ಬೆಂಗಳೂರು: ಹಿಂದೆಲ್ಲ ಮಕ್ಕಳು ಅಪ್ಪ- ಅಮ್ಮನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಈಗ ಹೆತ್ತವರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಕಾಲ ಬಂದಿದೆ: ಜಗತ್ತು ಎದುರಿಸುತ್ತಿರುವ ಆತಂಕಕಾರಿ ಸ್ಥಿತಿಯನ್ನು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರು ತೆರೆದಿಟ್ಟಿದ್ದು ಹೀಗೆ.
ಯಾವ ಹೆತ್ತವರ ಆರೋಗ್ಯದ ಬಗ್ಗೆ ಮಕ್ಕಳು ಕಾಳಜಿ ವಹಿಸಬೇಕಾಗಿತ್ತೋ ಅಂತ ಹೆತ್ತವರೇ ನಮ್ಮ ಸಂಕಟ, ನೋವುಗಳನ್ನೆಲ್ಲ ಮರೆತು ತಮ್ಮ ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆ ಮೆಟ್ಟಿಲು ತುಳಿಯಬೇಕಾಗಿದೆ. ಮಕ್ಕಳು ಜೀವನಶೈಲಿಯ ಸಮಸ್ಯೆಗಳಿಂದ ಬಳಲುತ್ತಾ ಭಾರವಾಗುತ್ತಿದ್ದಾರೆ ಎಂದು ಯುವಕರು ಎದುರಿಸುತ್ತಿರುವ ಆರೋಗ್ಯಗಳ ಸಮಸ್ಯೆ ಕುರಿತು ಅವರು ಹೇಳಿದರು. ವಿಸ್ತಾರ ಮೀಡಿಯಾ ಸಂಸ್ಥೆಯ ವಿಸ್ತಾರ ಹೆಲ್ತ್ (Vistara Health) ಯುಟ್ಯೂಬ್ ಚಾನೆಲ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
”ನಮ್ಮ ದೇಶದಲ್ಲಿ ಶೇ.50ರಷ್ಟು ಜನರು ಜೀವನಶೈಲಿ ಆಧರಿತ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್ ಜೀವನಶೈಲಿ ಆಧರಿತ ಕಾಯಿಲೆಗಳಾಗಿವೆ. ಈ ಸಾಲಿಗೆ ಪರದೆ ಗೀಳು ಮತ್ತು ಒಂಟಿತನ(Screen Addiction and Loneliness)ವನ್ನು ಕೂಡ ಸೇರಿಸಬಹುದು” ಎಂದು ಡಾ. ಸಿ.ಎನ್. ಮಂಜುನಾಥ ಹೇಳಿದರು.
ಹೆಚ್ಚುತ್ತಿರುವ ಸ್ಕ್ರೀನ್ ಅಡಿಕ್ಷನ್
”ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಈ ಸ್ಕ್ರೀನ್ ಅಡಿಕ್ಷನ್ ಮತ್ತು ಲೋನ್ಲಿನೆಸ್ ಹೆಚ್ಚಾಗುತ್ತಿದೆ. ನಮ್ಮ ದೇಶದ ಪ್ರತಿ 8 ಜನರಲ್ಲಿ ಸ್ಕ್ರೀನ್ ಅಡಿಕ್ಷನ್ ಮತ್ತು ಒಂಟಿತನದ ಸಮಸ್ಯೆಯಿದೆ. ಇದಕ್ಕೆ ಮುಖ್ಯ ಕಾರಣ ಕಂಪ್ಯೂಟರ್, ಟ್ಯಾಬ್ಸ್, ಮೊಬೈಲ್ ಇತ್ಯಾದಿ. ನನ್ನ ಪ್ರಕಾರ ಜಗತ್ತಿನ ಅತಿಕೆಟ್ಟ ಆವಿಷ್ಕಾರ ಯಾವವು ಎಂದರೆ ಹಣ ಮತ್ತು ಮೊಬೈಲ್. ಈ ಮೊಬೈಲ್ ಫೋನುಗಳಿಂದಾಗಿ ಸಾಮಾಜಿಕ ಜಾಲತಾಣ ಬಳಕೆಯು ಹೆಚ್ಚಾಗುತ್ತಿದೆ. ಇವುಗಳಿಂದ ಸಮಾಜವನ್ನು ಕಟ್ಟಬಹುದಾಗಿತ್ತು ಮತ್ತು ಸೇತುವೆಯಾಗಿ ಕೆಲಸ ಮಾಡಬೇಕಿತ್ತು. ಆದರೆ, ಸೋಷಿಯಲ್ ಮೀಡಿಯಾ ಗೋಡೆಯಾಗಿ ಕೆಲಸ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ” ಎಂದರು.
ಶೇ.25ರಷ್ಟು ಸಾವು
”ಇಂದು ಎಲ್ಲರೂ ಮೊಬೈಲ್ ಫೋನಿನಲ್ಲಿ ಬ್ಯೂಸಿಯಾಗಿರುತ್ತಾರೆ. ರೈಲು ನಿಲ್ದಾಣ, ಬಸ್ ನಿಲ್ದಾಣ ಯಾವುದೇ ಜನನಿಬಿಡ ಪ್ರದೇಶವನ್ನು ಗಮನಿಸಿ ಎಲ್ಲರೂ ಮೊಬೈಲ್ ಫೋನಿನಲ್ಲಿ ನಿರತರಾಗಿರುತ್ತಾರೆ. ಮನೆಯಲ್ಲೂ ಎಲ್ಲರೂ ಮೊಬೈಲ್ ಫೋನಿನಲ್ಲಿ ಬ್ಯೂಸಿ. ಯಾರಿಗೂ ಮತ್ತೊಬ್ಬರೊಂದಿಗೆ ಮಾತನಾಡುವ ವ್ಯವಧಾನವೇ ಇಲ್ಲ. ದೇಶದಲ್ಲಿಂದು ಶೇ.25ರಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಜನರು ಮೃತರಾಗುತ್ತಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆಲ್ಲ ಹೆಚ್ಚುತ್ತಿರುವ ಒತ್ತಡ ಕಾರಣ” ಎಂದರು.
ಔಷಧದಲ್ಲಿ ಸಂತೋಷವಿಲ್ಲ; ಸಂತೋಷದಲ್ಲಿ ಔಷಧವಿದೆ
”ಚಿಕಿತ್ಸೆಗಿಂತ ರೋಗ ಬರದಂತೆ ತಡೆಯುವುದೇ ಉತ್ತಮ (prevention is better than cure) ಎಂದು ಹೇಳುತ್ತೇವೆ. ಆದರೆ, ನನ್ನ ಪ್ರಕಾರ ರೋಗ ಬರದಂತೆ ಎಚ್ಚರಿಕೆ ವಹಿಸುವುದು ಇನ್ನೂ ಉತ್ತಮ (Precaution is still best). ಮತ್ತೊಂದು ಗಮನಿಸಬೇಕಾದ ಸಂಗತಿ ಏನೆಂದರೆ, ಔಷಧದಲ್ಲಿ ಸಂತೋಷವಿಲ್ಲ. ಆದರೆ, ಸಂತೋಷದಲ್ಲಿ ಔಷಧವಿದೆ ಎಂಬುದನ್ನು ಮರೆಯಬಾರದು. ಇಂದಿನ ಬಹುತೇಕ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕಾರಣ ನಾವು ಸಂತೋಷದಿಂದ ಇರದಿರುವುದು. ನಮಗೆ ಯಾವುದರಲ್ಲೂ ಸಂತೃಪ್ತಿ ಇಲ್ಲ; ನೆಮ್ಮದಿ ಇಲ್ಲ. 15 ವರ್ಷದಲ್ಲಿ ದೊರೆಯುವ ಯಶಸ್ಸನ್ನು 15ನೇ ತಿಂಗಳಲ್ಲಿ ಪಡೆಯುವ ಧಾವಂತ ಎಲ್ಲರಲ್ಲೂ ಇದೆ. ಈ ರೀತಿಯ ಒತ್ತಡವೇ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕಾರಣ,” ಎಂದು ಡಾ. ಮಂಜುನಾಥ್ ಅವರು ಹೇಳಿದರು.
5000 ಯುವಕರಿಗೆ ಹೃದಯ ಚಿಕಿತ್ಸೆ
”ನಮ್ಮ ಸಂಸ್ಥೆಯಲ್ಲಿ 5000 ಯುವಜನರಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಿದ್ದೇವೆ. 40 ವರ್ಷಕ್ಕಿಂತ ಕೆಳಗಿನವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲು ಒತ್ತಡವೇ ಕಾರಣ. ಹಾಗಾಗಿ, ಈ ಒತ್ತಡವು ಸೃಷ್ಟಿಸುವ ಸಮಸ್ಯೆ ಬಗ್ಗೆ ಒತ್ತಿ ಒತ್ತಿ ಹೇಳಬೇಕಿದೆ,” ಎಂದು ಡಾ. ಸಿ.ಎನ್. ಮಂಜುನಾಥ್ ಅವರು ತಿಳಿಸಿದರು.
ಇದನ್ನೂ ಓದಿ | Vistara Health | ‘ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್’ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ