ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಮಾಧ್ಯಮವಾಗಿ, ಆಧ್ಯಾತ್ಮಿಕ ಸಾಧನೆಗೂ ಮೆಟ್ಟಿಲಾಗಿ ಬೆಳೆದುಬಂದಿರುವ ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು ಮೊದಲ ಹಂತದಲ್ಲಿ ಅನೇಕ ಯೋಗ ಗುರುಗಳು. ಇವರು ಭಾರತದಿಂದ ಹೊರಟು ಅಮೆರಿಕ, ಯುರೋಪ್ ಮುಂತಾದ ಎಲ್ಲೆಡೆ ಸಂಚರಿಸಿ, ಯೋಗವನ್ನು ಪ್ರಚುರಪಡಿಸಿ, ಅಲ್ಲಿನವರು ಯೋಗಕ್ಕೆ ಮನಸೋಲುವಂತೆ ಮಾಡಿದರು. ಉದಾಹರಣೆಗೆ- ತಿರುಮಲೈ ಕೃಷ್ಣಮಾಚಾರ್ಯ, ಬಿಕೆಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್, ಇಂದ್ರಾ ದೇವಿ, ವಿಕ್ರಮ್ ಚೌಧುರಿ, ಮಹೇಶ ಯೋಗಿ ಮುಂತಾದವರು. ಇವರ ಪ್ರಯತ್ನಗಳಿಂದಾಗಿ ಯೋಗಕ್ಕೆ ಒಂದು ಮಟ್ಟದ ಗುರುತಿಸುವಿಕೆ ಮೊದಲಿನಿಂದಲೇ ಇತ್ತು.
ಎರಡನೇ ಹಂತದಲ್ಲಿ, ಯೋಗವನ್ನು ಆಡಳಿತಾತ್ಮಕವಾಗಿ ಅಧಿಕೃತ ಅಂತಾರಾಷ್ಟ್ರೀಯ ಯೋಗ ದಿನವಾಗುವಂತೆ ಮಾಡಿ, ವಿಶ್ವಮಾನ್ಯತೆ ದೊರಕಿಸಿಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರು. ಅದು ನಡೆದಿದ್ದು ಹೀಗೆ-
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ವರ್ಷವೇ (2014) ಇದು ಆಯಿತು. ಸೆಪ್ಟೆಂಬರ್‌ನಲ್ಲಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದರು. ಅದರಲ್ಲಿ ಯೋಗದ ಮಹತ್ವವನ್ನು ಎತ್ತಿ ಆಡಿದರು. ಯೋಗ ವಿಶ್ವಶಾಂತಿಗೂ ಪೂರಕ ಎಂದು ಸಾರಿದರು. ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಟ್ಟರು.
ನಂತರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯಲ್ಲಿ ಈ ಕುರಿತು ವಿಧೇಯಕವೊಂದನ್ನು ಭಾರತದ ಪ್ರತಿನಿಧಿ ಅಶೋಕ್ ಮುಖರ್ಜಿ ಮಂಡಿಸಿದರು. ವಿಶ್ವಸಂಸ್ಥೆ ಎಲ್ಲ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಸಂಗ್ರಹಿಸಿತು. ವಿಶೇಷವೆಂದರೆ, ಒಂದೇ ಒಂದು ವಿರೋಧ ಮತವೂ ಬೀಳಲಿಲ್ಲ. 177 ಸದಸ್ಯ ರಾಷ್ಟ್ರಗಳಲ್ಲಿ ಎಲ್ಲವೂ ಒಪ್ಪಿಗೆ ಸೂಚಿಸಿದವು. ಹೀಗೆ ವಿಶ್ವಸಂಸ್ಥೆಯ ಎಲ್ಯ ಸದಸ್ಯರ ಒಪ್ಪಿಗೆ ಪಡೆದ ಕೆಲವೇ ವಿಧೇಯಕಗಳಲ್ಲಿ ಇದೂ ಒಂದು.
2015ರಲ್ಲಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿತು. ಆ ಮೂಲಕ, ಸೀಮಿತ ವಿದೇಶಿಯರಲ್ಲಿ ಮಾತ್ರ ಪ್ರಚಲಿತವಾಗಿದ್ದ ಯೋಗದ ಸ್ವಾರಸ್ಯ, ಆರೋಗ್ಯಕಾರಿ ಪರಿಣಾಮಗಳು ಎಲ್ಲರಿಗೂ ದಕ್ಕುವಂತಾಯಿತು. ಎಲ್ಲರಲ್ಲೂ ಆ ಬಗ್ಗೆ ಅರಿವು ಮೂಡುವಂತಾಯಿತು.
ಮೊದಲ ಯೋಗ ದಿನ
ಮೊದಲ ವಿಶ್ವ ಯೋಗ ದಿನಾಚರಣೆ ವೈಭವದಿಂದ ನಡೆಯಿತು. ವಿಶ್ವದ ನಾನಾ ಕಡೆ ಸಾಮೂಹಿಕ ಯೋಗಾಸನಗಳು ನಡೆದವು. ರಾಜಧಾನಿ ದೆಹಲಿಯ ರಾಜಪಥ್‌ನಲ್ಲಿ ನಡೆದ ಈ ಯೋಗ ದಿನದಲ್ಲಿ ಸ್ವತಃ ಮೋದಿಯವರು ಭಾಗವಹಿಸಿದರು. 84 ದೇಶಗಳ ಪ್ರತಿನಿಧಿಗಳು ಸೇರಿ 36,000 ಜನ ಭಾಗವಹಿಸಿದರು. 35 ನಿಮಿಷ ಸತತ 21 ಯೋಗಾಸನಗಳನ್ನು ಸ್ವತಃ ಮೋದಿಯವರು ಕೂಡ ಪ್ರದರ್ಶಿಸಿದರು. ಭಾಗವಹಿಸಿದ ದೇಶಗಳ ಪ್ರತಿನಿಧಿಗಳ ಸಂಖ್ಯೆ ಹಾಗೂ ಏಕಕಾಲಕ್ಕೆ ಅಷ್ಟು ಜನರ ಸಾಮೂಹಿಕ ಯೋಗಾಸನಗಳು- ಇವೆರಡು ಗಿನ್ನೆಸ್ ದಾಖಲೆ ಸೇರಿದವು.
ಇದಲ್ಲದೇ ವಿಶ್ವದ ನೇರೆ ಬೇರೆಡೆ ಸಾಮೂಹಿಕ ಅಭ್ಯಾಸಗಳು ನಡೆದವು. ಉದಾಹರಣೆಗೆ ಅಮೆರಿಕ ಸ್ಯಾನ್ ಫ್ರಾನ್ಸಿಸ್ಕೋದ ಗ್ರೀನ್ ಪಾರ್ಕ್‌ನಲ್ಲಿ ಐದು ಸಾವಿರ ಜನ ಸೇರಿದರು.
ಮೋದಿ ಭಾಗವಹಿಸಿದ ಕಾರ್ಯಕ್ರಮಗಳು
ಪ್ರತಿ ವರ್ಷ ವಿಶ್ವ ಯೋಗ ದಿನದಂದು ನಡೆಯುವ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸುತ್ತಾರೆ. 2020 ಮತ್ತು 2021ರಲ್ಲಿ ಕೋವಿಡ್ ಕಾರಣಗಳಿಂದಾಗಿ ಸಾಮೂಹಿಕ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿಲ್ಲ. ಈ ವರ್ಷ ಮೈಸೂರಿನಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದಿನ ಕಾರ್ಯಕ್ರಮಗಳು ಹೀಗಿವೆ:
2015- ನವದೆಹಲಿ
2016- ಚಂಡೀಗಢ
2017- ಲಖನೌ
2018- ಡೆಹ್ರಾಡೂನ್
2019- ರಾಂಚಿ
ಇದನ್ನೂ ಓದಿ: Modi In Karnataka | ಎರಡು ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ
ಮೋದಿಯವರಿಗೆ ಇಷ್ಟವಾದ ಯೋಗಾಸನಗಳು
ಮೋದಿ ಅವರು ಹಲವಾರು ಯೋಗಾಸನಗಳನ್ನು ಮಾಡಬಲ್ಲರು. ಅನೇಕ ಕ್ಲಿಷ್ಟ ಯೋಗಾಸನಗಳನ್ನೂ ಅವರು ಸರಳವಾಗಿ ಮಾಡುವುದನ್ನು ಕಲಿತುಕೊಂಡಿದ್ದಾರೆ. ಈ ಹಿಂದೆ ಅವರು ಹಲವು ಯೋಗಾಸನಗಳ ಬಗ್ಗೆ ಟ್ವೀಟ್ ಮಾಡಿದ್ದರು. ಅವುಗಳಲ್ಲಿ ಕೆಲವು ಇಲ್ಲಿವೆ.
ವೃಕ್ಷಾಸನ: ಇದರಲ್ಲಿ ಯೋಗ ಕ್ರಿಯೆ ನಡೆಸುವ ವ್ಯಕ್ತಿ ಕೈಗಳೆರಡನ್ನೂ ಮೇಲಕ್ಕೆ ಮುಗಿದು, ಒಂದು ಅಂಗಾಲನ್ನು ಇನ್ನೊಂದು ಮೊಣಕಾಲಿನ ಮೇಲಿಟ್ಟು ಮರದಂತೆ ನಿಂತುಕೊಳ್ಳುತ್ತಾನೆ. ಒತ್ತಡ ಕಡಿಮೆ ಮಾಡಲು ಹಾಗೂ ದೇಹವನ್ನು ಸಡಿಲಗೊಳಿಸಲು ಸಹಕಾರಿ.
ಪಾದಹಸ್ತಾಸನ: ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಹೇಳುತ್ತಾರೆ.
ಅರ್ಧ ಚಕ್ರಾಸನ: ದೇಹವನ್ನು ಹಿಂದಕ್ಕೆ ಬಾಗಿಸಿ ಕೈಗಳನ್ನು ನೆಲಕ್ಕೆ ತಾಗಿಸಿ ಅರ್ಧ ಚಕ್ರದಂತೆ ನಿಲ್ಲುವುದು. ಅರ್ಧ ಚಕ್ರಾಸನದಿಂದ ದೇಹದ ಸ್ಥಿರತೆ ಉತ್ತಮಗೊಳ್ಳುತ್ತದೆ.
ಶಶಾಂಕಾಸನ : ಶಶಾಂಕಾಸನ ಯೋಗ ಕ್ರಿಯೆಗಳಲ್ಲೇ ಅತ್ಯಂತ ಸುಲಭದ ಅಸನವಾಗಿದ್ದು, ಈ ಆಸನವನ್ನು ಅಭ್ಯಸಿಸುವುದರಿಂದ ಒತ್ತಡ ಹಾಗೂ ಕೋಪವನ್ನು ಕಡಿಮೆ ಮಾಡಬಹುದಾಗಿದೆ.
ವಕ್ರಾಸನ: ಕಾಲು ಚಾಚಿ ಕುಳಿತು, ಒಂದು ಕಾಲನ್ನು ಅರ್ಧ ಮಡಚಿ, ಆ ಕಾಲಿನ ಕಡೆಗೆ ಕೈ ಮುಖ ಬೆನ್ನನ್ನು ತಿರುಗಿಸುವುದು. ಬೆನ್ನುಮೂಳೆಯ ನಮ್ಯತೆಗಾಗಿ ವಕ್ರಾಸನವನ್ನು ಅಭ್ಯಾಸ ಮಾಡಲಾಗುತ್ತದೆ. ಮಧುಮೇಹದ ನಿರ್ವಹಣೆ, ಮಲಬದ್ಧತೆಗೆ ಈ ಆಸನ ಉಪಯುಕ್ತವಾಗುತ್ತದೆ.
ಭುಜಂಗಾಸನ: ನೆಲದ ಮೇಲೆ ಕವುಚಿ ಮಲಗಿ ಬೆನ್ನಿನವರೆಗೆ ಹಾವಿನ ಹೆಡೆಯಂತೆ ಎತ್ತುವುದು. ಬೆನ್ನು ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ಭುಜಂಗಾಸನ ಸಹಕಾರಿಯಾಗಿದೆ.
ಸಲಭಾಸನ: ಕಮಲದ ಭಂಗಿಯಲ್ಲಿರುವ ಈ ಆಸನದಿಂದ ಹೊಟ್ಟೆಗೆ ಉತ್ತಮ ವ್ಯಾಯಾಮವಾಗಲಿದ್ದು, ಸೊಂಟದ ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಮಕರಾಸನ: ಮೊಸಳೆ ಭಂಗಿಯಲ್ಲಿರುವ ಈ ಆಸನದಿಂದ ಬೆನ್ನಿನ ಕೆಳಭಾಗದ ನೋವು, ಮೂಳೆ ಕಾಯಿಲೆ, ಶ್ವಾಸಕೋಶ, ಆಸ್ತಮಾದಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ.
ಸೇತುಬಂಧಾಸನ: ಹೆಸರೇ ಹೇಳುವಂತೆ ಈ ಆಸನವನ್ನು ಸೇತುವೆ ಭಂಗಿಯಲ್ಲಿ ಪ್ರದರ್ಶಿಸಲಾಗುತ್ತದೆ. ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಗೊಳಿಸಬಹುದು.
ಪವನಮುಕ್ತಾಸನ: ಕಾಲುಗಳನ್ನು ಮಡಚಿ ಹೊಟ್ಟೆಯ ಮೇಲೆ ತಂದು ಒತ್ತಿಕೊಳ್ಳುವುದು. ಈ ಆಸನದಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
ಶವಾಸನ: ಯೋಗದ ಅಂತಿಮ ಹಂತದಲ್ಲಿ ಬಿಸಿಗೊಂಡ ದೇಹವನ್ನು ಇದರ ಮೂಲಕ ತಂಪಾಗಿಸಲಾಗುತ್ತದೆ.
ಇದನ್ನೂ ಓದಿ: Yoga Day 2022 | ಯೋಗ ದಿನಾಚರಣೆಯ ಯೋಗಾಭ್ಯಾಸಕ್ಕೆ ಸಾಮಾನ್ಯ ನಿಯಮಗಳು ಇಲ್ಲಿವೆ