Site icon Vistara News

ರಾಜ ಮಾರ್ಗ ಅಂಕಣ: ಹ್ಯಾಪಿ ಹ್ಯಾಪಿ ದೋಸ್ತಿಗಳ ದಿನ ಕಣ್ರೋ….! ರಕ್ತ ಸಂಬಂಧಕ್ಕೂ ಮಿಗಿಲು ಈ ಗೆಳೆಯ/ಗೆಳತಿ ಪ್ರೀತಿ

Friendship day 2023

-ಬಾಲ್ಯದಲ್ಲಿ ಗಂಡ ಹೆಂಡತಿ ಆಟ ಆಡಿದ ಎಲ್ಲಾ ನನ್ನ ಗೆಳೆಯ ಗೆಳತಿಯರಿಗೆ!
-ಸಿಕ್ಕಿದ ಒಂದು ಮಾವಿನ ಮಿಡಿಯನ್ನು ಕಾಗೆ ಎಂಜಲು ಮಾಡಿ ಎಲ್ಲರಿಗೂ ಹಂಚಿ ತಿಂದ ಒಡನಾಡಿಗಳಿಗೆ!
-ಒಂದು ಬುತ್ತಿ ತಂಗಳು ಗಂಜಿಯನ್ನು ಕಿತ್ತಾಡಿ ಎಂಜಲು ತುತ್ತು ತಿಂದ ಹಸಿವು ಶೂರರಿಗೆ!
-ಪರೀಕ್ಷೆಯಲ್ಲಿ ಚೀಟಿ ಬರೆದು ಸರಿಯಾದ ಉತ್ತರವನ್ನು ಹೇಳಿಕೊಟ್ಟು ನನ್ನನ್ನು ಪಾಸ್ ಮಾಡಿದ ಸೂಪರ್ ಜೀನಿಯಸ್ ಹುಡುಗ, ಹುಡುಗಿಯರಿಗೆ!
-ಅಸೆಂಬ್ಲಿಯಲ್ಲಿ ಶಿಸ್ತಲ್ಲಿ ನಿಂತಿದ್ದರೂ ಕಿಸೆಯಲ್ಲಿ ಅಡಗಿದ್ದ ಹುಣಸೆ ಬೀಜಗಳನ್ನು ಪಕ್ಕದಲ್ಲಿ ನಿಂತವರಿಗೆ ಭಾರೀ ನಾಜೂಕಾಗಿ ದಾಟಿಸಿದ ಶಿಸ್ತಿನ ಸಿಪಾಯಿಗಳಿಗೆ!

-ಹಾಜರಿ ಕರೆಯುವಾಗ ಯೆಸ್ ಮೇಡಂ ಎಂದು ಗಟ್ಟಿಯಾಗಿ ಹೇಳಿ ಗೈರು ಹಾಜರಾಗಿದ್ದ ನನ್ನ ಮಾನ ಕಾಪಾಡುತ್ತಿದ್ದ ನನ್ನ ಪ್ರಾಕ್ಸಿ ಗೆಳೆಯರಿಗೆ!
-ಶಾಲೆಯ ಗ್ರೌಂಡಲ್ಲಿ ಜೋರು ಮಳೆ ಬಂದಾಗಲೂ ಆಡಿ ಕ್ಲಾಸಿಗೆ ಬಂದು ಆಕ್ಷೋ ಎಂದು ತಮಾಷೆಯ ನೆಗಡಿ ಹಾರಿಸಿದ ಶೀತ ವೀರರಿಗೆ!
-ಆಟ ಆಡುವಾಗ ಬಿದ್ದು ಗಾಯ ಆದಾಗ ಕೆಂಪು ಮಣ್ಣು ಸುರಿದು ಏನೂ ಆಗೋದಿಲ್ಲ ಕಣೋ ಎಂದು ಧೈರ್ಯ ತುಂಬಿಸಿದ ವೈದ್ಯ ಶಿಖಾಮಣಿಗಳಿಗೆ.
-ಹರಿದು ಹೋದ ಶರ್ಟ್ ಮತ್ತು ಚಲ್ಲಣ ಹಾಕಿ ಶಾಲೆಗೆ ಹೋದಾಗಲೂ ಅಣಕು ಮಾಡದ ನಿಜ ದೋಸ್ತುಗಳಿಗೆ!
-ಟೀಚರ್ ಪ್ರಶ್ನೆ ಕೇಳಿದಾಗ ಉತ್ತರವನ್ನು ಪಿಸುಗುಟ್ಟಿ ಹೇಳಿ ನನ್ನ ಮಾನ ಕಾಪಾಡಿದ ಗೂಗಲ್ ಗೆಳೆಯರಿಗೆ!

Friendship day

-ಇಡೀ ತರಗತಿಯ ಕ್ರ ಆದ ಹುಡುಗಿಗೆ ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡಲು ನನಗೆ ಹಣ ಒಟ್ಟು ಮಾಡಿಕೊಟ್ಟ ದಾನ ಶೂರರಿಗೆ!
-ನಾನು ಶಾಲೆಗೆ ಬಾರದ ದಿನ ಕಾರ್ಬನ್ ಪೇಪರ್ ಇಟ್ಟು ನನಗೆ ನೋಟ್ಸ್ ಬರೆದು ಕೊಟ್ಟ ನನ್ನ ಪರೋಪಕಾರಿ ಸ್ನೇಹಿತರಿಗೆ!
-ಟೀಚರ್ ಮತ್ತು ಮೇಷ್ಟ್ರು ಎಲ್ಲರ ಧ್ವನಿಗಳನ್ನು, ಅವರ ನಡಿಗೆಯನ್ನು, ನಗೆಯನ್ನು ಚಂದ ಕಾಪಿ ಮಾಡಿ ನಮ್ಮನ್ನು ನಗಿಸುತ್ತಿದ್ದ ಮಿಮಿಕ್ರಿ ಕಲಾವಿದರಿಗೆ!
-ಟೀಚರ್ ಬೋರ್ಡಿನಲ್ಲಿ ಪಾಠ ಮಾಡುತ್ತ ಇರುವಾಗ ಕೊನೆಯ ಬೆಂಚಿನಲ್ಲಿ ಕುಳಿತು ಅದೇ ಟೀಚರ್
ಚಿತ್ರವನ್ನು ಬಿಡಿಸುತ್ತ ಇದ್ದ ಮಹಾ ಕಲಾವಿದರಿಗೆ!
-ರೇಸಿನಲ್ಲಿ ಗೆಲ್ಲುವ ಸಾಮರ್ಥ್ಯ ಅವರಲ್ಲಿ ಇದ್ದರೂ ಬೇಕೆಂದೇ ಬೀಳುವ ನಾಟಕ ಮಾಡಿ ನನ್ನನ್ನು ಗೆಲ್ಲಿಸುತ್ತಿದ್ದ ತ್ಯಾಗವೀರರಿಗೆ.

Friendship day

-ವಾರ್ಷಿಕೋತ್ಸವದ ನಾಟಕದಲ್ಲಿ ನನ್ನ ಮುಖಕ್ಕೆ ಬಣ್ಣ ಹಚ್ಚಿ ಕೊಂಕು ಮಾಡಿದ ಕೊಂಕೆಗಳಿಗೆ!
-ತರಗತಿಯಲ್ಲಿ ನನ್ನ ಹೆಸರು ಬರೆದು ಮೇಷ್ಟ್ರಿಗೆ ಚಾಡಿ ಹೇಳಿ, ಪೆಟ್ಟು ತಿನ್ನಿಸಿ ಆಮೇಲೆ ಸಾರಿ ಕಣೋ ಎಂದು ಕಣ್ಣೀರು ಒರೆಸಿದ ಹೃದಯವಂತ ಗೆಳೆಯರಿಗೆ!
-ಆಟೋಗ್ರಾಫ್ ಪುಸ್ತಕದಲ್ಲಿ ಚಂದ ಚಂದ ಕವನಗಳ ಬರೆದು ಕೊನೆಗೆ ನಿನ್ನ ಮದುವೆಗೆ ಹೇಳುವುದನ್ನು ಮರೆಯಬೇಡ ಎಂದು ಬರೆದ ಕವಿಗಳಿಗೆ!
-ನೆಲ ನೋಡಿ ಮಾತನಾಡುತ್ತ, ಕಾಲಿನ ಹೆಬ್ಬೆರಳಲ್ಲಿ ಅರ್ಧ ವೃತ್ತ ಬಿಡಿಸುತ್ತಿದ್ದ ನಾಚಿಕೆಯ ಹುಡುಗಿಯರಿಗೆ!
-ಇಡೀ ವರ್ಷ ಸಿಟ್ಟು ಮಾಡಿಕೊಂಡು ಮಾತೇ ಆಡದಿದ್ದರೂ ಕೊನೆಯ ದಿನ ನನ್ನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ಹೃದಯ ಸ್ನೇಹಿತರಿಗೆ!

-ಸೆಂಡಾಫ್ ಕಾರ್ಯಕ್ರಮದಲ್ಲಿ ಯಾರದೋ ವಾಚ್ ಕಟ್ಟಿಕೊಂಡು ಬಂದು ಕೈಯನ್ನು ಮೇಲೆ ಕಟ್ಟಿಕೊಂಡು ಫೋಟೋಕ್ಕೆ ಪೋಸ್ ಕೊಟ್ಟ ಪೋಸ್ ವೀರರಿಗೆ!
-ನಾನು ಸೋತಾಗ ದುಃಖ ಪಟ್ಟ, ಗೆದ್ದಾಗ ಸಂಭ್ರಮಿಸಿದ ನನ್ನ ಜೀವದ ಗೆಳೆಯರಿಗೆ.
-ನನಗೆ ತರಗತಿಯಲ್ಲಿ ಪೆಟ್ಟು ಬಿದ್ದಾಗ ಪೆಟ್ಟು ಕೊಟ್ಟ ಶಿಕ್ಷಕರ ಬೈಕಿನ ಗಾಳಿ ತೆಗೆದು ಪಂಕ್ಚರ್ ಮಾಡಿದ ಕಿಡಿಗೇಡಿ ಸ್ನೇಹಿತರಿಗೆ.
-ನನ್ನ ಮುಂದೆ ಬಂದು ತಲೆ ತಗ್ಗಿಸಿ ನಿಂತು ಹೇಳಬೇಕಾದ್ದನ್ನು ಮರೆತು ತಣ್ಣಗೆ ನಿಂತ ನನ್ನ ಚಂದದ ಗೆಳತಿಯರಿಗೆ.
-ನಾನು ಮಾಡಿದ ತಪ್ಪುಗಳಿಗೆ ಆರೋಪ ಹೊತ್ತುಕೊಂಡು ಬೆನ್ನು ಕೊಟ್ಟು ನಿಂತ ನನ್ನ ಪ್ರೀತಿಯ ಗೆಳೆಯರಿಗೆ.

ಅಂಕಣಕಾರ ಕೆ. ರಾಜೇಂದ್ರ ಭಟ್‌ ಅವರು ತಮ್ಮ ಫ್ರೆಂಡ್ಸ್‌ ಜತೆಗೆ…

-ಟಿಫಿನ್ ಬಾಕ್ಸಿನಲ್ಲಿ ಪ್ರೇಮಪತ್ರ ಮಡಚಿ ಇಟ್ಟು ಅದನ್ನು ಯಾವಾಗ ತೆರೆಯುತ್ತಾಳೋ ಎಂದು ಕಾದು ಕೂತ ಅಮರ ಪ್ರೇಮಿಗಳಿಗೆ.
-ಅವಳು ನನಗೆ ಕೈ ಕೊಟ್ಟಳು ಕಣೋ, ಇನ್ನು ಈ ಕಾಲೇಜಿನಲ್ಲಿ ಯಾರೂ ಪ್ರೀತಿ ಮಾಡಬಾರದು ಎಂದು ಸಿಟ್ಟು ಮಾಡಿಕೊಂಡ ದೂರ್ವಾಸ ಮುನಿಗಳಿಗೆ!
-ಶಾಲೆಯ ಗೋಡೆಯ ಮೇಲೆ ಕೈ ಅಗಲಿಸಿ ನಿಂತು ದೂರಕ್ಕೆ ಉಗುಳುವ ಸ್ಪರ್ಧೆಗೆ ನಿಂತ ಟೈಟಾನಿಕ್ ವೀರರಿಗೆ.

ಹೀಗೆ ಏನೆಲ್ಲಾ ನನ್ನಲ್ಲಿ ಕನಸು ಕಟ್ಟಿದ, ಪುಟ್ಟ ಹೃದಯಗಳಲ್ಲಿ ಪ್ರೀತಿ ಹಂಚಿದ ನನ್ನ ಎಲ್ಲಾ ಜೀವದ ಗೆಳೆಯ ಗೆಳತಿಯರಿಗೆ ಫ್ರೆಂಡ್ ಶಿಪ್ ದಿನದ ಶುಭಾಶಯ. ಹ್ಯಾಪಿ ಹ್ಯಾಪಿ ದೋಸ್ತಿ ಡೇ ಕಣ್ರೋ!
-ನಿಮ್ಮ ಗೆಳೆಯ ರಾಜೇಂದ್ರ

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಆ ಒಂದು ತಪ್ಪು ಭಾರತೀಯ ಸಿನಿಮಾ ರಂಗದ ಸಿಂಡ್ರೆಲಾ ಮೀನಾ ಕುಮಾರಿ ಬದುಕಿಗೇ ಮುಳ್ಳಾಯಿತು!

Exit mobile version