Site icon Vistara News

Rameshwaram Cafe : ರಾಮೇಶ್ವರಂ ಕೆಫೆ ಮಾಲಕಿ ದಿವ್ಯಾ ರಾಘವೇಂದ್ರ ರಾವ್‌ ಯಾರು? ಅರ್ಚಕರ ಮಗಳ ಅಡ್ವೆಂಚರ್‌!

Rameshwaram Cafe Divya Raghavendra Rao main

ಬೆಂಗಳೂರು: ಕೇವಲ ಮೂರು ವರ್ಷಗಳಲ್ಲಿ ಇಡೀ ದೇಶ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಫುಡ್‌ ಜಾಯಿಂಟ್‌ ಅಂದರೆ ಅದು ರಾಮೇಶ್ವರಂ ಕೆಫೆ (Rameshwaram Cafe). ಈಗ ಬಾಂಬ್‌ ಸ್ಫೋಟದ (Blast in Bengaluru) ಮೂಲಕ ಸುದ್ದಿಯಲ್ಲಿರುವ ಈ ಜನಪ್ರಿಯ ಕೆಫೆ ಅದಕ್ಕಿಂತ ಮೋದಲೇ ತನ್ನ ವಿಶಿಷ್ಟ ಮತ್ತು ರುಚಿಕರ ಖಾದ್ಯ ವಿಶೇಷಗಳಿಗಾಗಿ (Special and tasty Cuisines) ಜನರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಮೂರು ವರ್ಷಗಳ ಹಿಂದೆ ಸಣ್ಣ ಜಾಗದಲ್ಲಿ ಆರಂಭಗೊಂಡ ರಾಮೇಶ್ವರಂ ಕೆಫೆಯ ನಾಲ್ಕು ಜಾಯಿಂಟ್‌ಗಳು ಬೆಂಗಳೂರಿನಲ್ಲೇ ಇವೆ. ಉಳಿದಂತೆ ದುಬೈ ಮತ್ತು ಹೈದರಾಬಾದ್‌ನಲ್ಲೂ ಒಂದೊಂದು ಹೋಟೆಲ್‌ ಇದೆ.

ಇದೊಂದು ಹೋಟೆಲ್‌ ಎನ್ನುವುದಕ್ಕಿಂತಲೂ ವಿಶಿಷ್ಟ ರೀತಿಯ ಭೋಜನ ಶಾಲೆ ಎನ್ನಬಹುದು. ಇಲ್ಲಿನ ತುಪ್ಪವೇ ತುಂಬಿ ತುಳುಕುವ ದೋಸೆ, ಪೊಂಗಲ್‌ ಮತ್ತು ಎಲ್ಲ ಖಾದ್ಯಗಳು ಭಾರಿ ಫೇಮಸ್‌. ಬೆಳಗ್ಗಿನಿಂದ ರಾತ್ರಿವರೆಗೆ ಜನರಿಂದ ತುಂಬಿ ತುಳುಕುವ ಈ ಕೆಫೆಗಳಲ್ಲಿ ಆರಾಮವಾಗಿ ನೆಲದಲ್ಲೇ ಕುಳಿತು ತಿಂಡಿ ತಿನ್ನಬಹುದಾದಷ್ಟು ಸ್ವಚ್ಛತೆ ಇದೆ. ಇಲ್ಲಿ ಯಾವ ಮಟ್ಟದ ರಶ್‌ ಎಂದರೆ ಒಂದು ದೋಸೆ ತಿನ್ನಲು ಹೋದರೆ ಕನಿಷ್ಠ ಒಂದರ್ಧ ಗಂಟೆಯಾದರೂ ಕಾಯಲೇಬೇಕು.

ಹಾಗಿದ್ದರೆ ಈ ರಾಮೇಶ್ವರಂ ಕೆಫೆ ಯಾರದ್ದು? ಕೇವಲ ಮೂರೇ ವರ್ಷದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣವೇನು? ಅದರ ಮಾಲಕಿ ದಿವ್ಯಾ (Divya Raghavendra Rao) ಯಾರು? ಅವರ ಬೆನ್ನಿಗೆ ನಿಂತ ರಾಘವೇಂದ್ರ ರಾವ್‌ (Raghavendra Rao) ಯಾರು ಎಂಬೆಲ್ಲ ವಿಚಾರಗಳು ಎಲ್ಲರ ತಲೆಯಲ್ಲಿ ಓಡುತ್ತಿರುತ್ತವೆ.

Rameshwaram Cafe : ಇದು ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರ ಕನಸಿನ ಕೂಸು

ಬೆಂಗಳೂರಿನ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಎಂಬಿಬ್ಬರು ಸೇರಿ ಕಟ್ಟಿದ ಹೋಟೆಲ್‌ ಚೈನ್‌ ಇದು. ರಾಘವೇಂದ್ರ ರಾವ್‌ ಅವರು ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌. ಅವರಿಗೆ ಅಡುಗೆ ಮೇಲೆ ಅಪಾರವಾದ ಆಸಕ್ತಿ. ಬೆಂಗಳೂರಿನವರೇ ಆದ ದಿವ್ಯಾ ಅವರು ಐಐಎಂ ಪದವೀಧರೆ ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌. ಅವರಿಗೆ ಉದ್ಯಮದಲ್ಲಿ ಆಸಕ್ತಿ. ಪರಿಚಿತರೇ ಆಗಿದ್ದ ಅವರಿಬ್ಬರೂ ಮಾತನಾಡುತ್ತಿದ್ದಾಗ ಒಂದು ಹೋಟೆಲ್‌ ಕನಸು ಹುಟ್ಟಿತು.

ತಾವು ಹೋಟೆಲ್‌ ಮಾಡಬೇಕು ಎಂದು ಯೋಚಿಸಿದಾಗ ಅವರ ತಲೆಗೆ ಬಂದಿದ್ದು ಎರಡು ವಿಷಯ. ಒಂದು ಇದು ದಕ್ಷಿಣ ಭಾರತದ ವಿಶೇಷ ಖಾದ್ಯಗಳ ತಾಣವಾಗಬೇಕು (South Indian Food joint) ಎಂಬ ಕನಸು ಕನಸು ಕಂಡರು. ಎರಡನೇಯದು ಹೋಟೆಲ್‌ಗೆ ಏನು ಹೆಸರು ಇಡುವುದು? ಈ ಯೋಚನೆ ಬಂದಾಗ ಅವರಿಗೆ ನೆನಪಾದದ್ದು ಇಬ್ಬರೂ ತುಂಬ ಅಭಿಮಾನದಿಂದ ಕಾಣುತ್ತಿದ್ದ ಡಾ. ಎಪಿಜೆ ಅಬ್ದುಲ್‌ ಕಲಾಂ. ಅಬ್ದುಲ್‌ ಕಲಾಂ ಅವರು ಹುಟ್ಟಿದ ಊರಾದ ರಾಮೇಶ್ವರಂ ಅನ್ನೇ ತಮ್ಮ ಹೋಟೆಲ್‌ಗೂ ಇಟ್ಟರು. ಅಲ್ಲಿಂದ ಶುರುವಾಯಿತು ಜೈತ್ರ ಯಾತ್ರೆ.

ದಕ್ಷಿಣ ಭಾರತದ ತಿನಿಸುಗಳನ್ನು ಜಾಗತಿಕ ಮಟ್ಟಕ್ಕೆ ಒಯ್ಯಬೇಕು ಎಂಬ ಕನಸಿನೊಂದಿಗೆ ಹುಟ್ಟಿದ ರಾಮೇಶ್ವರಂ ಕೆಫೆ ಇವತ್ತು ಬೆಂಗಳೂರಿನಲ್ಲಿ ನಾಲ್ಕು ಸೇರಿ ಒಟ್ಟು ಆರು ಔಟ್‌ಲೆಟ್‌ಗಳನ್ನು ಹೊಂದಿದೆ. ಇಲ್ಲಿನ ಖಾದ್ಯಗಳ ಬಗ್ಗೆ, ಅಲ್ಲಿನ ಆಂಬಿಯೆನ್ಸ್‌, ಶುಚಿ ರುಚಿಗಳ ಬಗ್ಗೆ ಜಗತ್ತಿನ ಬ್ಲಾಗರ್‌ಗಳು ಬರೆಯುತ್ತಿದ್ದಾರೆ. ಜನರು ಖುಷಿಯಿಂದ ತಿನ್ನುತ್ತಿದ್ದಾರೆ.

ಓಪನ್‌ ಕಿಚನ್‌, ವಿಶಾಲ ಅಂಗಳ, ಮರದ ಕಟ್ಟೆಗಳು

ಯಾರು ಬೇಕಾದರೂ ಒಳಗೆ ಹೋಗಿ ನೋಡಬಹುದಾದ ಓಪನ್‌ ಕಿಚನ್‌, ಅದರ ಎದುರು ಒಂದು ರೌಂಡ್‌ ಕುಳಿತು ಯಾ ನಿಂತು ತಿನ್ನಬಹುದಾದ ಜಾಗ. ಅದರ ಹೊರಾವರಣದಲ್ಲಿ ನಾಲ್ಕೈದು ವಿಶಾಲ ಮೆಟ್ಟಿಲು, ನಂತರ ವಿಶಾಲವಾದ ಅಂಗಳದಂಥ ಜಾಗ. ಅಲ್ಲಲ್ಲಿ ಮರದ ಕಟ್ಟೆಗಳು.. ಇದು ಎಲ್ಲಾ ರಾಮೇಶ್ವರಂ ಕೆಫೆಗಳ ಸಾಮಾನ್ಯ ನೋಟ.

ಸುಮಾರು 700ಕ್ಕೂ ಅಧಿಕ ಸಿಬ್ಬಂದಿಗಳ ಪರಿವಾರವಾಗಿ ಬೆಳೆದಿದೆ ಅದು. 4.5 ಕೋಟಿ ರೂ ವ್ಯವಹಾರ ನಡೆಯುತ್ತಿದೆ. ಇದರ ಜನಪ್ರಿಯತೆ ಎಷ್ಟೆಂದರೆ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿಯವರ ವಿವಾಹ ಪೂರ್ವ ಸಂಭ್ರಮಾಚರಣೆಗೆ ದಕ್ಷಿಣ ಭಾರತದ ತಿನಿಸು ಪೂರೈಕೆ ಮಾಡುವ ಜವಾಬ್ದಾರಿ ರಾಮೇಶ್ವರಂ ಕೆಫೆಗೆ ಸಿಕ್ಕಿದೆ. ಹಲವಾರು ಬಾಲಿವುಡ್‌ ನಟರು ಇಲ್ಲಿಗೆ ಬರುತ್ತಾರೆ.

ಹಾಗಿದ್ದರೆ ಈಗ ಮೂಲ ಪ್ರಶ್ನೆಗೆ ಬರೋಣ ಈ ದಿವ್ಯಾ ಯಾರು?

ದಿವ್ಯಾ ರಾಘವೇಂದ್ರ ರಾವ್‌ ಅವರನ್ನು ನೋಡಿದರೆ ನೀವು ಇವರು ಇಡೀ ದೇಶದಲ್ಲೇ ಜನಪ್ರಿಯತೆ ಪಡೆದಿರುವ ರಾಮೇಶ್ವರಂ ಕೆಫೆಯ ಮಾಲಕಿ ಎಂದು ಹೇಳುವುದು ಸಾಧ್ಯವೇ ಇಲ್ಲ. ಅಷ್ಟೊಂದು ಸಿಂಪಲ್‌ ಆಗಿದ್ದಾರೆ. ಇವರು ಅಹಮದಾಬಾದ್‌ನ ಐಐಎಂನಲ್ಲಿ ಓದಿದವರು, ಚಾರ್ಟರ್ಡ್‌ ಅಕೌಂಟೆಂಟ್‌ ಅಂದರೆ ನಂಬಲು ಸಾಧ್ಯವೇ ಇಲ್ಲ. ಅಷ್ಟೊಂದು ಹೋಮ್ಲೀ ಆಗಿದ್ದಾರೆ… ಪಕ್ಕದ್ಮನೆ ಹುಡುಗಿಯ ಹಾಗೆ ಮುಗ್ಧ ಮುಗ್ಧ.

ಇದಕ್ಕೆ ಒಂದು ಕಾರಣವೂ ಇದೆ. ಈಗ ಕೋಟಿ ಕೋಟಿ ವ್ಯವಹಾರ ನಡೆಸುವ ಇವರೇನೂ ಹುಟ್ಟಾ ಶ್ರೀಮಂತರಲ್ಲ. ಪುರೋಹಿತರ ಕುಟುಂಬದಲ್ಲಿ ಹುಟ್ಟಿದ ಇವರು ಪಕ್ಕಾ ಮಿಡಲ್‌ ಕ್ಲಾಸ್‌ ಹುಡುಗಿ. ಬಾಲ್ಯದಿಂದಲೇ ಬಡತನವನ್ನು ಕಂಡು ಉಂಡವರು. ಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಬೇಕು ಎಂದೇ ಕಷ್ಟಪಟ್ಟು ಓದಿದರು. ಅದಕ್ಕಾಗಿ ಸಿಎ ಮಾಡಿದರು.

ಪಿಯುಸಿ ಬಳಿಕ ಐಐಎಂ ಅಹಮದಾಬಾದ್‌ನಲ್ಲಿ ‘ಮ್ಯಾನೇಜ್‌ಮೆಂಟ್‌ ಮತ್ತು ಫೈನಾನ್ಸ್‌’ ಶಿಕ್ಷಣ ಪಡೆದರು. ಅಲ್ಲಿ ಅವರು ಫುಡ್ ಬಿಸಿನೆಸ್‌ ಬಗ್ಗೆ ಕೆಲವೊಂದು ಕೇಸ್‌ ಸ್ಟಡಿ ಮಾಡುತ್ತಿದ್ದಾಗ ನಾನ್ಯಾಕೆ ಹೋಟೆಲ್‌ ಉದ್ಯಮ ಮಾಡಬಾರದು ಎಂದು ಅನಿಸಿತು. ಹಾಗೆ ಶುರುವಾಗಿದ್ದೇ ಹೊಸ ಕನಸು.

ಇದನ್ನು ತಮ್ಮ ಪರಿಚಿತರೇ ಆಗಿದ್ದ, ಫುಡ್‌ ಅಂದರೆ ಅಂದರೆ ಜೀವ ಬಿಡುವ, ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದರೂ ಆಹಾರ ತಯಾರಿಯಲ್ಲಿ ನಳ ಮಹಾರಾಜನೇ ಆಗಿದ್ದ ರಾಘವೇಂದ್ರ ರಾವ್‌ ಅವರಿಗೆ ಹೇಳಿದರು. ಅವರಿಬ್ಬರ ಪಾರ್ಟ್ನರ್‌ಶಿಪ್‌ನಲ್ಲಿ ಹೊಸ ವೆಂಚರ್‌ ತಲೆ ಎತ್ತಿತ್ತು. ಅಂದ ಹಾಗೆ ಜಗತ್ತು ಕೋವಿಡ್‌ನಿಂದ ಕಣ್ತೆರೆಯೋ ಗಳಿಗೆಯಲ್ಲಿ ರಾಮೇಶ್ವರಂ ಕೆಫೆ ಕೂಡಾ ಬೆಳಕು ಕಂಡಿತು.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

ಉದ್ಯಮಿ ದಂಪತಿಗೆ ಈಗ ಪುಟ್ಟ ಮಗು

ಎಲ್ಲರೂ ತಿಳಿದುಕೊಂಡ ಹಾಗೆ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರು ಮದುವೆಯಾದ ಬಳಿಕ ಕಟ್ಟಿದ ಸಂಸ್ಥೆಯಲ್ಲ ಈ ರಾಮೇಶ್ವರಂ ಕೆಫೆ. ಅದು ಅವರು ಪರಿಚಿತರಾಗಿದ್ದು ಬ್ಯುಸಿನೆಸ್‌ ಪಾರ್ಟ್ನರ್‌ಗಳಾಗಿ ಕಟ್ಟಿದ್ದು. ಬಳಿಕವಷ್ಟೇ ಅವರು ಬದುಕಿನಲ್ಲೂ ಪಾಲುದಾರರಾದರು. ಅಂದ ಹಾಗೆ, ಈ ದಂಪತಿಗೆ ಒಂದು ಪುಟ್ಟ ಮಗುವಿದೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸುತ್ತಿದ್ದಾಗ ದಿವ್ಯಾ ರಾವ್‌ ಅವರು ಜಗದ ಪರಿವೆಯನ್ನೇ ಮರೆತು ತನ್ನ ಪುಟ್ಟ ಕಂದಮ್ಮನನ್ನು ಕಾಲ ಮೇಲೆ ಮಲಗಿಸಿ ಬಿಸಿ ಬಿಸಿ ಸ್ನಾನ ಮಾಡಿಸುತ್ತಿದ್ದರು. ಇದು ದಿವ್ಯಾ ರಾವ್‌ ಎಂಬ ಹೆಣ್ಮಗಳ ಸರಳತೆಯ ಚಿತ್ರ.

Exit mobile version