ಬಾಲಕಿಯರ ಅಪಹರಣ, ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಯುವತಿ ಅಥವಾ ಬಾಲಕಿ ಇಂತಹ ಪ್ರಕರಣಗಳಿಗೆ ಒಳಗಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆಘಾತಕಾರಿ ಅಪಹರಣ ಘಟನೆಯೊಂದು ನಡೆದಿದ್ದು, 6 ಮುಸುಕುಧಾರಿಗಳು 17 ವರ್ಷದ ಬಾಲಕಿಯನ್ನು ಆಕೆಯನ್ನು ಇರಿಸಿದ್ದ ರಿಮಾಂಡ್ ಹೋಮ್‌ನಿಂದ ಮಧ್ಯರಾತ್ರಿಯ ವೇಳೆ ಅಪಹರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Girl Kidnapped) ಸೆರೆಯಾಗಿದೆ.
ಈ ಘಟನೆಯಲ್ಲಿ ಆಘಾತಕಾರಿ ವಿಚಾರವೇನೆಂದರೆ ಮಹಿಳಾ ಗಾರ್ಡ್, ಇತರ ಮೂವರು ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿ ಇರುವಾಗಲೇ ಇಡೀ ಅಪಹರಣವನ್ನು ಕೇವಲ 20 ನಿಮಿಷಗಳಲ್ಲಿ ನಡೆಸಲಾಗಿದೆ. ಈ ವೇಳೆ ಸಿಬ್ಬಂದಿ ಮಲಗಿದ್ದರು ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮುಸುಕುಧಾರಿಗಳು ಕ್ಯಾಂಪಸ್‍ನ ಹಿಂಭಾಗದಲ್ಲಿರುವ 4 ಅಡಿ ಎತ್ತರದ ಗೋಡೆಯನ್ನು ಜಿಗಿದು, ಕೋಲನ್ನು ಬಳಸಿ ಕಿಟಕಿಯ ಮೂಲಕ ಗಾರ್ಡ್ ರೂಮ್‌ನಿಂದ ಕೀಗಳನ್ನು ತೆಗೆದುಕೊಂಡು ಬಾಗಿಲು ತೆರೆದಿದ್ದಾರೆ. ಅಲ್ಲದೆ, ಅವರು ಹುಡುಗಿಯನ್ನು ಕರೆದು, ಅವಳನ್ನು ಎಬ್ಬಿಸಿ ನಂತರ ತಮ್ಮೊಂದಿಗೆ ಕರೆದೊಯ್ದರು. ಇಡೀ ಭದ್ರತಾ ವ್ಯವಸ್ಥೆಗೆ ತಿಳಿಯದಂತೆ ಈ ಕೃತ್ಯ ಎಸಗಲಾಗಿದೆ.
#WATCH | CCTV Footage: Six Masked Men Abduct 17-Year-Old Girl In Middle Of The Night From Shelter Home In Gwalior #MPNews #MadhyaPradesh pic.twitter.com/zUtU4KJ23C
— Free Press Madhya Pradesh (@FreePressMP) July 21, 2024
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ, ಹುಡುಗಿ ಹೊರಗೆ ಹೋಗುವಾಗ ಮುಖವಾಡ ಧರಿಸಿದ ಪುರುಷರಲ್ಲಿ ಒಬ್ಬರೊಂದಿಗೆ ಕೈ ಹಿಡಿದಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಕರ್ತವ್ಯದಲ್ಲಿದ್ದ ಮಹಿಳಾ ಗಾರ್ಡ್ ನಿದ್ರೆಯಲ್ಲಿದ್ದರು. ಮುಖ್ಯ ದ್ವಾರದಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಆದರೆ ಒಳಗೆ ನಡೆಯುತ್ತಿರುವ ಘಟನೆಯ ಬಗ್ಗೆ ಇವರಿಗೆ ಗೊತ್ತೇ ಆಗಲಿಲ್ಲ.
ಹಾಗೇ ಈ ಘಟನೆಯಲ್ಲಿ ಹುಡುಗಿಯ ಗೆಳೆಯ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಹರಣಕಾರರಿಗೆ ಸ್ಥಳದ ಬಗ್ಗೆ ಪ್ರತಿಯೊಂದು ವಿವರವೂ ತಿಳಿದಿರುವಂತೆ ತೋರಿದ್ದರಿಂದ ಇಡೀ ಘಟನೆಯನ್ನು ಪ್ಲ್ಯಾನ್ ಮಾಡಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಈ ಹಿಂದೆ ಎರಡು ಬಾರಿ ಓಡಿಹೋಗಲು ಪ್ರಯತ್ನಿಸಿದ್ದಳು. ಆಕೆ ಈ ಹಿಂದೆ, ತಾಟಿಪುರ ಪ್ರದೇಶದಿಂದ ಕಾಣೆಯಾಗಿದ್ದಳು ಮತ್ತು ಈ ಬಗ್ಗೆ ಅವಳ ಗೆಳೆಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್!
ನಂತರ ಬಾಲಕಿಯನ್ನು ಪೊಲೀಸರು ಹುಡುಕಿ ಜೂನ್ 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವಳು ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸಿದಕ್ಕೆ, ನಂತರ ನ್ಯಾಯಾಲಯವು ಅವಳನ್ನು ಬಾಲಕಿಯರ ಆಶ್ರಮಕ್ಕೆ ಕಳುಹಿಸಿತ್ತು. ಅವಳು ಈ ಹಿಂದೆ ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದ್ದರಿಂದ ಅವಳನ್ನು ಮನೆಯವರು ಕೋಣೆಯಲ್ಲಿ ಕೂಡಿಹಾಕಿದ್ದರು ಎಂಬುದಾಗಿ ತಿಳಿದುಬಂದಿದೆ. ಈಗ, ಬಾಲಕಿಯ ಆಶ್ರಮದಲ್ಲಿ ಯಾರಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.