ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿರುತ್ತದೆ. ಡಬಲ್ ರೋಡ್ ಆದ ನಂತರವಂತೂ ವಾಹನಗಳ ಸ್ಪೀಡ್‌ಗೆ ಬ್ರೇಕ್ ಇಲ್ಲದಂತಾಗಿದೆ. ತಮ್ಮ ಎದುರಿಗಿದ್ದವರನ್ನು ಗುದ್ದಿಕೊಂಡು ಹೋಗುವಷ್ಟು ಸ್ಪೀಡ್‌ನಲ್ಲಿ ಇರುತ್ತಾರೆ. ಇದರಿಂದ ಅನೇಕರು ಸಾವನಪ್ಪಿದ್ದಾರೆ ಕೂಡ. ಇದೀಗ ಮಹಾರಾಷ್ಟ್ರದಲ್ಲಿ ಇಂಥದೊಂದು ಘೋರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case) ಆಗಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಸೋಮವಾರ ವೇಗವಾಗಿ ಚಲಿಸುತ್ತಿದ್ದ ಬಸ್‌ವೊಂದು ಸೈಕಲ್‌ನಲ್ಲಿ ಹೋಗುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕ್ಕಿ ಹೊಡೆದ ಬಸ್ ಚಾಲಕ ಪರಾರಿಯಾಗಿದ್ದಾನೆ. ನಾಗ್ಪುರದ ರಘುಜಿ ನಗರ ಪ್ರದೇಶದಲ್ಲಿ ಬೆಳಗ್ಗೆ 8.38ಕ್ಕೆ ಈ ಅಪಘಾತ ಸಂಭವಿಸಿದೆ ಎಂಬುದಾಗಿ ತಿಳಿದುಬಂದಿದೆ.
ರತ್ನಾಕರ್ ದೀಕ್ಷಿತ್ (60) ಸಾವನಪ್ಪಿದ ವ್ಯಕ್ತಿ. ವಿಡಿಯೊದಲ್ಲಿ ರತ್ನಾಕರ್ ದೀಕ್ಷಿತ್ ಅವರು ತಮ್ಮ ಸೈಕಲ್‍ನಲ್ಲಿ ಜನನಿಬಿಡ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಬಸ್ ಅವರ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅವರ ಸೈಕಲ್ ತಿರುಗುತ್ತಾ ಬಸ್ಸಿನ ಹಿಂಭಾಗದ ಚಕ್ರಗಳ ಅಡಿಯಲ್ಲಿ ಬಂದ ಪರಿಣಾಮ ಅವರು ಚಕ್ರದ ಅಡಿಭಾಗಕ್ಕೆ ಸಿಲುಕಿಕೊಂಡಿದ್ದಾರೆ.
ಅಪಘಾತದ ನಂತರ, ಬಸ್ ಚಾಲಕ ಗಾಯಗೊಂಡ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು ಬಸ್‍ನ ಜೊತೆಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಸ್ಥಳೀಯರು ಗಾಯಗೊಂಡ ರತ್ನಾಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಆಸ್ಪತ್ರೆಯಲ್ಲಿ ನಿಧನರಾದರು ಎನ್ನಲಾಗಿದೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಕಾರಣ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಬಸ್ ಅನ್ನು ಗುರುತಿಸಿದ್ದು, ಬಸ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮುಂಬೈನ ವರ್ಲಿಯಲ್ಲಿ ಶಿವಸೇನೆ ನಾಯಕನ ಮಗ ತನ್ನ ತಂದೆಯ ಬಿಎಂಡಬ್ಲ್ಯೂ ಕಾರಿನಿಂದ ಡಿಕ್ಕಿ ಹೊಡೆದು ಮೀನುಗಾರ ಮಹಿಳೆಯನ್ನು ಕೊಂದ ಕೆಲವು ದಿನಗಳ ನಂತರ ಈ ವಿಡಿಯೊ ಬಂದಿದೆ.
ಶಿವಸೇನೆ ಉಪ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಜುಹುನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿ ಡ್ರಿಂಕ್ಸ್ ಮಾಡಿ ತನ್ನ ತಂದೆಯ ಬಿಎಂಡಬ್ಲ್ಯೂ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರಣ ವರ್ಲಿಯ ಅಟ್ರಿಯಾ ಮಾಲ್ ಬಳಿ ಮೀನುಗಾರ ಮಹಿಳೆ ಕಾವೇರಿ ತನ್ನ ಪತಿ ಪ್ರದೀಪ್ ನಖ್ವಾ ಅವರ ಜೊತೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಪ.ಬಂಗಾಳದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಬರ್ಬರ ಹಲ್ಲೆ; ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮೇಲೆ ಕಿಡಿಕಾರಿದ ಜನ
ಹಾನಿಗೊಳಗಾದ ಕಾರನ್ನು ಅಪಘಾತದ ಸ್ಥಳದಿಂದ ಸುಮಾರು 10 ಕಿ.ಮೀ ದೂರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಶಿವಸೇನೆ ಉಪ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಸುತ್ತೋಲೆ (ಎಲ್ ಒಸಿ) ಹೊರಡಿಸಿದ್ದರು. ವಿಚಾರಣೆಯ ನಂತರ ಅವರ ತಂದೆ ರಾಜೇಶ್ ಶಾ ಮತ್ತು ಕುಟುಂಬ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ಅವರನ್ನು ಬಂಧಿಸಿದ್ದರು. ರಾಜೇಶ್ ಶಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.