ರಮೇಶ ದೊಡ್ಡಪುರ ಬೆಂಗಳೂರು
“ರಾಜ್ಯದಲ್ಲಿನ ನಡೆಯುತ್ತಿರುವ ದೊಡ್ಡ ಪ್ರಮಾಣದ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ”
ಇದು ಯಾವುದೇ ಸಮೀಕ್ಷೆಯಾಗಲಿ, ಬಿಜೆಪಿ ವರಿಷ್ಠರ ಮೆಚ್ಚುಗೆಯಾಗಲಿ ಅಲ್ಲ. ತಮ್ಮ ಆಡಳಿತ ವೈಖರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ತಮಗೆ ತಾವೆ ಮಂಗಳವಾರ ಕೊಟ್ಟುಕೊಂಡ ಸರ್ಟಿಫಿಕೇಟ್. ಅಲ್ಲಿಗೆ, ಕಳೆದ ಏಳೆಂಟು ದಿನಗಳಿಂದ ಬೊಮ್ಮಾಯಿ ಅವರು ಹೊಂದಿದ್ದ ಒತ್ತಡ, ಈಗ ಅವರಲ್ಲಿರುವ ನಿರಾಳತೆಯ ಅರಿವಾಗುತ್ತದೆ.
ಇತ್ತೀಚೆಗಷ್ಟೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಚ್ಚರಿಯೆಂಬ ರೀತಿಯಲ್ಲಿ ಒಂದು ಸ್ಥಾನ ಹೆಚ್ಚುವರಿಯಾಗಿ ಗೆಲ್ಲಿಸಿ ಕೇಂದ್ರದಲ್ಲಿ ತಮ್ಮ ವರ್ಚಸ್ಸನ್ನು ಸಿಎಂ ಬೊಮ್ಮಾಯಿ ಹೆಚ್ಚಿಸಿಕೊಂಡಿದ್ದರು. ಆದರೆ ಒಂದೇ ವಾರದಲ್ಲಿ ಹೊರಬಂದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಕಟ್ಟಾಳುಗಳು ಸೋಲುಂಡು ಹಿನ್ನಡೆ ಅನುಭವಿಸಿದ್ದರು. ಮಾರನೆಯ ದಿನವೇ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪ್ರವಾಸ ಕರ್ನಾಟಕದಲ್ಲಿ ಇದ್ದದ್ದರಿಂದ ಬೊಮ್ಮಾಯಿಯವರಿಗೆ ಸಂಕಷ್ಟದ ಮುನ್ಸೂಚನೆ ಕಾಣಿಸಿತ್ತು. ಸಮಸ್ಯೆ ಎದುರಾಗುವುದಕ್ಕೂ ಮೊದಲೆ ಎಲ್ಲವನ್ನೂ ಸರಿಪಡಿಸಿಕೊಳ್ಳೋಣ ಎಂದು ನವದೆಹಲಿಗೆ ದೌಡಾಯಿಸಿದ್ದರು.
ಕರ್ನಾಟಕಕ್ಕೆ ಆಗಮಿಸಿದ ಜೆ.ಪಿ. ನಡ್ಡಾ, ʼರಾಜಕೀಯ ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ; ವಾತಾವರಣ ಹೇಗಿದೆ; ವಿಪಕ್ಷಗಳ ಬಗ್ಗೆ ಏನು ಮಾಹಿತಿ ಇದೆ ಎಂಬುದನ್ನು ಅರಿತಿರಬೇಕಾದ ಕುತೂಹಲ ಪ್ರವೃತ್ತಿ ಮತ್ತು ಜವಾಬ್ದಾರಿ ಇರಲೇಬೇಕುʼ ಎಂದು ಬೊಮ್ಮಾಯಿ ಅವರ ಮಾತನ್ನು ಉಲ್ಲೇಖಿಸಿದ್ದರು. “ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ರಾಜಕೀಯ ಕಾರ್ಯಕರ್ತರ ಜೀವನವೇ ಪಕ್ಷವಾಗಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು” ಎಂದು ಹೊಗಳಿಕೆಯ ಸುರಿಮಳೆಗೈದಿದ್ದರು. ಇದೆಲ್ಲದರಿಂದಾಗಿ, ತಮ್ಮ ಡೆಲ್ಲಿ ಟೂರ್ ಸಕ್ಸೆಸ್ ಆಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು.
ಮೋದಿಯವರನ್ನು ಮೆಚ್ಚಿಸುವ ಸವಾಲು
ನಡ್ಡಾ ಅವರನ್ನು ಸಮಾಧಾನಪಡಿಸಿದ್ದಾಯಿತು, ಆದರೆ ಮೋದಿಯವರನ್ನು ಮೆಚ್ಚಿಸುವ ಬಹುದೊಡ್ಡ ಸವಾಲುಸಿಎಂ ಬಸವರಾಜ ಬೊಮ್ಮಾಯಿ ಮುಂದಿತ್ತು. ಅದಕ್ಕಾಗಿ ಎಡೆಬಿಡದೆ, ದಿನರಾತ್ರಿ ಒಂದು ಮಾಡಿ ಬೊಮ್ಮಾಯಿ ಓಡಾಡಿದರು. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಣ್ಣ ಪ್ರಮಾಣದ ಎಡವಟ್ಟೂ ಆಗದಂತೆ ನೋಡಿಕೊಳ್ಳಲು ಎರಡೆರಡು ಬಾರಿ ಖುದ್ದು ತೆರಳಿ ಪರಿಶೀಲನೆ ನಡೆಸಿದರು. ಇಡೀ ವಿಶ್ವವೇ ನೋಡುತ್ತಿದ್ದ ಮೈಸೂರು ಯೋಗ ಕಾರ್ಯಕ್ರಮಕ್ಕಂತೂ ಮೈಯೆಲ್ಲ ಕಣ್ಣಾಗಿದ್ದರು.
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನಲ್ಲಿ ರಸ್ತೆ ಮೂಲಕ ಚಲಿಸುತ್ತಿದ್ದಾಗ ಅವರ ಕಾರನ್ನು ಕೆಲವರು ಅಡ್ಡಗಟ್ಟಿದ್ದರು. ಪಾಕಿಸ್ತಾನ ಗಡಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿರುವಾಗ ಪ್ರಧಾನಿ ಭದ್ರತಾ ವ್ಯವಸ್ಥೆಯಲ್ಲಾದ ವೈಫಲ್ಯ ಇಡೀ ದೇಶದಲ್ಲಿ ಚರ್ಚೆ ಆಗಿತ್ತು. ಕಳೆದ ವಾರದಿಂದ ದೇಶದಲ್ಲಿ ಅಗ್ನಿಪಥ ಕುರಿತ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ಯುವಕರು ತಮಗೆ ಉದ್ಯೋಗ ಭದ್ರತೆ ಇಲ್ಲವಾಗುತ್ತದೆ ಎಂದು ಪ್ರತಿಭಟನೆ ನಡೆಸಿದರೆ ಕೆಲವು ಟ್ಯೂಷನ್ ಮಾಫಿಯಾ ಕೈವಾಡವೂ ಇದೆ ಎಂಬ ಚರ್ಚೆಗಳು ನಡೆದಿವೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಅನೇಕರು ಕುದಿಯುತ್ತಿರುವುದಂತೂ ಸತ್ಯ. ಇದೆಲ್ಲದರ ಜತೆಗೆ ದಿನಂಪ್ರತಿ ರಾಹುಲ್ ಗಾಂಧಿಯವರನ್ನು ಇ.ಡಿ. ವಿಚಾರಣೆ ನಡೆಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೋಪ ಮಡುಗಟ್ಟುವಂತೆ ಮಾಡಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಕಾರನ್ನು ಅಡ್ಡಗಟ್ಟುವ ಸಂದರ್ಭಗಳು ಎದುರಾಗಬಹುದು. ಇಂತಹ ಒಂದು ಸಣ್ಣ ಘಟನೆ ನಡೆದರೂ ಪ್ರತಿಪಕ್ಷಗಳಿಗಿಂತಲೂ ತಮ್ಮದೇ ಪಕ್ಷದವರು ತಮ್ಮನ್ನು ಕೆಳಗಿಳಿಸಲು ಬಲವಾದ ಕಾರಣ ಸಿಗುತ್ತದೆ ಎಂದು ಸಿಎಂ ಅಂದಾಜಿಸಿದ್ದರು.
ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿಗಳೊಂದಿಗೆ ಪದೇಪದೆ ಸಭೆ ನಡೆಸಿದರು. ಬೆಂಗಳೂರೊಂದರಲ್ಲೆ ಬರೊಬ್ಬರಿ ೧೦ ಸಾವಿರ ಪೊಲೀಸರನ್ನು ರಸ್ತೆಯ ಪ್ರತಿ ೫೦-೧೦೦ ಮೀಟರ್‌ಗೊಬ್ಬರಂತೆ ನಿಯೋಜಿಸಲಾಯಿತು. ಒಂದು ಸಣ್ಣ ಭದ್ರತಾ ಲೋಪವೂ ಉಂಟಾಗದಂತೆ ಎಚ್ಚರಿಕೆ ವಹಿಸಿದರು. ಮೋದಿ ಸಾಗುವ ಮಾರ್ಗದಲ್ಲಿ ಸಣ್ಣ ರಸ್ತೆ ಗುಂಡಿಯೂ ಇರದಂತೆ ಸುಮಾರು ₹೩೦ ಕೋಟಿ ಖರ್ಚಿನಲ್ಲಿ ರಸ್ತೆ ಗುಂಡಿಯನ್ನೆಲ್ಲ ಮುಚ್ಚಿಸಿದರು. ಮೈಸೂರಿನಲ್ಲೂ, ಇನ್ನು ಯಾವತ್ತು ಡಾಂಬರು ಕಾಣುತ್ತದೋ ಎಂದುಕೊಂಡಿದ್ದ ರಸ್ತೆಗಳೆಲ್ಲ ಹೈವೇಗಳಂತೆ ನಳನಳಿಸಿದವು.
ಸಂಘರ್ಷಕ್ಕೆ ಬ್ರೇಕ್
ಎಲ್ಲಕ್ಕಿಂತ ಬೊಮ್ಮಾಯಿ ಅವರಿಗೆ ಕಾಡಿದ್ದು, ಮೈಸೂರು ಸ್ಥಳೀಯ ರಾಜಕಾರಣ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ನಡುವೆ ಅನೇಕ ದಿನಗಳಿಂದ ಇದ್ದ ಜಟಾಪಟಿ, ಮೋದಿ ಭಾಗವಹಿಸುವ ಕಾರ್ಯಕ್ರಮದ ಸಂಬಂಧದಲ್ಲೆ ತೀವ್ರವಾಗಿತ್ತು. ಹೇಳಿಕೇಳಿ ಇಬ್ಬರೂ ಮೋದಿಯವರಿಗೆ ಬೇಕಾದವರು. ರಾಮದಾಸ್ ಹಾಗೂ ಮೋದಿ ಅವರದ್ದು ದಶಕದ ಬಾಂಧವ್ಯ. ಪ್ರತಾಪ್ ಸಿಂಹ ಅವರು ವಿವಿಧ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಆಗಮಿಸುವುದರಿಂದ ಅವರನ್ನು ಕಂಡರೆ ಪ್ರೀತಿ ಇದೆ ಎನ್ನುವುದು ಸ್ವತಃ ಮೋದಿಯವರ ಬಾಯಿಂದಲೇ ತಿಳಿದು ಗೊತ್ತಿತ್ತು. ಈ ವಿಚಾರಕ್ಕೆ ತಾವು ಕೈ ಹಾಕುವುದು ಬೇಡ ಎಂದುಕೊಂಡ ಬೊಮ್ಮಾಯಿ, ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಕರ್ ಅವರಿಗೆ ಹೊಣೆ ನೀಡಿದರು.
ವೇದಿಕೆಯಲ್ಲಿ ಯಾರಿರಬೇಕು ಎನ್ನುವುದರಿಂದ ಯಾವ ಅತಿಥಿಗಳನ್ನು ಕರೆಯಬೇಕು ಎನ್ನುವವರೆಗೆ ಎಲ್ಲವನ್ನೂ ಹಿನ್ನೆಲೆಯಲ್ಲಿ ನಿಂತು ಸೋಮಶೇಖರ್ ನಿಭಾಯಿಸಿದರು. ಸೋಮವಾರ ಸಂಜೆ ನಡೆದ ಕಾರ್ಯಕ್ರಮ ಹಾಗೂ ಮಂಗಳವಾರ ಬೆಳಗಿನ ಯೋಗ ಕಾರ್ಯಕ್ರಮದಲ್ಲಿ ಎಲ್ಲಿಯೂ ಲೋಪವಾಗದಂತೆ ನೋಡಿಕೊಂಡರು. ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಗಾತ್ರದ ಬೆಳ್ಳಿಯ ಕಾಮಧೇನು ಪ್ರತಿಮೆಯನ್ನು ಪ್ರಧಾನಿಯವರಿಗೆ ಗಿಫ್ಟ್ ನೀಡಿದರು. ಸೋಮವಾರ ಬೆಳಗ್ಗೆ ೧೧.೫೫ಕ್ಕೆ ಮೋದಿ ಆಗಮಿಸಿದಾಗಿನಿಂದ ಜತೆಯಾದ ಬೊಮ್ಮಾಯಿ, ನಡುವೆ ವಿಶ್ರಾಂತಿಯ ಸಮಯ ಬಿಟ್ಟರೆ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ನವದೆಹಲಿ ವಿಮಾನ ಹತ್ತುವವರೆಗೂ ಮೋದಿ ಜತೆಗಿದ್ದರು.
ಧನಾತ್ಮಕ ಸಂದೇಶ?
ಒಟ್ಟಾರೆ ಪ್ರಧಾನಿ ಮೋದಿ ಅವರನ್ನು ಸಂಪೂರ್ಣ ಖುಷಿಯಾಗಿಡುವಲ್ಲಿ ಬೊಮ್ಮಾಯಿ ಯಶಸ್ವಿಯಾದರು. ಪ್ರಧಾನಿಯವರೂ ಇದನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ಸೋಮವಾರ ಕೊಮ್ಮಘಟ್ಟದ ಕಾರ್ಯಕ್ರಮದ ಕೊನೆಯಲ್ಲಿ, ʼಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಾಗುತ್ತದೆʼ ಎಂದು ಹೇಳಿದರು. ಪ್ರವಾಸದುದ್ದಕ್ಕೂ ಬೊಮ್ಮಾಯಿ ಅವರೊಂದಿಗೆ ನಗು ಮೊಗದಿಂದಲೇ ಮಾತನಾಡುತ್ತಿದ್ದದ್ದು ಕಾಣುತ್ತಿತ್ತು. ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆಯ ನಂತರ ಬಾಡಿದ್ದ ಬೊಮ್ಮಾಯಿ ಅವರ ಮುಖ ಹಾಗೂ ಒಣಗಿದ್ದ ಗಂಟಲು ಮೋದಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸರಿಯಾಗಿದ್ದವು.
ಅವರ ಧ್ವನಿಯಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು. ಇದೇ ಆತ್ಮವಿಶ್ವಾಸದಲ್ಲೆ ಬುಧವಾರ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ʼಪ್ರಧಾನಿ ನರೇಂದ್ರ ಮೋದಿಯವರು ಸುಶಾಸನ ಮತ್ತು ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಳ್ಳುವವರು. ಪ್ರಧಾನಿಯವರ ಮೆಚ್ಚುಗೆ ನನ್ನಲ್ಲಿ ಇನ್ನಷ್ಟು ಶಕ್ತಿಯನ್ನು ತುಂಬಿದೆ. ಈ ಮೆಚ್ಚುಗೆ ಸರ್ಕಾರ ಹೆಚ್ಚಿನ ದಕ್ಷತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಲು ಪುಷ್ಟಿ ನೀಡಿದೆʼ ಎಂದಿದ್ದಾರೆ.
ಬಿಜೆಪಿ ಮೂಲಗಳೂ ಇದೇ ಭಾವನೆಯನ್ನು ಪುಷ್ಠೀಕರಿಸುತ್ತಿವೆ. ಪ್ರಧಾನಿಯವರು ಧನಾತ್ಮಕತೆಯೊಂದಿಗೆ ದೆಹಲಿಗೆ ತೆರಳಿದ್ದಾರೆ ಎಂದರೆ ಮುಂದಿನ ಚುನಾವಣೆಗೆ ಬೊಮ್ಮಾಯಿ ನೇತೃತ್ವವೇ ಫಿಕ್ಸ್ ಎಂದು ಭಾವಿಸಲಾಗುತ್ತಿದೆ. ವಿಧಾನಸಭೆ ಚುನಾವಣೆಗೆ ಹೆಚ್ಚಿನ ಸಮಯ ಇಲ್ಲವಾದ್ಧರಿಂದ ನಾಯಕತ್ವ ವಿಚಾರವನ್ನು ಹೆಚ್ಚುಕಾಲ ಎಳೆದಾಡಲು ಬಿಜೆಪಿಗೆ ಸಾಧ್ಯವಿಲ್ಲ. ಈ ಕುರಿತು ಶೀಘ್ರದಲ್ಲೆ ನಿರ್ಧಾರವಾಗುವ ಸಾಧ್ಯತೆಯಿದೆ. ಬೆಂಗಳೂರು ಮಟ್ಟದಲ್ಲಿ ನಾಯಕರನ್ನು ಗೆದ್ದಿರುವ ಬೊಮ್ಮಾಯಿ, ಇದೇ ಸದಭಿಪ್ರಾಯವನ್ನು ನವದೆಹಲಿಯಲ್ಲೂ ಮೂಡಿಸಲು ಯಶಸ್ವಿಯಾದರೆ ೨೦೨೩ಕ್ಕೆ ತಜಮ್ಮದೇ ನಾಯಕತ್ವ ಫಿಕ್ಸ್ ಆಗಲಿದೆ.