ಆರೋಗ್ಯ
Vistara Health | ಜೀವನಶೈಲಿ ಆಧರಿತ ಕಾಯಿಲೆಗಳಿಗೆ ಯುವಕರೇ ಹೆಚ್ಚು ಬಲಿ: ಡಾ. ಸಿ. ಎನ್. ಮಂಜುನಾಥ್ ಆತಂಕ
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಜೀವನಶೈಲಿ ಆಧರಿತ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಡಾ. ಸಿ.ಎನ್.ಮಂಜುನಾಥ್ ಅವರು ವಿಸ್ತಾರ ಹೆಲ್ತ್ (Vistara Health) ಯುಟ್ಯೂಬ್ ಚಾನೆಲ್ ಉದ್ಘಾಟಿಸಿ ಹೇಳಿದರು.
ಬೆಂಗಳೂರು: ಹಿಂದೆಲ್ಲ ಮಕ್ಕಳು ಅಪ್ಪ- ಅಮ್ಮನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಈಗ ಹೆತ್ತವರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಕಾಲ ಬಂದಿದೆ: ಜಗತ್ತು ಎದುರಿಸುತ್ತಿರುವ ಆತಂಕಕಾರಿ ಸ್ಥಿತಿಯನ್ನು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರು ತೆರೆದಿಟ್ಟಿದ್ದು ಹೀಗೆ.
ಯಾವ ಹೆತ್ತವರ ಆರೋಗ್ಯದ ಬಗ್ಗೆ ಮಕ್ಕಳು ಕಾಳಜಿ ವಹಿಸಬೇಕಾಗಿತ್ತೋ ಅಂತ ಹೆತ್ತವರೇ ನಮ್ಮ ಸಂಕಟ, ನೋವುಗಳನ್ನೆಲ್ಲ ಮರೆತು ತಮ್ಮ ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆ ಮೆಟ್ಟಿಲು ತುಳಿಯಬೇಕಾಗಿದೆ. ಮಕ್ಕಳು ಜೀವನಶೈಲಿಯ ಸಮಸ್ಯೆಗಳಿಂದ ಬಳಲುತ್ತಾ ಭಾರವಾಗುತ್ತಿದ್ದಾರೆ ಎಂದು ಯುವಕರು ಎದುರಿಸುತ್ತಿರುವ ಆರೋಗ್ಯಗಳ ಸಮಸ್ಯೆ ಕುರಿತು ಅವರು ಹೇಳಿದರು. ವಿಸ್ತಾರ ಮೀಡಿಯಾ ಸಂಸ್ಥೆಯ ವಿಸ್ತಾರ ಹೆಲ್ತ್ (Vistara Health) ಯುಟ್ಯೂಬ್ ಚಾನೆಲ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
”ನಮ್ಮ ದೇಶದಲ್ಲಿ ಶೇ.50ರಷ್ಟು ಜನರು ಜೀವನಶೈಲಿ ಆಧರಿತ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್ ಜೀವನಶೈಲಿ ಆಧರಿತ ಕಾಯಿಲೆಗಳಾಗಿವೆ. ಈ ಸಾಲಿಗೆ ಪರದೆ ಗೀಳು ಮತ್ತು ಒಂಟಿತನ(Screen Addiction and Loneliness)ವನ್ನು ಕೂಡ ಸೇರಿಸಬಹುದು” ಎಂದು ಡಾ. ಸಿ.ಎನ್. ಮಂಜುನಾಥ ಹೇಳಿದರು.
ಹೆಚ್ಚುತ್ತಿರುವ ಸ್ಕ್ರೀನ್ ಅಡಿಕ್ಷನ್
”ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಈ ಸ್ಕ್ರೀನ್ ಅಡಿಕ್ಷನ್ ಮತ್ತು ಲೋನ್ಲಿನೆಸ್ ಹೆಚ್ಚಾಗುತ್ತಿದೆ. ನಮ್ಮ ದೇಶದ ಪ್ರತಿ 8 ಜನರಲ್ಲಿ ಸ್ಕ್ರೀನ್ ಅಡಿಕ್ಷನ್ ಮತ್ತು ಒಂಟಿತನದ ಸಮಸ್ಯೆಯಿದೆ. ಇದಕ್ಕೆ ಮುಖ್ಯ ಕಾರಣ ಕಂಪ್ಯೂಟರ್, ಟ್ಯಾಬ್ಸ್, ಮೊಬೈಲ್ ಇತ್ಯಾದಿ. ನನ್ನ ಪ್ರಕಾರ ಜಗತ್ತಿನ ಅತಿಕೆಟ್ಟ ಆವಿಷ್ಕಾರ ಯಾವವು ಎಂದರೆ ಹಣ ಮತ್ತು ಮೊಬೈಲ್. ಈ ಮೊಬೈಲ್ ಫೋನುಗಳಿಂದಾಗಿ ಸಾಮಾಜಿಕ ಜಾಲತಾಣ ಬಳಕೆಯು ಹೆಚ್ಚಾಗುತ್ತಿದೆ. ಇವುಗಳಿಂದ ಸಮಾಜವನ್ನು ಕಟ್ಟಬಹುದಾಗಿತ್ತು ಮತ್ತು ಸೇತುವೆಯಾಗಿ ಕೆಲಸ ಮಾಡಬೇಕಿತ್ತು. ಆದರೆ, ಸೋಷಿಯಲ್ ಮೀಡಿಯಾ ಗೋಡೆಯಾಗಿ ಕೆಲಸ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ” ಎಂದರು.
ಶೇ.25ರಷ್ಟು ಸಾವು
”ಇಂದು ಎಲ್ಲರೂ ಮೊಬೈಲ್ ಫೋನಿನಲ್ಲಿ ಬ್ಯೂಸಿಯಾಗಿರುತ್ತಾರೆ. ರೈಲು ನಿಲ್ದಾಣ, ಬಸ್ ನಿಲ್ದಾಣ ಯಾವುದೇ ಜನನಿಬಿಡ ಪ್ರದೇಶವನ್ನು ಗಮನಿಸಿ ಎಲ್ಲರೂ ಮೊಬೈಲ್ ಫೋನಿನಲ್ಲಿ ನಿರತರಾಗಿರುತ್ತಾರೆ. ಮನೆಯಲ್ಲೂ ಎಲ್ಲರೂ ಮೊಬೈಲ್ ಫೋನಿನಲ್ಲಿ ಬ್ಯೂಸಿ. ಯಾರಿಗೂ ಮತ್ತೊಬ್ಬರೊಂದಿಗೆ ಮಾತನಾಡುವ ವ್ಯವಧಾನವೇ ಇಲ್ಲ. ದೇಶದಲ್ಲಿಂದು ಶೇ.25ರಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಜನರು ಮೃತರಾಗುತ್ತಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆಲ್ಲ ಹೆಚ್ಚುತ್ತಿರುವ ಒತ್ತಡ ಕಾರಣ” ಎಂದರು.
ಔಷಧದಲ್ಲಿ ಸಂತೋಷವಿಲ್ಲ; ಸಂತೋಷದಲ್ಲಿ ಔಷಧವಿದೆ
”ಚಿಕಿತ್ಸೆಗಿಂತ ರೋಗ ಬರದಂತೆ ತಡೆಯುವುದೇ ಉತ್ತಮ (prevention is better than cure) ಎಂದು ಹೇಳುತ್ತೇವೆ. ಆದರೆ, ನನ್ನ ಪ್ರಕಾರ ರೋಗ ಬರದಂತೆ ಎಚ್ಚರಿಕೆ ವಹಿಸುವುದು ಇನ್ನೂ ಉತ್ತಮ (Precaution is still best). ಮತ್ತೊಂದು ಗಮನಿಸಬೇಕಾದ ಸಂಗತಿ ಏನೆಂದರೆ, ಔಷಧದಲ್ಲಿ ಸಂತೋಷವಿಲ್ಲ. ಆದರೆ, ಸಂತೋಷದಲ್ಲಿ ಔಷಧವಿದೆ ಎಂಬುದನ್ನು ಮರೆಯಬಾರದು. ಇಂದಿನ ಬಹುತೇಕ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕಾರಣ ನಾವು ಸಂತೋಷದಿಂದ ಇರದಿರುವುದು. ನಮಗೆ ಯಾವುದರಲ್ಲೂ ಸಂತೃಪ್ತಿ ಇಲ್ಲ; ನೆಮ್ಮದಿ ಇಲ್ಲ. 15 ವರ್ಷದಲ್ಲಿ ದೊರೆಯುವ ಯಶಸ್ಸನ್ನು 15ನೇ ತಿಂಗಳಲ್ಲಿ ಪಡೆಯುವ ಧಾವಂತ ಎಲ್ಲರಲ್ಲೂ ಇದೆ. ಈ ರೀತಿಯ ಒತ್ತಡವೇ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕಾರಣ,” ಎಂದು ಡಾ. ಮಂಜುನಾಥ್ ಅವರು ಹೇಳಿದರು.
5000 ಯುವಕರಿಗೆ ಹೃದಯ ಚಿಕಿತ್ಸೆ
”ನಮ್ಮ ಸಂಸ್ಥೆಯಲ್ಲಿ 5000 ಯುವಜನರಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಿದ್ದೇವೆ. 40 ವರ್ಷಕ್ಕಿಂತ ಕೆಳಗಿನವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲು ಒತ್ತಡವೇ ಕಾರಣ. ಹಾಗಾಗಿ, ಈ ಒತ್ತಡವು ಸೃಷ್ಟಿಸುವ ಸಮಸ್ಯೆ ಬಗ್ಗೆ ಒತ್ತಿ ಒತ್ತಿ ಹೇಳಬೇಕಿದೆ,” ಎಂದು ಡಾ. ಸಿ.ಎನ್. ಮಂಜುನಾಥ್ ಅವರು ತಿಳಿಸಿದರು.
ಇದನ್ನೂ ಓದಿ | Vistara Health | ‘ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್’ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ
ಆರೋಗ್ಯ
Hair Care: ಕೂದಲಿಗೆ ಕಂಡೀಷನರ್ ಹಚ್ಚುವಾಗ ನೀವು ಈ ತಪ್ಪುಗಳನ್ನು ಮಾಡ್ಬೇಡಿ!
ಕೂದಲು ನಯವಾಗಿ ರೇಶಿಮೆಯಂತೆ ಹೊಳೆಯಲು ಬಹುತೇಕರು ಕಂಡೀಷನರ್ ಬಳಸುವುದು ಸಾಮಾನ್ಯ. ಆದರೆ, ಈ ಕಂಡೀಷನರ್ ಬಳಸುವಾಗ ಬಹಳಷ್ಟು ಮಂದಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ.
ನಿಮ್ಮ ಕೂದಲು ಯಾವ ಬಗೆಯದ್ದೇ ಆಗಿರಲಿ ಕೂದಲನ್ನು ಕಂಡೀಷನ್ ಮಾಡಿಕೊಳ್ಳದಿದ್ದರೆ ಖಂಡಿತವಾಗಿಯೂ ಕೂದಲನ್ನು ನಯವಾಗಿ, ಸುಲಭವಾಗಿ ಬೇಕಾದ ಹಾಗೆ ಬಾಚಿಕೊಳ್ಳಲು ಕಷ್ಟವಾಗುತ್ತದೆ. ಕೂದಲನ್ನು ತಮಗೆ ಬೇಕಾದ ಹಾಗೆ ತೀಡಲು, ಬೇಕಾದ ಹೇರ್‌ಸ್ಟೈಲ್‌ಗೆ ಒಗ್ಗಿಸಿಕೊಳ್ಳಲು, ಕೂದಲು ನಯವಾಗಿ ರೇಶಿಮೆಯಂತೆ ಹೊಳೆಯಲು ಬಹುತೇಕರು ಕಂಡೀಷನರ್ ಬಳಸುವುದು ಸಾಮಾನ್ಯ. ಆದರೆ, ಈ ಕಂಡೀಷನರ್ ಬಳಸುವಾಗ ಬಹಳಷ್ಟು ಮಂದಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ತಪ್ಪು ಸಣ್ಣದಿರಲಿ ದೊಡ್ಡದಿರಲಿ, ತಪ್ಪಿನ ಪರಿಣಾಮ ಮಾತ್ರ ನಿಮ್ಮದೇ ಕೂದಲು ಮೇಲೆ, ತಲೆಕೂದಲ ಬುಡದ ಚರ್ಮದ ಮೇಲೆ ಆಗುತ್ತದೆ ಎಂಬ ಸತ್ಯವನ್ನೂ ನೀವು ಜೀರ್ಣಿಸಿಕೊಳ್ಳಲು ಸಿದ್ಧರಿರಬೇಕು. ಹಾಗಾದರೆ ಬನ್ನಿ ಕಂಡೀಷನರ್ ಹಚ್ಚಿಕೊಳ್ಳುವಾಗ ನೀವು ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ (Hair Care Tips).
1. ಎಲ್ಲ ಕೂದಲಿಗೂ ಒಂದೇ ಮಾದರಿಯ ಕಂಡೀಷನರ್ ಸೂಕ್ತವಾಗಿರುವುದಿಲ್ಲ. ಯಾವುದೋ ಒಂದು ಕಂಡೀಷನರ್ ಬಳಸಿದರಾಯಿತು ಎಂಬ ಪ್ರವೃತ್ತಿ ಬೇಡ. ನಿಮ್ಮ ಕೂದಲು ಎಂಥದ್ದು ಎಂಬ ಮಾಹಿತಿ ನಿಮಗೆ ತಿಳಿದಿರಲಿ. ನಿಮ್ಮ ಕೂದಲ ಪ್ರಕೃತಿ ಒಣವೋ, ಎಣ್ಣೆಯುಕ್ತವೋ ಅಥವಾ ತುಂಬಾ ಹಾರಾಡುವ ಅಲೆಅಲೆಯಾಗಿರುವ ಕೂದಲೋ ಹೀಗೆ ನಿಮ್ಮ ಕೂದಲ ಬಗ್ಗೆ ಅರಿಯಲು ಪ್ರಯತ್ನಿಸಿ. ಜೊತೆಗೆ ಅದಕ್ಕೆ ಸೂಕ್ತವಾದ ಕಂಡೀಷನರ್ ಆಯ್ಕೆ ಮಾಡಿ.
2. ಕಂಡೀಷನರ್ ಬಳಸುವಾಗ ಎಲ್ಲರೂ ಮಾಡುವ ತಪ್ಪು ಎಂದರೆ ಒಂದಿಷ್ಟು ಕೈಯಲ್ಲಿ ತೆಗೆದುಕೊಂಡು ಹಾಗೆಯೇ ಹಾಕಿ ಬಿಡುವುದು. ಕಂಡೀಷನರ್ ಹಾಕುವಾಗ ಕೂದಲ ಎಲ್ಲ ಭಾಗಗಳಿಗೂ ಸಮನಾಗಿ ಹಂಚಿಹೋಗುವಂತೆ ಹಚ್ಚಿಕೊಳ್ಳುವುದು ಒಳ್ಳೆಯದು. ಬಹಳಷ್ಟು ಮಂದಿ, ಕೈಯ ಬೆರಳಲ್ಲೇ ಹಚ್ಚಿಕೊಳ್ಳುವುದೂ ಕೂಡಾ ಸಾಮಾನ್ಯ. ಆದರೆ, ಗುಂಗುರು ಅಥವಾ ಅಲೆಅಲೆಯಾಗಿರುವ ಕೂದಲ ಮಂದಿಗೆ ಇದು ಕಷ್ಟವಾಗಬಹುದು. ಅದಕ್ಕಾಗಿ ಅಗಲ ಹಲ್ಲಿನ ಬಾಚಣಿಗೆಯ ಸಹಾಯದಿಂದ ಕೂದಲ ಎಲ್ಲ ಭಾಗಕ್ಕೂ ಕಂಡೀಷನರ್ ತಲುಪುವಂತೆ ಬಾಚಿಕೊಂಡು ಹದವಾಗಿ ಮಸಾಜ್ ಮಾಡಿಕೊಳ್ಳುವುದು ಉತ್ತಮ ವಿಧಾನ.
3. ಬಹಳಷ್ಟು ಮಂದಿ ಕಂಡೀಷನರ್ ಬಳಸುತ್ತಾರೇನೋ ನಿಜವೇ ಆದರೂ, ಬಳಸಿದ ಮೇಲೆ ಅಷ್ಟೇ ವೇಗವಾಗಿ ತೊಳೆದುಕೊಂಡು ಬಿಡುತ್ತಾರೆ. ಹೀಗೆ ಮಾಡುವುದರಿಂದ ಕಂಡೀಷನರ್‌ನ ನಿಜವಾದ ಉಪಯೋಗ, ಫಲ ನಿಮ್ಮ ಕೂದಲಿಗೆ ಸಿಗುವುದಿಲ್ಲ. ಹಾಗಾಗಿ ಕಂಡೀಷನರ್ ಹಚ್ಚಿಕೊಂಡರೆ ಸಾಲದು. ಅದು ಫಲ ಪಡೆಯಲು ಕನಿಷ್ಟ ಅದು ನಿಮ್ಮ ಕೂದಲ ಜೊತೆಗೆ ಇರಲು ಮೂರರಿಂದ ಐದು ನಿಮಿಷವಾದರೂ ಹಾಗೆಯೇ ಬಿಡಬೇಕು. ಆಮೇಲೆ ತೊಳೆದುಕೊಳ್ಳಬೇಕು.
ಇದನ್ನೂ ಓದಿ: Hair Care: ಕೂದಲನ್ನು ಸೊಂಪಾಗಿಸುವ ಕೆಲವು ಮಾರ್ಗಗಳಿವು
4. ಇನ್ನೂ ಕೆಲವರು ಕಂಡೀಷನ್ ಮಾಡಿಕೊಳ್ಳುವ ಭರದಲ್ಲಿ ಯದ್ವಾತದ್ವಾ ಕಂಡೀಷನರ್ ಬಳಕೆ ಮಾಡುವುದುಂಟು. ಕಂಡೀಷನರ್ ಕೂದಲಿಗೆ ಹೆಚ್ಚಾದರೆ ಕೂದಲು ಹಾಳಾಗುತ್ತದೆ. ಹಾಗಾಗಿ ಕಂಡೀಷನರ್ ಬಳಕೆ ಕೂದಲಿಗೆ ಅತಿಯಾಗದಂತೆ ನೋಡಿಕೊಳ್ಳುವುದೂ ಕೂಡಾ ಮುಖ್ಯವೇ. ಒಂದು ನಾಣ್ಯದ ಗಾತ್ಯದಷ್ಟು ಕಂಡೀಷನರ್ ಒಮ್ಮೆ ಬಳಸಬಹುದು. ಅದಕ್ಕಿಂತ ಹೆಚ್ಚಾದರೆ ಕೂದಲಿಗೆ ತೊಂದರೆಯಾಗುತ್ತದೆ ಎಂಬುದನ್ನು ನೆನಪಿಡಿ.
5. ಕಂಡೀಷನ್ ಮಾಡಿದ ಕೂದಲನ್ನು ಹಾಗೆಯೇ ಕೆಳಗೆ ಬಿಡುವುದರಿಂದ ಕಂಡೀಷನರ್‌ನ ಅಂಶ ಚರ್ಮದ ಮೇಲೆ ಹರಡಿಕೊಂಡು ಚರ್ಮದ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ. ಕಂಡೀಷನರ್ ಹಚ್ಚಿಕೊಂಡ ಕೂದಲನ್ನು ಬಹಳ ಹೊತ್ತು ಕುತ್ತಿಗೆ, ಬೆನ್ನಿನ ಮೇಲೆ ಇಳಿಬಿಡಬೇಡಿ. ಕಂಡೀಷನರ್ ಹಚ್ಚಿಕೊಂಡು ಅದನ್ನು ಚರ್ಮಕ್ಕೆ ತಾಗದ ಹಾಗೆ ಎತ್ತಿ ಕ್ಲಿಪ್ ಹಾಕಿ. ಆಮೇಲೆ ಐದು ನಿಮಿಷದ ನಂತರ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
ಇದನ್ನೂ ಓದಿ: Hair Care: ಬೊಕ್ಕತಲೆ, ಕೂದಲ ಸಮಸ್ಯೆ ಹೆಚ್ಚಾಗುತ್ತಿದ್ದರೆ ಈ ಆಹಾರಗಳಿಂದ ದೂರವಿರಿ!
ಆರೋಗ್ಯ
Oxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು
Oxygen Shortage: ಕೋವಿಡ್ (Covid) ಸಮಯದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಇದೀಗ ಮತ್ತೆ ಲಿಕ್ವಿಡ್ ಆಕ್ಸಿಜನ್ ಕೊರತೆಯಿಂದಾಗಿ ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಕಲಬುರಗಿ: ಇಲ್ಲಿನ ಕಿದ್ವಾಯಿ ಆಸ್ಪತ್ರೆಯಲ್ಲಿ (Kidwai Hospital) ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್ ರೋಗಿಯೊಬ್ಬರು (Cancer patient) ಲಿಕ್ವಿಡ್ ಆಕ್ಸಿಜನ್ (Liquid Oxygen) ಕೊರತೆಯಿಂದಾಗಿ ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಬೀದರ್ ಮೂಲದ ಝಕೀರಾ ಬೇಗಂ (50) ಮೃತ ದುರ್ದೈವಿ.
ಕಿದ್ವಾಯಿ ಆಸ್ಪತ್ರೆಯ ಐಸಿಯುನಲ್ಲಿ ಮೂರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದರಲ್ಲಿ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝಕೀರಾ ಬೇಗಂ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಉಳಿದ ರೋಗಿಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Praveen Nettaru: ಹೊಸ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ ಪತ್ನಿ ಕೆಲಸಕ್ಕೆ ಕೊಕ್
ಕಿದ್ವಾಯಿ ಆಸ್ಪತ್ರೆಯಲ್ಲಿ ಬೆಳಗ್ಗೆ ಎರಡು ಗಂಟೆಗಳ ಕಾಲ ಆಕ್ಸಿಜನ್ ಖಾಲಿ ಆಗಿತ್ತು. ಆಕ್ಸಿಜನ್ ಖಾಲಿಯಾಗಿದ್ದರಿಂದಲೇ ಝಕೀರಾ ಬೇಗಂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಆಕ್ಸಿಜನ್ ಖಾಲಿಯಾಗಿರುವ ಬಗ್ಗೆ ಆಸ್ಪತ್ರೆ ವೈದ್ಯರು ಬೇರೆಯದ್ದೆ ಸಬೂಬು ಹೇಳುತ್ತಿದ್ದಾರೆ. 15 ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರುತ್ತಿತ್ತು. ಆದರೆ ಝಕೀರಾ ಬೇಗಂ ಕ್ಯಾನ್ಸರ್ ತೀವ್ರತೆಯಿಂದ ಮೃತಪಟ್ಟಿದ್ದು ಎಂದು ವೈದ್ಯ ನವೀನ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ
Arthritis Relief: ಸಂಧಿವಾತದ ಸಮಸ್ಯೆಯೇ? ಈ ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿ
ನಮ್ಮ ಆಹಾರಶೈಲಿಯಿಂದ (Arthritis Food Remedies) ಕೆಲ ಹಣ್ಣುಗಳ ಸೇವೆಯಿಂದ ಕೊಂಚ ಮಟ್ಟಿಗೆ ಹತೋಟಿಗೆ ತರಬಹುದು. ತೀವ್ರನೋವಿಗೆ ಕೊಂಚ ಆರಾಮದಾಯಕ ಉತ್ತರವೂ ಸಿಕ್ಕೀತು. ಹಾಗಾಗಿ ಬನ್ನಿ, ಯಾವೆಲ್ಲ ಹಣ್ಣುಗಳು ಸಂಧಿವಾತಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.
ಬಹಳಷ್ಟು ಮಂದಿಗೆ ಇಂದು ಸಂಧಿವಾತ (ಆರ್ಥ್ರೈಟಿಸ್) ಸಾಮಾನ್ಯ ತೊಂದರೆ. ವಯಸ್ಸಾಗುತ್ತ ಹೋದಂತೆ ಸಂಧಿವಾತ ಸಾಮಾನ್ಯ. ಕೆಲವರಿಗೆ ಇದು ಅನುವಂಶೀಯವಾದರೆ, ಇನ್ನೂ ಕೆಲವರಿಗೆ ವಯಸ್ಸಾದಂತೆ ಅಂಟಿಕೊಂಡ ಸಮಸ್ಯೆ. ಮೇಲ್ನೋಟಕ್ಕೆ ಇದು ಸಾಮಾನ್ಯ ತೊಂದರೆಯಾದರೂ, ಇದರ ನೋವು ಬಲ್ಲವನೇ ಬಲ್ಲ. ಮೆಟ್ಟಿಲು ಹತ್ತುವುದರಿಂದ ಹಿಡಿದು ಸಣ್ಣ ಸಣ್ಣ ಚಲನೆಯೂ ಅತೀವ ಹಿಂಸೆ ಕೊಡುವ ನೋವಿದು. ಇದಕ್ಕೆ ಸರಿಯಾದ ಗಮನ ಕೊಡದೇ ಹೋದರೆ ದಿನದಿಂದ ದಿನಕ್ಕೆ ನೋವು ಹೆಚ್ಚಾಗುತ್ತಲೇ ಹೋಗುತ್ತದೆ. ಇದನ್ನು ಪೂರ್ತಿಯಾಗಿ ಗುಣಪಡಿಸಲು ಸೂಕ್ತ ಔಷಧಿ ಇಲ್ಲದಿದ್ದರೂ ಇದನ್ನು ನಮ್ಮ ಆಹಾರಶೈಲಿಯಿಂದ (Arthritis Relief) ಕೆಲ ಹಣ್ಣುಗಳ ಸೇವೆಯಿಂದ ಕೊಂಚ ಮಟ್ಟಿಗೆ ಹತೋಟಿಗೆ ತರಬಹುದು. ತೀವ್ರನೋವಿಗೆ ಕೊಂಚ ಆರಾಮದಾಯಕ ಉತ್ತರವೂ ಸಿಕ್ಕೀತು. ಹಾಗಾಗಿ ಬನ್ನಿ, ಯಾವೆಲ್ಲ ಹಣ್ಣುಗಳು ಸಂಧಿವಾತಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.
1. ಸೇಬು: ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂಬ ಗಾದೆಯನ್ನು ನೀವು ಕೇಳಿರಬಹುದು. ಈ ಮಾತು ಸಂಧಿವಾತಕ್ಕೂ ಅನ್ವಯಿಸುತ್ತದೆ. ಸೇಬು ಹಣ್ಣು ಸಾಕಷ್ಟು ಒಳ್ಳೆಯ ಗುಣಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಸೇಬು ಹಣ್ಣಿನಲ್ಲಿ ಊತದಂತಹ ಸಮಸ್ಯೆಗಳಿಗೆ ಉತ್ತರ ನೀಡುವ ಕ್ವೆರ್ಸೆಟಿನ್ ಎಂಬ ಅಂಶ ಇರುವುದರಿಂದ ಇದು ಸಂಧಿವಾತದಂತಹ ಸಮಸ್ಯೆಗಳು ಬರದಂತೆ ಕಾಯುತ್ತದೆ. ಅಷ್ಟೇ ಅಲ್ಲ, ಸಂಧಿವಾತದ ನೋವನ್ನು ಕೊಂಚ ಮಟ್ಟಿಗೆ ಶಮನಗೊಳಿಸು ಪ್ರಯತ್ನ ಮಾಡುತ್ತದೆ.
2. ಚೆರ್ರಿ: ಚೆರ್ರಿ ಹಣ್ಣುಗಳು ಸಂಧಿವಾತಕ್ಕೆ ಹೇಳಿ ಮಾಡಿಸಿದಂತಹ ಹಣ್ಣು. ಚೆರ್ರಿ ಹಣ್ಣಿನಲ್ಲಿ ಆಂಥೋ ಸಯನಿನ್ ಎಂಬ ಅಂಶ ಇದ್ದು, ಇದು ಸಂಧಿವಾತದಂತಹ ನೋವುಗಳಿಗೆ ಉತ್ತಮ ನಿವಾರಕವಾಗಿ ಕೆಲಸ ಮಾಡುತ್ತದೆ. ಚೆರ್ರಿ ಹಣ್ಣು ತಿನ್ನುವುದರಿಂದ ಅಥವಾ ಚೆರ್ರಿ ಜ್ಯೂಸ್ ಕುಡಿಯುವುದರಿಂದ ನೋವಿನಿಂದ ಕೊಂಚ ಮಟ್ಟಿಗೆ ಸಮಾಧಾನ ಪಡೆಯಬಹುದು.
3. ಅನನಾಸು: ಅನನಾಸಿನಲ್ಲಿ ಬೊಮೆಲೈನ್ ಎಂಬ ಎನ್‌ಝೈಮ್ ಇರುವುದರಿಂದ ಇದರಲ್ಲಿರುವ ನೋವುನಾಶಕ ಗುಣ ಸಂಧಿವಾತದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ನಿತ್ಯವೂ ಅನನಾಸು ಸೇವನೆಯಿಂದ ಸಂಧಿವಾತದ ನೋವಿನಲ್ಲಿ ಪರಿಣಾಮಕಾರಿ ಬದಲಾವಣೆ ಗಮನಿಸಬಹುದು. ಗಂಟು ನೋವು, ಊತದಂತಹ ಸಮಸ್ಯೆಗಳೂ ಇದರಿಂದ ಕಡಿಮೆಯಾಗಬಹುದು.
ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!
4. ಬ್ಲೂಬೆರ್ರಿ: ಬ್ಲೂಬೆರ್ರಿ ಭಾರತದಲ್ಲಿ ಸುಲಭವಾಗಿ ದೊರೆಯದಿದ್ದರೂ ಇದು ಸಾಕಷ್ಟು ಪೋಷಕಾಂಶಗಳನ್ನು ಹೊತ್ತು ತಂದಿರುವ ಪವರ್‌ಹೌಸ್ ಹಣ್ಣು. ಇದರಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಜೊತೆಗೆ ಆಂಥೋಸಯನಿನ್ಗಳೂ ಇರುವುದರಿಂದ ನೋವಿನ ಶಮನಕಾರಿಯಾಗಿ ಕೆಲಸ ಮಾಡುತ್ತದೆ. ಒತ್ತಡದಂತಹ ಸಮಸ್ಯೆಗೂ ಇದು ಒಳ್ಳೆಯ ಆಹಾರ. ಇದರ ಸೇವನೆಯಿಂದ ದೇಹದ ನೋವುಗಳಲ್ಲಿ ಸಾಕಷ್ಟು ಉತ್ತಮ ಪರಿಣಾಮ ಕಾಣಬಹುದು.
5. ಕಿತ್ತಳೆ: ಕಿತ್ತಳೆ ಹಣ್ಣು ಕೇವಲ ತಾಜಾ ಅನುಭೂತಿ ನೀಡಿ ದಾಹ ಇಂಗಿಸುವುದಷ್ಟೇ ಅಲ್ಲ, ಇದರಲ್ಲಿರುವ ಸಿ ವಿಟಮಿನ್ ದೇಹಕ್ಕೆ ಅತ್ಯಂತ ಅಗತ್ಯಾದ ಪೋಷಕಾಂಶ. ವಿಟಮಿನ್ ಸಿಗೆ ಸಾಕಷ್ಟು ನೋವುಗಳಿಗೆ, ರೋಗಗಳಿಗೆ ಮದ್ದಾಗುವ ಗುಣವಿದೆ. ಇದು ದೇಹದ ಉರಿಯೂತವನ್ನೂ ಕಡಿಮೆ ಮಾಡುವುದರಿಂದ ಸಂಧಿವಾತದಿಂದ ಉಲ್ಬಣಿಸುವ ಸ್ನಾಯುಸೆಳೆತ, ಗಂಟು ನೋವು, ಬಾವುಗಳನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಆಹಾರದಲ್ಲಿ ಶಿಸ್ತು, ಸಂಧಿವಾತಕ್ಕೆ ಪೂರಕ ಆಹಾರ ಸೇವನೆ ಇತ್ಯಾದಿಗಳಿಂದ ಸಂಧಿವಾತದಂತಹ ತೊಂದರೆಯನ್ನು ಕೊಂಚ ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
ಇದನ್ನೂ ಓದಿ: Health Tips: ಬಾರ್ಲಿ ನೀರಿನಲ್ಲಿದೆ ಹಲವು ಹಲವು ಆರೋಗ್ಯ ಪ್ರಯೋಜನ, ಇದು ಬೇಸಿಗೆಯ ಸಂಗಾತಿ
ಆರೋಗ್ಯ
World Thyroid Day: ವಿಶ್ವ ಥೈರಾಯ್ಡ್ ದಿನ: ಸೂಕ್ತ ನಿರ್ವಹಣೆಯೇ ಸಮಸ್ಯೆಗೆ ಮದ್ದು
World Thyroid Day: ಥೈರಾಯ್ಡ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ ತಿಂಗಳ 25ನೇ ದಿನವನ್ನು ವಿಶ್ವ ಥೈರಾಯ್ಡ್ ದಿನ (World Thyroid Day) ಎಂದು ಗುರುತಿಸಲಾಗಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾಡುತ್ತಿರುವ ಅಂತಃಸ್ರಾವಕ ಗ್ರಂಥಿಗಳ ಸಮಸ್ಯೆಗಳ ಪೈಕಿ ಥೈರಾಯ್ಡ್ ಎರಡನೇ ಸ್ಥಾನದಲ್ಲಿದೆ. ಮೊದಲನೆಯ ಸ್ಥಾನ ಮಧುಮೇಹದ್ದು. ವಿಶ್ವದಲ್ಲಿ ಹತ್ತರಲ್ಲಿ ಒಬ್ಬರಿಗೆ ಥೈರಾಯ್ಡ್ ಸಂಬಂಧೀ ಸಮಸ್ಯೆಯಿದೆ. (World Thyroid Day) ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುವುದು ಕಂಡುಬಂದಿದೆ.
ಗಂಟಲಿನಲ್ಲಿರುವ ಸಣ್ಣ ಚಿಟ್ಟೆಯಾಕಾರದ ಗ್ರಂಥಿ ಎಲ್ಲರಿಗೂ ಪರಿಚಿತವಿರುವುದು ಥೈರಾಯ್ಡ್ ಗ್ರಂಥಿ ಎಂದೇ. ಪರಿಚಿತವಾಗಿರುವ ಕಾರಣ ಏನೇ ಇದ್ದರೂ, ಈ ಗ್ರಂಥಿ ಸೂಕ್ತವಾಗಿ ಕಾರ್ಯನಿರ್ವಹಿಸುವುದು ದೇಹದ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಇದೇ ಹಿನ್ನೆಲೆಯಲ್ಲಿ, ಥೈರಾಯ್ಡ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ ತಿಂಗಳ 25ನೇ ದಿನವನ್ನು ವಿಶ್ವ ಥೈರಾಯ್ಡ್ ದಿನ (World Thyroid Day) ಎಂದು ಗುರುತಿಸಲಾಗಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾಡುತ್ತಿರುವ ಅಂತಃಸ್ರಾವಕ ಗ್ರಂಥಿಗಳ ಸಮಸ್ಯೆಗಳ ಪೈಕಿ ಥೈರಾಯ್ಡ್ ಎರಡನೇ ಸ್ಥಾನದಲ್ಲಿದೆ. ಮೊದಲನೆಯ ಸ್ಥಾನ ಮಧುಮೇಹದ್ದು. ವಿಶ್ವದಲ್ಲಿ ಹತ್ತರಲ್ಲಿ ಒಬ್ಬರಿಗೆ ಥೈರಾಯ್ಡ್ ಸಂಬಂಧೀ ಸಮಸ್ಯೆಯಿದೆ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುವುದು ಕಂಡುಬಂದಿದೆ. ಆದರೆ ಹೆಚ್ಚಿನವರಿಗೆ ಈ ಸಮಸ್ಯೆ ತಮಗಿರುವುದು ಗೊತ್ತೇ ಇರುವುದಿಲ್ಲ.
ಥೈರಾಯ್ಡ್ ಗ್ರಂಥಿ ಚೋದಕಗಳನ್ನು ಹೆಚ್ಚಾಗಿ ಸ್ರವಿಸಿದರೆ ಅದನ್ನು ಹೈಪರ್ ಥೈರಾಯ್ಡ್ ಸಮಸ್ಯೆ ಎನ್ನಲಾಗುತ್ತದೆ. ಯುವಜನತೆಯಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ. ಥೈರಾಯ್ಡ್ ಸ್ರವಿಸುವಿಕೆ ಕಡಿಮೆ ಆದರೆ ಅದನ್ನು ಹೈಪೋಥೈರಾಯ್ಡ್ ಎನ್ನಲಾಗುತ್ತದೆ. ಈ ತೊಂದರೆ ವಯಸ್ಸಾದವರಲ್ಲಿ ಹೆಚ್ಚು. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತಾಗಬೇಕಾಗುತ್ತದೆ. ಹಾಗಾಗಿ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ತೆಗೆದುಕೊಂಡರೆ ಥೈರಾಯ್ಡ್ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಬಹುದು.
ಇದ್ದಕ್ಕಿದ್ದಂತೆ ತೂಕ ಹೆಚ್ಚುವುದು ಅಥವಾ ಇಳಿಯುವುದು, ಸುಸ್ತು, ಆಯಾಸ, ಕೂದಲು ಉದುರುವುದು, ಅನಿಯಮಿತವಾದ ಎದೆಬಡಿತ, ಮೂಡ್ ಬದಲಾವಣೆ ಮುಂತಾದ ಲಕ್ಷಣಗಳು ಕಂಡುಬಂದರೆ ಥೈರಾಯ್ಡ್ ತಪಾಸಣೆಯನ್ನು ಮಾಡಿಸುವಂತೆ ವೈದ್ಯರು ಸೂಚಿಸಬಹುದು. ಥೈರಾಯ್ಡ್ ಸಮಸ್ಯೆಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಹೃದಯದ ತೊಂದರೆ, ಆಸ್ಟಿಯೊಪೊರೊಸಿಸ್, ಒಳಾಂಗಗಳ ಕಾರ್ಯದಲ್ಲಿ ಏರುಪೇರು, ಫಲವಂತಿಕೆಯ ತೊಂದರೆ, ದೇಹದ ಚಯಾಪಚಯದಲ್ಲಿ ವ್ಯತ್ಯಾಸದಂಥ ಇನ್ನಷ್ಟು ಸಮಸ್ಯೆಗಳು ಗಂಟುಬೀಳಬಹುದು. ಗರ್ಭಿಣಿಯರಲ್ಲಿ ಈ ತೊಂದರೆ ಕಂಡುಬಂದರೆ ಹುಟ್ಟಲಿರುವ ಶಿಶುವಿಗೆ ಆಪತ್ತು.
ಈ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸುವುದೇ ಇದಕ್ಕಿರುವ ಮದ್ದು. ನಿಯಮಿತವಾದ ದೈಹಿಕ ಚಟುವಟಿಕೆಗಳು, ಒತ್ತಡ ನಿರ್ವಹಣೆ, ಅಯೋಡಿನ್, ಸೆಲೆನಿಯಂ ಮತ್ತು ಪ್ರೊಬಯಾಟಿಕ್ ಸಹಿತವಾದ ಆಹಾರ ಸೇವನೆಯಂಥವು ಥೈರಾಯ್ಡ್ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ನೆರವಾಗುತ್ತದೆ. ಜೊತೆಗೆ ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಔಷಧವೂ ಅಗತ್ಯವಾಗುತ್ತದೆ.
ಹೈಪೊ ಥೈರಾಯ್ಡ್ ಸಮಸ್ಯೆ ಇರುವವರಿಗೆ ಈ ಪೇಯಗಳು ಲಾಭದಾಯಕವಾಗಬಹುದು
ಅರಿಶಿನ ಹಾಲು: ಇದರಲ್ಲಿರುವ ಕರ್ಕುಮಿನ್ ಅಂಶದಿಂದ ಥೈರಾಯ್ಡ್ ಗ್ರಂಥಿಯ ಆರೋಗ್ಯ ಸುಧಾರಿಸುತ್ತದೆ. ಇದಕ್ಕೆ ಚಿಟಿಕೆ ಕಪ್ಪು ಕಾಳುಮೆಣಸಿನ ಪುಡಿಯನ್ನೂ ಸೇರಿಸುವ ಕ್ರಮವಿದೆ
ಮಜ್ಜಿಗೆ: ಸಾಮಾನ್ಯವಾಗಿ ದೇಹದಲ್ಲಿ ಉರಿಯೂತ ನಿಯಂತ್ರಿಸುವ ಆಹಾರಗಳು ಹೈಪೊ ಥೈರಾಯ್ಡ್ ಸಮಸ್ಯೆ ಇರುವವರಿಗೆ ಲಾಭದಾಯಕ. ದೇಹಕ್ಕೆ ಅಗತ್ಯ ಪ್ರೊಬಯಾಟಿಕ್ ಒದಗಿಸಿ, ಜೀರ್ಣಾಂಗದ ಆರೋಗ್ಯ ಸುಧಾರಿಸುವ ಮೂಲಕ ಹೈಪೊಥೈರಾಯ್ಡ್ ಸಮಸ್ಯೆಗೆ ಪರೋಕ್ಷವಾಗಿ ಮಜ್ಜಿಗೆ ನೆರವಾಗುತ್ತದೆ.
ಕೆಂಪು ಜ್ಯೂಸ್: ಬೀಟ್ರೂಟ್ ಮತ್ತು ಕ್ಯಾರೆಟ್ ಗಳನ್ನು ಮಿಶ್ರ ಮಾಡಿ ತಯಾರಿಸುವ ಜ್ಯೂಸ್ ಸಹ ಈ ವಿಷಯದಲ್ಲಿ ಪರಿಣಾಮಕಾರಿ. ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಲೈಕೋಪೇನ್ ಸತ್ವದಿಂದ ದೇಹದಲ್ಲಿನ ಉರಿಯೂತವನ್ನು ಶಮನ ಮಾಡಿ, ಥೈರಾಯ್ಡ್ ಸಾಮರ್ಥ್ಯ್ ಹೆಚ್ಚಿಸಲು ಸಾಧ್ಯ.
ಇದನ್ನೂ ಓದಿ: Thyroid Awareness Month | ನಮ್ಮ ಆರೋಗ್ಯದಲ್ಲಿ ಥೈರಾಯ್ಡ್ ಪಾತ್ರ ಅತಿ ಮುಖ್ಯ, ತಿಳಿದಿರಲಿ!
ಹಸಿರು ಜ್ಯೂಸ್: ಪಾಲಕ್, ಕೊತ್ತಂಬರಿ, ಪುದೀನಾ ಮುಂತಾದ ಸೊಪ್ಪುಗಳ ಜ್ಯೂಸ್ ಸಹ ಉಪಯುಕ್ತ. ಇದರಲ್ಲಿ ಇರುವ ಹರಿತ್ತಿನ ಅಂಶವು ಥೈರಾಯ್ಡ್ ಆರೋಗ್ಯ ಸುಧಾರಿಸುವಲ್ಲಿ ಪರಿಣಾಮಕಾರಿ
ಇದಲ್ಲದೆ, ಅಶ್ವಗಂಥ, ಶತಾವರಿಯಂಥವು ಥೈರಾಯ್ಡ್ ಗ್ರಂಥಿಯ ಕ್ಷಮತೆ ಹೆಚ್ಚಿಸುವಲ್ಲಿ ನೆರವಾಗಬಲ್ಲವು. ಆದರೆ ಈ ಮನೆಮದ್ದುಗಳ ಜೊತೆಗೆ ನಿಯಮಿತವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ21 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ20 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ದೇಶ4 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ12 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ಕ್ರಿಕೆಟ್11 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
EXPLAINER2 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?