Site icon Vistara News

Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

Whiten Your Yellow Teeth

ಹೀಗೊಂದು ಸನ್ನಿವೇಶವನ್ನು (Whiten Your Yellow Teeth) ಊಹಿಸಿಕೊಳ್ಳಿ- ಅದೊಂದು ಸುಂದರವಾದ ನಗು. ಆದರೆ ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂಥ ಅವಸ್ಥೆ. ಅಂದರೆ ಬಾಯಿ ಮುಚ್ಚಿಕೊಂಡಾಗ ಸುಂದರವಾಗಿ ಕಾಣುವ ನಗು, ಬಾಯಿ ಬಿಟ್ಟಾಕ್ಷಣ ಹಳದಿ ಬಣ್ಣದ ಹಲ್ಲುಗಳೊಂದಿಗೆ ರಾರಾಜಿಸುತ್ತದೆ! ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಹೌದು, ಮನಸ್ಸು ನಿರ್ಮಲವಾಗಿದ್ದರೆ, ನಗುವೂ ಸ್ವಚ್ಛವೇ. ಆದರೆ ʻಹಲ್ಲು ಬಿಟ್ಟರೆ ಸಂತೋಷ, ಬಿಡದಿದ್ದರೆ ಇನ್ನೂ ಸಂತೋಷʼ ಎನ್ನುವ ಅವಸ್ಥೆಯಲ್ಲಿ ಫೋಟೋಗೆ ನಿಲ್ಲುವುದಾದರೂ ಹೇಗೆ? ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಹಾಕಿದಾಗ ಒಬ್ಬರಲ್ಲ ಒಬ್ಬರು ಈ ಬಗ್ಗೆ ಕಮೆಂಟಿಸಿಬಿಟ್ಟರೆ, ಶೋಕದ ಮಹಾಪೂರವೇ ಹರಿಯುವುದಿಲ್ಲವೇ? ಹಳದಿ ಹಲ್ಲುಗಳಿಗೆ ಏನು ಪರಿಹಾರ? ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ/ ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಇದಕ್ಕೆ ಸುಲಭದ ಪರಿಹಾರವೆಂದರೆ ದಂತವೈದ್ಯರನ್ನು ಕಾಣುವುದು ಮತ್ತು ಹಲ್ಲುಗಳನ್ನು ಬಿಳಿ ಮಾಡಿಸಿಕೊಳ್ಳುವುದು. ಅನತಿ ಸಮಯದಲ್ಲಿ, ಬೇಗನೇ ದೊರೆಯುವ ಪರಿಹಾರವಿದು. ಆದರೆ ಇದು ದೂರಗಾಮಿ ಪರಿಹಾರವಲ್ಲ. ಕೆಲವು ದಿನಗಳ ನಂತರ ದಂತಪಂಕ್ತಿ ಮತ್ತೆ ಬಣ್ಣಗೆಡಬಹುದು. ಎಷ್ಟು ಬಾರಿ ದಂತ ವೈದ್ಯರ ಬಳಿ ಹೋಗಿ ದುಬಾರಿ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಸಾಧ್ಯ? ಇದಕ್ಕೆ ದೀರ್ಘಾವಧಿ ಪರಿಹಾರವಿಲ್ಲವೇ ಎಂಬುದೀಗ ವಿಷಯ. ಮಾತ್ರವಲ್ಲ, ಆಹಾರಗಳಿಂದ ಇದನ್ನು ನಿರ್ವಹಿಸಲು ಸಾಧ್ಯವಿಲ್ಲವೇ?
ಕೆಲವು ಆಹಾರಗಳು ನಮ್ಮ ಹಲ್ಲುಗಳ ಮೇಲೆ ದೀರ್ಘಕಾಲ ಉಳಿದು ಎನಾಮಲ್‌ ಕವಚಕ್ಕೆ ಹಾನಿ ತರುವುದು ಮಾತ್ರವಲ್ಲ, ಬಿಳಿಯ ಬಣ್ಣವನ್ನೂ ಹಾಳು ಮಾಡಬಲ್ಲವು. ಅಂಥ ಕೆಲವು ಆಹಾರಗಳ ಬಗ್ಗೆ ಜಾಗ್ರತೆ ಬೇಕು. ಇದಲ್ಲದೆ, ಇನ್ನು ಕೆಲವು ಆಹಾರಗಳು ದಂತಗಳ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲವು. ಅಂಥವುಗಳನ್ನು ಮರೆಯದೇ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಹೆಚ್ಚಿನ ರಾಸಾಯನಿಕಗಳ ಗೊಡವೆ ಇಲ್ಲದೆಯೇ ಸುಂದರ, ಸ್ವಚ್ಛ ನಗುವನ್ನು ನಿಮ್ಮದಾಗಿಸಿಕೊಳ್ಳಬಹುದು. ಎಂಥ ಆಹಾರಗಳು ಹಲ್ಲುಗಳಿಗೆ ಸೂಕ್ತವಲ್ಲ?

Fruits and Vegetables Spilling from Paper Bag

ಸಕ್ಕರೆ ಮಾರಿಗಳು

ಅಂಟಾದ ಶುಗರ್‌ ಕ್ಯಾಂಡಿಗಳು, ಸೋಡಾ, ಫ್ರೂಟ್‌ ಜ್ಯೂಸ್‌ಗಳು ಈ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಇವುಗಳಲ್ಲಿರುವ ಸಕ್ಕರೆಯಂಶ ಹಲ್ಲಿನ ಮೇಲೆ ದೀರ್ಘ ಕಾಲ ಅಂಟಿಕೂತು ಬ್ಯಾಕ್ಟೀರಿಯಗಳನ್ನು ಕೂಗಿ ಕರೆಯುತ್ತದೆ. ಸೋಡಾಗಳಲ್ಲಿರುವ ಕಾರ್ಬನ್‌ ಅಂಶವು ಎನಾಮಲ್‌ ದುರ್ಬಲ ಮಾಡುವುದರಲ್ಲಿ ಸದಾ ಮುಂದು. ಇದರ ಫಲವಾಗಿ ಹಲ್ಲುಗಳ ಬಣ್ಣವೂ ಹಾಳಾಗುತ್ತದೆ.

ಸಿಟ್ರಸ್‌ ಹಣ್ಣುಗಳು

ದ್ರಾಕ್ಷಿ, ಕಿತ್ತಳೆ, ನಿಂಬೆಯಂಥ ಹುಳಿ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯವೆ. ಹಾಗೆ ನೋಡಿದರೆ ಹಲ್ಲುಗಳ ಆರೋಗ್ಯಕ್ಕೆ ಇವೇನೂ ಹಾಳಲ್ಲ. ಹೊಳಪಿಗೂ ಸಮಸ್ಯೆ ತರುವಂಥವಲ್ಲ. ಆದರೆ ಇವುಗಳನ್ನು ತಿಂದ ಮೇಲೆ ನೆನಪಿನಿಂದ ಬಾಯಿ ಸ್ವಚ್ಛ ಮಾಡಿಕೊಳ್ಳಲೇಬೇಕು. ಅದಿಲ್ಲದಿದ್ದರೆ ಇದರಲ್ಲಿರುವ ಆಮ್ಲೀಯ ಅಂಶಗಳು ದಂತಪಂಕ್ತಿಗಳಿಗೆ ಹಾನಿ ಮಾಡಬಹುದು.

ಕಾಫಿ, ಚಹಾ

ಹಲ್ಲುಗಳನ್ನು ಬಣ್ಣಗೇಡು ಮಾಡುವುದರಲ್ಲಿ ಇವುಗಳದ್ದು ಎತ್ತಿದ ಕೈ. ದಂತಗಳ ಬಿಳಿಯ ಬಣ್ಣ ಹಾಳು ಮಾಡುವ ಗುಣ ಇವುಗಳಿಗೆ ಇದ್ದೇ ಇದೆ. ಜೊತೆಗೆ, ಇವನ್ನು ಕುಡಿದ ಮೇಲೆ ಬಾಯಿ ತೊಳೆಯುವ ಅಭ್ಯಾಸ ಹೆಚ್ಚಿನವರಿಗೆ ಇರುವುದಿಲ್ಲ. ಹಾಗಾಗಿ ಸಮಸ್ಯೆ ಹೆಚ್ಚುತ್ತದೆ. ಕೆಫೇನ್‌ ಮಿತವಾಗಿದ್ದರೆ ಹಲ್ಲುಗಳಿಗೂ ಒಳ್ಳೆಯದು.

ಒಳ್ಳೆಯದಾವುದು?

ಚೀಸ್‌, ಯೋಗರ್ಟ್‌ನಂಥವು ದಂತಸ್ವಾಸ್ಥ್ಯಕ್ಕೆ ಪೂರಕವಾದವು. ಕ್ಯಾಲ್ಶಿಯಂ, ಫಾಸ್ಫೇಟ್‌ ಮತ್ತು ಪ್ರೊಬಯಾಟಿಕ್ಸ್‌ ಹೊಂದಿರುವ ಈ ಆಹಾರಗಳು ಹಲ್ಲುಗಳ ಎನಾಮಲ್‌ ಬಲಪಡಿಸುತ್ತವೆ. ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಗೆ ಪ್ರೋತ್ಸಾಹ ನೀಡಿ, ಹಲ್ಲಿನ ಮೇಲ್ಮೈಯಲ್ಲಿ ಅಂಟಿ ಕೂರುವ ಬ್ಯಾಕ್ಟೀರಿಯಗಳನ್ನು ಕಡಿಮೆ ಮಾಡುತ್ತವೆ. ಈ ಮೂಲಕ ಹಲ್ಲಿನ ಹೊಳಪಿಗೆ ಕಾರಣವಾಗುತ್ತವೆ.

ತರಕಾರಿಗಳು

ಕ್ಯಾರೆಟ್‌, ಹಸಿರು ಸೊಪ್ಪು-ತರಕಾರಿಗಳು ಹಲ್ಲುಗಳ ಆರೋಗ್ಯಕ್ಕೆ ಬೇಕಾದಂಥವು. ಕರುಂಕುರುಂ ತಿನ್ನಬಹುದಾದ ಕ್ಯಾರೆಟ್‌, ಸೆಲೆರಿಯಂಥವು ಹಲ್ಲುಗಳಿಗೆ ನೈಸರ್ಗಿಕ ಬ್ರಷ್‌ನಂತೆ ಕೆಲಸ ಮಾಡುತ್ತವೆ. ಜೊತೆಗೆ ಕ್ಯಾಲ್ಶಿಯಂನಂಥ ಖನಿಜಗಳು ಮತ್ತು ಫಾಲಿಕ್‌ ಆಮ್ಲಗಳನ್ನು ಹೇರಳವಾಗಿ ಹೊಂದಿರುವ ಹಸಿರು ಸೊಪ್ಪುಗಳಿಗೆ ಹಲ್ಲುಗಳು ಎಲ್ಲ ರೀತಿಯಲ್ಲೂ ನಳನಳಿಸುತ್ತವೆ.

ಇದನ್ನೂ ಓದಿ: Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

ಹಣ್ಣುಗಳು

ಈ ಸಾಲಿನಲ್ಲಿ ಮುಂದೆ ನಿಲ್ಲುವುದು ಸ್ಟ್ರಾಬೆರಿ. ನೈಸರ್ಗಿಕವಾಗಿಯೇ ಹಲ್ಲುಗಳನ್ನು ಬೆಳ್ಳಗೆ ಮಾಡುವ ಸಾಮರ್ಥ್ಯ ಇವುಗಳಿಗೆ ಇದೆ. ಜೊತೆಗೆ ಸೇಬು, ಬಾಳೆಯ ಹಣ್ಣುಗಳಲ್ಲೂ ಹಲ್ಲುಗಳ ಹೊಳಪು ಕಾಪಾಡುವ ಗುಣವಿದೆ. ಇವುಗಳಲ್ಲಿ ಇರುವ ಅಧಿಕ ನೀರಿನಂಶ ಲಾಲಾ ರಸದ ಉತ್ಪಾದನೆಗೆ ನೆರವಾಗುತ್ತದೆ. ಹಾಗಾಗಿ ಬಾಯಿಯ ಆರೋಗ್ಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಮಹತ್ವದ್ದು.

Exit mobile version