ಮೈಸೂರು: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗಮನ ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ಸಹ ಒಂದು. ಇಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪುನಃ ಸ್ಪರ್ಧೆ ಮಾಡುತ್ತಿರುವುದು ಒಂದು ಕಡೆಯಾದರೆ, ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಯಾರು ಎಂಬ ಪ್ರಶ್ನೆ ಮೂಡಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪರ್ಧೆ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ. ಆದರೆ, ವಿಜಯೇಂದ್ರ ಸ್ಪರ್ಧೆ ಮಾಡದೇ ಇದ್ದರೆ ಆ ಸ್ಥಾನಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್. ಸದಾನಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ಬಾರಿ ಯತೀಂದ್ರ ವಿರುದ್ಧ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ಇತ್ತು. ಇದು ವರುಣದಲ್ಲಿ ಒಂದು ಮಟ್ಟಿನ ಸಂಚಲವನ್ನು ಸೃಷ್ಟಿ ಮಾಡಿತ್ತು. ವಿಜಯೇಂದ್ರ ಪರವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೂ ಅಣಿಯಾಗಿದ್ದರು. ಆದರೆ, ಕಡೇ ಘಳಿಗೆಯಲ್ಲಿ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಯಿತು. ಇದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಮತ್ತೆ ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆ. ಆದರೆ, ಈಗಾಗಲೇ ಶಿಕಾರಿಪುರದಲ್ಲಿ ಸ್ಪರ್ಧೆ ನಡೆಸಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ವರುಣದಿಂದ ಸ್ಪರ್ಧೆ ಮಾಡುವ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರಿಗೂ ಮನಸ್ಸಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: Ram Navami 2023: ಶ್ರೀರಾಮ ತಪಸ್ಸು-ಸಂಯಮದ ಸಾಕಾರ; ದೇಶದ ಜನರಿಗೆ ರಾಮ ನವಮಿ ಶುಭ ಕೋರಿದ ಪ್ರಧಾನಿ ಮೋದಿ
ಸಿದ್ದರಾಮಯ್ಯ ವಾಗ್ದಾಳಿ
ಬುಧವಾರ ರಾಜ್ಯ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡುತ್ತಿದ್ದಂತೆ ವರುಣದಲ್ಲಿ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಿ.ವೈ. ವಿಜಯೇಂದ್ರ ಮೇಲೆ ಹರಿಹಾಯ್ದಿದ್ದರು. ಇದೂ ಸಹ ವಿಜಯೇಂದ್ರ ಸ್ಪರ್ಧೆ ಬಗ್ಗೆ ಪುಕಾರು ಹಬ್ಬಲು ಕಾರಣವಾಗಿತ್ತು. ಇನ್ನು ಒಂದು ವೇಳೆ ವರುಣದಲ್ಲಿ ಸ್ಪರ್ಧೆ ಮಾಡಲು ವಿಜಯೇಂದ್ರ ಒಪ್ಪದೇ ಹೋದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬಿ.ಎನ್. ಸದಾನಂದ ಸ್ಪರ್ಧೆ ಬಹುತೇಕ ಖಚಿತ
ವಿಜಯೇಂದ್ರ ವರುಣದಿಂದ ಸ್ಪರ್ಧೆ ಮಾಡದೆ ಹೋದರೆ ಬಿ.ಎನ್. ಸದಾನಂದ ಅವರ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದೆ. ಕ್ಷೇತ್ರದಲ್ಲಿ 60 ಸಾವಿರ ಲಿಂಗಾಯತ, ವೀರಶೈವ ಮತದಾರರು ಇದ್ದಾರೆ. ಸಮುದಾಯದ ಜತೆಗೆ ಇತರೆ ಮತದಾರರೊಂದಿಗೆ ಉತ್ತಮ ಒಡನಾಟವನ್ನು ಸದಾನಂದ ಅವರು ಹೊಂದಿದ್ದಾರೆ. ಎಂಡಿಸಿಸಿ ಬ್ಯಾಂಕ್ ಮೂಲಕ ರೈತರೊಂದಿಗೆ ನಂಟನ್ನು ಹೊಂದಿರುವುದರಿಂದ ಸ್ವಲ್ಪ ಕಷ್ಟಪಟ್ಟರೆ ಗೆಲುವು ಸಾಧ್ಯ ಎಂಬ ನಿಟ್ಟಿನಲ್ಲಿ ಅವರು ಸಹ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಪರಾಜಿತ ಅಭ್ಯರ್ಥಿ ಕಾ.ಪು. ಸಿದ್ದಲಿಂಗಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡ ಶರತ್ ಪುಟ್ಟಬುದ್ದಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಸಿದ್ದರಾಮಯ್ಯ ಸೋಲಿಸಲು ಬೇಕಿರುವುದು ಇನ್ನು 20 ಸಾವಿರ ಮತವಷ್ಟೇ: ಸದಾನಂದ
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬೇಕಿರುವುದು ಇನ್ನು ಹೆಚ್ಚುವರಿಯಾಗಿ 15ರಿಂದ 20 ಸಾವಿರ ಮತಗಳು ಮಾತ್ರ. ಬಿಜೆಪಿ ಖಂಡಿತ ಕಾಂಗ್ರೆಸ್ ವಿರುದ್ಧ ಜಯ ಸಾಧಿಸುತ್ತದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್. ಸದಾನಂದ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!
ಅವರು ವಿಸ್ತಾರ ನ್ಯೂಸ್ ಜತೆ ಮಾತನಾಡಿ, ವರುಣ ಕ್ಷೇತ್ರದ ಇತಿಹಾಸ, ಅಂಕಿ-ಅಂಶಗಳನ್ನು ತೆಗೆದು ನೋಡಿದಾಗ ಇದು ತಿಳಿಯುತ್ತದೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ 60 ಸಾವಿರ ಮತ ಇದೆ. ಗೆಲುವಿಗೆ ಬೇಕಿರುವ ಹೆಚ್ಚುವರಿ ಮತಗಳನ್ನು ಕ್ರೋಢೀಕರಿಸಬೇಕಿದೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ನಾವು ನಾಲ್ಕು ಜಿಲ್ಲಾ ಪಂಚಾಯಿತಿ ಸದಸ್ಯರು ಗೆದ್ದಿದ್ದೆವು. ವಿಜಯೇಂದ್ರ ಸ್ಪರ್ಧಿಸಿದರೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ನಾನೂ ಸಿದ್ದರಾಮಯ್ಯ ಅವರನ್ನು ಎದುರಿಸಲು ಸಜ್ಜಾಗಿದ್ದೇನೆ. ಸ್ಥಳೀಯವಾಗಿ ಅನೇಕ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಹೇಳಿದರು.