ಕೋವಿಡ್ ೧೯ ಸೋಂಕಿಗೆ ತುತ್ತಾದವರಲ್ಲಿ ಉಂಟಾದ ರೋಗನಿರೋಧಕ ಪ್ರತಿಕ್ರಿಯೆಯಿಂದಾಗಿ ಮೆದುಳಿನ ರಕ್ತನಾಳಗಳಿಗೆ ಹಾನಿಯಾಗುವ ಸಾಧ್ಯತೆಯನ್ನು ಅಧ್ಯಯನವೊಂದು ಮುಂದಿಟ್ಟಿದೆ.
ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್) ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಸೋಂಕಿನಿಂದ ಶರೀರದಲ್ಲಿ ಉದ್ಭವಿಸಿದ ಪ್ರತಿರೋಧಕ ಶಕ್ತಿಯಿಂದಾಗಿ ಮೆದುಳಿನ ರಕ್ತನಾಳಗಳಿಗೆ ಘಾಸಿಯಾಗಿ, ಅಲ್ಪ ಅಥವಾ ದೀರ್ಘಕಾಲೀನ ನರಸಂಬಂಧಿ ಸಮಸ್ಯೆಗಳಿಂದ ರೋಗಿಗಳು ಬಳಲುವ ಸಾಧ್ಯತೆಯಿರುವುದಾಗಿ ಹೇಳಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ೯ ಮಂದಿಯ ಮೆದುಳಿನ ಅಧ್ಯಯನ ನಡೆಸಿದಾಗ ಕಂಡುಬಂದ ಮಾಹಿತಿಯನ್ನೂ ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.
ಶರೀರವನ್ನು ಪ್ರವೇಶಿಸುವ ವೈರಸ್ ಅಥವಾ ಇನ್ನಾವುದೋ ಹೊಸ ಕಾಯಗಳಿಗೆ ಪ್ರತಿಯಾಗಿ ದೇಹದಲ್ಲಿ ನೈಸರ್ಗಿಕವಾಗಿ ಪ್ರತಿರೋಧಕ ಪ್ರೊಟೀನ್‌ಗಳು ಉತ್ಪನ್ನವಾಗುತ್ತವೆ. ಇದರಿಂದಾಗಿ, ಮೆದುಳಿನ ರಕ್ತನಾಳಗಳ ಒಳಪದರಗಳಿಗೆ ಹಾನಿಯಾಗುವ ಬಗ್ಗೆ ಈ ಅಧ್ಯಯನದಲ್ಲಿ ಮಾಹಿತಿ ದೊರೆತಿದೆ. ಜೊತೆಗೆ, ಹೀಗೆ ತೊಂದರೆಗೀಡಾದ ರೋಗಿಗಳಲ್ಲಿ ವೈರಸ್ ನೇರವಾಗಿ ಮೆದುಳಿಗೆ ಹಾನಿಮಾಡಿಲ್ಲ ಎಂಬ ಬಗ್ಗೆಯೂ ಪೂರಕ ಮಾಹಿತಿ ಲಭ್ಯವಾದಂತಾಗಿದೆ. ಮಾತ್ರವಲ್ಲ, ಕೋವಿಡ್ ನಂತರ ದೀರ್ಘಕಾಲದವರೆಗೆ ನರಸಂಬಂಧಿ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಶುಶ್ರೂಷೆಯ ವಿಧಾನಗಳನ್ನು ಅರಿಯುವುದಕ್ಕೂ ಈ ಅಧ್ಯಯನ ಸಹಕಾರಿಯಾಗಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆಯಿಂದ ಯುವಜನರಲ್ಲಿ ಹೃದಯ ರೋಗ ಹೆಚ್ಚಾಗಿದ್ದು ನಿಜವೇ?
ʻಈ ಮೊದಲು ಕೋವಿಡ್ ರೋಗಿಗಳ ಮರಣೋತ್ತರ ಪರೀಕ್ಷೆಗಳಲ್ಲಿ ಮೆದುಳಿಗೆ ಹಾನಿಯಾಗಿರುವುದು ಕಂಡುಬಂದಿತ್ತು. ಆದರೆ ಕಾರಣ ಸ್ಪಷ್ಟವಾಗಿರಲಿಲ್ಲ. ಈ ಅಧ್ಯಯನದಿಂದ ಕೆಲವು ಮಹತ್ವದ ಮಾಹಿತಿಗಳು ದೊರೆತಿವೆ. ಕೋವಿಡ್ ಸೋಂಕಿಗೆ ತುತ್ತಾದವರು ದೀರ್ಘಕಾಲದವರೆಗೆ ನರ ಸಮಸ್ಯೆಗಳಿಂದ ಬಳಲುವುದನ್ನು ನೋಡಿದ್ದೇವೆ. ಇದೀಗ ಇವುಗಳಿಗೆ ಚಿಕಿತ್ಸಾ ಕ್ರಮವೂ ಸ್ಪಷ್ಟವಾಗಲಿದೆʼ ಎಂದು ಅಧ್ಯಯನದ ಪ್ರಮುಖ ಭಾಗವಾಗಿದ್ದ ಡಾ. ಅವೀಂದ್ರ ನಾಥ್ ಹೇಳಿದರು.
ಮೆದುಳಿಗೆ ಹಾನಿಕಾರಕವಾದ ವಸ್ತುಗಳನ್ನು ತಡೆದು ಅಗತ್ಯ ವಸ್ತುಗಳು ಮಾತ್ರವೇ ಪೂರೈಕೆಯಾಗುವಂತೆ ನೋಡುಕೊಳ್ಳುವ ಎಂಡೋಥೇಲಿಯಲ್ ಜೀವಕೋಶಗಳ ಮೇಲೆ ಪ್ರತಿರೋಧಕ ಪ್ರೊಟೀನ್‌ಗಳು ಗುರಿತಪ್ಪಿ ದಾಳಿ ಮಾಡಿ, ಅದರಿಂದ ರಕ್ತಕ್ಕೆ ಪೊಟ್ರೀನ್‌ಗಳ ಸೋರಿಕೆಯಾಗಿ, ರಕ್ತ ಹೆಪ್ಪುಗಟ್ಟುವಂಥ ಕ್ರಿಯೆಗಳನ್ನು ಗುರುತಿಸಲಾಗಿದೆ. ಇದರಿಂದಾಗಿ ಪಾರ್ಶ್ವವಾಯುವಿನಂತಹ ಸಮಸ್ಯೆಗಳಿಗೂ ತುತ್ತಾಗುವ ಅಪಾಯವಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Covid-19 News | ಕೋವಿಡ್ ಪೀಡಿತ ಶೇ. 50ರಷ್ಟು ಮಕ್ಕಳಲ್ಲಿ ಸೈಡ್ ಎಫೆಕ್ಟ್