Site icon Vistara News

Children’s Day | ಮಕ್ಕಳಿಗೆ ಈ ಚಂದದ ಪುಸ್ತಕಗಳನ್ನು ಇಂದು ಗಿಫ್ಟ್‌ ಕೊಡಿ

children books

ಮಕ್ಕಳನ್ನು ಅವರದೇ ಲೋಕದಲ್ಲಿ ಮುಳುಗಿಸುವ, ಹೊಸ ಕಲ್ಪನೆಗಳ ಪ್ರಪಂಚವನ್ನು ವಿಸ್ತರಿಸುವ ಪುಸ್ತಕಗಳನ್ನು ನೀವು ಓದಲು ನೀಡಿದರೆ ಅದಕ್ಕಿಂತಲೂ ಸುಂದರ ಗಿಫ್ಟ್‌ ಇನ್ನೊಂದಿಲ್ಲ. ಇಂದು ಮೊಬೈಲ್‌ ಮುಂತಾದ ಸಾಧನಗಳು, ಇಂಟರ್‌ನೆಟ್‌ ಅವರ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದ್ದರೂ, ಒಮ್ಮೆ ಓದಿನ ಗೀಳು ಹತ್ತಿಸಿದರೆ ಅವರು ಅದರಿಂದ ತಪ್ಪಿಸಿಕೊಳ್ಳಲಾರರು. ಹಾಗೆ ಅವರನ್ನು ಎಂಗೇಜ್‌ ಆಗಿಸಬಲ್ಲ ಕನ್ನಡದ ಹತ್ತು ಕೃತಿಗಳು ಇಲ್ಲಿವೆ. ಹಲವು ತಲೆಮಾರುಗಳಿಂದಲೂ ಕನ್ನಡದ ಮಕ್ಕಳ ಅಭಿರುಚಿಯನ್ನು ರೂಪಿಸಿದ ಕೃತಿಗಳಿವು.

1.. ಬೊಮ್ಮನ ಹಳ್ಳಿಯ ಕಿಂದರಿ ಜೋಗಿ

ರಾಷ್ಟ್ರಕವಿ ಕುವೆಂಪು ಅವರು ಮಕ್ಕಳಿಗಾಗಿಯೇ ಬರೆದ ನಾಟಕ- ರೂಪಕವಿದು. ಇದನ್ನು ದೊಡ್ಡದಾಗಿ ಓದಿಕೊಳ್ಳಬಹುದು, ನಾಲ್ಕೆಂಟು ಮಕ್ಕಳು ಸೇರಿ ನಾಟಕವಾಗಿಯೂ ಆಡಬಹುದು. ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ, ಅದನ್ನು ಪರಿಹರಿಸಲು ಹಳ್ಳಿಯ ಮುಖಂಡನ ಪೇಚಾಟ, ಕಿಂದರಿ ಜೋಗಿಯ ಅದ್ಭುತ ಗುಹಾ ಮಾಯಾಲೋಕ- ಇವೆಲ್ಲವೂ ಮಕ್ಕಳನ್ನು ನಿಬ್ಬೆರಗುಗೊಳಿಸುತ್ತವೆ.

2. ಪಾತಾಳದಲ್ಲಿ ಪಾಪಚ್ಚಿ

ಚಾರ್ಲ್ಸ್ ಲುಡ್ವಿಗ್ ಡಾಡ್ಜ್‌ಸನ್‌ ಅವರು ಲೂಯಿ ಕರೋಲ್ ಎಂಬ ಹೆಸರಿನಲ್ಲಿ ಬರೆದ ʻಅಲೈಸ್ ಇನ್ ವಂಡರ್ಲ್ಯಾಂಡ್’ ಎಂಬ ವಿಶಿಷ್ಟ ಕೃತಿಯನ್ನು ನಾ. ಕಸ್ತೂರಿಯವರು ʼಪಾತಾಳದಲ್ಲಿ ಪಾಪಚ್ಚಿʼ ಎಂದು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪಾಪಚ್ಚಿ ಎಲ್ಲಾ ವಯಸ್ಸಿನವರಿಗೂ ಅಚ್ಚುಮೆಚ್ಚಿನವಳು. ದಿಡೀರನೆ ವಿಚಿತ್ರ ಲೋಕವೊಂದನ್ನು ಪ್ರವೇಶಿಸುವ ಪಾಪಚ್ಚಿಗೆ ಅಲ್ಲಿ ಬೆರಗಿನ ಮೇಲೆ ಬೆರಗು. ಅಲ್ಲಿನ ಅವಳ ಅನುಭವ, ಪಕ್ಷಿ, ಪ್ರಾಣಿಗಳು, ರಾಜ ರಾಣಿಯರು ಮಕ್ಕಳಿಗೆ ಆಪ್ತರಾಗುತ್ತಾರೆ.

3. ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ

ಮಹಾತ್ಮ ಗಾಂಧಿ ಅವರ ಬದುಕಿನ ಕಥೆಯನ್ನು ಇಷ್ಟೊಂದು ಸರಳವಾಗಿ, ಸುಂದರವಾಗಿ ಮಕ್ಕಳಿಗೆ ತಿಳಿಸಬಲ್ಲ ಕೃತಿ ಕನ್ನಡದಲ್ಲಿ ಇನ್ನೊಂದಿಲ್ಲ. ಬೊಳುವಾರು ಮಹಮ್ಮದ್‌ ಕುಂಞಿ ಅವರು ಇದನ್ನು ಸರಳವಾದ ಕನ್ನಡದಲ್ಲಿ ಬರೆದಿದ್ದಾರೆ. ಗಾಂಧಿ ಬದುಕಿನ ಎಲ್ಲ ಘಟ್ಟಗಳೂ, ಅವರ ಹೋರಾಟಗಳೂ ಇಲ್ಲಿ ಮಕ್ಕಳ ಗ್ರಹಿಕೆಗೆ ತಕ್ಕಂತೆ ಚಿತ್ರಿತವಾಗಿವೆ.

4. ಪಂಜೆಯವರ ಮಕ್ಕಳ ಪದ್ಯಗಳು

ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಇವರ ʼನಾಗರ ಹಾವೇ, ಹಾವೊಳು ಹೂವೇʼ ಪದ್ಯವನ್ನು ಯಾರು ಕೇಳಿಲ್ಲ? ಅಂಥ ಹಲವಾರು ಪದ್ಯಗಳಿಂದ ಕೂಡಿದ ಕೃತಿಯಿದು. ತೆಂಕಣ ಗಾಳಿಯಾಟ, ಡೊಂಬರ ಚೆನ್ನೆ, ಏರುವನು ರವಿ ಏರುವನು ಮುಂತಾದ ಅವರ ಸುಪ್ರಸಿದ್ಧ ಪದ್ಯಗಳು ಇಲ್ಲಿವೆ. ಅಂಕಿತ ಪುಸ್ತಕ ಪ್ರಕಟಿಸಿದೆ.

5. ಇಂತಪ್ಪ ಪುಟ್ಟ ಈಗೆಲ್ಲಿ ಪುಟ್ಟ?

ಇದು ಕೆ.ವಿ ತಿರುಮಲೇಶ ಅವರ ಮಕ್ಕಳ ಪದ್ಯಗಳ ಸಂಕಲನ. ಇವರು ಮಕ್ಕಳ ಸಾಹಿತ್ಯದಲ್ಲಿ ಹಲವು ಪ್ರಯೋಗ ಮಾಡಿದ್ದಾರೆ. ಲಿಮೆರಿಕ್‌ನಂಥ ಪದ್ಯಗಳ ಜತೆಗೆ, ಮಕ್ಕಳು ಪ್ರಹಸನದಂತೆ ಅಭಿನಯಿಸಬಹುದಾದ ಪದ್ಯಗಳೂ ಇಲ್ಲಿವೆ. ಸರಳವಾದ ಪ್ರಾಸ, ಸುಲಭವಾದ ಸಾಲುಗಳು ಹೊಸ ಕಲ್ಪನೆಗಳು ಇವರ ಕೃತಿಯ ವೈಶಿಷ್ಟ್ಯ. ಅಭಿನವ ಪ್ರಕಾಶನದ ಪ್ರಕಟಣೆ.

6. ದೇಶವಿದೇಶಗಳ ವಿನೋದ ಕತೆಗಳು

ಇದು ಹೆಸರೇ ಹೇಳುವಂತೆ ಬೇರೆ ಬೇರೆ ದೇಶಗಳಲ್ಲಿ ರೂಢಿಯಲ್ಲಿರುವ ವಿನೋದ ಕಥೆಗಳು. ಇವುಗಳನ್ನು ಕಥೆಗಾರ ಶಾಂತಾರಾಮ ಸೋಮಯಾಜಿ ಅವರು ಕನ್ನಡಕ್ಕೆ ಅನುವಾದಿಸಿ ನೀಡಿದ್ದಾರೆ. ತಿಳಿಯಾದ ಹಾಸ್ಯ ಇವರ ಗದ್ಯದ ವೈಶಿಷ್ಟ್ಯ. ಮಕ್ಕಳನ್ನು ಇವು ಎಂಗೇಜ್‌ ಆಗಿಸುತ್ತವೆ. ನವಕರ್ನಾಟಕ ಪ್ರಕಾಶನದ ಪ್ರಕಟಣೆ.

7. ಬೆಕ್ಕೋಜಿ

ಡಿವಿಜಿ ಎಂದರೆ ಮಂಕುತಿಮ್ಮನ ಕಗ್ಗ ನೆನಪಾಗುತ್ತದೆ. ಆದರೆ ಇವರು ಮಕ್ಕಳ ಸಾಹಿತ್ಯವನ್ನೂ ಬರೆದಿದ್ದಾರೆ ಎಂಬುದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಬೆಕ್ಕೋಜಿ ಸೇರಿದಂತೆ ನಾಲ್ಕು ಕತೆಗಳನ್ನು ಡಿವಿಜಿ ಮಕ್ಕಳಿಗಾಗಿ ಬರೆದಿದ್ದು, ಅವುಗಳ ಸಂಕಲನವಿದು. ಡಿವಿಜಿ =ಯವರ ಟ್ರೇಡ್‌ಮಾರ್ಕ್‌ ಆದ ನವಿರಾದ ಹಾಸ್ಯ ಮತ್ತು ಅಂತ್ಯದಲ್ಲೊಂದು ಸುಂದರವಾದ ನೀತಿಯ ಪ್ರತಿಪಾದನೆ ಇಲ್ಲಿ ಕಾಣಬಹುದು.

8. ಚಂದಮಾಮದ ಕತೆಗಳು

ಚಂದಮಾಮ ಯಾರಿಗೆ ಇಷ್ಟವಿಲ್ಲ? ಸಾಹಿತ್ಯಪ್ರಿಯರೆಲ್ಲರೂ ಸಣ್ಣಂದಿನಲ್ಲಿ ಚಂದಮಾಮ ಓದುತ್ತಲೇ ಬೆಳೆದವರು. ಆದರೆ ಈಗ ಚಂದಮಾಮ ಪ್ರಕಟವಾಗುತ್ತಿಲ್ಲ. ಅದರಲ್ಲಿ ಬಂದ ಚಂದದ ಕತೆಗಳನ್ನು ಸೇರಿಸಿ ಒಂದೆಡೆ ಸಂಕಲಿಸಿ ಪ್ರಕಟಿಸಿದ್ದಾರೆ ಕೆ.ವಿ ರಾಜೇಶ್ವರಿ. ಓದುತ್ತಾ ಓದುತ್ತಾ ವಿಶಿಷ್ಟ, ವಿಭಿನ್ನ ಲೋಕದಲ್ಲಿ ಕಳೆದುಹೋಗಬಹುದು.

9. ಧಾಂ ಧೂಂ ಸುಂಟರಗಾಳಿ

ಕತೆಗಾರ್ತಿ, ಕವಿ ವೈದೇಹಿ ಅವರು ಮಕ್ಕಳಿಗಾಗಿ ಹಲವು ಪದ್ಯ, ನಾಟಕಗಳನ್ನೂ ಬರೆದಿದ್ದಾರೆ. ಅವರು ಮಕ್ಕಳಿಗಾಗಿ ಬರೆದ ʼಧಾಂ ಧೂಂ ಸುಂಟರಗಾಳಿʼ ನಾಟಕ ಸಾಕಷ್ಟು ಜನಪ್ರಿಯತೆ ಪಡೆದಿದೆ. ಅನೇಕ ಕಡೆ ಪ್ರದರ್ಶನ ಕೂಡ ಕಂಡಿದೆ. ಇದು ಶೇಕ್ಸ್‌ಪಿಯರ್‌ನ ʼದಿ ಟೆಂಪೆಸ್ಟ್‌ʼ ನಾಟಕದ ಕನ್ನಡ ರೂಪವಾಗಿದೆ. ಮಕ್ಕಳಿಗೆ ರೋಚಕ ಅನುಭವ ನೀಡುತ್ತದೆ. ವಸಂತ ಪ್ರಕಾಶನ ಪ್ರಕಟಿಸಿದೆ.

10. ತೊತ್ತೊ ಚಾನ್‌

ತೊತ್ತೊ ಚಾನ್‌ ಎಂಬುದು ಜಪಾನಿ ಕೃತಿ. ಇದನ್ನು ವಿ.ಗಾಯತ್ರಿ ಕನ್ನಡಕ್ಕೆ ತಂದಿದ್ದು, ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದೆ. ತೊಮೊಯೆ ಗಾಕುಯೆನ್‌ ಎಂಬ ವಿಶಿಷ್ಟ, ಚಟುವಟಿಕೆಯೇ ಕಲಿಕೆಯಾದ ಸುಂದರ ಶಾಲೆಯ ಅನುಭವಗಳನ್ನು ಮೂಲ ಲೇಖಕಿ ತೆತ್ಸುಕೊ ಕುರೊಯನಗಿ ಇದರಲ್ಲಿ ಬರೆದಿದ್ದಾರೆ. ತೊತ್ತೊ ಚಾನ್‌ ಎಂಬ ತುಂಟ ಬಾಲಕಿಯ ಕಲಿಕೆಯ ಕತೆಯಿದು.

Exit mobile version