Site icon Vistara News

ವಿಸ್ತಾರ ಸಂಪಾದಕೀಯ: ಉದ್ಯಮಗಳು ಕರ್ನಾಟಕದ ಕೈ ತಪ್ಪದಿರಲಿ

Vistara Editorial, Karnataka Should not let the industry to other states

ಬೆಂಗಳೂರಿಗೆ (Bangalore) ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ (Hosur) ದೊಡ್ಡ ಕಂಪನಿಗಳು ಹೆಚ್ಚಿನ ಬಂಡವಾಳ (Global Investment) ಹೂಡಲು ಮುಂದಾಗಿದ್ದು, ಬೆಂಗಳೂರಿನ ಉದ್ಯಮಗಳು ಹಾಗೂ ಉದ್ಯೋಗಗಳು ತಮಿಳುನಾಡಿನ ಪಾಲಾಗಲಾರಂಭಿಸಿವೆಯೇ ಎಂಬ ಆತಂಕ ಮೂಡಲಾರಂಭಿಸಿದೆ. ಇದೀಗ ನಡೆಯುತ್ತಿರುವ ʼತಮಿಳುನಾಡು ಜಾಗತಿಕ ಹೂಡಿಕೆದಾರರ ಶೃಂಗಸಭೆ 2024ʼಯನ್ನು (Tamil Nadu Global Investors meet 2024) ಗಮನಿಸಿದರೆ, ಈಗಾಗಲೇ ನಮ್ಮ ರಾಜ್ಯಕ್ಕೆ ಸುಮಾರು 12 ಸಾವಿರ ಕೋಟಿ ರೂಪಾಯಿಯ ಬಂಡವಾಳ ಮಿಸ್ ಆಗಿರುವುದು ಕಂಡುಬಂದಿದೆ. ತಮಿಳುನಾಡಿನ ಹೊಸೂರಿನಲ್ಲಿ 12 ಸಾವಿರ ಕೋಟಿ ರೂ. ಬಂಡವಾಳ ಹೂಡಿ ಫ್ಯಾಕ್ಟರಿ ಸ್ಥಾಪಿಸಲು ಟಾಟಾ ಎಲೆಕ್ಟ್ರಾನಿಕ್ಸ್ (TATA electronics) ಅಲ್ಲಿನ ಸರ್ಕಾರದ ಜತೆಗೆ ತಾತ್ವಿಕ ಒಪ್ಪಂದ ಮಾಡಿಕೊಂಡಿದೆ. ಇದರಿಂದ ತಮಿಳುನಾಡಿನಲ್ಲಿ 40 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಹೊಸೂರೇನೂ ಬೆಂಗಳೂರಿನಿಂದ ತುಂಬಾ ದೂರವಿಲ್ಲ; ಮಾತ್ರವಲ್ಲ; ಹೊಸೂರಿನಲ್ಲಿ ಈಗಾಗಲೇ ನೆಲೆಗೊಳ್ಳುತ್ತಿರುವ ಹಾಗೂ ಮುಂದೆ ನೆಲೆಗೊಳ್ಳಲಿರುವ ದೊಡ್ಡ ಉದ್ಯಮಗಳ ಮಾಲಿಕರು, ಸಿಬ್ಬಂದಿಗಳೆಲ್ಲ ರಾಷ್ಟ್ರೀಯ- ಅಂತಾರಾಷ್ಟ್ರೀಯ ಸಂಪರ್ಕಕ್ಕಾಗಿ ಬೆಂಗಳೂರನ್ನೇ ಅವಲಂಬಿಸಬೇಕು! ಯಾಕೆಂದರೆ ಹೊಸೂರಿಗೆ ಅತ್ಯಂತ ನಿಕಟ ವಿಮಾನ ನಿಲ್ದಾಣವೆಂದರೆ ಬೆಂಗಳೂರಿನದೇ ಆಗಿದೆ. ವಸತಿಗಾಗಿಯೂ ಅಲ್ಲಿನವರು ಇಲ್ಲಿಗೇ ಬರಲು ಇಚ್ಛಿಸುತ್ತಾರೆ. ಹೀಗಾಗಿ, ಈ ಉದ್ಯಮಗಳು ನೆಲ ಒಂದನ್ನು ಹೊರತುಪಡಿಸಿದರೆ ಇನ್ನೆಲ್ಲವನ್ನೂ ಕರ್ನಾಟಕದಿಂದಲೇ ಪಡೆಯುತ್ತವೆ. ತೆರಿಗೆ ಲಾಭ, ಉದ್ಯೋಗ ಲಾಭ ಮಾತ್ರ ತಮಿಳುನಾಡಿಗೆ. ತಮಿಳುನಾಡಿಗೆ ಉದ್ಯಮ ಹಾಗೂ ಉದ್ಯೋಗಗಳು ಬಾರದಿರಲಿ ಎಂಬುದು ಈ ಮಾತಿನ ಅರ್ಥವಲ್ಲ. ಆದರೆ ಬೆಂಗಳೂರಿಗೆ ಬರಬೇಕಾದ ಉದ್ಯಮಗಳು ಯಾಕೆ ಅತ್ತ ತೆರಳುತ್ತಿವೆ ಎಂಬುದನ್ನು ನಾವು ಯೋಚಿಸಬೇಕಿದೆ(vistara editorial).

ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ CBRE ಸೌತ್ ಏಷ್ಯಾ ಇತ್ತೀಚೆಗೆ ʼಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳುʼ (MSME) ಕುರಿತು ನೀಡಿರುವ ವರದಿಯ ಪ್ರಕಾರ ಭಾರತದ ಎಂಎಸ್‌ಎಂಇ ವಲಯಕ್ಕೆ ಮಹತ್ವದ ಕೊಡುಗೆ ನೀಡಿರುವ ರಾಜ್ಯಗಳಲ್ಲಿ ಕರ್ನಾಟಕದ ಸ್ಥಾನ ಆರನೆಯದು. ತಮಿಳುನಾಡು ನಮ್ಮನ್ನು ಮೀರಿಸಿ ಎಷ್ಟೋ ಮುನ್ನಡೆ ಸಾಧಿಸಿದ್ದು, ಎರಡನೇ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಬಡ ರಾಜ್ಯವೆಂದೇ ಹೆಸರಾಗಿದ್ದ ಉತ್ತರ ಪ್ರದೇಶ ಕೂಡ ನಮ್ಮನ್ನು ದಾಟಿ ಮುನ್ನಡೆದಿದ್ದು, ಅಗ್ರ ಮೂರು ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ (17% ಕೊಡುಗೆ), ತಮಿಳು ನಾಡು (10%), ಉತ್ತರ ಪ್ರದೇಶ (9%), ರಾಜಸ್ಥಾನ, ಗುಜರಾತ್‌ (7%) ಹೀಗಿದೆ ಚಿತ್ರಣ. ಕರ್ನಾಟಕ ಹಿಂದುಳಿಯಲು ಕಾರಣವೇನು? ದೊಡ್ಡ ಉದ್ಯಮಗಳು ಕೈ ತಪ್ಪುತ್ತಿರುವುದಕ್ಕೂ, ಸಣ್ಣ ಉದ್ಯಮಗಳು ಬೇರೆ ರಾಜ್ಯಗಳಲ್ಲಿ ನಮಗಿಂತ ಹೆಚ್ಚಿನ ಅನುಕೂಲ ಕಂಡುಕೊಂಡಿರುವುದಕ್ಕೂ ಏನಾದರೂ ಸಂಬಂಧ ಇದೆಯೇ? ವಿಶ್ಲೇಷಿಸಬೇಕಿದೆ.

ಕೆಲವು ವರ್ಷಗಳ ಹಿಂದೆ ದೇಶಿ ಹಾಗೂ ಜಾಗತಿಕ ಹೂಡಿಕೆದಾರರಿಗೆ ಮೊದಲು ನೆನಪಾಗುತ್ತಿದ್ದ ತಾಣವೇ ಬೆಂಗಳೂರು. ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನಲ್ಲಿ ಕರ್ನಾಟಕ ದೇಶದಲ್ಲೇ ಉನ್ನತ ಶ್ರೇಣಿಯ ರಾಜ್ಯಗಳಲ್ಲಿ ಒಂದಾಗಿತ್ತು. ವಿದೇಶಿ ನೇರ ಹೂಡಿಕೆಯಲ್ಲೂ ಅತಿ ಹೆಚ್ಚು ಹೂಡಿಕೆ ಪಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಇದೆ. ದೇಶದಲ್ಲಿರುವ 100 ಯುನಿಕಾರ್ನ್‌ಗಳಲ್ಲಿ 40 ಕರ್ನಾಟಕದಿಂದ ಬಂದಿವೆ. 400 ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ಕೇಂದ್ರ ನೀತಿ ಆಯೋಗದ ಸೂಚ್ಯಂಕದಂತೆ ಆವಿಷ್ಕಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಕೋವಿಡ್ ನಂತರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿರುವ ಮೊದಲ ರಾಜ್ಯ ಕರ್ನಾಟಕ. ಜಿಎಸ್‌ಟಿ ಕೊಡುಗೆಯಲ್ಲಿ ಕರ್ನಾಟಕದ ಪಾತ್ರ ಎರಡನೆಯದು. ಅತ್ಯುತ್ತಮ ಕೈಗಾರಿಕಾ ನೀತಿ ನಮ್ಮದಾಗಿದೆ. ಪ್ರಾಕೃತಿಕ ಹಾಗೂ ಆಡಳಿತಾತ್ಮಕ ಅಂಶಗಳೆರಡೂ ಸೇರಿ ಇದನ್ನು ಸಾಧ್ಯವಾಗಿಸಿವೆ. ಹೊರಗಿನಿಂದ ಬಂದವರು ಬೆಂಗಳೂರಿನ ಹವಾಮಾನಕ್ಕೆ ಮಾರುಹೋಗಿ ಇಲ್ಲೇ ಉಳಿಯುತ್ತಾರೆ. ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ಉದ್ಯಮಿಗಳಿಗೆ ಪ್ರತಿಭಾವಂತ ಉದ್ಯೋಗಿಗಳೂ ಇಲ್ಲೇ ದೊರೆಯುವುದರಿಂದ ಬೆಂಗಳೂರು ಅಚ್ಚುಮೆಚ್ಚಾಗಿದೆ. ಎಲ್ಲವೂ ಸೇರಿ ಬೆಂಗಳೂರನ್ನು ಬ್ರ್ಯಾಂಡ್‌ ಆಗಿಸಿದ್ದವು. ಈ ಹೆಗ್ಗಳಿಕೆಯನ್ನು ಹೇಳಿಕೊಂಡು ಸುಮ್ಮನೆ ಉಳಿಯುವಂತಿಲ್ಲ ಎಂಬುದನ್ನು ಮೇಲಿನ ಹೊಸ ಬೆಳವಣಿಗೆಗಳು ತೋರಿಸಿವೆ. ಹೀಗಾಗಿ ಇದು ಎಚ್ಚೆತ್ತುಕೊಳ್ಳಬೇಕಾದ ಸಮಯ.

ಒಂದು ವರ್ಷದ ಹಿಂದೆ ಬಿದ್ದ ಭೀಕರ ಮಳೆಗೆ ಬೆಂಗಳೂರು ಕೆರೆಯಂತಾಗಿ ಹೋಗಿ, ಜನತೆ ಬೆಚ್ಚಿ ಬಿದ್ದಿದ್ದರು. ರಸ್ತೆ ಸೇರಿದಂತೆ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲದೆ ಹೋದರೆ ಎಲ್ಲ ಬಣ್ಣ ಮಸಿ ನುಂಗಿದಂತೆ ಆಗುತ್ತದೆ. ಅದಕ್ಕೆ ಸರ್ಕಾರ ಅವಕಾಶ ಕೊಡಬಾರದು. ತಮಿಳು ನಾಡು ಸೇರಿದಂತೆ ದಕ್ಷಿಣದ ಇತರ ರಾಜ್ಯಗಳು ನಮ್ಮ ಅವಕಾಶಗಳನ್ನು ಕಸಿಯಲು ಯತ್ನಿಸುತ್ತಲೇ ಇವೆ. ಅವರೂ ಪಡೆಯಲಿ. ಆದರೆ ಬೆಂಗಳೂರಿನ ಅವಕಾಶಗಳು ನಮ್ಮ ಕೈ ತಪ್ಪದಿರಲಿ. ರಾಜಧಾನಿ ಮಾತ್ರ ಬೃಹದಾಕಾರವಾಗಿ ಬೆಳೆಯುತ್ತಿರುವುದು ಹಾಗೂ ಎರಡನೇ- ಮೂರನೇ ಹಂತದ ನಗರಗಳು, ಉತ್ತರ ಕರ್ನಾಟಕದ ನಗರಗಳು ಸೊರಗುತ್ತಿರುವುದು ಕಾಣುತ್ತಿದೆ. ಹೂಡಿಕೆ ಅಲ್ಲಿಯೂ ಆದಾಗ ಸಮತೋಲನ ಸಾಧ್ಯ. ಇದಕ್ಕೆ ಸಮರ್ಪಕವಾದ ಸುಗಮ ಸಾರಿಗೆ ಸಂಪರ್ಕ ನಗರಗಳ ನಡುವೆ ಆಗಬೇಕು. ಕಾರ್ಪೊರೇಟ್‌ಗಳು ಬಯಸುವ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕ ಹಾಗೂ ಕ್ಷಿಪ್ರಗೊಳ್ಳಬೇಕು. ಶಾಸಕಾಂಗದ ಭಷ್ಟತೆ ಹಾಗೂ ಕಾರ್ಯಾಂಗದ ನಿಷ್ಕ್ರಿಯತೆ ತೊಲಗಬೇಕು. ಕೆಂಪು ಪಟ್ಟಿ ಇಲ್ಲವಾಗಿ, ಕೆಂಪು ಹಾಸು ಹಾಸಿದಾಗ ಮಾತ್ರ ಹೂಡಿಕೆದಾರರು ಒಲಿಯುತ್ತಾರೆ. ಸಣ್ಣ- ಕಿರು ಉದ್ಯಮಗಳಿಗೂ ಅನುಕೂಲಕರವಾದ ವಾತಾವರಣ ಮೂಡಿಸಬೇಕು. ತೆರಿಗೆ ಮತ್ತಿತರ ಕಿರುಕುಳಗಳು ತಪ್ಪಬೇಕು. ಈ ನಿಟ್ಟಿನಲ್ಲಿ ನಮ್ಮ ಆಡಳಿತಾತ್ಮಕ ವ್ಯವಸ್ಥೆ ಕಾರ್ಯಪ್ರವೃತ್ತವಾಗಲಿ. ಇನ್ನಷ್ಟು ಸುಸ್ಥಿರ ಹೂಡಿಕೆ ನಮ್ಮ ರಾಜ್ಯದಲ್ಲಿ ಆಗಲಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹದ್ದು ಮೀರುತ್ತಿರುವ ಮಾಲ್ಡೀವ್ಸ್ ಗೆ ಬುದ್ಧಿ ಕಲಿಸಲೇಬೇಕಿದೆ

Exit mobile version