ಟೋಕಿಯೊ: ವಿಶ್ವವನ್ನೇ ನಡುಗಿಸಿದ ಕೋವಿಡ್ ಹೊಡೆತದಿಂದ ಜಗತ್ತು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಮತ್ತೊಂದು ಅಪಾಯಕಾರಿ ಕಾಯಿಲೆ ಜಪಾನ್‌ನಲ್ಲಿ ಪತ್ತೆಯಾಗಿದ್ದು, ಸೋಂಕು ತಗುಲಿದ 48 ಗಂಟೆಯಲ್ಲೇ ಮಾನವನ ಸಾವಿಗೆ ಕಾರಣವಾಗುತ್ತದೆ. ಈ ಸೋಂಕಿಗೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ (Flesh-Eating Bacteria)ಕಾರಣವಾಗಿದ್ದು, ಜಪಾನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಈ ಅಪರೂಪದ ಕಾಯಿಲೆಯನ್ನು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (Streptococcal Toxic Shock Syndrome-STSS) ಎಂದು ಕರೆಯಲಾಗುತ್ತದೆ.
ಜಪಾನ್‌ನಲ್ಲಿ ಈಗಾಗಲೇ ಈ ಮಾಂಸ ಭಕ್ಷಕ ಬ್ಯಾಕ್ಟೀರಿಯಾದಿಂದ ಕಾಣಿಸಿಕೊಳ್ಳುವ ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಪ್ರಕರಣ 977ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಒಟ್ಟು 941 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷದ ಅರ್ಧ ಭಾಗದಲ್ಲಿಯೇ ಅದನ್ನೂ ಮೀರಿದ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ ಎಂದು ಮೂಲಗಳು ತಿಳಿಸಿವೆ.
JAPAN ⚡: Rare flesh-eating bacteria that can kill in 2 days spreads in Japan 🚨🚨
— The Webb (@thewebbnews) June 16, 2024
👉Disease caused by rare flesh-eating
bacteria streptococcalthat can kill in
2 days spreads in Japan.
👉977 cases of STSS reported in Japan
this year by June 2.
👉People over… pic.twitter.com/idJahGsptp
“ಹೆಚ್ಚಿನ ಸಾವು ಸೋಂಕು ತಗುಲಿದ 48 ಗಂಟೆಗಳ ಒಳಗೆ ಸಂಭವಿಸುತ್ತವೆ. ಸೋಂಕು ಬಾಧಿತರ ಪಾದ ಬೆಳಿಗ್ಗೆ ಊದಿಕೊಂಡರೆ ಮಧ್ಯಾಹ್ನದ ವೇಳೆಗೆ ಊತ ಮೊಣಕಾಲಿನವರೆಗೆ ಹರಡುತ್ತದೆ ಮತ್ತು ಅವರು 48 ಗಂಟೆಗಳಲ್ಲಿ ಸಾಯುವ ಸಾಧ್ಯತೆ ಇದೆ” ಎಂದು ಟೋಕಿಯೊ ಮಹಿಳಾ ವೈದ್ಯಕೀಯ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕ ಕೆನ್ ಕಿಕುಚಿ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವ ಬ್ಯಾಕ್ಟೀರಿಯಾ?
ಗ್ರೂಪ್ ಎ ಸ್ಟ್ರೆಪ್ಟೋಕಾಕಸ್ (ಜಿಎಎಸ್) ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಸ್ಟ್ರೆಪ್ಟೋಕಾಕಸ್ ಪಿಯೋಜೆನೆಸ್ (Streptococcus Pyogenes) ಎಂದು ಕರೆಯಲ್ಪಡುತ್ತದೆ. ಇದು ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುತ್ತದೆ. ಗ್ರೂಪ್ ಎ ಸ್ಟ್ರೆಪ್ಟೋಕಾಕಸ್‌ನ ಕೆಲವು ತಳಿಗಳು ಗಂಟಲು ಅಥವಾ ಚರ್ಮದ ಸೋಂಕುಗಳಂತಹ ಸೌಮ್ಯ ಕಾಯಿಲೆಗಳಿಗೆ ಕಾರಣವಾಗಬಹುದು. ಜತೆಗೆ ನೆಕ್ರೋಟೈಸಿಂಗ್ ಫಾಸಿಟಿಸ್ ಅಥವಾ ಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನಂತಹ ಅಪಾಯಕಾರಿ ಕಾಯಿಲೆಗಳಂತಹ ಗಂಭೀರ ಸೋಂಕುಗಳೂ ಸಂಭವಿಸಬಹುದು. ಈ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಅಗತ್ಯ.
ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನ ಲಕ್ಷಣ
ದೇಹದ ಭಾಗಗಳಲ್ಲಿ ನೋವು, ಊತ, ಜ್ವರ ಹಾಗೂ ಕಡಿಮೆ ರಕ್ತದೊತ್ತಡ ಮುಂತಾದವು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನ ಲಕ್ಷಣಗಳು. ಇದು ಜೀವಕೋಶಗಳ ಸಾವು, ತೀವ್ರ ಜ್ವರ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು. ವಯಸ್ಕರು, ಮುಖ್ಯವಾಗಿ 50 ವರ್ಷ ದಾಟಿದವರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿ. ಇದರ ತಡೆಗೆ ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಜತೆಗೆ ಯಾವುದೇ ತೆರೆದ ಗಾಯಗಳನ್ನು ನಿರ್ಲಕ್ಷಿಸಬಾರದು. ಮಾತ್ರವಲ್ಲ ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಜಪಾನ್ ಜತೆಗೆ ಯುರೋಪ್‌ನ ಐದು ದೇಶಗಳು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಪ್ರಕರಣಗಳ ಹೆಚ್ಚು ವರದಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ (WHO) ವರದಿ ಮಾಡಿದೆ. ಕೋವಿಡ್ -19 ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಸೋಂಕಿನ ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದೆ. ಪ್ರಸ್ತುತ ಸೋಂಕಿನ ದರ ಗಮನಿಸಿದರೆ ಜಪಾನ್‌ನಲ್ಲಿ ಈ ವರ್ಷ 2,500 ಪ್ರಕರಣಗಳ ದಾಖಲಾಗಬಹುದು ಎನ್ನುವ ಆತಂಕ ಮೂಡಿದೆ.
ಇದನ್ನೂ ಓದಿ: Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ