Site icon Vistara News

Solar Eclipse 2022 | ದೇವಸ್ಥಾನಗಳಿಗೂ ಹಿಡಿದ ಸೂರ್ಯಗ್ರಹಣ; ಭಕ್ತರಿಲ್ಲದೇ ಬಣ ಬಣ

ಬೆಂಗಳೂರು: ನಿತ್ಯ ಭಕ್ತರಿಂದ ಗಿಜಿಗುಡುತ್ತಿದ್ದ ಪ್ರಸಿದ್ಧ ದೇವಸ್ಥಾನಗಳೆಲ್ಲವೂ ಮಂಗಳವಾರ ಬಣಗುಡುತ್ತಿದ್ದವು. ಸೂರ್ಯಗ್ರಹಣದ (Solar Eclipse 2022) ಎಫೆಕ್ಟ್‌ ದೇವಸ್ಥಾನಗಳ ಮೇಲೂ ಬೀರಿತ್ತು. ಸೂರ್ಯಗ್ರಹಣ ಆರಂಭಕ್ಕೂ ಮುನ್ನವೇ ದೇವಸ್ಥಾನಗಳು ಬಾಗಿಲು ಮುಚ್ಚಿದ್ದವು. ಮತ್ತೆ ಕೆಲವು ದೇವಸ್ಥಾನಗಳಲ್ಲಿ ಮಾತ್ರ ನಿತ್ಯಪೂಜೆ ಸಹಿತ ವಿವಿಧ ಪೂಜೆ-ಪುನಸ್ಕಾರವನ್ನು ನೆರವೇರಿವೆ.

ಸ್ಪರ್ಶ ಕಾಲ, ಮೋಕ್ಷ ಕಾಲದಲ್ಲಿ ಅಧಿದೇವತೆಗೆ ವಿಶೇಷ ಪೂಜೆ
ಅರಮನೆ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸ್ಪರ್ಶಕಾಲ, ಮೋಕ್ಷ ಕಾಲದಲ್ಲಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಸಾರ್ವಜನಿಕರ ನಿರ್ಬಂಧ ಹೇರಲಾಗಿತ್ತು. ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಅಗ್ರಹಾರದ ನೂರೊಂದು ಗಣಪತಿ ದೇವಾಲಯದಲ್ಲಿ ದೀಪಾವಳಿ, ಅಮಾವಾಸ್ಯೆ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು. ಗ್ರಹಣ ಸಂದರ್ಭದಲ್ಲಿ ಬಹುತೇಕ ದೇವಾಲಯದ ಬಾಗಿಲು ಬಂದ್ ಆಗಿದ್ದವು.

ವಿಷಕಂಠನಿಗೆ ಗ್ರಹಣದ ಅಭಿಷೇಕ
ಸೂರ್ಯಗ್ರಹಣ ಇದ್ದರೂ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಎಂದಿನಂತೆ ತೆರದಿತ್ತು. ಆದರೆ, ಭಕ್ತರು ಇಲ್ಲದೆ ದೇವಸ್ಥಾನ ಬಣಗುಡುತಿತ್ತು. ಗ್ರಹಣ ಆರಂಭ ಕಾಲದಲ್ಲಿ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಸಂಜೆವರೆಗೂ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕರಿಗೆ ದರ್ಶನ ನೀಡದ ಹಾಸನಾಂಬೆ
ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯ ಕೂಡ ಬಂದ್ ಆಗಿತ್ತು. ಹಾಸನಾಂಬೆಯ ಮುಖ್ಯದ್ವಾರವನ್ನು ಮುಚ್ಚಲಾಗಿತ್ತು. ಈ ವೇಳೆ ಸಾರ್ವಜನಿಕರಿಗೂ ಪ್ರವೇಶ ನಿಷೇಧಿಸಲಾಗಿತ್ತು.

ಮಂತ್ರಾಲಯದಲ್ಲಿ ಪೂಜೆ-ಪುನಸ್ಕಾರಕ್ಕೆ ನಿರ್ಬಂಧ; ಭಕ್ತರಿಗೆ ಪ್ರವೇಶ ಮುಕ್ತ
ಗ್ರಹಣ ಹಿನ್ನೆಲೆ ಮಂತ್ರಾಲಯದಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೆ, ದಿನನಿತ್ಯದ ಪೂಜೆ- ಪುನಸ್ಕಾರಕ್ಕೆ ಅವಕಾಶ ಇರಲಿಲ್ಲ. ಗ್ರಹಣದ ಬಳಿಕ ರಾಯರ ಮಠದಲ್ಲಿ ಗ್ರಹಣ ಶಾಂತಿ ಹೋಮವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ನಡೆದಿದೆ.

ಕೋಲಾರದಲ್ಲಿ ಬಂದ್‌ ಆದ ಕೋಲಾರಮ್ಮ, ಸೋಮೇಶ್ವರ
ಕೋಲಾರ ಜಿಲ್ಲೆಯ ಐತಿಹಾಸಿಕ ಹಾಗೂ ಮುಜರಾಯಿ ಇಲಾಖೆಯ ದೇವಾಲಯಗಳಾದ ಕೋಲಾರಮ್ಮ, ಸೋಮೇಶ್ವರ, ಕುಡುಮಲೆ ವಿನಾಯಕ ದೇವಾಲಯ, ಬಂಗಾರು ತಿರುಪತಿ, ಚಿಕ್ಕ ತಿರುಪತಿ ಸೇರಿದಂತೆ ಹಲವು ದೇವಾಲಗಳು ಇಂದು ಅಪರಾಹ್ನ ೧೨ ಗಂಟೆಯಿಂದ ಬಂದ್‌ ಆಗಿದ್ದು, ಸಂಜೆ‌ ೭ರ ನಂತರ ದೇವಾಲಯಗಳು ತೆರೆಯಲಿವೆ.

ರಾಮನಗರದ ರಾಮದೇವರ ಬೆಟ್ಟವೂ ಬಂದ್‌
ರಾಮನಗರ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಾದ ಕನಕಪುರದ ಕಬ್ಬಾಳಮ್ಮ, ಸಾವನದುರ್ಗ, ಚನ್ನಪಟ್ಟಣದ ಅಪ್ರಮೇಯ ಹಾಗೂ ರಾಮದೇವರ ಬೆಟ್ಟ, ಮಾಗಡಿ ಶ್ರೀರಂಗನಾಥಸ್ವಾಮಿ ದೇವಸ್ಥಾನ ಬಾಗಿಲು ಮುಚ್ಚಿದ್ದವು. ಸಂಜೆ ಮೋಕ್ಷ ಕಾಲದ ಬಳಿಕ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿತ್ತು.

ಬಣಗುಡುತ್ತಿದ್ದ ಹುಲಿಗೆಮ್ಮ ದೇಗುಲ
ಕೊಪ್ಪಳ ಜಿಲ್ಲೆಯ ಎರಡು ದೇವಾಲಯಗಳು ಮಧ್ಯಾಹ್ನದಿಂದಲೇ ಬಂದ್‌ ಆಗಿದ್ದವು. ಹುಲಿಗೆಮ್ಮದೇವಿ ದೇವಸ್ಥಾನ, ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಭಕ್ತರು ಇಲ್ಲದೇ ಬಣಗುಡುತ್ತಿದ್ದವು. ಮಧ್ಯಾಹ್ನ 4 ಗಂಟೆ ನಂತರ ಸಂಜೆ 7 ಗಂಟೆಯವರೆಗೂ ಬಂದ್ ಆಗಿದ್ದವು. ಗ್ರಹಣ ವಿಮೋಚನೆಯ ನಂತರ ಶುದ್ಧೀಕರಿಸಿ ಪೂಜೆಯ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ನುಗ್ಗಿಕೇರಿ ಆಂಜನೇಯ, ಓಂಕಾರೇಶ್ವರದಲ್ಲಿ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧ
ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನ ಸೇರಿದಂತೆ ಸೋಮೇಶ್ವರ ದೇವಸ್ಥಾನ ಬಂದ್ ಆಗಿದ್ದವು. ಗ್ರಹಣ ಬಿಟ್ಟ ನಂತರ ಶುದ್ಧೀಕರಣ ಮಾಡಿ ಸಂಜೆಯ ನಂತರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮುಂಜಾನೆ ಎಂದಿನಂತೆ ನಿತ್ಯ ಪೂಜೆ ನೆರವೇರಿದ್ದವು. 12:30ರ ನಂತರ ದೇವಾಲಯ ಬಂದ್ ಮಾಡಿ, ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಯಿತು. ಇತ್ತ ಭಾಗಮಂಡಲದ ಭಗಂಡೇಶ್ವರ ದೇವಾಲಯ, ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಸಂಜೆ 7 ಗಂಟೆಯ ನಂತರ ಶಾಂತಿಪೂಜೆ ಮಾಡಲಾಗುವುದು. ಬಳಿಕ ಎಂದಿನಂತೆ ಪೂಜಾ ಕೈಂಕರ್ಯ ಆರಂಭವಾಗಲಿದೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನಲ್ಲಿರುವ ನಿಮಿಷಾಂಭ ದೇವಾಲಯ ಹಾಗೂ ಪಾಂಡವಪುರ ತಾಲೂಕಿನ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ ಹಾಗೂ ಯೋಗಾನರಸಿಂಹ ಸ್ವಾಮಿ ದೇವಾಲಯಗಳು ಸೇರಿದಂತೆ ಹಲವು ದೇವಾಲಯಗಳು ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದವು.

ಕಪಿಲೇಶ್ವರನಿಗೆ ಬಿಲ್ವಪತ್ರೆ ಅರ್ಪಣೆ
ಬೆಳಗಾವಿಯ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ ನೆರವೇರಿಸಲಾಯಿತು. ಎಂದಿನಂತೆ ಪೂಜಾ ಕೈಂಕರ್ಯ ಇದ್ದರೂ ಭಕ್ತರಿಗೆ ಪ್ರವೇಶ ಇರಲಿಲ್ಲ. ಸೂರ್ಯಗ್ರಹಣ ವೇಳೆ ಬಿಲ್ವಪತ್ರೆಗಳಿಂದ ಶಿವಲಿಂಗ ಸಂಪೂರ್ಣವಾಗಿ ಆವೃತವಾಗಿತ್ತು.

ಮಡಿವಂತಿಕೆಯಿಂದ ದೂರ ಉಳಿದ ಸೂಗುರೇಶ್ವರ
ರಾಯಚೂರು ಜಿಲ್ಲೆಯ 800 ವರ್ಷಗಳ ಹಳೆಯ ದೇವಸಗೂರಿನ ಸೂಗುರೇಶ್ವರ ದೇವಸ್ಥಾನದಲ್ಲಿ ಗ್ರಹಣದ ಛಾಯೆ ಇರಲಿಲ್ಲ.‌ ಸೂರ್ಯಗ್ರಹಣ ಗೋಚರವಾದರೂ ಈ ದೇವಸ್ಥಾನದಲ್ಲಿ ಪೂಜೆ- ಪುನಸ್ಕಾರಗಳಿಗೆ ಯಾವುದೇ ತಡೆ ಇರಲಿಲ್ಲ. ಈ ದೇಗುಲದಲ್ಲಿ ಗ್ರಹಣದೋಷದ ಬಾಲಗಲ್ಲು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಲ್ಲಿ ಸೂರ್ಯ-ಚಂದ್ರರ ಚಿತ್ರ ಇದ್ದು, ಯಾವುದೇ ಗ್ರಹಣ ತಟ್ಟಲ್ಲ ಎಂಬುದು ಭಕ್ತರ ನಂಬಿಕೆಯಾಗಿದೆ.

ಗೋಕರ್ಣ ಮಹಾಬಲೇಶ್ವರ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಇಳಿಕೆ
ಸೂರ್ಯಗ್ರಹಣ ಹಿನ್ನೆಲೆ ಇತಿಹಾಸ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಇಳಿಕೆ ಆಗಿತ್ತು. ಬೆಳಗ್ಗೆ 6:30ರಿಂದ 9:30ರ ವರೆಗೆ ಮಹಾಬಲೇಶ್ವರನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಂಜೆ 4 ಗಂಟೆಯವರೆಗೆ ಯಾವುದೇ ಭಕ್ತರಿಗೆ ದೇವರ ದರ್ಶನಕ್ಕೂ ಅವಕಾಶ ಇರಲಿಲ್ಲ. ಜತೆಗೆ ಗ್ರಹಣ ಹಿನ್ನೆಲೆ ಮಧ್ಯಾಹ್ನ ದೇವಸ್ಥಾನದಲ್ಲಿ ಅಮೃತಾನ್ನ ಪ್ರಸಾದ ಇರಲಿಲ್ಲ. ಇನ್ನು ಸಂಜೆ ೪ ಗಂಟೆ ನಂತರ ಭಕ್ತರಿಗೆ ಆತ್ಮಲಿಂಗ ದರ್ಶನ ಮತ್ತು ಸ್ಪರ್ಶಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಇತ್ತ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ಎಂದಿನಂತೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಠಕ್ಕೆ ಬಂದ ಭಕ್ತರಿಗೆ ದರ್ಶನದ ಜತೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದರ್ಶನಕ್ಕೆ ಅವಕಾಶ ಇದ್ದರೂ, ಮಠದಲ್ಲಿ ಮಹಾಪೂಜೆ, ಅನ್ನಪ್ರಸಾದ ಇರಲಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ಮಹಾ ಪೂಜೆ ನಡೆಸಿ ದೇವಾಲಯನ್ನು ಮುಚ್ಚಲಾಯಿತು. ಶ್ರೀ ಮಾರಿಕಾಂಬೆ ಹಾಗೂ ದೇವಾಲಯದ ಆಡಳಿತಕ್ಕೆ ಒಳಪಟ್ಟ ಉಪದೇವಾಲಯಗಳಲ್ಲಿ ಬೆಳಗ್ಗೆ 8 ಗಂಟೆಗೆ ಮಹಾಪೂಜೆ ನಡೆಸಲಾಯಿತು. ದೇವಾಲಯದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ನಂತರ ಎಲ್ಲಾ ಸೇವೆಗಳು ಬಂದ್ ಆಗಿವೆ. ಸಂಜೆ ಗ್ರಹಣ ನಂತರ ರಾತ್ರಿ 9 ಗಂಟೆಗೆ ಮಹಾಪೂಜೆ ನಡೆಯಲಿದ್ದು, ಅ. ೨೬ರ ಬುಧವಾರ ಬೆಳಗ್ಗೆ 8 ಗಂಟೆಯಿಂದ ಎಂದಿನಂತೆ ನಿತ್ಯ ಪೂಜಾ ವಿನಿಯೋಗಗಳು ನಡೆಯಲಿವೆ.

ವಿಜಯನಗರ ಜಿಲ್ಲೆಯ ವಿಶ್ವ ವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷ ದೇಗುಲವು ಬಂದ್‌ ಆಗಿತ್ತು. ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ , ಹೊಸಪೇಟೆಯ ಶ್ರೀ ವಡಕರಾಯ ದೇಗುಲ, ಬುಕ್ಕಸಾಗರದ ಏಳು ಹೆಡೆ ನಾಗಪ್ಪ ದೇಗುಲಗಳೂ ಸಹ ಬಂದ್ ಆಗಿದ್ದವು.

ಇದನ್ನೂ ಓದಿ | Solar Eclipse 2022 | ನೆಹರು ತಾರಾಲಯದಲ್ಲಿಲ್ಲ ಗ್ರಹಣ ವೀಕ್ಷಣೆ; ಯೂಟ್ಯೂಬ್‌ ಸ್ಟ್ರೀಮಿಂಗ್‌ಗಷ್ಟೇ ಸೀಮಿತ

Exit mobile version