Site icon Vistara News

Chia Seeds Day: ಇಂದು ಚಿಯಾ ಸೀಡ್ಸ್‌ ದಿನ! ಇದರ ಬಳಕೆ ಹೇಗೆ? ಏನು ಪ್ರಯೋಜನ?

chia seeds day

: ಸುಪ್ರೀತಾ ಶಾಸ್ತ್ರೀ

ʼಚಿಯಾ’ ಎಂಬ ಪದವು ಸ್ಪ್ಯಾನಿಷ್ ಪದ ʼಚಿಯಾನ್’ನಿಂದ ಬಂದಿದೆ, ಇದರರ್ಥ ಎಣ್ಣೆಯುಕ್ತ. ತೈಲದ ಅಂಶವು ಇದರಲ್ಲಿ ಜಾಸ್ತಿ. ಚಿಯಾ ಬೀಜಗಳನ್ನು ಕನ್ನಡದಲ್ಲಿ ಕಾಮಕಸ್ತೂರಿ ಎನ್ನುತ್ತೇವೆ. ಸೂಪರ್ ಫುಡ್‌ಗಳಲ್ಲಿ ಒಂದಾದ ಈ ಚಿಯಾ ಬೀಜಗಳ ಮೂಲ ಮೆಕ್ಸಿಕೋ. ಮೂಲದ ವೈಜ್ಞಾನಿಕ ಹೆಸರು ಸಾಲ್ವಿಯಾ ಹಿಸ್ಪಾನಿಕಾ. ಇದು ಮಿಂಟ್ (ಪುದೀನ) ಕುಟುಂಬಕ್ಕೆ ಸೇರಿದೆ. ಮೆಕ್ಸಿಕೋ, ಗ್ವಾಟೆಮಾಲಾ, ಪೆರು, ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಅಮೇರಿಕಾದಲ್ಲಿ ಇದು ಪ್ರಮುಖ ಬೆಳೆ.

ಸಿರಿಧಾನ್ಯವೂ ಆಗಿರುವ ಚಿಯಾ ಬೀಜಗಳು ಒಣ ಹವಾಮಾನದಲ್ಲಿ, ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯಬಹುದಾದ ಪ್ರಮುಖ ವಾಣಿಜ್ಯ ಬೆಳೆ. ವಾರ್ಷಿಕ ಬೆಳೆಯಾದ ಚಿಯಾ ಬೀಜಗಳು 3-4 ತಿಂಗಳಿಗೊಮ್ಮೆ ಇಳುವರಿ ನೀಡುತ್ತದೆ. ಇದನ್ನು ಅಷ್ಟೇನೂ ನೀರಿನ ಅನುಕೂಲವಿಲ್ಲದ ಗುಡ್ಡಗಾಡು ಪ್ರದೇಶದಲ್ಲೂ ಬೆಳೆಯಬಹುದು. ಯಾವ ಪ್ರಾಣಿಗಳೂ ಇದನ್ನು ತಿನ್ನದೇ ಇರುವುದರಿಂದ ನಷ್ಟ ಕಡಿಮೆ. ಬೇಸಾಯ ಇತರೆ ಬೆಳೆಗೆ ಹೋಲಿಸಿದಾಗ ಕಡಿಮೆ ಶ್ರಮ ಹಾಗೂ ಈ ಬೆಳೆಗೆ ರೋಗ ರುಜಿನಗಳು ಕಡಿಮೆ. ಸಾಮಾನ್ಯವಾಗಿ ಸಬ್ಜ ಬೀಜ /ತುಳಸಿ ಬೀಜ ಒಂದೇ ಎಂದು ಭಾವಿಸುತ್ತಾರೆ. ಆದರೆ ಎರಡನ್ನೂ ಒಟ್ಟಿಗೆ ಇಟ್ಟು ಹೋಲಿಸಿದಾಗ ವ್ಯತ್ಯಾಸ ತಿಳಿಯುತ್ತದೆ. ಸಬ್ಜ ಬೀಜಗಳು ಕಪ್ಪು ಬಣ್ಣ, ಅತಿಸಣ್ಣ, ದುಂಡಾಗಿರುತ್ತವೆ. ಸಾಮಾನ್ಯವಾಗಿ ಸಣ್ಣ ಪರಿಮಳ ಹೊಂದಿರುತ್ತದೆ ಮತ್ತು ಭಾರತದ ಮೂಲದ್ದಾಗಿದೆ. ಚಿಯಾ ಬೀಜಗಳು ಓವಲ್ ಆಕಾರದಲ್ಲಿದ್ದು ಬೂದು, ಬಿಳಿ, ಕಪ್ಪು ಬಣ್ಣವಿದ್ದು ಪರಿಮಳವಿರುವುದಿಲ್ಲ. ಇವೆರಡರ ಪೌಷ್ಟಿಕಾಂಶದ ಪ್ರಮಾಣ ಬೇರೆ ಬೇರೆ ಇದೆ.

ಚಿಯಾ ಬೀಜ ಸೇವನೆಯ ಲಾಭವೇನು?

ಸುಮಾರು ಎರಡು ಟೇಬಲ್‌ ಸ್ಪೂನ್‌ಗಳು 137 ಕ್ಯಾಲೋರಿಗಳು, 4 ಗ್ರಾಂ ಪ್ರೊಟೀನ್, 11 ಗ್ರಾಂ ಆಹಾರ ಪಾನೀಯ ಮತ್ತು 9 ಗ್ರಾಂ ಕೊಬ್ಬನ್ನು ಒದಗಿಸುತ್ತದೆ. ಆಲ್ಫಾ-ಲಿನೋಲೆನಿಕ್ ಆಮ್ಲ (ALA) ಎಂದು ಕರೆಯಲ್ಪಡುವ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಅಪರೂಪದ ಆಹಾರ! ಚಿಯಾ ಬೀಜಗಳಲ್ಲಿನ ಮುಖ್ಯ ಪೋಷಕಾಂಶಗಳು, ಪ್ರೋಟೀನ್, ಕ್ಯಾಲ್ಸಿಯಂ, ರಂಜಕ ಮತ್ತು ಸತುವನ್ನು ಒಳಗೊಂಡಿವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ʼಚಿಯಾ ಬೀಜವು ಕ್ಲೋರೊಜೆನಿಕ್ ಆಮ್ಲ, ಕೆಫೀಕ್ ಆಮ್ಲ, ಮೈರಿಸೆಟಿನ್, ಕ್ವೆರ್ಸೆಟಿನ್ ಮತ್ತು ಕೆಂಪ್‌ಫೆರಾಲ್‌ಗಳ ಉಪಸ್ಥಿತಿಯೊಂದಿಗೆ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಮಧುಮೇಹ, ಡಿಸ್ಲಿಪಿಡೆಮಿಯಾ ಮತ್ತು ಅಧಿಕ ರಕ್ತದೊತ್ತಡದ ವಿರುದ್ಧ ಚಿಯಾ ಬೀಜಗಳು ಪರಿಣಾಮಕಾರಿ ಎಂದು ಸಂಶೋಧನೆ ತಿಳಿಸುತ್ತದೆ.

ಚಿಯಾದಲ್ಲಿ ಸಾಕಷ್ಟು ನೀರಿನಂಶವಿದ್ದು, ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ. ಚಿಯಾ ಸೀಡ್ಸ್‌ಗಳಲ್ಲಿ ಪ್ರೊಟೀನ್ ಹೇರಳವಾಗಿರುವುದರಿಂದ ಕೂದಲು ಮತ್ತು ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ತೂಕ ಇಳಿಕೆಗೆ ನೆರವು ನೀಡುವ ಆರೋಗ್ಯಕರ ವಿಧವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಚಿಯಾ ಬೀಜಗಳ ಸೇವನೆ ತೂಕ ಕಳೆದುಕೊಳ್ಳಲು ಸಹಕಾರಿ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸುಲಭಗೊಳ್ಳುವುದು.

ಇದನ್ನೂ ಓದಿ: Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

ಚಿಯಾ ಬೀಜಗಳು 14% ಪ್ರೋಟೀನ್‌ನಿಂದ ಕೂಡಿದೆ. ಇವುಗಳಲ್ಲಿ ಪ್ರಭಾವಶಾಲಿ ಅಮೈನೋ ಆಮ್ಲಗಳೂ ಇವೆ. ಪ್ರೋಟೀನ್ ತೂಕ ಇಳಿಕೆ ಮತ್ತು ಸ್ನಾಯುಗಳ ಬೆಳವಣಿಗೆ ಎರಡಕ್ಕೂ ಅಗತ್ಯವಾದ ಸೂಕ್ಷ್ಮ ಪೋಷಕಾಂಶ ಅಥವಾ ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿದೆ. ಪ್ರೊಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುವ ಭಾವನೆ ಉಂಟಾಗುತ್ತದೆ ಮತ್ತು ಅನಗತ್ಯ ಕ್ಯಾಲೊರಿ ಸೇವನೆಯಿಂದ ತಡೆಯುತ್ತದೆ. ಚಿಯಾ ಬೀಜಗಳಲ್ಲಿ ಒಮೆಗಾ -3 ಮತ್ತು ALFA- ಆಲ್ಫಾ-ಲಿನೋಲೆನಿಕ್ ಆಸಿಡ್ ಅಂಶವಿದೆ. ಇವು ಹೃದಯವನ್ನು ರಕ್ಷಿಸುವಲ್ಲಿ ಸಹಕಾರಿ. ಚಿಯಾ ಬೀಜಗಳು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದೇ ಆಹಾರ ವಸ್ತುಗಳನ್ನು ಮಿತಿಗಿಂತ ಹೆಚ್ಚು ಸೇವಿಸಬಾರದು.

ಬಳಸುವುದು ಹೇಗೆ?

ಚಿಯಾ ಬೀಜಗಳನ್ನು ಹೆಚ್ಚಾಗಿ ಪಾನೀಯದಲ್ಲಿ ಮಿಶ್ರಣ ಮಾಡಲಾಗುತ್ತದೆ. ಕನಿಷ್ಠ 15-20 ನಿಮಿಷ ನೀರಿನಲ್ಲಿ ನೆನೆಸಬೇಕು. ನೀರಿನಲ್ಲಿ ಹಾಕಿದಾಗ ಚಿಯಾ ಜೆಲ್ ಮಾದರಿಯ ರಚನೆಯನ್ನು ಉತ್ಪಾದಿಸುತ್ತದೆ. ಚಿಯಾ ಬೀಜಗಳನ್ನು 15-20 ನಿಮಿಷ ನೀರಿನಲ್ಲಿ ನೆನಸಿಟ್ಟರೆ ಬಳಸಲು ಯೋಗ್ಯವಾಗುತ್ತದೆ. ನೀರಿನಲ್ಲಿ, ಮೊಸರು, ಮಜ್ಜಿಗೆ, ಎಳನೀರು, ಮಿಲ್ಕ್ ಶೇಕ್, ಪ್ರೊಟೀನ್ ಶೇಕ್, ಎನರ್ಜಿ ಬಾರ್‌ಗಳಲ್ಲಿ ಬಳಸಬಹುದು. ಇಷ್ಟೇ ಅಲ್ಲದೇ ಚಿಯಾ ಸೀಡ್ಸ್ ಫುಡ್ಡಿಂಗ್, ಐಸ್‌ಕ್ರೀಮ್, ಫಲೂದಾಗಳಲ್ಲಿ ಇದರ ಇರುವಿಕೆ ಅತ್ಯಗತ್ಯ. ಅಧ್ಯಯನಗಳ ಬಳಿಕ ತಜ್ಞರು ಸಲಹೆ ಮಾಡುವ ಪ್ರಮಾಣವೆಂದರೆ ಪ್ರತಿ ಬಾರಿ ಇಪ್ಪತ್ತು ಗ್ರಾಂನಷ್ಟು (ಸುಮಾರು ಒಂದೂವರೆ ದೊಡ್ಡ ಚಮಚ) ಚಿಯಾಗಿಂತ ಹೆಚ್ಚಿನ ಪ್ರಮಾಣವನ್ನು ಸೇವಿಸಬಾರದು.

ಇದನ್ನೂ ಓದಿ: Food Tips: ತೂಕ ಇಳಿಕೆಯ ಸಂಗಾತಿ ಓಟ್ಸ್‌ನಲ್ಲೂ ರುಚಿಕರ ಆಯ್ಕೆಗಳು!

Exit mobile version