Site icon Vistara News

ಜಲ ಕಂಟಕ: ಹೊಳೆಯಲ್ಲಿ ಕಾಲು ಜಾರಿ ಬಿದ್ದು ಯುವತಿ ಸಾವು; ಒಂದೇ ದಿನ ನೀರುಪಾಲಾದವರ ಸಂಖ್ಯೆ 13ಕ್ಕೇರಿಕೆ!

Young woman drowns in water

ಶಿವಮೊಗ್ಗ: ಹೊಳೆಯಲ್ಲಿ ಕಾಲು ಜಾರಿ ಬಿದ್ದು ಯುವತಿ ಮೃತಪಟ್ಟು, ಮತ್ತೊಬ್ಬ ಯುವತಿಯನ್ನು ರಕ್ಷಣೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ. ರಾಜ್ಯದ ವಿವಿಧೆಡೆ ಮಂಗಳವಾರ ಪ್ರತ್ಯೇಕ ಘಟನೆಗಳಲ್ಲಿ 12 ಮಂದಿ ನೀರುಪಾಲಾದ ಬೆನ್ನಲ್ಲೇ ಮತ್ತೊಬ್ಬ ಯುವತಿ ಹೊಳೆಯಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾಳೆ. ಇದರಿಂದ ಒಂದೇ ದಿನದಲ್ಲಿ ಜಲ ಕಂಟಕದಿಂದ ಸಾವಿಗೀಡಾದವರ ಸಂಖ್ಯೆ 13ಕ್ಕೇರಿದೆ.

ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಜಾತ್ರೆಗೆ ಉಜ್ಜನಿಪುರ ಗ್ರಾಮದ ಇಬ್ಬರು ಯುವತಿಯರು ಹೋಗಿದ್ದರು. ಹೊಳೆಯಲ್ಲಿ ಕಾಲು ತೊಳೆಯಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಇಬ್ಬರ ಪೈಕಿ ಒಬ್ಬ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮತ್ತೊಬ್ಬ ಯುವತಿಯನ್ನು ರಕ್ಷಣೆ ಮಾಡಲಾಗಿದೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ತಂದೆ-ಮಗ ಸೇರಿ ನಾಲ್ವರ ಸಾವು

ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿ ತಂದೆ-ಮಗ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಮೈಸೂರು ಕನಕಗಿರಿ ಬಡಾವಣೆ ನಿವಾಸಿಗಳೆಂದು ಗುರುತಿಸಲಾಗಿದೆ. ನಾಗೇಶ್ (40), ಪುತ್ರ ಭರತ್ (17), ಗುರು (32), ಮಹಾದೇವ್ (16) ಮೃತರು. ದೇವರ ಕಾರ್ಯಕ್ಕೆಂದು ಬಂದು ಕಾವೇರಿ ನದಿಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ನಾಗೇಶ್ ಮತ್ತು ಭರತ್ ಮೃತದೇಹ ಪತ್ತೆಯಾಗಿದ್ದು, ಗುರು, ಮಹಾದೇವ್ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident: ಮೈಸೂರು ರಸ್ತೆಯಲ್ಲಿ ಟಿಪ್ಪರ್‌ ವಾಹನದಡಿ ಸಿಲುಕಿ ದ್ವಿಚಕ್ರ ವಾಹನ ಸವಾರ ಅಪ್ಪಚ್ಚಿ

ಬಣ್ಣದಾಟ ಆಡಿ ಸ್ನಾನ‌ಕ್ಕಾಗಿ ನದಿಗೆ ತೆರಳಿದ್ದ ಯುವಕ‌ ಸಾವು

ಗದಗ: ಬಣ್ಣದಾಟ ಆಡಿ ನದಿಗೆ ಸ್ನಾನ‌ ಮಾಡಲು ತೆರಳಿದ್ದ ಯುವಕ‌ ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜ್‌ನಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಹಿರೇಹಡಗಲಿ‌ ಗ್ರಾಮದ ನಿವಾಸಿ ಯುವರಾಜ ವಿಶ್ವನಾಥ ಕೊಂಪಿ (23) ಮೃತ ದುರ್ದೈವಿ. ಹೋಳಿ ಹಬ್ಬ ಮುಗಿಸಿಕೊಂಡು ಸ್ನಾನಕ್ಕೆಂದು ಯುವಕ ಸ್ನೇಹಿತರ ಜತೆ, ಶಿಂಗಟಾಲೂರು ಏತ ‌ನೀರಾವರಿಯ ಬ್ಯಾರೇಜ್‌ಗೆ ಹೋಗಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾನೆ.

ಕೆರೆಯಲ್ಲಿ ಈಜಾಡಲು ಹೋಗಿ ಯುವಕ ನೀರುಪಾಲು

ಯಾದಗಿರಿ: ಕೆರೆಯಲ್ಲಿ ಈಜಾಡಲು ಹೋಗಿ ಯುವಕ ನೀರು ಪಾಲಾಗಿರುವುದು ಯಾದಗಿರಿ ತಾಲೂಕಿನ ಅರಕೇರಾ ಬಿ ಗ್ರಾಮದಲ್ಲಿ ನಡೆದಿದೆ. ಬಸವಲಿಂಗಪ್ಪ (18) ಮೃತ ಯುವಕ. ಮಂಗಳ ಬೆಳಗ್ಗೆ ಸ್ನೇಹಿತರ ಜತೆ ಬಣ್ಣದೋಕಳಿ ಆಡಿ ನಂತರ ತಮ್ಮನ ಜತೆ ಕೆರೆಗೆ ಈಜಾಡಲು ತೆರಳಿದ ಯುವಕ, ನೀರು ಪಾಲಾಗಿದ್ದಾನೆ. ಸ್ಥಳೀಯರು ಮೃತದೇಹ ಹೊರತೆಗೆದಿದ್ದಾರೆ.

ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ಉಡುಪಿ: ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (30) ಮೃತಪಟ್ಟವರು.

ಬೆಳಗ್ಗೆ ಮೀನು ಹಿಡಿಯಲೆಂದು ನಾಗರಮಠದ ಸೀತಾ ನದಿಗೆ ಯುವಕರು ಹೋಗಿದ್ದರು. ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಮುಳುಗುತ್ತಿರುವವರ ರಕ್ಷಣೆ ಮಾಡಲು ಸ್ಥಳೀಯರು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡಿನಲ್ಲಿ ಮೂವರ ಜೀವ ತೆಗೆದ ಬಿಸಿಲು

ಮೈಸೂರು: ಬೇಸಿಗೆಯ ಸೆಕೆ ತಾಳಲಾರದೆ ಕಪಿಲಾ ನದಿಗೆ ಇಳಿದ ಮೂವರು ಕಾರ್ಮಿಕರು, ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ನಡೆದಿದೆ
ಬಿಹಾರ ಮೂಲದ ಮಿಲನ್ (25), ಮೋಹನ್ (19), ತರುಣ್ (19) ಮೃತರು. ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಈಜಲು ತೆರಳಿದ್ದ ಯುವಕರು, ನೀರಿನಲ್ಲಿ ಮುಳುಗಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ | Self Harming: ಐಪಿಎಲ್‌ ಬೆಟ್ಟಿಂಗ್‌ನಲ್ಲಿ 1.5 ಕೋಟಿ ಕಳೆದುಕೊಂಡ ಪತಿ; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಕೃಷಿ ಹೊಂಡಕ್ಕೆ ಬಿದ್ದು ಯುವಕ ಸಾವು

ದೊಡ್ಡಬಳ್ಳಾಪುರ: ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿಯ ತೋಟದಲ್ಲಿ ನಡೆದಿದೆ. ಉಜ್ಜನಿ ಹೊಸಹಳ್ಳಿ ಗ್ರಾಮದ ಸುನೀಲ್ (30) ಮೃತ ವ್ಯಕ್ತಿ. ಸೋಮವಾರ ಹೋಳಿ ಹಬ್ಬ ಆಚರಿಸಿ‌ ಹೊಂಡದಲ್ಲಿ ಕೈ ಕಾಲು ತೊಳೆಯಲು ಹೋಗಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. 2 ತಿಂಗಳಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಬಿಹಾರ ಮೂಲದ ಕಾರ್ಮಿಕರ ಜತೆ ಹೋಳಿ ಆಚರಿಸಿದ್ದ. ಕಾರ್ಮಿಕರು ಕೃಷಿ ಹೊಂಡದ ಬಳಿ ಬಂದಾಗ ಸುನೀಲ್ ಮೃತದೇಹ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version