Site icon Vistara News

Diwali sweets | ಹಬ್ಬವೊಂದು ಸಿಹಿ ಹಲವು: ದೀಪಾವಳಿಗೆ ವಿವಿಧ ರಾಜ್ಯಗಳ ಸಿಹಿತಿಂಡಿ ಸ್ಪೆಷಲ್!

sweets

ದೀಪಾವಳಿ ನಮ್ಮ ದೇಶದ ಬಹುದೊಡ್ಡ ಹಬ್ಬ. ಮನೆಯ ಧೂಳನ್ನೆಲ್ಲ ಒರೆಸಿ ತೆಗೆದು ಸ್ವಚ್ಛ ಮಾಡಿ ಮೊದಲೇ ರೆಡಿ ಮಾಡಿಕೊಂಡು, ಹೊಸ ಬಟ್ಟೆ ತೊಟ್ಟು ದೀಪ ಹಚ್ಚಿ, ನೆರೆಹೊರೆ ನೆಂಟರಿಷ್ಟರಿಗೆಲ್ಲಾ ಸಿಹಿ ಹಂಚಿ, ದೀಪ ಬೆಳಗಿಸಿ ಕತ್ತಲೆಯನ್ನು ಕಳೆದು ಬೆಳಕನ್ನು ಪಸರಿಸುವ ಹಬ್ಬ. ಇಂತಹ ಹಬ್ಬ ದೇಶದೆಲ್ಲೆಡೆ ಬಹುತೇಕ ಒಂದೇ ಮಾದರಿಯಲ್ಲಿ ಆಚರಿಸಿದರೂ, ಹಬ್ಬಕ್ಕೆ ಮಾಡುವ ತಿಂಡಿ ತಿನಿಸು ಊಟೋಪಚಾರಗಳಲ್ಲಿ ಖಂಡಿತವಾಗಿಯೂ ಆಯಾ ಊರಿನ ಸ್ಥಳೀಯ ತಿನಿಸುಗಳ ಮೇಲುಗೈ ಇದ್ದೇ ಇರುತ್ತದೆ. ಕರ್ನಾಟಕದವರೊಂದು ಸಿಹಿ ತಿಂದರೆ, ಉತ್ತರಾಖಂಡದ ಮಂದಿ ಇನ್ನೊಂದು ಸಿಹಿ ತಿನ್ನುತ್ತಾರೆ. ಪಶ್ಚಿಮ ಬಂಗಾಳದವರಿಗೆ ತಮ್ಮ ಇನ್ನೊಂದು ಸಾಂಪ್ರದಾಯಿಕ ತಿನಿಸು ದೀಪಾವಳಿಯಲ್ಲಿ ಪ್ರಾಮುಖ್ಯತೆ ಪಡೆದರೆ, ಗುಜರಾತಿನ ಮಂದಿಗೆ ಅವರದೇ ಸಿಹಿಗೆ ಬಲು ಪ್ರಾಶಸ್ತ್ಯ. ಸಿಹಿಯ ಹೆಸರು ಬೇರೆಬೇರೆಯಾದರೇನಂತೆ, ಎಲ್ಲರ ಸಿಹಿಯಲ್ಲೂ ಇರುವ ಭಾವ ಒಂದೇ ಎಂದು ಸಂಭ್ರಮಿಸುವ ಹಬ್ಬವಿದು. ಹಾಗಾದರೆ, ದೀಪಾವಳಿಗೆ ಬೇರೆ ಬೇರೆ ರಾಜ್ಯಗಳ ಮಂದಿ ಮಾಡಿ ತಿನ್ನುವ ಸಾಂಪ್ರದಾಯಿಕ ಸಿಹಿತಿನಿಸುಗಳ ಬಗ್ಗೆ ತಿಳಿಯೋಣ.

೧. ಚೊಡ್ಡೋ ಶಾಕ್‌, ಪಶ್ಚಿಮ ಬಂಗಾಳ: ಹೇಳಿ ಕೇಳಿ ಪಶ್ಚಿಮ ಬಂಗಾಳದ ಮಂದಿ ಸಿಹಿಪ್ರಿಯರು. ಇವರಿಗೆ ಸಿಹಿತಿನ್ನಲು ಹಬ್ಬ ಹರಿದಿನಗಳು ಬೇಕಾಗಿಲ್ಲ. ಬೆಳಗ್ಗೆದ್ದ ಕೂಡಲೇ ಜಿಲೇಬಿ ಇಲ್ಲದಿದ್ದರೆ ಬೆಂಗಾಲಿಗಳಿಗೆ ಏನೋ ಮಿಸ್‌ ಮಾಡಿದ ಫೀಲು. ಹಾಗಾಗಿ, ಇಲ್ಲಿನ ಪ್ರಮುಖ ಹಬ್ಬಗಳಾದ ನವರಾತ್ರಿ, ದೀಪಾವಳಿ ಬಂದರೆ ಸಾಕು, ಇಲ್ಲಿನ ಮಂದಿ ಕೇಜಿಗಟ್ಟಲೆ ಸಿಹಿ ಹೊಟ್ಟೆಗೆ ಹಾಕುತ್ತಾರೆ. ದೀಪಾವಳಿಯ ದಿನ ಕಾಳಿ ಪೂಜೆಯನ್ನೂ ಮಾಡುವ ಇವರು, ಕಾಳಿಗೆಂದೇ ಚೊಡ್ಡೋ ಶಾಕ್‌ ಎಂಬ ಸಿಹಿತಿನಿಸನ್ನು ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರಂತೆ. ಈ ಸಿಹಿತಿಂಡಿಗೆ ೧೪ ಬಗೆಯ ತರಕಾರಿಗಳನ್ನು ಬಳಸುವುದು ಇದರ ವಿಶೇಷ. ಕೇವಲ ದೀಪಾವಳಿ ಸಂದರ್ಭ ಮಾತ್ರ ಇದನ್ನು ತಯಾರಿಸುವ ಇವರಿಗೆ ಈ ಸಿಹಿಯ ಮೂಲಕ ದುಷ್ಟಶಕ್ತಿಯು ದೂರವಾಗಿ ಎಲ್ಲೆಡೆ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಂತೆ!

೨. ಮಾವಾ ಕಚೋಡಿ, ರಾಜಸ್ಥಾನ: ರಾಜಸ್ಥಾನದ ಮಂದಿಯೂ ಸಿಹಿ ಪ್ರಿಯರು. ಇದೊಂದು ರಾಜಮರ್ಯಾದೆಯಿರುವ ಸಿಹಿ ತಿಂಡಿ. ಸಿಹಿ ಖೋವಾವನ್ನು ಒಳಗೆ ಹೂರಣದಂತೆ ಹಾಕಿ, ಮೈದಾ ಅಥವಾ ಗೋಧಿ ಹಿಟ್ಟಿನಲ್ಲಿ ಕಚೋಡಿಯ ಆಕಾರ ಬರಿಸಿ, ಕರಿದು ತೆಗೆದ ಮೇಲೆ ಸಕ್ಕರೆ ಪಾಕದಲ್ಲಿ ಅದ್ದಿಡುವ ಸಿಹಿ ತಿನಿಸಿದು. ಒಂಥರಾ ಸಿಹಿ ಕುರುಕಲು ಇದು. ಇದಷ್ಟೇ ಅಲ್ಲದೆ, ಅಂಜೂರದ ಕಟ್ಲೆಟ್‌, ಮಾವಾ ಮಿಶ್ರಿ, ಘೇವರ್‌ ಎಂಬ ಸಿಹಿತಿನಿಸುಗಳೂ ಕೂಡಾ ಇಲ್ಲಿ ದೀಪಾವಳಿಯ ಸಂದರ್ಭ ವಿಶೇಷವೆಂಬ ನಂಬಿಕೆ.

೩. ನಾರಿಕೋಲ್‌ ಲಾಡು, ಅಸ್ಸಾಂ: ಅಸ್ಸಾಂನ ಮಂದಿಗೂ ದೀಪಾವಳಿಯೆಂದರೆ ವಿಶೇಷ ಹಬ್ಬ. ಇಲ್ಲಿನ ಮಂದಿ ದೀಪಾವಳಿ ಸಮಯದಲ್ಲಿ ಹಾಗೂ ಬಿಹು ಎಂಬ ಅವರ ವಿಶೇಷ ಸಾಂಪ್ರದಾಯಿಕ ಹಬ್ಬದ ಸಂದರ್ಭ ಈ ಸಿಹಿತಿಂಡಿಯನ್ನು ಮಾಡುತ್ತಾರೆ. ತೆಂಗಿನ ತುರಿ, ಬೆಲ್ಲ/ಸಕ್ಕರೆ, ಏಲಕ್ಕಿ ಪುಡಿ, ಹಾಗೂ ತುಪ್ಪ ಹಾಕಿ ಮಾಡು ಬಹಳ ಸುಲಭವಾದ ಸಿಹಿತಿನಿಸಿದು.

೪. ಸಿಂಘಾಲ್‌, ಉತ್ತರಾಖಂಡ: ಹಿಮಾಲಯದ ಕುಮಾಂವ್‌ ಪ್ರಾಂತ್ಯದ ಮಂದಿ ಮಾಡುವ ಸಾಂಪ್ರದಾಯಿಕ ಸಿತಿನಿಸಿದು. ದೀಪಾವಳಿ ಹಾಗೂ ಇತರ ಹಬ್ಬಗಳ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾಡುವ ಈ ಸಿಹಿ ತಿನಿಸು ಶ್ಯಾವಿಗೆ, ಬಾಳೆಹಣ್ಣು, ಮೊಸರು, ಹಾಲು ಹಾಗೂ ಏಲಕ್ಕಿ ಸೋಂಪು ಹಾಕಿ ಕರಿದು ಮಾಡಲಾಗುತ್ತದೆ. ಸಂಜೆ ಸಹಾದ ಜೊತೆಯೂ ತಿನ್ನಬಹುದಾದ ಸಿಹಿತಿಂಡಿಯಿದು.

೫. ಬಬ್ರೂ, ಹಿಮಾಚಲ ಪ್ರದೇಶ: ದೀಪಾವಳಿಯ ಸಂದರ್ಭ ಹಿಮಾಚಲ ಪ್ರದೇಶದಲ್ಲಿ ಮಾಡುವ ಸಾಂಪ್ರದಾಯಿಕ ಸಿಹಿತಿನಿಸಿದು. ಮೈದಾ, ಈಸ್ಟ್‌, ಸಕ್ಕರೆ ಅಥವಾ ಬೆಲ್ಲ ಸೇರಿಸಿ ಮಾಡುವ ಇದು ಕುರುಕಲು ಸಿಹಿತಿಂಡಿ. ಇದನ್ನು ಪಾಯಸ ಅಥವಾ ರಬ್ಡಿ ಜೊತೆಗೆ ಮುಳುಗಿಸಿ ತಿಂದರೆ ರುಚಿ ಹೆಚ್ಚಂತೆ.

Exit mobile version