ಕೋವಿಡ್‌ನ ಓಮಿಕ್ರಾನ್‌ನ ತಳಿಯ ಇನ್ನೊಂದು ರೂಪಾಂತರಿ ಭಾರತದಲ್ಲೂ ಹಬ್ಬಲು ಆರಂಭವಾಗಿದೆ. ಕರ್ನಾಕಟದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆಯನ್ನು ಮತ್ತೆ ಕಡ್ಡಾಯ ಮಾಡಲಾಗಿದೆ. ಕೋವಿಡ್‌ನ ಸೋಂಕಿತರ ಸಂಖ್ಯೆ ಯಾವ ಪ್ರಮಾಣದಲ್ಲಿ ಏರುತ್ತಿದೆ ಎಂಬುದು ಮುಂದಿನ ದಿನಗಳಲ್ಲಿ ಅಲೆಯ ಗಂಭೀರತೆ ಹೇಗಿರಲಿದೆ ಎಂಬುದನ್ನು ನಿರ್ಧರಿಸಲಿದೆ.
ಏನಿದು R ವ್ಯಾಲ್ಯೂ?
R value ಎಂದರೆ Reproduction ಸಂಖ್ಯೆ. R value 1 ಇದ್ದರೆ ಪ್ರತಿದಿನದ ಸೋಂಕಿತರ ಸಂಖ್ಯೆ ಹೆಚ್ಚುಕಡಿಮೆಯಾಗದೆ ಅಷ್ಟೇ ಇರುತ್ತದೆ. ಅಂದರೆ ಒಬ್ಬ ರೋಗಿಯು ತಾನು ಗುಣಮುಖನಾಗುವ ಮುನ್ನ ಇನ್ನೊಬ್ಬನಿಗೆ ಸೋಂಕನ್ನು ದಾಟಿಸಿರಬಹುದು. R value 2 ಇದ್ದರೆ, ಆತ ತನ್ನ ಸೋಂಕಿನ ಕಾಲದಲ್ಲಿ ಇಬ್ಬರಿಗೆ ವೈರಸ್ ದಾಟಿಸಿರುತ್ತಾನೆ. R value 3 ಇದ್ದರೆ ಸೋಂಕಿತರ ಸಂಖ್ಯೆ 5 ದಿನಗಳಲ್ಲಿ ಮೂರು ಪಟ್ಟು ಆಗುತ್ತದೆ.
ಭಾರತೀಯ ವೈದ್ಯರ ಆವಿಷ್ಕಾರ
R value ಕಂಡುಹಿಡಿಯುವ ಕ್ರಮವನ್ನು ಮೊದಲು ಆವಿಷ್ಕರಿಸಿದವರು ಭಾರತೀಯ ಸೇನೆಯಲ್ಲಿದ್ದ ವೈದ್ಯ ಡಾ.ರೊನಾಲ್ಡ್ ರಾಸ್. ಇವರು ಇದನ್ನು ಮಲೇರಿಯಾ ಕುರಿತು ಸಂಶೋಧನೆ ನಡೆಸಿದಾಗ ಆವಿಷ್ಕರಿಸಿದ್ದರು. ಇದಕ್ಕಾಗಿ ಅವರಿಗೆ 1902ರ ವೈದ್ಯಕೀಯ ನೊಬೆಲ್ ಪುರಸ್ಕಾರವೂ ದೊರೆತಿತ್ತು.
ಜನರೇಶನ್ ಇಂಟರ್‌ವಲ್
ಒಬ್ಬ ಸೋಂಕಿತ ವ್ಯಕ್ತಿ ಬೇರೊಬ್ಬನಿಗೆ ಸೋಂಕನ್ನು ದಾಟಿಸುವ ಸರಾಸರಿ ಕಾಲಾವಧಿಯನ್ನು ತಲೆಮಾರಿನ ಮಧ್ಯಂತರ (ಜನರೇಶನ್ ಇಂಟರ್‌ವಲ್) ಎನ್ನುತ್ತಾರೆ. ಅಧ್ಯಯನಕಾರರ ಪ್ರಕಾರ ಈ ಅವಧಿ ಸುಮಾರು 5 ದಿನ. R value 5 ಇದ್ದರೆ, ಈ ಐದು ದಿನಗಳಲ್ಲಿ ರೋಗಿಯು 5 ಮಂದಿಗೆ ಸೋಂಕನ್ನು ದಾಟಿಸಿರುತ್ತಾನೆ.
ಈಗ R value ಎಷ್ಟಿದೆ?
ಪ್ರಸ್ತುತ ದೇಶದಲ್ಲಿ R value 1.3ರಷ್ಟಿದೆ ಎಂದು ಅಂದಾಜಿಸಲಾಗಿದೆ. ದಿಲ್ಲಿಯಲ್ಲಿ ಇದು 2.24 ಇದೆ. ಆರ್ ವ್ಯಾಲ್ಯೂ ಹೆಚ್ಚುತ್ತ ಹೋದಂತೆ ಅಲೆಯ ತೀವ್ರತೆ ಏರುತ್ತ ಹೋಗುತ್ತದೆ.
R value ಪ್ರಭಾವಿಸುವ ಅಂಶಗಳು
- ವೈರಸ್ ರೂಪಾಂತರಿಯ ಸೋಂಕು ಗುಣದ ತೀವ್ರತೆ
- ಸೋಂಕಿತರು ರೋಗಲಕ್ಷಣಗಳನ್ನು ತೋರಿಸುತ್ತಿರುವ ಕಾಲಾವಧಿ
- ಸೋಂಕಿತರು ಹೊಂದಿರಬಹುದಾದ ಸರಾಸರಿ ಸಂಪರ್ಕಿತರ ಪ್ರಮಾಣ
- ಒಟ್ಟಾರೆ ಜನಸಂಖ್ಯೆಯಲ್ಲಿರುವ ಒಟ್ಟು ಸೋಂಕಿತರ ಪ್ರಮಾಣ
R value ಇಳಿಸುವುದು ಹೇಗೆ?
- ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವಿಕೆ
- ಕ್ಷಿಪ್ರವಾಗಿ ಪತ್ತೆ ಮಾಡುವಿಕೆ ಹಾಗೂ ಸೋಂಕಿತರನ್ನು ಪ್ರತ್ಯೇಕಿಸುವುದು
- ಸ್ಥಳೀಯ ಲಾಕ್ಡೌನ್ ಕ್ರಮಗಳು
- ಹೆಚ್ಚೆಚ್ಚು ಲಸಿಕೆ ಹಾಕಿಸುವುದು
ಒಂದು ಹಿನ್ನೋಟ
ಕಳೆದ ಮೂರು ಕೋವಿಡ್ ಅಲೆಗಳಲ್ಲಿ ಭಾರತದ R value ಹೇಗಿತ್ತು?
- 2020ರಲ್ಲಿ ಮೊದಲ ಅಲೆ ಕಾಣಿಸಿಕೊಂಡಾಗ, ಮಾರ್ಚ್ ಮಧ್ಯಭಾಗದಲ್ಲಿ 2.5ನ್ನು ತಲುಪಿತ್ತು.
- ಎರಡನೇ ಅಲೆಯ ಮಧ್ಯಭಾಗದಲ್ಲಿ (2021 ಏಪ್ರಿಲ್, ಮೇ) ಇದು 3.75ರಷ್ಟಿತ್ತು.
- ಮೂರನೇ ಅಲೆಯ ಮಧ್ಯಭಾಗದಲ್ಲಿ (2022ರ ಜನವರಿ) ಇದು 2.25ರಷ್ಟಿತ್ತು.
ಇದನ್ನೂ ಓದಿ: Covid-19 | ಇನ್ನೂ 2ನೇ ಡೋಸ್ ಲಸಿಕೆ ಪಡೆಯದ 30 ಲಕ್ಷ ಜನ: ರಾಜ್ಯದಲ್ಲಿ ಹೈ ಅಲರ್ಟ್