Site icon Vistara News

happy hormone | ಖುಷಿಯಾಗಿರಬೇಕಾ? ಈ ನಾಲ್ಕು ಹಾರ್ಮೋನ್‌ ಲೆವೆಲ್‌ ಹೆಚ್ಚಿಸಿಕೊಳ್ಳಿ!

happiness

ಬಹಳಷ್ಟು ಸಾರಿ ನಮಗೆ ಕಾರಣವೇ ಇಲ್ಲದೆ ಬೇಸರ ಬರುತ್ತದೆ. ಸಂತೋಷವಾಗಿಯೇ ಇದ್ದ ನಾವು ಇದ್ದಕ್ಕಿದ್ದಂತೆ ಕೆಟ್ಟ ಮೂಡಿಗೆ ತಿರುಗಿ ಏನೂ ಮಾಡದೆ ಕಳೆಯುತ್ತೇವೆ. ಅಥವಾ ಸುಮ್ಮನೆ ಟಿವಿ ರಿಮೋಟು ಒತ್ತಿ ಅನಗತ್ಯ ಟಿವಿ ನೋಡಿಕೊಂಡೋ, ಸುಮ್ಮನೆ ಸೋಫಾದಲ್ಲಿ ಬಿದ್ದುಕೊಂಡೋ, ಅಥವಾ ಸಿಕ್ಕಿದ್ದನ್ನೆಲ್ಲ ತಿಂದೋ ಕಾಲ ತಳ್ಳಿಬಿಡುತ್ತೇವೆ. ಹಾಗಾದರೆ ಈ ಮೂಡು ನಮ್ಮ ಕೈಯಲ್ಲಿದೆಯೋ? ಅದನ್ನು ನಮಗೆ ಬೇಕಾದ ಹಾಗೆ ಬದಲಾಯಿಸಲು ಸಾಧ್ಯವೋ ಎಂಬ ಪ್ರಶ್ನೆ ಎಲ್ಲರದ್ದೂ.

ಹಾಗೆ ನೋಡಿದರೆ ಖುಷಿ ಅನ್ನೋದು ಸೈಕಾಲಜಿ ಅಂದುಕೊಂಡಿದ್ದರೆ ನಮ್ಮ ಊಹೆ ತಪ್ಪು. ಖುಷಿಯ ಮೂಡೂ ಬಯಾಲಜಿಯೇ! ಹೌದು. ನಮ್ಮ ಭಾವನೆಗಳನ್ನು ನಿಂಯಂತ್ರಿಸುವ ನಾಲ್ಕು ಬಗೆಯ ಹಾರ್ಮೋನುಗಳಿವೆ. ಡೋಪಮೈನ್‌, ಎಂಡೋರ್ಫಿನ್‌, ಆಕ್ಸಿಟೋಸಿನ್‌ ಹಾಗೂ ಸೆರೆಟೋನಿನ್ ಎಂಬ ನಾಲ್ಕು ಹಾರ್ಮೋನುಗಳ ಬಿಡುಗಡೆಯೇ ನಮ್ಮ ಮೂಡನ್ನೂ ನಿಯಂತ್ರಿಸುತ್ತದೆ.

ಡೊಪಾಮೈನ್‌ ಹಾರ್ಮೋನು: ನಾವು ಯಾವುದಾದರೊಂದು ಟಾರ್ಗೆಟ್‌ ಪೂರ್ಣಗೊಳಿಸಿದರೆ, ಸಾಧನೆ ಮಾಡಿದರೆ ಡೊಪಾಮೈನ್‌ ಹಾರ್ಮೋನು ಬಿಡುಗಡೆಯಾಗುತ್ತದೆ. ಸಾಧನೆ, ಟಾಸ್ಕ್‌ ದೊಡ್ಡದಿರಬಹುದು ಸಣ್ಣದಿರಬಹುದು. ಡೊಪಮೈನ್‌ ಹಾರ್ಮೋನು ಇಂಥ ಕ್ಷಣದಲ್ಲಿ ಬಿಡುಗಡೆಯಾಗಿ ನಮಗೆ ಸಾಧಿಸಿದ ತೃಪ್ತಿಯ ಅನುಭವವನ್ನು ನೀಡುತ್ತದೆ. ಈ ಹಾರ್ಮೋನು ನಮ್ಮ ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ. ನಮ್ಮನ್ನು ಖಿನ್ನತೆಯಿಂದ, ಕೆಟ್ಟ ಚಟಗಳಿಂದ ದೂರವಿರಿಸುತ್ತದೆ. ಒಟ್ಟಾರೆ, ನಮ್ಮತನವನ್ನು ಅನುಭವಿಸುವಂತೆ ಮಾಡುವ ಖುಷಿಯ ಹಾರ್ಮೋನು ಇದು. ಅದಕ್ಕಾಗಿಯೇ, ಮನೆಯಲ್ಲೇ ಕೇವಲ ಗೃಹಕೃತ್ಯಗಳಿಗಷ್ಟೇ ಸೀಮಿತವಾಗಿ ಉಳಿದ ಗೃಹಿಣಿಯರು ಯಾವಾಗಲೂ ಬೇಸರದಿಂದಿರುತ್ತಾರೆ. ಅವರ ದಿನನಿತ್ಯದ ಕೆಲಸಗಳಿಗೆ ಅವರನ್ನು ಯಾರೂ ಹೊಗಳುವುದಿಲ್ಲವಾದ್ದರಿಂದ ಮಾಡಿದ ಖುಷಿಯ ಅನುಭವವೂ ಅವರಿಗೆ ದಕ್ಕುವುದಿಲ್ಲ.

ಇದನ್ನೂ ಓದಿ: Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

ಹಾಗಾದರೆ ಈ ಹಾರ್ಮೋನನ್ನು ಹೆಚ್ಚು ಹೆಚ್ಚು ಉತ್ಪಾದಿಸುವಂತೆ ಮಾಡಲು ಏನು ಮಾಡಬೇಕು ಎಂಬ ಪ್ರಶ್ನೆ ಸಹಜ. ಸಣ್ಣ ಸಣ್ಣ ಟಾರ್ಗೆಟ್‌ಗಳನ್ನಿಟ್ಟು ದಿನವೂ ಕೆಲಸ ಮಾಡಿ. ಅದನ್ನು ಪೂರ್ಣಗೊಳಿಸಿ. ಹಾಗೂ ನಿಮ್ಮ ಪುಟ್ಟ ಪುಟ್ಟ ಸಾಧನೆಗಳನ್ನು ಸಂಭ್ರಮಿಸಿ. ಹೊಸತನ್ನು ಹುಡುಕಿ, ಕಲಿಯಿರಿ.

ಎಂಡೋರ್ಫಿನ್‌ ಹಾರ್ಮೋನು: ಈ ಹಾರ್ಮೋನು ನಾವು ಗಾಯಗೊಂಡಾಗ, ನೋವಾದಾಗ, ಅತೀವ ಒತ್ತಡದಲ್ಲಿದ್ದಾಗ, ವ್ಯಾಯಾಮ ಮಾಡುವಾಗ, ಸೆಕ್ಸ್‌ ಸಂದರ್ಭಗಳಲ್ಲಿ ಬಿಡುಗಡೆಯಾಗುತ್ತದೆ. ನೋವನ್ನು ಕಡಿಮೆ ಮಾಡುವ, ಕಷ್ಟದ ಕೆಲಸಗಳನ್ನು ಮಾಡುವ ಸಂದರ್ಭವೂ ಅದನ್ನು ಎಂಜಾಯ್‌ ಮಾಡುವಂತೆ ಮಾಡುವುದು ಈ ಹಾರ್ಮೋನಿನ ಹೆಚ್ಚುಗಾರಿಕೆ. ಹಾಗಾದರೆ ಈ ಹಾರ್ಮೋನು ಹೆಚ್ಚು ಬಿಡುಗಡೆಯಾಗಲು ನಾವೇನು ಮಾಡಬಹುದು ಎಂದರೆ, ನಿಯಮಿತವಾಗಿ ಪ್ರತಿದಿನವೂ ವ್ಯಾಯಾಮ ಮಾಡುವುದು, ಗೆಳೆಯರ ಜೊತೆ ಹಾಸ್ಯ ಸಿನೆಮಾಗಳನ್ನು ನೋಡುತ್ತಾ ಬಿದ್ದು ಬಿದ್ದು ನಗುವುದು, ಅಥವಾ ಆಗಾಗ ಚಾಕೋಲೇಟು ತಿನ್ನುವುದು!

ಆಕ್ಸಿಟೋಸಿನ್‌: ಇದಕ್ಕೆ ಲವ್‌ ಹಾರ್ಮೋನು ಎಂಬ ಇನ್ನೊಂದು ಹೆಸರಿದೆ. ಇದು ಪ್ರೀತಿಸುವವರ ಹಾರ್ಮೋನು. ನಂಬಿಕೆ, ಪ್ರೀತಿ, ಆಕರ್ಷಣೆ ಮತ್ತಿತರ ಗುಣಗಳು ಇದರದ್ದು. ಪ್ರೀತಿಸುವವರ ಜೊತೆ ಪ್ರೀತಿಯಿಂದ ಮಾತನಾಡುವುದು, ಕಿಸ್‌, ಹಗ್‌ ಹಾಗೂ ಸೆಕ್ಸ್‌ ಮತ್ತಿತರ ಪ್ರೀತಿಯ ವಿವಿಧ ಮುಖಗಳಲ್ಲೂ ಆಕ್ಸಿಟೋಸಿನ್‌ ಕಾರುಬಾರು ಹೆಚ್ಚಿರುತ್ತದೆ. ಕೇವಲ ಇಷ್ಟೇ ಅಲ್ಲದೆ, ಗೆಳೆಯರು ಕುಟುಂಬಸ್ಥರ ಜೊತೆ ಬೆರೆಯುವುದು, ಹ್ಯಾಂಡ್‌ ಶೇಕ್‌ ಮಾಡುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು, ಅಪ್ಪಿಕೊಳ್ಳುವುದು ಮಾಡುವಾಗಲೂ ಆಕ್ಸಿಟೋಸಿನ್‌ ಬಿಡುಗಡೆಯಾಗುತ್ತದೆ. ಆಗಾಗ ನಿಮಗೆ ಆಕ್ಸಿಟೋಸಿನ್‌ ಹೆಚ್ಚು ಮಾಡಬೇಕಿದ್ದರೆ, ಈ ಎಲ್ಲವನ್ನು ಮಾಡಬಹುದು. ಇವಿಷ್ಟು ಸಾಧ್ಯವಿಲ್ಲವಾದಲ್ಲಿ, ನಾಯಿಯೋ, ಬೆಕ್ಕನ್ನೋ ಸಾಕಿ ಮನಸೋ ಇಚ್ಛೆ ಮುದ್ದು ಮಾಡಿ.

ಸೆರಟೋನಿನ್‌: ಇದು ಖುಷಿಯ ಹಾರ್ಮೋನು. ಇದರ ಬಿಡುಗಡೆಯಿಂದ ಒಳ್ಳೆಯ ನಿದ್ದೆ, ಹಸಿವು, ನೆನಪಿನ ಶಕ್ತಿ, ಕಲಿಕೆಯ ಗುಣಮಟ್ಟ ಹಾಗೂ ಸಮಾಜದಲ್ಲಿ ವ್ಯವಹರಿಸುವ ಶಕ್ತಿ ಎಲ್ಲವೂ ವೃದ್ಧಿಸುತ್ತದೆ. ಸೆರಟೋನಿನ್‌ ಹಾರ್ಮೋನನ್ನು ಹೆಚ್ಚಿಸಲು ಬೆಳಗಿನ ಹೊತ್ತು ಸೂರ್ಯನ ಬಿಸಿಲಿನಲ್ಲಿ ವಾಕ್‌ ಹೋಗಬಹುದು, ಮಸಾಜ್ ಮಾಡಿಸಿಕೊಳ್ಳಬಹುದು.‌ ಅಥವಾ ದಿನವೂ ನಿಮ್ಮ ಜೀವನದ ಖುಷಿಯ ಗಳಿಗೆಗಳನ್ನು ಆಗಾಗ ಮೆಲುಕು ಹಾಕುತ್ತಾ ಈ ಜೀವನ ಧನ್ಯವೆಂದು ನಿಮಗೆ ನೀವೇ ಖುಷಿಯನ್ನು ಉದ್ದೀಪನಗೊಳ್ಳುವಂತೆ ಮಾಡಬಹುದು.

ಈ ನಾಲ್ಕೂ ಹಾರ್ಮೋನುಗಳ ಬಿಡುಗಡೆಯನ್ನು ಹೆಚ್ಚಿಸಿ, ಖುಷಿಯಾಗಿರಿ!

ಇದನ್ನೂ ಓದಿ: Fitness secret: ಯಾವಾಗಲೂ ಫಿಟ್‌ ಆಗಿರುತ್ತಾರಲ್ಲ, ಅವರ ದಿನಚರಿಯ ಈ 10 ಅಭ್ಯಾಸ ನೋಡಿದಿರಾ?

Exit mobile version