Children's Day | ಮಕ್ಕಳಿಗೆ ಈ ಚಂದದ ಪುಸ್ತಕಗಳನ್ನು ಇಂದು ಗಿಫ್ಟ್‌ ಕೊಡಿ - Vistara News

ಕಿಡ್ಸ್‌ ಕಾರ್ನರ್‌

Children’s Day | ಮಕ್ಕಳಿಗೆ ಈ ಚಂದದ ಪುಸ್ತಕಗಳನ್ನು ಇಂದು ಗಿಫ್ಟ್‌ ಕೊಡಿ

ಮಕ್ಕಳಿಗೆ ಗಿಫ್ಟ್‌ ಕೊಡ್ತೀರಾ? ಸರಳವಾದ, ಮಕ್ಕಳ ಕಲ್ಪನೆಯನ್ನು ವಿಸ್ತರಿಸುವ, ಅವರ ಮನರಂಜಿಸುವ ಪುಸ್ತಕಗಳಿಗಿಂತಲೂ ಸುಂದರ ಉಡುಗೊರೆ ಮಕ್ಕಳ ದಿನದ ಹಿನ್ನೆಲೆಯಲ್ಲಿ ಬೇರೆ ಬೇಕಾಗಿಲ್ಲ. ಅಂಥ ಕೆಲವು ಪುಸ್ತಕಗಳ ಒಂದು ಪಟ್ಟಿ ಇಲ್ಲಿದೆ.

VISTARANEWS.COM


on

children books
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಕ್ಕಳನ್ನು ಅವರದೇ ಲೋಕದಲ್ಲಿ ಮುಳುಗಿಸುವ, ಹೊಸ ಕಲ್ಪನೆಗಳ ಪ್ರಪಂಚವನ್ನು ವಿಸ್ತರಿಸುವ ಪುಸ್ತಕಗಳನ್ನು ನೀವು ಓದಲು ನೀಡಿದರೆ ಅದಕ್ಕಿಂತಲೂ ಸುಂದರ ಗಿಫ್ಟ್‌ ಇನ್ನೊಂದಿಲ್ಲ. ಇಂದು ಮೊಬೈಲ್‌ ಮುಂತಾದ ಸಾಧನಗಳು, ಇಂಟರ್‌ನೆಟ್‌ ಅವರ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದ್ದರೂ, ಒಮ್ಮೆ ಓದಿನ ಗೀಳು ಹತ್ತಿಸಿದರೆ ಅವರು ಅದರಿಂದ ತಪ್ಪಿಸಿಕೊಳ್ಳಲಾರರು. ಹಾಗೆ ಅವರನ್ನು ಎಂಗೇಜ್‌ ಆಗಿಸಬಲ್ಲ ಕನ್ನಡದ ಹತ್ತು ಕೃತಿಗಳು ಇಲ್ಲಿವೆ. ಹಲವು ತಲೆಮಾರುಗಳಿಂದಲೂ ಕನ್ನಡದ ಮಕ್ಕಳ ಅಭಿರುಚಿಯನ್ನು ರೂಪಿಸಿದ ಕೃತಿಗಳಿವು.

bommana
patala

1.. ಬೊಮ್ಮನ ಹಳ್ಳಿಯ ಕಿಂದರಿ ಜೋಗಿ

ರಾಷ್ಟ್ರಕವಿ ಕುವೆಂಪು ಅವರು ಮಕ್ಕಳಿಗಾಗಿಯೇ ಬರೆದ ನಾಟಕ- ರೂಪಕವಿದು. ಇದನ್ನು ದೊಡ್ಡದಾಗಿ ಓದಿಕೊಳ್ಳಬಹುದು, ನಾಲ್ಕೆಂಟು ಮಕ್ಕಳು ಸೇರಿ ನಾಟಕವಾಗಿಯೂ ಆಡಬಹುದು. ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ, ಅದನ್ನು ಪರಿಹರಿಸಲು ಹಳ್ಳಿಯ ಮುಖಂಡನ ಪೇಚಾಟ, ಕಿಂದರಿ ಜೋಗಿಯ ಅದ್ಭುತ ಗುಹಾ ಮಾಯಾಲೋಕ- ಇವೆಲ್ಲವೂ ಮಕ್ಕಳನ್ನು ನಿಬ್ಬೆರಗುಗೊಳಿಸುತ್ತವೆ.

2. ಪಾತಾಳದಲ್ಲಿ ಪಾಪಚ್ಚಿ

ಚಾರ್ಲ್ಸ್ ಲುಡ್ವಿಗ್ ಡಾಡ್ಜ್‌ಸನ್‌ ಅವರು ಲೂಯಿ ಕರೋಲ್ ಎಂಬ ಹೆಸರಿನಲ್ಲಿ ಬರೆದ ʻಅಲೈಸ್ ಇನ್ ವಂಡರ್ಲ್ಯಾಂಡ್’ ಎಂಬ ವಿಶಿಷ್ಟ ಕೃತಿಯನ್ನು ನಾ. ಕಸ್ತೂರಿಯವರು ʼಪಾತಾಳದಲ್ಲಿ ಪಾಪಚ್ಚಿʼ ಎಂದು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪಾಪಚ್ಚಿ ಎಲ್ಲಾ ವಯಸ್ಸಿನವರಿಗೂ ಅಚ್ಚುಮೆಚ್ಚಿನವಳು. ದಿಡೀರನೆ ವಿಚಿತ್ರ ಲೋಕವೊಂದನ್ನು ಪ್ರವೇಶಿಸುವ ಪಾಪಚ್ಚಿಗೆ ಅಲ್ಲಿ ಬೆರಗಿನ ಮೇಲೆ ಬೆರಗು. ಅಲ್ಲಿನ ಅವಳ ಅನುಭವ, ಪಕ್ಷಿ, ಪ್ರಾಣಿಗಳು, ರಾಜ ರಾಣಿಯರು ಮಕ್ಕಳಿಗೆ ಆಪ್ತರಾಗುತ್ತಾರೆ.

papu
panje

3. ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ

ಮಹಾತ್ಮ ಗಾಂಧಿ ಅವರ ಬದುಕಿನ ಕಥೆಯನ್ನು ಇಷ್ಟೊಂದು ಸರಳವಾಗಿ, ಸುಂದರವಾಗಿ ಮಕ್ಕಳಿಗೆ ತಿಳಿಸಬಲ್ಲ ಕೃತಿ ಕನ್ನಡದಲ್ಲಿ ಇನ್ನೊಂದಿಲ್ಲ. ಬೊಳುವಾರು ಮಹಮ್ಮದ್‌ ಕುಂಞಿ ಅವರು ಇದನ್ನು ಸರಳವಾದ ಕನ್ನಡದಲ್ಲಿ ಬರೆದಿದ್ದಾರೆ. ಗಾಂಧಿ ಬದುಕಿನ ಎಲ್ಲ ಘಟ್ಟಗಳೂ, ಅವರ ಹೋರಾಟಗಳೂ ಇಲ್ಲಿ ಮಕ್ಕಳ ಗ್ರಹಿಕೆಗೆ ತಕ್ಕಂತೆ ಚಿತ್ರಿತವಾಗಿವೆ.

4. ಪಂಜೆಯವರ ಮಕ್ಕಳ ಪದ್ಯಗಳು

ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಇವರ ʼನಾಗರ ಹಾವೇ, ಹಾವೊಳು ಹೂವೇʼ ಪದ್ಯವನ್ನು ಯಾರು ಕೇಳಿಲ್ಲ? ಅಂಥ ಹಲವಾರು ಪದ್ಯಗಳಿಂದ ಕೂಡಿದ ಕೃತಿಯಿದು. ತೆಂಕಣ ಗಾಳಿಯಾಟ, ಡೊಂಬರ ಚೆನ್ನೆ, ಏರುವನು ರವಿ ಏರುವನು ಮುಂತಾದ ಅವರ ಸುಪ್ರಸಿದ್ಧ ಪದ್ಯಗಳು ಇಲ್ಲಿವೆ. ಅಂಕಿತ ಪುಸ್ತಕ ಪ್ರಕಟಿಸಿದೆ.

kvt
vinoda

5. ಇಂತಪ್ಪ ಪುಟ್ಟ ಈಗೆಲ್ಲಿ ಪುಟ್ಟ?

ಇದು ಕೆ.ವಿ ತಿರುಮಲೇಶ ಅವರ ಮಕ್ಕಳ ಪದ್ಯಗಳ ಸಂಕಲನ. ಇವರು ಮಕ್ಕಳ ಸಾಹಿತ್ಯದಲ್ಲಿ ಹಲವು ಪ್ರಯೋಗ ಮಾಡಿದ್ದಾರೆ. ಲಿಮೆರಿಕ್‌ನಂಥ ಪದ್ಯಗಳ ಜತೆಗೆ, ಮಕ್ಕಳು ಪ್ರಹಸನದಂತೆ ಅಭಿನಯಿಸಬಹುದಾದ ಪದ್ಯಗಳೂ ಇಲ್ಲಿವೆ. ಸರಳವಾದ ಪ್ರಾಸ, ಸುಲಭವಾದ ಸಾಲುಗಳು ಹೊಸ ಕಲ್ಪನೆಗಳು ಇವರ ಕೃತಿಯ ವೈಶಿಷ್ಟ್ಯ. ಅಭಿನವ ಪ್ರಕಾಶನದ ಪ್ರಕಟಣೆ.

6. ದೇಶವಿದೇಶಗಳ ವಿನೋದ ಕತೆಗಳು

ಇದು ಹೆಸರೇ ಹೇಳುವಂತೆ ಬೇರೆ ಬೇರೆ ದೇಶಗಳಲ್ಲಿ ರೂಢಿಯಲ್ಲಿರುವ ವಿನೋದ ಕಥೆಗಳು. ಇವುಗಳನ್ನು ಕಥೆಗಾರ ಶಾಂತಾರಾಮ ಸೋಮಯಾಜಿ ಅವರು ಕನ್ನಡಕ್ಕೆ ಅನುವಾದಿಸಿ ನೀಡಿದ್ದಾರೆ. ತಿಳಿಯಾದ ಹಾಸ್ಯ ಇವರ ಗದ್ಯದ ವೈಶಿಷ್ಟ್ಯ. ಮಕ್ಕಳನ್ನು ಇವು ಎಂಗೇಜ್‌ ಆಗಿಸುತ್ತವೆ. ನವಕರ್ನಾಟಕ ಪ್ರಕಾಶನದ ಪ್ರಕಟಣೆ.

bekkoji
chanda

7. ಬೆಕ್ಕೋಜಿ

ಡಿವಿಜಿ ಎಂದರೆ ಮಂಕುತಿಮ್ಮನ ಕಗ್ಗ ನೆನಪಾಗುತ್ತದೆ. ಆದರೆ ಇವರು ಮಕ್ಕಳ ಸಾಹಿತ್ಯವನ್ನೂ ಬರೆದಿದ್ದಾರೆ ಎಂಬುದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಬೆಕ್ಕೋಜಿ ಸೇರಿದಂತೆ ನಾಲ್ಕು ಕತೆಗಳನ್ನು ಡಿವಿಜಿ ಮಕ್ಕಳಿಗಾಗಿ ಬರೆದಿದ್ದು, ಅವುಗಳ ಸಂಕಲನವಿದು. ಡಿವಿಜಿ =ಯವರ ಟ್ರೇಡ್‌ಮಾರ್ಕ್‌ ಆದ ನವಿರಾದ ಹಾಸ್ಯ ಮತ್ತು ಅಂತ್ಯದಲ್ಲೊಂದು ಸುಂದರವಾದ ನೀತಿಯ ಪ್ರತಿಪಾದನೆ ಇಲ್ಲಿ ಕಾಣಬಹುದು.

8. ಚಂದಮಾಮದ ಕತೆಗಳು

ಚಂದಮಾಮ ಯಾರಿಗೆ ಇಷ್ಟವಿಲ್ಲ? ಸಾಹಿತ್ಯಪ್ರಿಯರೆಲ್ಲರೂ ಸಣ್ಣಂದಿನಲ್ಲಿ ಚಂದಮಾಮ ಓದುತ್ತಲೇ ಬೆಳೆದವರು. ಆದರೆ ಈಗ ಚಂದಮಾಮ ಪ್ರಕಟವಾಗುತ್ತಿಲ್ಲ. ಅದರಲ್ಲಿ ಬಂದ ಚಂದದ ಕತೆಗಳನ್ನು ಸೇರಿಸಿ ಒಂದೆಡೆ ಸಂಕಲಿಸಿ ಪ್ರಕಟಿಸಿದ್ದಾರೆ ಕೆ.ವಿ ರಾಜೇಶ್ವರಿ. ಓದುತ್ತಾ ಓದುತ್ತಾ ವಿಶಿಷ್ಟ, ವಿಭಿನ್ನ ಲೋಕದಲ್ಲಿ ಕಳೆದುಹೋಗಬಹುದು.

dham
thotho

9. ಧಾಂ ಧೂಂ ಸುಂಟರಗಾಳಿ

ಕತೆಗಾರ್ತಿ, ಕವಿ ವೈದೇಹಿ ಅವರು ಮಕ್ಕಳಿಗಾಗಿ ಹಲವು ಪದ್ಯ, ನಾಟಕಗಳನ್ನೂ ಬರೆದಿದ್ದಾರೆ. ಅವರು ಮಕ್ಕಳಿಗಾಗಿ ಬರೆದ ʼಧಾಂ ಧೂಂ ಸುಂಟರಗಾಳಿʼ ನಾಟಕ ಸಾಕಷ್ಟು ಜನಪ್ರಿಯತೆ ಪಡೆದಿದೆ. ಅನೇಕ ಕಡೆ ಪ್ರದರ್ಶನ ಕೂಡ ಕಂಡಿದೆ. ಇದು ಶೇಕ್ಸ್‌ಪಿಯರ್‌ನ ʼದಿ ಟೆಂಪೆಸ್ಟ್‌ʼ ನಾಟಕದ ಕನ್ನಡ ರೂಪವಾಗಿದೆ. ಮಕ್ಕಳಿಗೆ ರೋಚಕ ಅನುಭವ ನೀಡುತ್ತದೆ. ವಸಂತ ಪ್ರಕಾಶನ ಪ್ರಕಟಿಸಿದೆ.

10. ತೊತ್ತೊ ಚಾನ್‌

ತೊತ್ತೊ ಚಾನ್‌ ಎಂಬುದು ಜಪಾನಿ ಕೃತಿ. ಇದನ್ನು ವಿ.ಗಾಯತ್ರಿ ಕನ್ನಡಕ್ಕೆ ತಂದಿದ್ದು, ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದೆ. ತೊಮೊಯೆ ಗಾಕುಯೆನ್‌ ಎಂಬ ವಿಶಿಷ್ಟ, ಚಟುವಟಿಕೆಯೇ ಕಲಿಕೆಯಾದ ಸುಂದರ ಶಾಲೆಯ ಅನುಭವಗಳನ್ನು ಮೂಲ ಲೇಖಕಿ ತೆತ್ಸುಕೊ ಕುರೊಯನಗಿ ಇದರಲ್ಲಿ ಬರೆದಿದ್ದಾರೆ. ತೊತ್ತೊ ಚಾನ್‌ ಎಂಬ ತುಂಟ ಬಾಲಕಿಯ ಕಲಿಕೆಯ ಕತೆಯಿದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ : ಒಂಟೆ ಮತ್ತು ಜೀಬ್ರಾದ ಗೆಳೆತನ

ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು. ಯಾಕೆ ಗೊತ್ತೇ? ಹಾಗಾದರೆ ಈ ಕಥೆಯನ್ನು ಓದಿ.

VISTARANEWS.COM


on

Zebra and camel
Koo


ಮರುಭೂಮಿಯಿಂದ ಸ್ವಲ್ಪ ದೂರದಲ್ಲಿ ಹಸುರಾದ ಹುಲ್ಲುಗಾವಲಿತ್ತು. ಆ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಜೀಬ್ರಾವೊಂದು ವಾಸಿಸುತ್ತಿತ್ತು. ಅದಕ್ಕೆ ಪಕ್ಕದ ಮರುಭೂಮಿಯಲ್ಲಿ ವಾಸಿಸುವ ಒಂಟೆಯೊಂದು ಸ್ನೇಹಿತನಾಗಿತ್ತು. ಇಬ್ಬರೂ ಬಾಲ್ಯದಲ್ಲೇ ಭೇಟಿಯಾಗಿ ಆಡುತ್ತಾ ಬೆಳೆದಿದ್ದರಿಂದ ಆತ್ಮೀಯ ಗೆಳೆಯರಾಗಿದ್ದವು. ವಾರದಲ್ಲಿ ನಾಲ್ಕಾರು ಬಾರಿ ಭೇಟಿಯಾಗಿ ಹರಟೆ ಹೊಡೆಯುತ್ತಿದ್ದವು. ತಂತಮ್ಮ ಅನುಭವಕ್ಕೆ ಬಂದ ಮೋಜಿನ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದವು.

ಜೀಬ್ರಾಗೆ ತನ್ನ ಬಗ್ಗೆ ಬಹಳ ಹೆಮ್ಮೆಯಿತ್ತು. ಚಂದದ ಕಪ್ಪು-ಬಿಳಿ ಪಟ್ಟೆಯ ಕೋಟು ತನ್ನ ಮೈಮೇಲಿದೆ. ಒಂಟೆಯಂತೆ ಕೊಳಕಾದ ಮಣ್ಣು ಬಣ್ಣದ ಮೈಯಲ್ಲ ತನ್ನದು; ದೇಹದ ಆಕೃತಿ ತೀಡಿದಂತೆ ಶಿಸ್ತಾಗಿದೆ, ವಿಚಿತ್ರವಾದ ಡುಬ್ಬ ಬೆನ್ನಿಲ್ಲ ತನಗೆ; ಮೈಯ ಚರ್ಮ ಮಿರಿಮಿರಿ ಮಿಂಚುತ್ತಿದೆ, ಕೂದಲು ತುಂಬಿಕೊಂಡಿಲ್ಲ. ಭಯವಾಗುವಷ್ಟು ಉದ್ದನೆಯ ರೆಪ್ಪೆಯಿಲ್ಲದೆ, ಸುಂದರ ಕಣ್ಣುಗಳಿವೆ ಎಂದೆಲ್ಲಾ ಒಳಗೊಳಗೇ ಜಂಬವಿತ್ತು. ʻಮಣ್ಣಲ್ಲಿ, ಮರಳಲ್ಲಿ ಆಡೋಣ ಬಾʼ ಎಂದು ಒಂಟೆ ಹಲವಾರು ಬಾರಿ ಜೀಬ್ರಾವನ್ನು ಕರೆದಿತ್ತು. ʻಅಯ್ಯೋ, ಇಲ್ಲಪ್ಪ. ನಾ ಬರಲ್ಲ. ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು.

ಆ ವರ್ಷ ಆ ಪ್ರಾಂತ್ಯಕ್ಕೆಲ್ಲಾ ಬರಗಾಲ ಬಂತು. ಹುಲ್ಲುಗಾವಲಿನಲ್ಲಿ ದೂರ ದೂರದವರೆಗೆ ಎಲ್ಲೂ ನೀರು ದೊರೆಯದೆ ಪರದಾಡುವ ಸ್ಥಿತಿ ಉಂಟಾಯಿತು. ಹುಲ್ಲುಗಾವಲಿನ ಉಳಿದೆಲ್ಲಾ ಪ್ರಾಣಿಗಳಂತೆಯೇ ಜೀಬ್ರಾ ಸಹ ಕಂಗಾಲಾಯಿತು. ಒಂಟೆಯ ಜೊತೆಗಿನ ಭೇಟಿಯಲ್ಲಿ ತನ್ನ ಆತಂಕವನ್ನು ಹಂಚಿಕೊಂಡಿತು. ʻನೀರಿಲ್ಲದಿದ್ದರೆ ಬದುಕೋದು ಹೇಗೆ? ಇಲ್ಲಿಂದ ತುಂಬಾ ದೂರ ನಡೆದ ಮೇಲೆ ಸ್ವಲ್ಪ ನೀರಿರೊ ಕೆರೆ ಇದೆಯಂತೆ. ಏನು ಮಾಡೋದು ಗೊತ್ತಾಗ್ತಿಲ್ಲʼ ಎಂದು ದುಗುಡದಿಂದ ಹೇಳಿತು.

ಆದರೆ ಒಂಟೆ ನಿರಾತಂಕವಾಗಿತ್ತು. ಬರಗಾಲದಿಂದ ಉಂಟಾಗುವ ಕಷ್ಟಗಳ ಬಗ್ಗೆ ಅದರ ಮುಖದಲ್ಲಿ ಯಾವ ಬೇಸರವೂ ಇರಲಿಲ್ಲ. ʻನಮಗೇ ನೀರಿಲ್ಲ ಅಂದಮೇಲೆ, ಮರುಭೂಮಿಯಲ್ಲಿ ನಿಮಗಿನ್ನೂ ಕಷ್ಟತಾನೆ?ʼ ಕೇಳಿತು ಜೀಬ್ರಾ. ʻಮಳೆಯಿಲ್ಲದ್ದು, ನೀರಿಲ್ಲದಿರುವುದು ನಮಗೆ ಮಾಮೂಲಿ. ಅದಕ್ಕೆ ಆತಂಕವೆಲ್ಲಾ ಇಲ್ಲʼ ಎಂದಿತು ನಗುತ್ತಾ. ಜೀಬ್ರಾ ಮುಖದಲ್ಲಿ ಚಿಂತೆಯ ಗೆರೆಗಳು ಹೋಗಲಿಲ್ಲ.

ʻಮರುಭೂಮಿಯಲ್ಲಿ ನೀರುಣಿಸುವ ಒಯಸಿಸ್‌ಗಳಿವೆ. ನಾವು ನೀರು ಬೇಕೆನಿಸಿದಾಗ ಅಲ್ಲಿಗೆ ಹೋಗುತ್ತೇವೆ. ನಿನ್ನನ್ನೂ ಬೇಕಿದ್ದರೆ ಕರೆದೊಯ್ಯುತ್ತೇನೆʼ ಎಂದಿತು ಒಂಟೆ. ಆದರೆ ಆ ಸುಡುಬಿಸಿಯಾದ ಮರಳಿನಲ್ಲಿ ನಡೆಯುವುದು ಹೇಗೆ? ಮರಳು ಗಾಳಿ ಬೀಸಿದರೆ ಅದನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಜೀಬ್ರಾಗೆ.

ʻನಮ್ಮ ದೇಹ ಜೀಬ್ರಾಗಳಂತೆ ತಿದ್ದಿ-ತೀಡಿದಂತಿಲ್ಲ, ನಿಜ. ಆದರೆ ಬಿಸಿ ಮರಳಿನಲ್ಲಿ ನಡೆಯಲು ಅನುಕೂಲವಾಗುವ ಹಾಗಿದೆ. ಬೆನ್ನಿನ ಮೇಲಿರುವ ಡುಬ್ಬಿನಿಂದಲೇ ತಿಂಗಳುಗಟ್ಟಲೆ ನಾವು ನೀರು ಕುಡಿಯದೆಯೂ ಬದುಕಿರುವುದು. ನಮ್ಮ ಚರ್ಮ, ಕಣ್ಣು ರೆಪ್ಪೆಗಳೆಲ್ಲಾ ಮರಳು ಗಾಳಿಯನ್ನು ತಡೆಯುವುದಕ್ಕೆಂದೇ ಹೀಗಿವೆ. ಮರಳುಗಾಡಿನಲ್ಲಿ ಬದುಕುವುದಕ್ಕೆ ನಮ್ಮಂತೆ ಇದ್ದರೆ ಮಾತ್ರವೇ ಸಾಧ್ಯʼ ಎಂದಿತು ಒಂಟೆ. ಜೀಬ್ರಾಗೆ ತನ್ನ ತಪ್ಪಿನ ಅರಿವಾಯಿತು.

ಇದನ್ನೂ ಓದಿ : ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ʻಮರಳುಗಾಡಿನಲ್ಲಿ ಹಗಲಿಗೆ ಬಿಸಿ ಇದ್ದಂತೆಯೇ ರಾತ್ರಿ ತಂಪಾಗುತ್ತದೆ. ರಾತ್ರಿಯ ವೇಳೆ ನಿನ್ನನ್ನು ಒಯಸಿಸ್‌ ಬಳಿಗೆ ಕರೆದೊಯ್ಯುತ್ತೇನೆ. ಬೇಕಷ್ಟು ನೀರು ಕುಡಿದು, ದೂರದ ನೀರಿರುವ ಕೆರೆಯತ್ತ ಹೊರಡು. ಬರಗಾಲ ಕಳೆದ ಮೇಲೆ ಮರಳಿ ಬಾʼ ಎಂದಿತು ಒಂಟೆ. ಮಿತ್ರನ ಒಳ್ಳೆಯತನಕ್ಕೆ ಸಂತೋಷಪಟ್ಟ ಜೀಬ್ರಾ, ಒಂಟೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

monkey story
Koo

ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಊರಂಚಿನಲ್ಲಿ ಆತನಿಗೊಂದು ಸುಂದರವಾದ ತೋಟವಿತ್ತು. (kIds Corner) ಹಲವು ರೀತಿಯ ಫಲಭರಿತ ಮರಗಳು, ನಾನಾ ಬಣ್ಣದ ಹೂವಿನ ಗಿಡಗಳನ್ನೆಲ್ಲಾ ಆತ ಅಲ್ಲಿ ಬೆಳೆಸಿದ್ದ. ಆ ತೋಟದ ಮೇಲೆ ಆತನಿಗೆ ಬಹಳ ಪ್ರೀತಿಯೂ ಇತ್ತು. ಆ ತೋಟ ಸಾಕಷ್ಟು ವಿಸ್ತಾರವಾಗಿ ಇದ್ದಿದ್ದರಿಂದ ಅದನ್ನು ನೋಡಿಕೊಳ್ಳುವುದಕ್ಕೆ ಮಾಲಿಯೊಬ್ಬನನ್ನು ನೇಮಿಸಿಕೊಂಡ. ಆ ಮಾಲಿಯೂ ತನ್ನ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಿದ್ದ.

ಬೇಸಿಗೆ ಶುರುವಾಯಿತು. ನೆತ್ತಿ ಸುಡುವಂಥ ಬಿಸಿಲಿನಿಂದಾಗಿ ಶ್ರೀಮಂತನ ತೋಟದ ಗಿಡಗಳೆಲ್ಲಾ ಬಸವಳಿದು ಹೋಗುತ್ತಿದ್ದವು. ಹಾಗಾಗಿ ಪ್ರತೀದಿನ ಬಾವಿಯಿಂದ ನೀರೆತ್ತಿಕೊಂಡು ಎಲ್ಲಾ ಗಿಡಗಳಿಗೂ ನೀರುಣಿಸಬೇಕಾಗುತ್ತಿತ್ತು. ಆಗ ಮಾತ್ರವೇ ಬಾಡದಂತೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಈ ಕೆಲಸಕ್ಕೆ ಮಾಲಿಗೇನೂ ಬೇಸರವಿರಲಿಲ್ಲ. ಅವನಿಗೆ ಬೇಸರವಿದ್ದಿದ್ದು ಒಂದೇ ಕಾರಣಕ್ಕೆ. ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ.

ಒಮ್ಮೆ ಆತನ ಊರಿನ ಜಾತ್ರೆ ಬಂತು. ತನ್ನ ಕುಟುಂಬವನ್ನೆಲ್ಲಾ ಆ ಜಾತ್ರೆಗೆ ಕರೆದೊಯ್ಯಬೇಕು. ತಾನೂ ಅಲ್ಲೆಲ್ಲಾ ಅಡ್ಡಾಡಬೇಕು ಎಂಬ ಆಸೆ ಆತನಿಗಿತ್ತು. ಆದರೆ ಎಷ್ಟೇ ಕೇಳಿದರೂ ಸಾಹುಕಾರ ರಜೆ ಕೊಡುವುದಿಲ್ಲ ಎಂಬುದು ಆತನಿಗೆ ಖಾತ್ರಿಯಾಗಿತ್ತು. ಹಾಗೆಂದು ತಾನು ಮರಳಿ ಬರುವಷ್ಟರಲ್ಲಿ ಎರಡು ದಿನಗಳಾಗುತ್ತವೆ, ಅಷ್ಟರಲ್ಲಿ ಗಿಡಗಳೆಲ್ಲಾ ಬಾಡಿ ಹೋಗುತ್ತವೆ ಎಂಬುದೂ ಆತನಿಗೆ ತಿಳಿದಿತ್ತು. ಸಮೀಪದ ಕಾಡಿನಲ್ಲಿ ಯಾರಿಂದಲಾದರೂ ತನಗೆ ನೆರವು ದೊರೆಯಬಹುದೇ ಎಂದು ಯೋಚಿಸಿದ. ಆತನಿಗೆ ಉಪಾಯವೊಂದು ಹೊಳೆಯಿತು.

ಪಕ್ಕದ ಕಾಡಿನಲ್ಲಿ ದೊಡ್ಡ ಹಿಂಡು ಮಂಗಗಳು ವಾಸವಾಗಿದ್ದವು. ಆ ಮಂಗಗಳ ರಾಜನನ್ನು ಮಾಲಿ ಭೇಟಿ ಮಾಡಿದ. ಅಪರೂಪಕ್ಕೊಮ್ಮೆ ತಮ್ಮ ಹಿಂಡು ಆ ತೋಟಕ್ಕೆ ಭೇಟಿ ನೀಡಿದಾಗ, ಹೆದರಿಸಿ ಓಡಿಸುತ್ತಿದ್ದ ಈ ಮಾಲಿ ಈಗ ತನ್ನನ್ನೇಕೆ ನೋಡಲು ಬಂದಿದ್ದಾನೆ ಎಂದು ಮಂಗರಾಜನಿಗೆ ಕುತೂಹಲವಾಯಿತು. ವಿಷಯವೇನು ಎಂದು ಮಾಲಿಯನ್ನು ವಿಚಾರಿಸಿದ.

ʻಮಂಗರಾಜ, ನನಗೆ ಎರಡು ದಿನಗಳ ಮಟ್ಟಿಗೆ ನಮ್ಮೂರಿಗೆ ಹೋಗಬೇಕು. ನನಗೆ ನಮ್ಮ ಸಾಹುಕಾರರು ರಜೆ ಕೊಡುತ್ತಿಲ್ಲ. ಹಾಗಾಗಿ ನೀವೆಲ್ಲಾ ಸೇರಿ ನನಗೊಂದು ಉಪಕಾರ ಮಾಡಬೇಕುʼ ಎಂದು ಮಾಲಿ ವಿನಂತಿಸಿದ.
ʻಉಪಕಾರವೇ! ನಮಗೆಲ್ಲಾ ಮಾಲಿ ಕೆಲಸ ಮಾಡಲು ಬರುವುದಿಲ್ಲʼ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಮಂಗರಾಜ.

ʻಅಯ್ಯೋ! ತುಂಬಾ ಕಷ್ಟದ ಕೆಲಸವಲ್ಲ. ತೋಟದ ಬಾವಿಯಿಂದ ನೀರೆತ್ತಿ ಎಲ್ಲಾ ಗಿಡಗಳಿಗೂ ಹಾಕಬೇಕು, ಅಷ್ಟೆ. ಗಿಡ ಹಸಿರಾಗಿದ್ದರೆ ನಾನು ರಜೆಯ ಮೇಲೆ ಹೋದರೂ ನಮ್ಮ ಸಾಹುಕಾರರು ಬಯ್ಯುವುದಿಲ್ಲ. ಇದೊಂದು ಉಪಕಾರ ಮಾಡಿʼ ಎಂದು ಕೇಳಿದ ಮಾಲಿ. ಮಂಗಗಳು ಒಪ್ಪಿಕೊಂಡವು. ಈತ ನೆಮ್ಮದಿಯಿಂದ ಸಂಸಾರ ಸಮೇತ ಜಾತ್ರೆಗೆ ಹೋದ.

ಮಾರನೇದಿನ ಮಂಗಗಳ ಹಿಂಡು ತೋಟಕ್ಕೆ ಬಂದಿಳಿಯಿತು. ಒಂದೆರಡು ಮಂಗಗಳು ಬಾವಿಯಿಂದ ನೀರೆತ್ತುವ ಕೆಲಸವನ್ನು ಶುರು ಹಚ್ಚಿದವು. ಉಳಿದವು ಗಿಡಗಳಿಗೆ ನೀರು ಹಾಕುವ ಕೆಲಸ ವಹಿಸಿಕೊಂಡವು. ಆದರೆ ಅವುಗಳಿಗೊಂದು ಗಂಭೀರವಾದ ಸಮಸ್ಯೆ ಎದುರಾಯಿತು. ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು? ತಮ್ಮ ರಾಜನನ್ನು ಕೇಳಿದವು. ʻಅಯ್ಯೋ! ಈ ವಿಷಯವನ್ನು ಮಾಲಿಯ ಬಳಿ ಕೇಳಲೇ ಇಲ್ಲವಲ್ಲ. ನನ್ನ ಪ್ರಜೆಗಳಿಗೆ ರಾಜನಾಗಿ ಏನಾದರೂ ಉತ್ತರ ಹೇಳಬೇಕುʼ ಎಂದು ಯೋಚಿಸಿದ ಮಂಗರಾಜ, ಗಿಡಗಳ ಬೇರು ಎಷ್ಟು ದೊಡ್ಡದಿದೆಯೋ ಅಷ್ಟು ಹೆಚ್ಚು ನೀರು ಹಾಕಿ ಎಂದು ಸೂಚಿಸಿತು.

ಬೇರು ಎಷ್ಟು ದೊಡ್ಡದಿದೆ ಎಂದು ನೋಡುವುದು ಹೇಗೆ ಎಂದು ಮಂಗಗಳು ತಂತಮ್ಮಲ್ಲೇ ಚರ್ಚಿಸಿದವು. ʻಕಿತ್ತು ನೋಡೋಣʼ ಎಂದು ಒಂದು ಮಂಗ. ಎಲ್ಲರಿಗೂ ಸರಿ ಎನಿಸಿತು. ಒಂದಿಷ್ಟು ಮಂಗಗಳು ಕೀಳುವ ಕಾರ್ಯ ವಹಿಸಿಕೊಂಡರೆ, ಇನ್ನಷ್ಟು ನೀರು ಹಾಕುವ ಹಾಗೂ ಮತ್ತಷ್ಟು ಪುನಃ ನೆಡುವ ಕೆಲಸ ವಹಿಸಿಕೊಂಡವು. ಕೆಲವೇ ನಿಮಿಷಗಳಲ್ಲಿ ಇಡೀ ತೋಟ ಬುಡಮೇಲಾಯಿತು. ಒಂದು ಗಿಡವನ್ನು ಇನ್ನೊಂದು ಗಿಡದ ಪಕ್ಕ ಹಿಡಿದು ಬೇರಿನ ಉದ್ದ ನೋಡುವುದು, ನೀರಲ್ಲಿ ತೇಲಿಸುವುದು ಮಾಡುತ್ತಾ, ಇಡೀ ತೋಟವನ್ನು ಕೆಸರು ಗದ್ದೆಯನ್ನಾಗಿ ಮಾಡಿದವು. ಬಾವಿಯ ನೀರೆಲ್ಲಾ ಖರ್ಚಾಗುತ್ತಾ ಬಂದಂತೆ ಇವರ ಕೆಲಸವೂ ಪೂರ್ಣಗೊಂಡಿತು. ಮಾಲಿ ಒಪ್ಪಿಸಿದ್ದ ಕೆಲಸವನ್ನು ಮಾಡಿ ಮುಗಿಸಿದ ತೃಪ್ತಿಯಿಂದ ಎಲ್ಲವೂ ಕಾಡಿನತ್ತ ತೆರಳಿದವು.

ಇದನ್ನೂ ಓದಿ : ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಮಾರನೇ ದಿನ ಬೆಳಗ್ಗೆ ಎಂದಿನಂತೆ ಸಾಹುಕಾರ ತೋಟದ ವೀಕ್ಷಣೆಗೆ ಬಂದ. ನೋಡಿದರೆ… ಇಡೀ ತೋಟ ಆನೆ ಹೊಕ್ಕಂತಿತ್ತು. ಕೆಂಡಾಮಂಡಲವಾದ ಶ್ರೀಮಂತ ಎಲ್ಲಿ ಹುಡುಕಿದರೂ ಮಾಲಿ ಮಾತ್ರ ಕಾಣಲಿಲ್ಲ. ಜಾತ್ರೆ ಮುಗಿಸಿದ ಮಾಲಿ ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಮರಳಿ ಬಂದ. ಆತನಿಗಾಗಿಯೇ ಕಾಯುತ್ತ ಕುಳಿತಿದ್ದ ಸಾಹುಕಾರ. ತೋಟದ ಸ್ಥಿತಿ ಕಂಡು ಮಾಲಿಯ ಕಣ್ಣಲ್ಲೂ ನೀರು ಬಂತು. ಜಾತ್ರೆಗೆ ಹೋಗಬೇಕಿದ್ದರಿಂದ ತಾನು ಮಾಡಿ ಹೋಗಿದ್ದ ಬದಲಿ ವ್ಯವಸ್ಥೆಯ ಬಗ್ಗೆ ಸಾಹುಕಾರನಲ್ಲಿ ಹೇಳಿದ ಮಾಲಿ ಕ್ಷಮೆ ಕೋರಿದ. ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ತಾನೆ ಲಾಭ!

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಕುದುರೆ ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ. ಯಾಕೆ ಗೊತ್ತೇ? ಕಥೆ ಓದಿ.

VISTARANEWS.COM


on

Horse riding
Koo

ಚೀನಾ ದೇಶದಲ್ಲಿ ಕುದುರೆಗಳ ವ್ಯಾಪಾರಿಯೊಬ್ಬನಿದ್ದ. ಅರಬ್‌ ದೇಶಗಳಿಂದ ಕುದುರೆಗಳನ್ನು ತಂದು ಆತ ಚೀನಾದಲ್ಲಿ ಮಾರುತ್ತಿದ್ದ. ಒಂದಕ್ಕಿಂತ ಒಂದು ಉತ್ತಮವಾದ ಕುದುರೆಗಳನ್ನು ಆತ ಸಾಕಿಕೊಂಡಿದ್ದ. ಒಳ್ಳೆಯ ದರ ಸಿಕ್ಕುತ್ತಿದ್ದಂತೆ ಅವುಗಳನ್ನು ಮಾರುತ್ತಿದ್ದ. ಆತನಿಗೆ ಒಬ್ಬನೇ ಮಗ. ಆ ಮಗನಿಗೂ ಕುದುರೆಗಳ ತಳಿಗಳನ್ನು ಗುರುತಿಸುವುದು, ಅವುಗಳನ್ನು ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ.

ಒಂದು ದಿನ ಆತನ ಮಗ ಕುದುರೆ ಲಾಯದ ಬಾಗಿಲನ್ನು ಮುಚ್ಚುವುದಕ್ಕೆ ಮರೆತ. ರಾತ್ರಿಯಾಯಿತು, ಎಲ್ಲರೂ ಮಲಗಿಬಿಟ್ಟರು. ಬೆಳಗ್ಗೆದ್ದು ನೋಡುವಷ್ಟರಲ್ಲಿ ಉತ್ತಮ ತಳಿಯ ಗಂಡು ಕುದುರೆಯೊಂದು ಲಾಯದಿಂದ ತಪ್ಪಿಸಿಕೊಂಡಿತ್ತು. ವ್ಯಾಪಾರಿಯ ದುಬಾರಿ ಬೆಲೆಯ ಗಂಡು ಕುದುರೆ ಕಾಣೆಯಾಗಿದೆ ಎಂಬುದನ್ನು ತಿಳಿದ ಊರಿನ ಜನ ಬಂದು, ಹಿರಿಯ ವ್ಯಾಪಾರಿಗೆ ಸಮಾಧಾನ ಹೇಳಿದರು. ಆದರೆ ಯಾವುದೇ ಚಿಂತೆಯಿಲ್ಲದವರಂತೆ ನಿರ್ಲಿಪ್ತನಾಗಿದ್ದ ಆತ, ʻಅಯ್ಯೋ ಬಿಡಿ, ಆಗುವುದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳಿ ತಣ್ಣಗೆ ಕೂತಿದ್ದ. ಊರಿನ ಜನರಿಗೆಲ್ಲಾ ಅಚ್ಚರಿಯಾಯಿತು. ಇಷ್ಟೊಂದು ನಷ್ಟವಾಗಿದ್ದಕ್ಕೆ ಬೇಸರದಿಂದ ಆತನಿಗೆ ಹಾಗಾಗಿದೆ ಎಂದು ಭಾವಿಸಿ ಸುಮ್ಮನಾದರು.

ಕೆಲವು ದಿನಗಳ ನಂತರ ಆತನ ಲಾಯದಿಂದ ಓಡಿಹೋಗಿದ್ದ ಕುದುರೆ ಮರಳಿ ಬಂತು. ಆ ಕುದುರೆಯ ಜೊತೆಯಲ್ಲಿ ಕಾಡು ತಳಿಯ ಹೆಣ್ಣು ಕುದುರೆಯೊಂದು ಲಾಯಕ್ಕೆ ಬಂದಿತ್ತು. ಈತನ ಕಾಣೆಯಾದ ದುಬಾರಿ ಕುದುರೆಯ ಜೊತೆಗೆ ಇನ್ನೊಂದು ಕುದುರೆಯೂ ಆತನಿಗೆ ಅನಾಯಾಸವಾಗಿ ಲಭ್ಯವಾಗಿತ್ತು. ಹಾಗಾಗಿ ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುತ್ತಾ ನಷ್ಟದಲ್ಲೂ ಭರವಸೆ ಕಳೆದುಕೊಳ್ಳದೆ ಇದ್ದ ವ್ಯಾಪಾರಿಯ ಮನಸ್ಸು ಏನೆಂಬುದು ಆತನ ಮಗನಿಗೆ ಅರ್ಥವಾಗಿತ್ತು. ಆದರೂ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೇ ಹೇಳುತ್ತಾನಲ್ಲ ತಂದೆ ಎಂದು ವಿಚಿತ್ರವೆನಿಸಿತು.

ಇನ್ನೊಂದು ದಿನ, ತಾನೇ ಸಾಕಿದ್ದ ಕುದುರೆಯೊಂದರ ಮೇಲೆ ವ್ಯಾಪಾರಿಯ ಮಗ ಸವಾರಿ ಮಾಡುತ್ತಿದ್ದ. ಸವಾರ ಹೇಳಿದ ಮಾತನ್ನು ಕೇಳುವಂತೆ ಆ ಕುದುರೆಯನ್ನು ಚನ್ನಾಗಿ ಪಳಗಿಸಲಾಗಿತ್ತು. ಆದರೆ ಹುಲ್ಲುಗಾವಲಿನಲ್ಲಿ ಓಡುತ್ತಿದ್ದ ಕುದರೆ ಇದ್ದಕ್ಕಿದ್ದಂತೆ ಮುಗ್ಗರಿಸಿತು. ಇದರಿಂದ ಕುದುರೆಯ ಮೇಲಿದ್ದ ವರ್ತಕನ ಮಗ ಕೆಳಗೆ ಉರುಳಿ ಬಿದ್ದ. ಆತ ಒಂದು ಕಾಲು ಮುರಿದುಹೋಯಿತು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮುರಿದ ಕಾಲು ಮೊದಲಿನಂತಾಗುವುದು ಅನುಮಾನ, ಆದರೂ ವರ್ಷಗಟ್ಟಲೆ ಸಮಯ ಬೇಕು ಎಂದರು. ಏನೇನೋ ಗಿಡಮೂಲಿಕೆಯ ಔಷಧಿಗಳನ್ನು ಆತನ ಕಾಲಿಗೆ ಕಟ್ಟಿದರು.

ಈ ವಿಷಯ ಊರಿಗೆಲ್ಲಾ ತಿಳಿಯಿತು. ಊರ ಜನರೆಲ್ಲಾ ಇವರ ಮನೆಗೆ ಬಂದು ಸಮಾಧಾನ ಮಾಡತೊಡಗಿದರು. ವರ್ತಕನ ೨೫ ವರ್ಷದ ಮಗ, ಪಾಪ, ಇನ್ನು ವರ್ಷಗಟ್ಟಲೆ ಕುಂಟಬೇಕಲ್ಲ. ಆದರೂ ಪೂರಾ ಮೊದಲಿನಂತಾಗುವುದು ಅನುಮಾನ ಎಂದಿದ್ದಾರಲ್ಲ ವೈದ್ಯರು ಎಂದು ಜನರೆಲ್ಲಾ ಬೇಸರಗೊಂಡು ಆ ಕುದುರೆಯನ್ನು ಶಪಿಸಿದರು. ಆದರೆ ಇದಕ್ಕೂ ನಿರ್ಲಿಪ್ತನಾಗಿದ್ದ ವರ್ತಕ. ʻಚನ್ನಾಗಿ ಪಳಗಿದ ಕುದುರೆ ಮುಗ್ಗರಿಸಿದರೆ ಏನು ಮಾಡುವುದು? ಅದೇನು ಬೇಕೆಂದು ಮಾಡಲಿಲ್ಲವಲ್ಲ, ಪಾಪದ ಪ್ರಾಣಿ. ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡರಾಯಿತುʼ ಎಂದು ವರ್ತಕ. ಮಗನಿಗೆ ಕಾಲು ಮುರಿದ ದುಃಖದಲ್ಲಿ ಆ ವ್ಯಾಪಾರಿಯ ತಲೆ ಕಟ್ಟಿದೆ ಎಂದುಕೊಂಡರು ಜನ.

ಇದನ್ನೂ ಓದಿ : ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಯುದ್ಧ ಘೋಷಣೆಯಾಯಿತು. ಪ್ರತಿ ಮನೆಯಿಂದಲೂ ಯುವಕರು ಸೇನೆಗೆ ಬರಲೇಬೇಕು ಎಂದು ರಾಜನ ಆಜ್ಞೆಯಾಯಿತು. ಊರೂರಿಗೆ ಸೈನಿಕರು ಬಂದರು. ಮನೆಮನೆಗೆ ಭೇಟಿ ನೀಡಿ, ಯುವಕರನ್ನು ಕರೆದೊಯ್ದರು. ವರ್ತಕನ ಮನೆಗೆ ಬಂದರೆ, ಮನೆಯಲ್ಲಿರುವ ಇಬ್ಬರು ಗಂಡಸರ ಪೈಕಿ ಒಬ್ಬ ಮುದುಕ, ಇನ್ನೊಬ್ಬನಿಗೆ ಕಾಲು ಮುರಿದಿದೆ. ಸೈನಿಕರು ತಮ್ಮಷ್ಟಕ್ಕೆ ಮಾತಾಡಿಕೊಂಡು ಹೊರಟುಹೋದರು. ಹಲವಾರು ದಿನಗಳವರೆಗೆ ನಡೆದ ಯುದ್ಧದಲ್ಲಿ ಬಹಳಷ್ಟು ಮಂದಿ ಜೀವ ಕಳೆದುಕೊಂಡರು. ಸಾವಿರಾರು ಮಂದಿ ಕೈ-ಕಾಲು ಕಳೆದುಕೊಂಡರು. ತನಗೆ ಕಾಲು ಮುರಿದಾಗಲೂ ಅಪ್ಪ ಬೇಸರ ಮಾಡದೆ ಇದ್ದಿದ್ದು ಮಗನಿಗೆ ನೆನಪಾಯಿತು. ಕಷ್ಟಗಳ ನಡುವೆ ಭರವಸೆ ಕಳೆದುಕೊಳ್ಳದೆ ಇರಬೇಕೆಂಬ ತಂದೆಯ ಮಾತು ಮಗನಿಗೆ ಅರ್ಥವಾಯಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

leopard
Koo

ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್‌ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್‌ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.

ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್‌ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.

ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.

ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್‌ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್‌ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್‌ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.

ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.

ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.

ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?

ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.

Continue Reading
Advertisement
Lok Sabha Election 2024 DK Shivakumar IT raids on Suresh close aides and Congress protests
Lok Sabha Election 20248 mins ago

Lok Sabha Election 2024: ಡಿ.ಕೆ. ಸುರೇಶ್‌ ಆಪ್ತರ ಮನೆ ಮೇಲೆ ಐಟಿ ರೇಡ್;‌ ಕಾಂಗ್ರೆಸ್‌ ಪ್ರತಿಭಟನೆ, ವಾಗ್ವಾದ

RCB vs SRH
ಕ್ರೀಡೆ11 mins ago

RCB vs SRH: 300 ರನ್​ ಹೊಡೆಸಿಕೊಳ್ಳದಿರಲಿ ಆರ್​ಸಿಬಿ; ನಾಳೆ ಸನ್​ರೈಸರ್ಸ್ ವಿರುದ್ಧ ಕಣಕ್ಕೆ

Mens Neck Chains Fashion
ಫ್ಯಾಷನ್12 mins ago

Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

Summer Tour
ಪ್ರವಾಸ16 mins ago

Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

Congress leader Rahul Gandhi election campaign on April 26 in Ballari
ಬಳ್ಳಾರಿ20 mins ago

Lok Sabha Election 2024: ಏ.26ರಂದು ರಾಹುಲ್‌ ಗಾಂಧಿ ಬಳ್ಳಾರಿಗೆ; ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಪರ ಪ್ರಚಾರ

on April 26 Namma Metro Service extended till late night
Lok Sabha Election 202433 mins ago

Namma Metro: ಏಪ್ರಿಲ್‌ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ತಡರಾತ್ರಿವರೆಗೂ ಸೇವೆ ವಿಸ್ತರಣೆ

Davanagere Lok Sabha constituency BJP candidate Gayatri Siddeshwar election campaign
ದಾವಣಗೆರೆ34 mins ago

Lok Sabha Election 2024: ಹರಿಹರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ

Lok sabha election 2024
ಕರ್ನಾಟಕ39 mins ago

Lok Sabha Election 2024: ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ರಾಜ್ಯ ಒಕ್ಕಲಿಗ ಸಂಘ; ಡಿಕೆಶಿಯನ್ನು ಸಿಎಂ ಮಾಡುವುದಾಗಿ ಶಪಥ

Top 10 Puddings
ಆಹಾರ/ಅಡುಗೆ42 mins ago

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

Nitin Gadkari
ದೇಶ50 mins ago

Nitin Gadkari: ಚುನಾವಣೆ ಪ್ರಚಾರದ ವೇಳೆ ದಿಢೀರ್ ಕುಸಿದು ಬಿದ್ದ ನಿತಿನ್‌ ಗಡ್ಕರಿ; ತುರ್ತು ಚಿಕಿತ್ಸೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌