ನಾವು ನಿತ್ಯವೂ ಅಡುಗೆಗೆ ಬಹಳ ಪಾತ್ರೆಗಳನ್ನು ಬಳಸುತ್ತೇವೆ. ಈಗ ಬಹುತೇಕವಾಗಿ ಸಾಮಾನ್ಯರ ಮನೆಗಳಲ್ಲಿ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳೇ ಅಡುಗೆಮನೆಯನ್ನು ಆವರಿಸಿದ್ದರೂ, ಮಾಡರ್ನ್ ಯುಗದಲ್ಲಿ ಕಾಲಕ್ಕೆ ತಕ್ಕ ಹಾಗೆ ಬಗೆಬಗೆಯ ಪಾತ್ರೆಗಳು ನಮ್ಮ ಮನೆಗಳಲ್ಲಿವೆ. ಗಾಜಿನಿಂದ ಹಿಡಿದು ಚಿನ್ನದ ಪಾತ್ರೆಗಳವರೆಗೂ ಅವರವರ ಅನುಕೂಲಕ್ಕೆ ತಕ್ಕಂತೆ ಬಳಸುವವರೂ ಇದ್ದಾರೆ. ಶೋಕಿಗೂ ಕೂಡ! ಆದರೆ, ಆಹಾರವನ್ನು ಹಾಕಿಡಲು, ಉಣ್ಣಲು ಯಾವೆಲ್ಲ ಪಾತ್ರೆಗಳು ಹಿಂದೆ ಬಳಕೆಯಲ್ಲಿದ್ದವೋ ಅವುಗಳ ಪೈಕಿ ಬಹುತೇಕವು ಈಗ ಇಲ್ಲ. ಕಾರಣಗಳು ಅನೇಕ. ಇನ್ನೂ ಕೆಲವು ಆರೋಗ್ಯದ ಕಾರಣಗಳಿಂದ ಟ್ರೆಂಡ್‌ನಲ್ಲಿವೆ. ಮತ್ತೆ ಜನರು ಅವುಗಳತ್ತ ಮುಖ ಮಾಡುತ್ತಿದ್ದಾರೆ ಕೂಡ. ಆದರೆ, ಕೆಲವೊಮ್ಮೆ, ಸರಿಯಾಗಿ ಗೊತ್ತಿಲ್ಲದೆ, ತಪ್ಪಾಗಿ ಬಳಕೆ ಮಾಡುವುದೂ ಉಂಟು. ಹಾಗಾದರೆ, ಬನ್ನಿ, ಆರೋಗ್ಯದ ದೃಷ್ಟಿಯಿಂದ ಯಾವ ಪಾತ್ರೆಗಳು ಆಹಾರ ಸೇವನೆಗೆ ಸೂಕ್ತ ಎಂಬುದನ್ನು ನೋಡೋಣ ಬನ್ನಿ.
1. ಬಂಗಾರದ ಪಾತ್ರೆಗಳು
ಬಂಗಾರದ ಪಾತ್ರೆಗಳಲ್ಲಿ ಯಾವುದೇ ಆಹಾರವನ್ನು ಯಾವ ಭಯವೂ ಇಲ್ಲದೆ ಹಾಕಬಹುದು. ಜೊತೆಗೆ ಬಂಗಾರದ ತಟ್ಟೆಯಲ್ಲಿ ಹಾಕಿ ಉಣ್ಣಬಹುದು. ಯಾಕೆಂದರೆ, ಬಂಗಾರದ ಪಾತ್ರೆ ಆಹಾರದ ಜೊತೆಗೆ ಪ್ರತಿಕ್ರಿಯೆ ತೋರುವ ಗುಣವನ್ನು ಹೊಂದಿಲ್ಲ. ಹಾಗೆಯೇ, ಬಂಗಾರದ ಪಾತ್ರೆಯ ಬಳಕೆ ನಮ್ಮ ದೇಹದ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ. ಆದರೆ, ಬೆಲೆ ದುಬಾಋಇಯಾದ ಕಾರಣ ಈಇನ ಕಾಲದಲ್ಲಿ ಇದರ ಬಳಕೆ ಬಹುತೇಕ ಇಲ್ಲವೆಂದೇ ಹೇಳಬಹುದು.
2. ಬೆಳ್ಳಿಯ ಪಾತ್ರೆಗಳು
ದುಬಾರಿಯೇ ಆದರೂ, ವಿಶೇಷ ಸಂದರ್ಭಗಳಲ್ಲಿ ಬಳಸಲು ಮನೆಗಳಲ್ಲಿ ಈಗಲೂ ಇಟ್ಟುಕೊಂಡಿರುತ್ತಾರೆ. ಆಂಟಿ ಮೈಕ್ರೋಬಿಯಲ್ ಗುಣಗಳು ಇದರಲ್ಲಿದ್ದು, ಇದರಲ್ಲಿ ಆಹಾರವನ್ನು ಹಾಕಿ ಉಣ್ಣುವುದರಿಂದ ಇದು ಎಲ್ಲ ಬಗೆಯ ಬ್ಯಾಕ್ಟೀರಿಯಾ, ಫಂಗೈಗಳನ್ನು ಇದು ತಡೆಯುತ್ತದೆ ಎಂಬ ನಂಬಿಕೆಯಿದೆ. ಬೆಳ್ಳಿಯ ತಟ್ಟೆಗಳಲ್ಲಿ ಪುಟ್ಟ ಮಕ್ಕಳಿಗೆ ಉಣ್ಣಿಸುವ ಪದ್ಧತಿ ಈಗಲೂ ಇವೆ. ಕೆಲವು ಉಳ್ಳವರು, ನಿತ್ಯದ ಊಟಕ್ಕೆ ಬೆಳ್ಳಿ ತಟ್ಟೆಯನ್ನೇ ಬಳಸುತ್ತಾರೆ ಕೂಡ.
3. ತಾಮ್ರದ ಪಾತ್ರೆಗಳು
ತಾಮ್ರದ ಪಾತ್ರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲೂ ಆಂಟಿ ಮೈಕ್ರೋಬಿಯಲ್ ಗುಣಗಳಿದ್ದು, ಆರೋಗ್ಯಕ್ಕೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ. ಆದರೆ, ತಾಮ್ರದ ಪಾತ್ರೆ ಎಲ್ಲ ಆಹಾರಗಳಿಗೂ ಸೂಕ್ತವಲ್ಲ. ಸಿಟ್ರಸ್ ಅಂಶವಿರುವ, ಹುಳಿಯಿರುವ ಆಹಾರಗಳಿಗೆ ಇದು ಒಳ್ಳೆಯದಲ್ಲ. ವಿಷಕಾರಕವಾಗಿ ಪರಿಣಮಿಸಬಹುದು. ನಿತ್ಯವೂ ತಾಮ್ರದ ಪಾತ್ರೆಯಲ್ಲಿ ನೀರು ಶೇಖರಿಸಿಟ್ಟು ಕುಡಿಯುವ ಆಭ್ಯಾಸವೂ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಅತಿಯಾದ ಬಳಕೆಯೂ ಒಳ್ಳೆಯದಲ್ಲ.
4. ಮಣ್ಣಿನ ಪಾತ್ರೆಗಳು
ಬಹಳ ಹಿಂದಿನಿಂದಲೂ ಬಳೆಕೆಯಲ್ಲಿದ್ದ ಪಾತ್ರೆಗಳಿವು. ಮಣ್ಣಿನ ಪಾತ್ರೆಗಳ ಬಳಕೆಯಿಂದ ಆರೋಗ್ಯಕ್ಕೆ ಸಾಕಷ್ಟು ಉತ್ತಮ ಪರಿಣಾಮಗಳಿವೆ. ದೇಹವನ್ನು ತಂಪಾಗಿಡಲು ಇದು ಒಳ್ಳೆಯದು. ಇದರಲ್ಲಿರುವ ಆಹಾರಕ್ಕೆ ತನ್ನದೇ ಆದ ವಿಶಿಷ್ಠ ಘಮವಿರುತ್ತದೆ. ರುಚಿಯೂ ಹೆಚ್ಚು. ಮಣ್ಣಿನ ಪಾತ್ರೆಯಲ್ಲಿ ನೀರು ಶೇಖರಿಸಿಟ್ಟು ಕುಡಿಯುವುದರಿಂದ ದೇಹಕ್ಕೆ ಪರಿಶುದ್ಧವಾದ, ಖನಿಜ ಲವಣಗಳಿರುವ ನೀರಿನ ಪೂರೈಕೆಯಾಗುತ್ತದೆ.
5. ತೆಂಗಿನ ಚಿಪ್ಪಿನ ಪಾತ್ರೆಗಳು
ಇತ್ತೀಚೆಗಿನ ದಿನಗಳಲ್ಲಿ ತೆಂಗಿನ ಚಿಪ್ಪಿನ ಪಾತ್ರೆಗಳ ಬಳಕೆಯೂ ಹೆಚ್ಚಾಗುತ್ತಿದೆ. ನೈಸರ್ಗಿಕವಾಗಿ ಲಭ್ಯವಿರುವ ಇವುಗಳ ಬಳಕೆ ಒಳ್ಳೆಯದೇ. ಇವು ಪಿತ್ತ ದೋಷವಿರುವ ಮಂದಿಗೆ ಅತ್ಯಂತ ಒಳ್ಳೆಯದು. ದೇಹವನ್ನು ತಂಪಾಗಿಯೂ ಇಡುತ್ತದೆ.
6. ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು
ಆಯುರ್ವೇದದ ಪ್ರಕಾರ ಅತ್ಯಂತ ಒಳ್ಳೆಯ ಪಾತ್ರೆಗಳಿವು. ಇದರಿಂದ ದೇಹಕ್ಕೆ ಯಾವ ವಿಧದಲ್ಲೂ, ಯಾವುದೇ ಬಗೆಯ ಹಾನಿಯಾಗದು. ಸಾಮಾನ್ಯರ ಕೈಗೂ ಎಟಕುವ ಇವುಗಳು ಆಹಾರದ ಜೊತೆ ಯಾವುದೇ ಬಗೆಯಲ್ಲಿ ಪ್ರತಿಕ್ರಿಯಿಸಲಾರವು. ಹಾಗಾಗಿ ಇವುಗಳಲ್ಲಿ ಯಾವುದೇ ಬಗೆಯ ಆಹಾರವನ್ನಾದರೂ ಹಾಕಲು ಬಳಸಬಹುದು. ಇದರಿಂದ ಪ್ರತ್ಯೇಕ ಆರೋಗ್ಯಕರ ಲಾಭಗಳೇನೂ ಇರದಿದ್ದರೂ, ಇವುಗಳಲ್ಲಿ ಯಾವುದೇ ಭಯವಿಲ್ಲದೆ ಯಾವುದೇ ಬಗೆಯ ಆಹಾರಕ್ಕಾದರೂ ಬಳಸಬಹುದು ಎಂಬುದೇ ಇದರ ಅತ್ಯಂತ ದೊಡ್ಡ ಲಾಭ. ನಿತ್ಯೋಪಯೋಗಕ್ಕೆ ಬೆಸ್ಟ್!
ಇದನ್ನೂ ಓದಿ: Food Tips: ಈ ಆಹಾರಗಳನ್ನು ಬೇಯಿಸಿದರೇ ಪೋಷಕಾಂಶಗಳಿಂದ ಸಮೃದ್ಧ, ಮರೆಯಬೇಡಿ
7. ಕಲ್ಲಿನ ಪಾತ್ರೆಗಳು
ಕಲ್ಲಿನ ಪಾತ್ರೆಗಳು ಬಹಳ ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಬಳಕೆ ಮಾಡಿದವುಗಳು. ಇದು ಬಿಸಿಯನ್ನು ಹೆಚ್ಚು ಕಾಲ ಹಿಡಿದಿಡುವ ಸಾಮರ್ಥ್ಯ ಇರುವುದರಿಂದ, ಆಹಾರ ಹೆಚ್ಚು ಹೊತ್ತು ಬಿಸಿಯಾಗಿಯೇ ಇರುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.