಹದೇವಯ್ಯ ತುಮಕೂರಿನವರಾಗಿದ್ದು, ನಿವೃತ್ತ ಶಿಕ್ಷಕನಾಗಿರುವ ಈತ ಸಿದ್ದಗಂಗಾ ಮಠದ ವಕೀಲನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Seer Suicide | ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಕಣ್ಣೂರು ಸ್ವಾಮೀಜಿ ಜತೆಗೆ ಇಬ್ಬರ ಬಂಧನ

Exit mobile version