ಬೆಂಗಳೂರು: ಒಂದೆಡೆ ಸ್ವಂತ ಕಾರಿನಲ್ಲಿ ಪ್ರವಾಸ ಮಾಡುತ್ತಿರುವ ಗ್ರಾಹಕರು, ಮತ್ತೊಂದು ಕಡೆ ರಜಾ ಕಾಲದ ಪ್ರಯಾಣ ಭತ್ಯೆ ವಿನಾಯಿತಿ (Leave Travel Concession) ನೀತಿಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಆಗುತ್ತಿರುವ ನಷ್ಟದ ಪರಿಣಾಮ ಪ್ರವಾಸೋದ್ಯಮ ವಲಯದಲ್ಲಿ (Tourism Industry) ತೊಡಗಿಸಿಕೊಂಡಿರುವ 95% ಕ್ಕೂ ಹೆಚ್ಚು ಸಣ್ಣಪುಟ್ಟ ಟೂರಿಸ್ಟ್ ಆಪರೇಟರ್‌ಗಳು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಸರ್ಕಾರ 2019ರಲ್ಲಿ ಎಲ್‌ಟಿಎ ನೀತಿಯಲ್ಲಿ ಬದಲಾವಣೆ ಜಾರಿಗೊಳಿಸಿತ್ತು. 12% ಜಿಎಸ್‌ಟಿ ಶ್ರೇಣಿಗೆ ಬರುವ ದೊಡ್ಡ ಟೂರಿಸ್ಟ್ ಆಪರೇಟರ್‌ಗಳಲ್ಲಿ ಸೇವೆ ಪಡೆದುಕೊಂಡು ಬಿಲ್ ಪಾವತಿಸುವ ಪ್ರವಾಸಿಗರಿಗೆ ಮಾತ್ರ ಎಲ್‌ಟಿಎ ಸೌಲಭ್ಯದ ವೆಚ್ಚವನ್ನು ಆದಾಯ ತೆರಿಗೆ ವಿನಾಯಿತಿಗೆ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ 5% ಜಿಎಸ್‌ಟಿ ಸ್ಲ್ಯಾಬ್‌ಗೆ ಬರುವ ಟೂರಿಸ್ಟ್ ಆಪರೇಟರ್‌ಗಳಿಂದ ಸೇವೆ ಪಡೆದರೆ ಅಂಥ ಉದ್ಯೋಗಿಗಳಿಗೆ ಎಲ್‌ಟಿಎ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಉದ್ಯೋಗಿಗಳ ಎಲ್‌ಟಿಸಿ ಸೌಲಭ್ಯವನ್ನು 5% ಜಿಎಸ್‌ಟಿ ಶ್ರೇಣಿಗೆ ಬರುವ ಸಣ್ಣಪುಟ್ಟ ಟೂರಿಸ್ಟ್ ಆಪರೇಟರ್‌ಗಳಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಶನ್ (Karnataka state travel operators association) ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ತಿಳಿಸಿದ್ದಾರೆ.
ಎರಡನೆಯದಾಗಿ ಎಲ್‌ಟಿಸಿ ಅಡಿಯಲ್ಲಿ ಪ್ರವಾಸ ಕೈಗೊಳ್ಳದವರು ಎಲೆಕ್ಟ್ರಾನಿಕ್ ಉಪಕರಣಗಳನ್ನು, ಉದಾಹರಣೆಗೆ ರೆಫ್ರಿಜರೇಟರ್, ವಾಷಿಂಗ್ ಮೆಷೀನ್ ಇತ್ಯಾದಿಗಳನ್ನು ಖರೀದಿಸಬಹುದು ಎಂದು ನೀತಿಯಲ್ಲಿ ಬದಲಾವಣೆ ತರಲಾಗಿದೆ. ಇದರಿಂದಲೂ ಟೂರಿಸ್ಟ್ ವಲಯಕ್ಕೆ ಸಿಗಬೇಕಿದ್ದ ಉತ್ತೇಜನವನ್ನು ಕಿತ್ತುಕೊಂಡಂತಾಗಿದೆ ಎಂದು ರಾಧಾಕೃಷ್ಣ ಹೊಳ್ಳ ಅವರು ವಿಸ್ತಾರ ನ್ಯೂಸ್‌ಗೆ ವಿವರಿಸಿದ್ದಾರೆ.
ಬೇಡಿಕೆ ಏನು? ಪ್ರವಾಸೋದ್ಯಮ ವಲಯ ದೊಡ್ಡ ಪ್ರಮಾಣದಲ್ಲಿ ಸ್ವ ಉದ್ಯೋಗ ಸೃಷ್ಟಿಸುತ್ತದೆ. ಆದ್ದರಿಂದ ಸಣ್ಣಪುಟ್ಟ ಟೂರಿಸ್ಟ್ ಆಪರೇಟರ್‌ಗಳನ್ನು ಉತ್ತೇಜಿಸಲು ಎಲ್‌ಟಿಸಿ ಸೌಲಭ್ಯವನ್ನು 5% ಜಿಎಸ್‌ಟಿ ನೀಡುವ ಟೂರಿಸ್ಟ್ ಉದ್ದಿಮೆಗೂ ವಿಸ್ತರಿಸಬೇಕು. ಎರಡನೆಯದಾಗಿ ಎಲ್‌ಟಿಸಿ ಸೌಲಭ್ಯವನ್ನು ಎಲೆಕ್ಟ್ರಾನಿಕ್ ಉಪಕರಣ ಖರೀದಿಗೆ ನೀಡಬಾರದು. ಅದು ಟೂರಿಸ್ಟ್ ವಲಯಕ್ಕೇ ಸಿಗುವಂತಿರಬೇಕು ಎಂದು ಸಂಘಟನೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.